6 ಸ್ಥಾನಗಳಿಗಾಗಿ ಮಿತ್ರಪಕ್ಷಗಳ ನಡುವೆ ಹಗ್ಗಜಗ್ಗಾಟ

By Web DeskFirst Published Sep 16, 2018, 8:36 AM IST
Highlights

ಈ ಆರು ಸ್ಥಾನಗಳಿಗಾಗಿ ಮೈತ್ರಿ ಪಕ್ಷಗಳ ನಡುವೆಯೇ ಹಗ್ಗಜಗ್ಗಾಟ ಶುರುವಾಗಿದೆ. ದೀರ್ಘಾವಧಿಯ ಸ್ಥಾನದ ಮೇಲೆ ಜೆಡಿಎಸ್ ಕಣ್ಣಿಟ್ಟು, ಕಡಿಮೆ ಅವಧಿಯ 2 ಸ್ಥಾನಗಳನ್ನು ಕಾಂಗ್ರೆಸ್ ಗೆ ಬಿಟ್ಟು ಕೊಡಲು ಮುಂದಾಗಿದೆ. 

ಬೆಂಗಳೂರು :  ಈ ಬಾರಿಯ ವಿಧಾನಪರಿಷತ್ ಸದಸ್ಯ ಸ್ಥಾನದ ಅವಕಾಶವು ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ‘ತ್ಯಾಗ’ ಮಾಡಿದವರಿಗೋ ಅಥವಾ ಪ್ರಭಾವಿ ನಾಯಕರ ಬೆನ್ನು ಹತ್ತಿ ಭರ್ಜರಿ ಲಾಬಿ ಮಾಡುತ್ತಿರುವವರಿಗೆ ಒಲಿಯುವುದೋ? ವಿಧಾನ ಸಭೆಯಿಂದ ವಿಧಾನಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಹಾಗೂ ಮೂರು ನಾಮ ನಿರ್ದೇಶನಕ್ಕೆ ಜೆಡಿಎಸ್ ಜತೆ ಪಾಲು ಹಂಚಿಕೊಳ್ಳುವಿಕೆ ಹಾಗೂ ಪಕ್ಷದ ಅಭ್ಯರ್ಥಿಗಳ ಆಯ್ಕೆ ಕಸರತ್ತನ್ನು ಕಾಂಗ್ರೆಸ್ ನಾಯಕರು ಭಾನುವಾರದಿಂದ ಆರಂಭಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಭರ್ಜರಿ ಲಾಬಿ ಆರಂಭವಾಗಿರುವ ಬೆನ್ನಲ್ಲೇ ಈ ಪ್ರಶ್ನೆ ಹುಟ್ಟಿಕೊಂಡಿದೆ. 

ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ನಗರಕ್ಕೆ ಆಗಮಿಸಲಿದ್ದು, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಶನಿವಾರ ಸಂಜೆಯೇ ನಗರಕ್ಕೆ ಆಗಮಿಸಿದ್ದಾರೆ. ಈ ನಾಯಕರ ನೇತೃತ್ವದಲ್ಲಿ ಭಾನುವಾರ ಕಾಂಗ್ರೆಸ್ ನ ಪ್ರಮುಖ ನಾಯಕರ ಸಭೆ ನಡೆಯುವ ಸಾಧ್ಯತೆಯಿದೆ. 

2 ವಿಚಾರ: ಈ ಸಭೆಯು ಎರಡು ಪ್ರಮುಖ ವಿಚಾರಗಳನ್ನು ಇತ್ಯರ್ಥ ಪಡಿಸಬೇಕಿದೆ. 1. ಮೈತ್ರಿ ಪಕ್ಷಗಳ ನಡುವೆ ಪಾಲು ಹಂಚಿಕೊಳ್ಳುವಿಕೆ. 2. ತ್ಯಾಗ ಮಾಡಿದವರು ಹಾಗೂ ಲಾಬಿ ನಡೆಸುತ್ತಿರುವವರು ಈ ಪೈಕಿ ಯಾರಿಗೆ ಅವಕಾಶ ನೀಡಬೇಕು. ಕಳೆದ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾದ ಬಿಜೆಪಿಯ ವಿ.ಸೋಮಣ್ಣ, ಕೆ.ಎಸ್. ಈಶ್ವರಪ್ಪ ಹಾಗೂ ಕಾಂಗ್ರೆಸ್‌ನ ಡಾ. ಜಿ. ಪರಮೇಶ್ವರ್ ಅವರು ತೆರವುಗೊಳಿಸಿದ  ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ವಿಧಾನಸಭೆಯಿಂದ ಚುನಾವಣೆ ಅಕ್ಟೋಬರ್ ಮೂರಕ್ಕೆ ನಡೆಯಲಿದೆ. ಈ ಮೂರು ಸ್ಥಾನಗಳಲ್ಲಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ -ಜೆಡಿಎಸ್ ಪಾಲು ಹಂಚಿಕೊಳ್ಳಬೇಕಿದೆ. 

ವಾಸ್ತವವಾಗಿ ಈ ಮೂರು ಸ್ಥಾನಗಳ ಕಾಲಾವಧಿ ಕ್ರಮವಾಗಿ ಮೂರು ವರ್ಷ, 18 ತಿಂಗಳು ಹಾಗೂ 14 ತಿಂಗಳು ಇದೆ. ಕಡಿಮೆ ಕಾಲಾವಧಿ ಇರುವ ಎರಡು ವಿಧಾನಪರಿಷತ್ ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು, ಅಧಿಕ ಕಾಲಾವಧಿ ಇರುವ (3 ವರ್ಷ ಅವಧಿಯಿರುವ) ಸದಸ್ಯ ಸ್ಥಾನವನ್ನು ತನಗೆ ನೀಡುವಂತೆ ಜೆಡಿಎಸ್ ಬೇಡಿಕೆಯಿಟ್ಟಿದೆ. 

ನಾಮನಿರ್ದೇಶನ: ಅದೇ ರೀತಿ ನಾಮ ನಿರ್ದೇಶನದ ಮೂರು ಸ್ಥಾನಗಳ ಪೈಕಿ ತನಗೆ 2 ಸ್ಥಾನ ಬಿಟ್ಟುಕೊಟ್ಟು ಒಂದು ಸ್ಥಾನವನ್ನು ತೆಗೆದುಕೊಳ್ಳುವಂತೆ ಕಾಂಗ್ರೆಸ್‌ಗೆ ಹೇಳಿದೆ. ಜತೆಗೆ, ಸನಿಹದಲ್ಲೇ ಬರಲಿರುವ ಆಂಗ್ಲೋ ಇಂಡಿಯನ್ ಸದಸ್ಯರ ನೇಮಕವನ್ನು ಕಾಂಗ್ರೆಸ್ ತೆಗೆದುಕೊಳ್ಳಬಹುದು ಎಂದು ಕಾಂಗ್ರೆಸ್‌ಗೆ ತಿಳಿಸಿದೆ.  ಆದರೆ, ಈ ಬಗ್ಗೆ ಕಾಂಗ್ರೆಸ್ ಇನ್ನೂ ತನ್ನ ನಿಲುವನ್ನು ಜೆಡಿಎಸ್‌ಗೆ ತಿಳಿಸಿಲ್ಲ. ಭಾನುವಾರದ ಸಭೆಯಲ್ಲಿ ಜೆಡಿಎಸ್ ಇಟ್ಟಿರುವ ಈ ಬೇಡಿಕೆಗಳ ಬಗ್ಗೆ ನಾಯಕರು ಮೊದಲು ನಿರ್ಧಾರ ಕೈಗೊಳ್ಳಬೇಕಿದೆ. 

ಮೂಲಗಳ ಪ್ರಕಾರ, ಪಕ್ಷದ ರಾಜ್ಯ ನಾಯಕತ್ವಕ್ಕೆ ಜೆಡಿಎಸ್‌ನ ಈ ಬೇಡಿಕೆಗಳು ರುಚಿಸಿಲ್ಲ. ವಿಧಾನಸಭೆಯಲ್ಲಿನ ಬಲದ ಆಧಾರದ ಮೇಲೆ ಪಾಲು ಹಂಚಿಕೆಯಾಗಲಿ ಎಂಬ ನಿಲುವು ಈ ನಾಯಕರದ್ದಾಗಿ ದೆ. ಈ ಭಿನ್ನ ಅಭಿಪ್ರಾಯಗಳು ಇರುವುದರಿಂದ ಪಾಲು ಹಂಚಿಕೆ ಯಾವ ರೀತಿ ನಡೆಯಬಹುದು ಎಂಬ ಕುತೂಹಲವಿದೆ.

click me!