ಮತ್ಸ್ಯೋದ್ಯಮಕ್ಕೆ ಐಟಿ ದಾಳಿ ಶಾಕ್..! : ಮಧ್ವರಾಜ್‌ಗೆ ನಡುಕ..?

By Suvarna Web DeskFirst Published Feb 13, 2018, 7:28 AM IST
Highlights

ಸಹಕಾರ ಹಾಗೂ ವೈದ್ಯಕೀಯ ಕ್ಷೇತ್ರಗಳ ಬಳಿಕ ನಾಡಿನ ಮತ್ಸ್ಯೋದ್ಯಮಕ್ಕೆ ಆದಾಯ ತೆರಿಗೆ ಇಲಾಖೆ (ಐಟಿ) ಬಿಸಿ ತಟ್ಟಿದೆ. ಐಟಿ ಗಾಳಕ್ಕೆ ಸಿಲುಕಿದ ರಾಜ್ಯದ ಮೀನುಗಾರಿಕೆ ಕ್ಷೇತ್ರದ ಪ್ರಮುಖ ಮೂವರು ಉದ್ದಿಮೆದಾರರ ಬಳಿ .195 ಕೋಟಿ ಅಘೋಷಿತ ಆಸ್ತಿ ಪತ್ತೆಯಾಗಿದೆ.

ಬೆಂಗಳೂರು : ಸಹಕಾರ ಹಾಗೂ ವೈದ್ಯಕೀಯ ಕ್ಷೇತ್ರಗಳ ಬಳಿಕ ನಾಡಿನ ಮತ್ಸ್ಯೋದ್ಯಮಕ್ಕೆ ಆದಾಯ ತೆರಿಗೆ ಇಲಾಖೆ (ಐಟಿ) ಬಿಸಿ ತಟ್ಟಿದೆ. ಐಟಿ ಗಾಳಕ್ಕೆ ಸಿಲುಕಿದ ರಾಜ್ಯದ ಮೀನುಗಾರಿಕೆ ಕ್ಷೇತ್ರದ ಪ್ರಮುಖ ಮೂವರು ಉದ್ದಿಮೆದಾರರ ಬಳಿ .195 ಕೋಟಿ ಅಘೋಷಿತ ಆಸ್ತಿ ಪತ್ತೆಯಾಗಿದೆ.

ಮೂರು ದಿನಗಳ ಹಿಂದೆ ಮಂಗಳೂರು, ಉಡುಪಿ ಮೂಲದ ಮತ್ಸ್ಯ ಉದ್ಯಮಿಗಳ ವಿರುದ್ಧ ಕಾರ್ಯಾಚರಣೆಗಿಳಿದ ಐಟಿ ಅಧಿಕಾರಿಗಳು, ಈ ಸಂದರ್ಭದಲ್ಲಿ ಬೇನಾಮಿ ಆಸ್ತಿ ಶೋಧಿಸಿದ್ದು, ಮಾತ್ರವಲ್ಲದೆ ತೆರಿಗೆ ವಂಚನೆ ಬಗ್ಗೆ ಮಹತ್ವದ ದಾಖಲೆಗಳು, .86 ಲಕ್ಷ ನಗದು ಜಪ್ತಿ ಮಾಡಿದ್ದಾರೆ. ಹಾಗೆಯೇ ಚೀನಾ ಮೂಲದ ಕಂಪನಿಯ ಹವಾಲಾ ದಂಧೆಯನ್ನು ಬಯಲುಗೊಳಿಸಿದ್ದಾರೆ.

ಅಲ್ಲದೆ, ಕರಾವಳಿಯಲ್ಲಿ ದೊಡ್ಡ ಮಟ್ಟದ ಮತ್ಸ್ಯೋದ್ಯಮಿಯಾಗಿದ್ದು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯದ ಕ್ರೀಡಾ ಮತ್ತು ಯುವಜನ ಸೇವಾ ಸಚಿವರಾಗಿರುವ ಪ್ರಮೋದ್‌ ಮಧ್ವರಾಜ್‌ ಅವರಿಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯ ಬಿಸಿ ತಟ್ಟಿದೆ ಎಂದು ತಿಳಿದು ಬಂದಿದೆ.

3 ತಿಂಗಳಿಂದ ಕಣ್ಣಿಟ್ಟಿದ್ದರು: ಮೂರು ತಿಂಗಳಿಂದ ಮೀನುಗಾರಿಕೆ ಕ್ಷೇತ್ರದ ಆರ್ಥಿಕ ವ್ಯವಹಾರದ ಮೇಲೆ ಕಣ್ಣಿಟ್ಟಿದ್ದ ಅಧಿಕಾರಗಳಿಗೆ, ಇತ್ತೀಚಿಗೆ ಕರಾವಳಿ ಭಾಗದ ಮೂವರು ಪ್ರತಿಷ್ಠಿತ ಉದ್ಯಮಿಗಳು ಸರ್ಕಾರದ ಕಣ್ತಪ್ಪಿಸಿ ವಹಿವಾಟು ನಡೆಸಿರುವ ಕುರಿತು ಮಾಹಿತಿ ಸಿಕ್ಕಿತ್ತು. ಈ ಮೀನು ಉದ್ಯಮಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಸೇರಿದಂತೆ 150 ಮಂದಿ ಒಳಗೊಂಡ ಐಟಿ ತಂಡವು ಬೇಟೆಗಿಳಿಯಿತು.

ಫೆ.8ರಂದು ಗಾಳಕ್ಕೆ ಬಿದ್ದ ಉದ್ಯಮಿಗಳ ಉಡುಪಿ ಮತ್ತು ಮಂಗಳೂರಿನಲ್ಲಿರುವ ಕಚೇರಿ, ಮನೆ ಮಾತ್ರವಲ್ಲದೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಹಾಗೂ ಗೋವಾದ ಪಣಜಿಯಲ್ಲಿರುವ ಕಚೇರಿ ಸೇರಿ 23 ಸ್ಥಳಗಳಲ್ಲಿ ಶೋಧಿಸಲಾಯಿತು. ಈ ವೇಳೆ ಅಕ್ರಮ ಹಣಕಾಸು ವ್ಯವಹಾರ ಕುರಿತು ಮಾಹಿತಿ ಸಿಕ್ಕಿತು ಎಂದು ಐಟಿ ಇಲಾಖೆಯು ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.

ಕುಟುಂಬದವರ ಹೆಸರಲ್ಲಿ ವಹಿವಾಟು: ಈ ಉದ್ಯಮಿಗಳು, ತಮ್ಮ ಕುಟುಂಬ ಸದಸ್ಯರು, ಸಂಬಂಧಿಕರು ಹಾಗೂ ಸಂಸ್ಥೆ ನೌಕರರನ್ನು ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಹಿವಾಟು ನಡೆಸಿದ್ದು, 1988ರ ಬೇನಾಮಿ ಆಸ್ತಿ ವರ್ಗಾವಣೆ ಕಾಯ್ದೆಯನ್ನು ಅವರು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಾಗೆಯೇ ಪ್ರಯೋಗಾಲಯ ಹಾಗೂ ಸಂಸ್ಕರಣಾ ಕೇಂದ್ರಗಳ ಪ್ರಭಾವ ಬೀರಿ ಗುಣಮಟ್ಟದ ಉತ್ಪನ್ನ ಎಂದು ವರದಿ ಪಡೆದಿದ್ದಾರೆ. ಇವರು ಪೂರೈಸುತ್ತಿದ್ದ ಮೀನಿನ ಎಣ್ಣೆ ಕಳಪೆ ಮಟ್ಟದಲ್ಲಿದ್ದ ಸಂಗತಿ ಪರಿಶೀಲನೆ ವೇಳೆ ಗೊತ್ತಾಯಿತು. ಇದಲ್ಲದೆ ಬೇನಾಮಿ ಹೆಸರಿನಲ್ಲಿ ಡೀಸೆಲ್‌ ಸಬ್ಸಿಡಿ ಸಹ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತಮ್ಮ ವಾರ್ಷಿಕ ಆದಾಯವನ್ನು ಕುಟುಂಬದವರು, ನೌಕರರು ಹಾಗೂ ಸಂಬಂಧಿಕರ ಹೆಸರಿನಲ್ಲಿ ಹಂಚಿಕೆ ಮಾಡಿ ಲೆಕ್ಕ ತೋರಿಸಿದ್ದಾರೆ. ಅಲ್ಲದೆ, ಮತ್ಸ್ಯೋದ್ಯಮದ ಆದಾಯವನ್ನು ಕೃಷಿ ಆದಾಯ ಎಂದು ಕೂಡಾ ಅವರು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಮೀನು ಆಹಾರ ಪೂರೈಕೆ: ಈ ಉದ್ಯಮಿಗಳು, ಸೀಮಾ ಸುಂಕ (ಕಸ್ಟಮ್ಸ್‌) ಕಾಯ್ದೆಯನ್ನೂ ಉಲ್ಲಂಘಿಸಿದ್ದಾರೆ. ತಮ್ಮ ಮೀನು ಸಂಸ್ಕರಣಾ ಘಟಕಗಳಿಗೆ ವಿದೇಶದಿಂದ ಮೀನು ಆಹಾರ ಆಮದು ಮಾಡಿಕೊಂಡು ನಂತರ ಅವರು, ಆ ಉತ್ಪನ್ನವನ್ನೇ ಮತ್ತೆ ವಿದೇಶಕ್ಕೆ ರಫ್ತು ಮಾಡಿದ್ದಾರೆ. ಇನ್ನೂ ಯಂತ್ರೋಪಕರಣ ಖರೀದಿಯಲ್ಲಿ ಸಹ ಕಡಿಮೆ ಬೆಲೆ ತೋರಿಸಿ ತೆರಿಗೆ ವಂಚಿಸಿರುವ ಸಂಗತಿ ಬಯಲಾಗಿದೆ.

ಚೀನಾದ ಹಣದಲ್ಲೇ ಕಂಪನಿ ವ್ಯವಹಾರ : ಈ ಮತ್ಸ್ಯೋದ್ಯಮಿಗಳ ವ್ಯವಹಾರದಲ್ಲಿ ಚೀನಾ ಕಂಪನಿ ಹಣ ತೊಡಗಿಸಿರುವ ವಿಷಯ ಗೊತ್ತಾಯಿತು. ಭಾರತದ ಹೊರಗಿರುವ ಮಧ್ಯವರ್ತಿಗಳಿಗೆ ಹವಾಲಾ ದಂಧೆ ಮೂಲ‡ಕ ಚೀನಾ ಕಂಪನಿ ಕಮಿಷನ್‌ ಹಣ ನೀಡಿದೆ. ಮಾರಿಷಸ್‌, ಒಮಾನ್‌, ಪೂರ್ವ ಮತ್ತು ದಕ್ಷಿಣ ಅಫ್ರಿಕಾ ದೇಶಗಳಲ್ಲಿ ಹವಾಲಾ ಹಣ ವರ್ಗಾವಣೆ ಆಗಿದ್ದು, ಇದಕ್ಕೆ ಸಂಬಂಧಿಸಿದ ವಿದೇಶಿ ಬಂಡವಾಳ ಹೂಡಿಕೆ, ಹಣಕಾಸು ವ್ಯವಹಾರ ಬಗ್ಗೆ ದಾಖಲೆಗಳು ಪತ್ತೆಯಾಗಿವೆ. ಕಪ್ಪು ಹಣ ನಿರ್ಬಂಧ ಹಾಗೂ ತೆರಿಗೆ ವಂಚನೆ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಾತಿಥ್ಯ ನೀಡಿದ ಕಂಪನಿಗಳು : ಈ ಉದ್ಯಮಿಗಳು, ತಮ್ಮೊಂದಿಗೆ ವ್ಯವಹಾರದಲ್ಲಿ ತೊಡಗಿದವರಿಗೆ ರಾಜಾತಿಥ್ಯ ನೀಡಿದ ಸತ್ಕರಿಸಿರುವುದು ಬೆಳಕಿಗೆ ಬಂದಿದೆ. ಆ ಅತಿಥಿಗಳಿಗೆ ಐಷಾರಾಮಿ ಹೋಟೆಲ್‌ಗಳಲ್ಲಿ ಔತಣಕೂಟ ಆಯೋಜಿಸಿ ಖುಷಿಪಡಿಸಿದ್ದಾರೆ. ಇದರಿಂದ ಉದ್ಯಮ ವಿಸ್ತರಣೆಗೂ ಸಹಕಾರವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

click me!