ಕಾಂಗ್ರೆಸ್ ಪಕ್ಷವನ್ನು ಪಾಕಿಸ್ತಾನದ ಅನುಯಾಯಿ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ಶೆಹಜಾದಾ (ರಾಹುಲ್ ಗಾಂಧಿ)ನನ್ನು ಭಾರತದ ಮುಂದಿನ ಪ್ರಧಾನಿಯಾಗಿ ಮಾಡಲು ನೆರೆಯ ರಾಷ್ಟ್ರ ಉತ್ಸುಕವಾಗಿದೆ ಎಂದು ಕಿಡಿಕಾರಿದ್ದಾರೆ.
ಆನಂದ್ (ಗುಜರಾತ್) (ಮೇ.03): ಕಾಂಗ್ರೆಸ್ ಪಕ್ಷವನ್ನು ಪಾಕಿಸ್ತಾನದ ಅನುಯಾಯಿ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ಶೆಹಜಾದಾ (ರಾಹುಲ್ ಗಾಂಧಿ)ನನ್ನು ಭಾರತದ ಮುಂದಿನ ಪ್ರಧಾನಿಯಾಗಿ ಮಾಡಲು ನೆರೆಯ ರಾಷ್ಟ್ರ ಉತ್ಸುಕವಾಗಿದೆ ಎಂದು ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಅವರ ಇತ್ತೀಚಿನ ಭಾಷಣವನ್ನು ಹೊಗಳಿ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸ್ಸೇನ್ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಪಕ್ಷದ ನಾಯಕನ ವಿರುದ್ಧ ಮೋದಿ ಈ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್‌ನ ಆನಂದ್‌ನಲ್ಲಿ ಗುರುವಾರ ಬಿಜೆಪಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಮೋದಿ, ‘ಕಾಂಗ್ರೆಸ್ ಡೈಯಿಂಗ್, ಪಾಕಿಸ್ತಾನ್ ಕ್ರೈಯಿಂಗ್ (ಭಾರತದಲ್ಲಿ ಕಾಂಗ್ರೆಸ್‌ನ ಅವನತಿ ನೋಡಿ ಅಲ್ಲಿ ಪಾಕಿಸ್ತಾನ ಗೋಳಿಡುತ್ತಿದೆ). ಪಾಕಿಸ್ತಾನದ ನಾಯಕರು ಕಾಂಗ್ರೆಸ್‌ಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಶೆಹಜಾದಾನನ್ನು ಭಾರತದ ಮುಂದಿನ ಪ್ರಧಾನಿಯಾಗಿ ಮಾಡಲು ನೆರೆಯ ದೇಶ ಉತ್ಸುಕವಾಗಿದೆ’ ಎಂದರು. ಆದರೆ ಇದೇನು ಅಚ್ಚರಿ ವಿಷಯವಲ್ಲ. ಕಾರಣ, ಕಾಂಗ್ರೆಸ್ ಪಾಕಿಸ್ತಾನದ ಅನುಯಾಯಿ ಎಂಬುದು ಎಲ್ಲರಿಗೂ ಗೊತ್ತಿದೆ. ಪಾಕಿಸ್ತಾನ ಮತ್ತು ಕಾಂಗ್ರೆಸ್ ನಡುವಣ ನಂಟು ಮತ್ತೊಮ್ಮೆ ಬಯಲಿಗೆ ಬಂದಿದೆ. ದೇಶದ ಶತ್ರುಗಳು ಭಾರತದಲ್ಲಿ ದುರ್ಬಲ ಪ್ರಧಾನಿಯನ್ನು ಕಾಣಲು ಬಯಸುತ್ತಾರೆ ಎಂಬುದನ್ನು ಈ ನಂಟು ತೋರಿಸುತ್ತದೆ’ ಎಂದು ಕಿಡಿಕಾರಿದ್ದಾರೆ.
ಗ್ಯಾರಂಟಿ ಕೊಡಲು ಇವರೇನು ಮುಖ್ಯಮಂತ್ರಿನಾ? ಪ್ರಧಾನಿಯಾ?: ರಾಹುಲ್ ಗಾಂಧಿ ವಿರುದ್ಧ ಎಚ್‌ಡಿಡಿ ವಾಗ್ದಾಳಿ
ವೋಟ್ ಜಿಹಾದ್‌ಗೆ ಕಿಡಿ: ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಸಂಬಂಧಿ, ಸಮಾಜವಾದಿ ಪಕ್ಷದ ನಾಯಕಿ ಮರಿಯಾ ಆಲಂ ಈ ಬಾರಿ ಚುನಾವಣೆಯಲ್ಲಿ ವೋಟ್ ಜಿಹಾದ್ ನಡೆಸಬೇಕು ಎಂದು ಕೊಟ್ಟಿರುವ ಕರೆಯ ಬಗ್ಗೆಯೂ ಪ್ರತಿಕ್ರಿಯಿಸಿದ ಮೋದಿ, ‘ನಾವು ಇದುವರೆಗೂ ಲವ್ ಜಿಹಾದ್ ಮತ್ತು ಲ್ಯಾಂಡ್ ಜಿಹಾದ್ ಬಗ್ಗೆ ಕೇಳಿದ್ದೆವು. ಆದರೆ ಇದೀಗ ವೋಟ್ ಜಿಹಾದ್ ಬಗ್ಗೆ ಕೇಳುತ್ತಿದ್ದೇವೆ. ಸುಶಿಕ್ಷಿತ ಮುಸ್ಲಿಂ ಕುಟುಂಬದಲ್ಲಿ ವ್ಯಕ್ತಿಯಿಂದ ಇಂಥ ಮಾತು ಕೇಳಿಬಂದಿದೆ. ಜಿಹಾದ್ ಎಂಬುದರ ಅರ್ಥ ಏನು ಎಂಬುದರ ಬಗ್ಗೆ ನಿಮಗೆಲ್ಲರಿಗೂ ಗೊತ್ತಿದೆ ಎಂದು ಅರ್ಥೈಸಿಕೊಂಡಿದ್ದೇನೆ ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ. ಇಂಥ ಹೇಳಿಕೆ ನೀಡಿದ್ದರೂ ಈ ಬಗ್ಗೆ ಯಾವುದೇ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿಲ್ಲ ಎಂದು ಮೋದಿ ಟೀಕಿಸಿದರು.