ದೂರು ನೀಡಲು ಬಂದು ಪೊಲೀಸ್ ಮೇಲೆ ಕೈ ಮಾಡಿದ ಮಹಿಳೆಯರು: ಕಪಾಳಕ್ಕೆ ಹೊಡೆದು ಗಲಾಟೆ

By Kannadaprabha NewsFirst Published May 3, 2024, 5:43 AM IST
Highlights

ಹಣಕಾಸು ವ್ಯವಹಾರ ಸಂಬಂಧ ದೂರು ನೀಡಲು ಬಂದಾಗ ಠಾಣೆಯಲ್ಲೇ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮೂವರು ಮಹಿಳೆಯರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಮೇ.03): ಹಣಕಾಸು ವ್ಯವಹಾರ ಸಂಬಂಧ ದೂರು ನೀಡಲು ಬಂದಾಗ ಠಾಣೆಯಲ್ಲೇ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮೂವರು ಮಹಿಳೆಯರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಯೇಷಾ ತಾಜ್, ಫೌಜೀಯಾ ಖಾನಂ ಹಾಗೂ ಅರ್ಬಿನಾ ತಾಜ್ ಬಂಧಿತರಾಗಿದ್ದು, ಈ ಬಗ್ಗೆ ಸಬ್ ಇನ್‌ಸ್ಪೆಕ್ಟರ್‌ ಸುರೇಖಾ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ತಪ್ಪಿಸಿಕೊಂಡಿರುವ ಮತ್ತೆ ಕೆಲವರ ಪತ್ತೆಗೆ ತನಿಖೆ ನಡೆದಿದೆ. ಹಣಕಾಸು ವಂಚನೆ ಸಂಬಂಧ ಬುಧವಾರ ದೂರು ನೀಡಲು ಜ್ಞಾನಭಾರತಿ ಠಾಣೆಗೆ ಆರೋಪಿಗಳು ತೆರಳಿದ್ದಾಗ ಈ ಘಟನೆ ನಡೆದಿದೆ.

ಕಪಾಳಕ್ಕೆ ಹೊಡೆದು ಗಲಾಟೆ: ಹಣಕಾಸು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿತ್ತು. ಆಗ ಠಾಣೆಗೆ ಆರೋಪಿ ಆಯೇಷಾ ತಾಜ್ ಹಾಗೂ ಇತರರು ಬಂದಿದ್ದರು. ಆ ವೇಳೆ ಠಾಣೆಯಲ್ಲಿ ಹೆಚ್ಚಿನ ಜನರಿದ್ದ ಕಾರಣ ಅವರಿಂದ ದೂರು ಪಡೆಯಲು ಸ್ಪಲ್ಪ ಸಮಯ ಕಾಯುವಂತೆ ಹೇಳಿದ್ದಾರೆ. ಆಗ ಗುಂಪು ಸೇರಿದ್ದ ಆರೋಪಿಗಳು, ಪರಸ್ಪರ ಕೈ ಕೈ ಮಿಲಾಯಿಸಲು ಮುಂದಾಗಿದ್ದರು. ಇದನ್ನು ನೋಡಿದ ಮಹಿಳಾ ಕಾನ್‌ಸ್ಟೇಬಲ್‌ ಗಲಾಟೆ ಮಾಡದಂತೆ ಸೂಚಿಸಿದ್ದರು.

ಶಾಸಕ ಇಕ್ಬಾಲ್‌ ಹುಸೇನ್‌ ವಿಡಿಯೋ ವೈರಲ್‌: ಯುವತಿಯಿಂದ ದೂರು, ಎಫ್‌ಐಆರ್‌ ದಾಖಲು

ಈ ಮಾತಿಗೆ ಕೆರಳಿದ ಆರೋಪಿಗಳು, ಮಹಿಳಾ ಕಾನ್‌ಸ್ಟೇಬಲ್‌ಗೆ ಜೋರು ಮಾಡಿದ್ದಾರೆ. ಇದಕ್ಕೆ ಆಕ್ಷೇಪಿಸಿದಾಗ ಕಾನ್‌ಸ್ಟೇಬಲ್ ಕಪಾಳಕ್ಕೆ ಹೊಡೆದು ಉಗುರುಗಳಿಂದ ಪರಚಿದ್ದಾರೆ. ಕೊನೆಗೆ ಗಲಾಟೆ ಬಿಡಿಸಲು ಮುಂದಾದ ಇನ್‌ಸ್ಪೆಕ್ಟರ್ ಎಂ.ಎಸ್.ರವಿ, ಪಿಎಸ್‌ಐ ಸುರೇಖಾ, ಹೆಡ್‌ ಕಾನ್‌ಸ್ಟೆಬಲ್ ಚನ್ನಮ್ಮ, ಕಾನ್‌ಸ್ಟೆಬಲ್‌ಗಳಾದ ರೇಖಾ ಹಾಗೂ ಅಕ್ಕಮ್ಮ ಅವರ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದರು. ಅಲ್ಲದೆ ತಮ್ಮ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾಗಿ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಸಹ ಆರೋಪಿಗಳು ಬೆದರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

click me!