ಎಸಿಬಿ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್‌! ಮಾಡಿದ್ದೇನು..?

By Web DeskFirst Published Dec 22, 2018, 8:45 AM IST
Highlights

ಲಂಚ ಪಡೆಯುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಯೋರ್ವರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆಯುತ್ತಿದ್ದರಿಂದ ಸಂಪಂಗಿ ರಾಮನಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಕೃಷ್ಣ ಮತ್ತು ಹೆಡ್‌ಕಾನ್ಸ್‌ಟೇಬಲ್‌ ಮಂಗಳೇಶ್‌  ಎಂಬುವರನ್ನು ಬಂಧಿಸಲಾಗಿದೆ.

ಬೆಂಗಳೂರು :  ಹಫ್ತಾ ವಸೂಲಿ, ಹಲ್ಲೆ, ಬೆದರಿಕೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್‌ ಸಲ್ಲಿಸಲು ಲಂಚ ಪಡೆಯುತ್ತಿದ್ದ ಸಂಪಂಗಿ ರಾಮನಗರ ಇನ್ಸ್‌ಪೆಕ್ಟರ್‌ ಹಾಗೂ ಹೆಡ್‌ಕಾನ್ಸ್‌ಟೇಬಲ್‌ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಸಂಪಂಗಿ ರಾಮನಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಕೃಷ್ಣ ಮತ್ತು ಹೆಡ್‌ಕಾನ್ಸ್‌ಟೇಬಲ್‌ ಮಂಗಳೇಶ್‌ ಬಂಧಿತರು.

ಕಳೆದ ಐದು ತಿಂಗಳ ಹಿಂದೆ ಕೊರಿಯಾರ್‌ ಕಚೇರಿಯೊಂದರ ಸಿಬ್ಬಂದಿಯನ್ನು ಬೆದರಿಸಿ, ವಸ್ತುಗಳನ್ನು ಧ್ವಂಸ ಮಾಡಿದ್ದ ಪ್ರರಣದಲ್ಲಿ ರಾಮ್‌ಜೀ ಎಂಬಾತನ ವಿರುದ್ಧ ಸಂಪಂಗಿ ರಾಮನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಸ್ವೀಕರಿಸಿದ್ದ ಇನ್ಸ್‌ಪೆಕ್ಟರ್‌ ವರ್ಗಾವಣೆಗೊಂಡಿದ್ದು, ಆ ಹುದ್ದೆಗೆ ಕೃಷ್ಣ ಇನ್ಸ್‌ಪೆಕ್ಟರ್‌ ನಿಯುಕ್ತಿಗೊಂಡಿದ್ದರು. 

ಈ ಪ್ರಕರಣದಲ್ಲಿ ಆರೋಪಿ ರಾಮ್‌ಜೀಯನ್ನು ಠಾಣೆಗೆ ಕರೆಸಿದ್ದ ಇನ್‌ಸ್ಪೆಕ್ಟರ್‌ ಕೃಷ್ಣ, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್‌ ಸಲ್ಲಿಸಲು ಹೆಡ್‌ಕಾನ್ಸ್‌ಟೇಬಲ್‌ ಮಂಗಳೇಶ್‌ ಮೂಲಕ .1 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪೊಲೀಸರಿಗೆ ಲಂಚ ನೀಡಲು ಇಚ್ಚಿಸದ ಆರೋಪಿ ರಾಮ್‌ಜೀ ಈ ಕುರಿತು ಎಸಿಬಿಗೆ ದೂರು ನೀಡಿದ್ದ. ಶುಕ್ರವಾರ ಮಂಗಳೇಶ್‌, ರಾಮ್‌ಜೀಯಿಂದ .60 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ. ನಂತರ ಮುಖ್ಯಪೇದೆ ಮಂಗಳೇಶ್‌ ಮತ್ತು ಇನ್‌ಸ್ಪೆಕ್ಟರ್‌ ಕೃಷ್ಣ ಅವರನ್ನು ಬಂಧಿಸಿ, ಕ್ರಮ ಕೈಗೊಂಡಿದ್ದಾರೆ.

ಹಫ್ತಾಕ್ಕೆ ಬೇಡಿಕೆ ಇಟ್ಟಿದ್ದ ರಾಮ್‌ಜೀ:  ಸಂದೀಪ್‌ ಪ್ರೇಮ್‌ ಜೀ ಕುಮಲಿಯಾ ಎಂಬುವರು ಸಂಪಂಗಿರಾಮನಗರದ 8ನೇ ಮುಖ್ಯರಸ್ತೆಯಲ್ಲಿ ‘ಅಂಜಲಿ ಕೊರಿಯರ್‌’ ನಡೆಸುತ್ತಿದ್ದಾರೆ. ಕಳೆದ ಜು.10 ರಂದು ಆರೋಪಿ ರಾಮ್‌ಜಿ (24) ಎಂಬಾತ ಅಂಜಲಿ ಕೊರಿಯಾರ್‌ ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿದ್ದ. ಈ ವೇಳೆ ಕಚೇರಿಯಲ್ಲಿದ್ದ ಸಿಬ್ಬಂದಿಗೆ ‘ನಿಮ್ಮ ಕೊರಿಯರ್‌ನ ವ್ಯವಸ್ಥಾಪಕ ನನಗೆ ಹಫ್ತಾ ನೀಡದೆ ಕೊರಿಯರ್‌ ನಡೆಸಲಾಗುತ್ತಿದೆ’ ಎಂದು ಹೇಳುತ್ತಾ, ಕಚೇರಿಯಲ್ಲಿದ್ದ ಕಂಪ್ಯೂಟರ್‌, ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿ, ಕೊರಿಯಾರ್‌ ಅನ್ನು ಚೆಲ್ಲಾಪಿಲ್ಲಿ ಮಾಡಿದ್ದ. ‘ನಿಮ್ಮ ಮಾಲಿಕರಿಗೆ ಹೇಳು, ಪ್ರತಿ ತಿಂಗಳು ಹಫ್ತಾ ನೀಡಬೇಕು. ಇಲ್ಲದಿದ್ದರೆ ನಿಮ್ಮ ಸಮೇತ ಇಡೀ ಕೊರಿಯರ್‌ಗೆ ಬೆಂಕಿ ಹಾಕಲಾಗುವುದು’ ಎಂದು ಬೆದರಿಕೆ ಹಾಕಿದ್ದ. ಈ ಸಂಬಂಧ ಸಂದೀಪ್‌ ಪ್ರೇಮ್‌ಜೀ ಅವರು ಸಂಪಂಗಿ ರಾಮನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣದಲ್ಲಿ ರಾಮ್‌ಜೀ ವಿರುದ್ಧ ಸಾಕ್ಷ್ಯಗಳಿಲ್ಲ ಎಂದು ಬಿ ರಿಪೋರ್ಟ್‌ ಸಲ್ಲಿಸುತ್ತೇವೆ ಎಂದು ಒಂದು ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುವಾಗ ಇದೀಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

4 ತಿಂಗಳಾದರೂ ಆರೋಪಿ ಬಂಧಿಸದ ಪೊಲೀಸರು!

ಗುಜರಾತ್‌ ಮೂಲದ ರಾಮ್‌ಜೀ ಪ್ರತಿ ಬಾರಿ ಬಂದು ಹಫ್ತಾ ವಸೂಲಿಗೆ ಒತ್ತಾಯ ಮಾಡುತ್ತಿದ್ದ. ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ಕಳೆದ ಒಂದೂವರೆ ತಿಂಗಳ ಹಿಂದೆ ಮತ್ತೆ ಕಚೇರಿ ಬಳಿ ಬಂದಿದ್ದ ಆರೋಪಿ ಚಾಕು ತೋರಿಸಿ ಬೆದರಿಸಿ ಹೋಗಿದ್ದ. ನಾವು ಠಾಣೆಗೆ ಹೋಗಿ ಇನ್ಸ್‌ಪೆಕ್ಟರ್‌ ಗಮನಕ್ಕೆ ತಂದಿದ್ದೆವು. ಆತನನ್ನು ಬಂಧನ ಮಾಡುವುದಾಗಿ ಹೇಳಿದ್ದರು. ನಾಲ್ಕು ತಿಂಗಳಾದರೂ ಪೊಲೀಸರು ಆರೋಪಿಯನ್ನು ಬಂಧನ ಮಾಡಿರಲಿಲ್ಲ ಎಂದು ಅಂಜಲಿ ಕೊರಿಯರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

click me!