ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ಬಿಜೆಪಿ ನಿಲುವೇನು: ಡಿ.ಕೆ.ಶಿವಕುಮಾರ್‌

By Kannadaprabha NewsFirst Published Apr 30, 2024, 11:20 AM IST
Highlights

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದ ಕುರಿತು ಬಿಜೆಪಿ ನಾಯಕರು ತಮ್ಮ ನಿಲುವೇನು ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು. 

ಬೆಳಗಾವಿ (ಏ.30): ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದ ಕುರಿತು ಬಿಜೆಪಿ ನಾಯಕರು ತಮ್ಮ ನಿಲುವೇನು ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‌ ಪ್ರಕರಣ ಸಂಬಂಧ ಈಗಾಗಲೇ ತನಿಖಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ವಿಜಯೇಂದ್ರ, ಆರ್‌.ಅಶೋಕ ಸೇರಿದಂತೆ ಬಿಜೆಪಿ ನಾಯಕರು ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಕುಮಾರಸ್ವಾಮಿ ಕುಟುಂಬ, ಅವರ ಪಕ್ಷ ಏನು ಬೇಕಾದರೂ ಹೇಳಲಿ. ಆದರೆ, ಬಿಜೆಪಿ ನಿಲುವು ಏನು ಎಂಬುವುದು ನನ್ನ ಪ್ರಶ್ನೆ. ಜಗದೀಶ ಶೆಟ್ಟರ್‌, ಮಂಗಲ ಅಂಗಡಿ ಬಗ್ಗೆ ಬಿಜೆಪಿ ನಾಯಕರಿಗೆ ಕೇಳಿ ನಿಮ್ಮ ನಿಲುವು ಏನು?. ಜೆಡಿಎಸ್‌ ಶಾಸಕರ ಪತ್ರದ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಬಿಜೆಪಿ ಮೈತ್ರಿಯ ನಿಲುವು ಏನು ಎಂಬುವುದು ನಮ್ಮ ಪ್ರಶ್ನೆ ಎಂದರು.

ಕಾನೂನು ಸುವ್ಯವಸ್ಥೆ ಎಲ್ಲಿ ಹದಗೆಟ್ಟಿದೆ?: ಕಾನೂನು ವ್ಯವಸ್ಥೆ ಎಲ್ಲಿ ಹದಗೆಟ್ಟಿದೆ ಎಂದು ಪ್ರಧಾನಿ ಹೇಳಬೇಕು. ಬೇರೆ ರಾಜ್ಯಕ್ಕೆ ಹೋಲಿಸಿದರೇ ನಮ್ಮದು ಅತ್ಯಂತ ಸುರಕ್ಷಿತ ರಾಜ್ಯ. ಅಟಲ್‌ ಬಿಹಾರಿ ವಾಜಪೇಯಿ ಬೆಂಗಳೂರು ಬಗ್ಗೆ ಹೇಳಿದ್ದರು. ವಿಶ್ವದ ನಾಯಕರು ಬೆಂಗಳೂರಿಗೆ ಬಂದು ದೆಹಲಿಗೆ ಹೋಗುತ್ತಾರೆ. ನಿಮಗೆ ನಮ್ಮ ರಾಜ್ಯದಲ್ಲಿ ಮತ ಬರಲಿಲ್ಲ ಎಂದು ಮಾತನಾಡಿದರೇ ಇಡೀ ಭಾರತ ಬಗ್ಗೆ ನೀವು ಮಾತನಾಡಿದ ಹಾಗೆ. ಭಾರತದಲ್ಲಿ ಕರ್ನಾಟಕ ಇದೆ. ಪ್ರಧಾನಿ ಮೋದಿ ಆರೋಪ ಸರಿಯಿಲ್ಲ. ಉತ್ತಮ ಆಡಳಿತ ಹೊಂದಿರುವ ರಾಜ್ಯ ಕರ್ನಾಟಕವಾಗಿದೆ ಎಂದು ಶಿವಕುಮಾರ್ ಹೇಳಿದರು.

Prajwal Revanna Sex Scandal: ಎಸ್‌ಐಟಿಗೆ ಪೆನ್‌ಡ್ರೈವ್‌ ರಹಸ್ಯ ತಿಳಿಸಿದ ಹಾಸನ ಎಸ್ಪಿ

ಶ್ರೀನಿವಾಸ ಪ್ರಸಾದ ನಿಧನಕ್ಕೆ ಸಂತಾಪ: ಸಂಸದ ಶ್ರೀನಿವಾಸ ಪ್ರಸಾದ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು, ನಿಧನದ ವಿಷಯ ತಿಳಿದ ಬಳಿಕ ದುಃಖ ಆಗಿದೆ. ನಾನು ಅವರ ಕೈ ಕೆಳಗೆ ಕೆಲಸ ಮಾಡಿದೆ. ರಾಜೀವ ಗಾಂಧಿ ಕಾಲದಲ್ಲಿ ನನಗೆ ಸಹಾಯ ಮಾಡಿದ್ದರು. ನಾವೆಲ್ಲರೂ ಒಂದೇ ಹಾಸ್ಟೆಲ್‌ನಲ್ಲಿ ಇರುತ್ತಿದ್ದೇವು. ಅನೇಕ ವರ್ಷಗಳ ಕಾಲ ಒಟ್ಟಿಗೆ ರಾಜಕೀಯ ಮಾಡಿಕೊಂಡು ಬಂದಿದ್ದೇವೆ. ಭಿನ್ನಾಭಿಪ್ರಾಯದಿಂದ ಬೇರೆ ಪಕ್ಷಕ್ಕೆ ಹೋದರು. ಬಳಿಕ ಜೊತೆಗೆ ಸಂಪುಟದಲ್ಲಿ ಕೆಲಸ ಮಾಡಿದ್ದೇವೆ. ಅವರ ನಿಧನದಿಂದ ಓರ್ವ ಧೀಮಂತ ನಾಯಕರನ್ನು ನಾವು ಕಳೆದುಕೊಂಡಿದ್ದೇವೆ. ನಮ್ಮ ಕಷ್ಟ ಕಾಲದಲ್ಲಿ ಜೊತೆಗಿದ್ದ ವ್ಯಕ್ತಿ. ಮೈಸೂರು ಭಾಗದಲ್ಲಿ ಪ್ರಭಾವಿ ಆಗಿದ್ದರು. ಇಡೀ ಪಕ್ಷದ ಪರವಾಗಿ ನಾನು ಅವರಿಗೆ ನಮನ ಸಲ್ಲಿಸುತ್ತೇನೆ ಎಂದು ತಿಳಿಸಿದರು.

click me!