ಪ್ಲಾಸ್ಟಿಕ್‌ ವಿರುದ್ಧ ಜಗತ್ತೇ ಏಕೆ ಯುದ್ಧ ಸಾರಿದೆ?

By Kannadaprabha NewsFirst Published Aug 30, 2019, 4:48 PM IST
Highlights

2022ರ ವೇಳೆಗೆ ಪ್ಲಾಸ್ಟಿಕ್‌ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಪಣತೊಟ್ಟಿರುವ ಕೇಂದ್ರ ಸರ್ಕಾರ, ಇದೇ ಅ.2 ರಿಂದ ಏಕ ಬಳಕೆ ಪ್ಲಾಸ್ಟಿಕ್‌ ಅನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾಗಿದೆ ಎನ್ನಲಾಗಿದೆ. ಅದರ ಜೊತೆಗೆ ಅಕ್ಟೋಬರ್‌ 2ರಿಂದ ಏಕಬಳಕೆಯ ಪ್ಲಾಸ್ಟಿಕನ್ನು ನಿಷೇಧಿಸುವುದಾಗಿ ಭಾರತೀಯ ರೈಲ್ವೆಯೂ ಘೋಷಿಸಿದೆ. 

ಬೆಂಗಳೂರು (ಆ. 30): 2022 ರ ವೇಳೆಗೆ ಪ್ಲಾಸ್ಟಿಕ್‌ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಪಣತೊಟ್ಟಿರುವ ಕೇಂದ್ರ ಸರ್ಕಾರ, ಇದೇ ಅ.2 ರಿಂದ ಏಕ ಬಳಕೆ ಪ್ಲಾಸ್ಟಿಕ್‌ ಅನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾಗಿದೆ ಎನ್ನಲಾಗಿದೆ. ಅದರ ಜೊತೆಗೆ ಅಕ್ಟೋಬರ್‌ 2ರಿಂದ ಏಕಬಳಕೆಯ ಪ್ಲಾಸ್ಟಿಕನ್ನು ನಿಷೇಧಿಸುವುದಾಗಿ ಭಾರತೀಯ ರೈಲ್ವೆಯೂ ಘೋಷಿಸಿದೆ.

ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಈ ಮಹತ್ತರ ನಿರ್ಧಾರಕ್ಕೆ ಬಂದಿದೆ ಎಂದು ಹೇಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಪ್ಲಾಸ್ಟಿಕ್‌ ಬಳಕೆ, ಅದರ ನಿಷೇಧದ ಗಂಭೀರತೆ ಕುರಿತ ಕಿರು ವಿವರ ಇಲ್ಲಿದೆ.

ಪ್ಲಾಸ್ಟಿಕ್ ಬಿಟ್ಹಾಕಿ, ಹಳೇ ಫ್ಯಾಷನ್‌ ಆದರೂ ಬಟ್ಟೆಚೀಲ ಬಳಸಿ: ಅಮಿತ್ ಶಾ

2000ನೇ ಇಸವಿ ಬಳಿಕ ಪ್ಲಾಸ್ಟಿಕ್‌ ಉತ್ಪಾದನೆಯಲ್ಲಿ ಭಾರೀ ಹೆಚ್ಚಳ

1950ರಿಂದ ಇಲ್ಲಿಯವರೆಗೆÜ ಜಾಗತಿಕವಾಗಿ 8.3-9 ಬಿಲಿಯನ್‌ ಟನ್‌ ಪ್ಲಾಸ್ಟಿಕ್‌ ಉತ್ಪಾದನೆಯಾಗಿದೆ. ಅದು 4 ಮೌಂಟ್‌ ಎವರರೆಸ್ಟ್‌ ಪರ್ವತಗಳಿಗೆ ಸಮ. ವಿಶೇಷ ಎಂದರೆ 2000ನೇ ಇಸವಿಯ ನಂತರ 44% ಪ್ಲಾಸ್ಟಿಕ್‌ ಉತ್ಪಾದನೆ ಹೆಚ್ಚಾಗಿದೆ. ಭಾರತವೊಂದರಲ್ಲಿಯೇ 25,940 ಟನ್‌ ಪ್ಲಾಸ್ಟಿಕ್‌ ಪ್ರತಿ ದಿನ ಉತ್ಪಾದನೆಯಾಗುತ್ತಿದೆ. ಅದರ ತೂಕ ಸುಮಾರು 9000 ಏಷ್ಯಾ ಆನೆಗಳಿಗೆ ಸಮವಾಗಿರುತ್ತದೆ. ಆದರೆ ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಪ್ಲಾಸ್ಟಿಕ್‌ ಬಳಕೆಯಲ್ಲಿ ಭಾರತವೇ ಕಡಿಮೆ ಬಳಸುತ್ತಿದೆಯಂತೆ. 2014-15ರ ಮಾಹಿತಿಯಂತೆ ಭಾರತೀಯನೊಬ್ಬ ದಿನವೊಂದಕ್ಕೆ ಸರಾಸರಿ 11 ಕೆ.ಜಿ ಪ್ಲಾಸ್ಟಿಕ್‌ ಬಳಕೆ ಮಾಡುತ್ತಾನೆ. ಆದರೆ ಜಾಗತಿಕ ಸರಾಸರಿ 28 ಕೆ.ಜಿ.

ಪ್ಲಾಸ್ಟಿಕ್‌ ನಿಷೇಧಕ್ಕೆ ಜಗತ್ತಿನಾದ್ಯಂತ ಸರ್ಕಾರಗಳು ಏನು ಮಾಡುತ್ತಿವೆ?

ಯುನೈಟೆಡ್‌ ನೇಷನ್‌ ಎನ್ವಿರಾನ್ಮೆಂಟ್‌ ಪ್ರೋಗ್ರಾಮ್‌ ಪ್ರಕಾರ ಜಗತ್ತಿನಾದ್ಯಂತ ಪ್ರತಿ ವರ್ಷ ಅಂದಾಜು 5 ಲಕ್ಷ ಕೋಟಿ (5 ಟ್ರಿಲಿಯನ್‌) ಪ್ಲಾಸ್ಟಿಕ್‌ ಬ್ಯಾಗುಗಳು ಬಳಕೆಯಾಗುತ್ತಿವೆ. ಇದು ಪರಿಸರಕ್ಕೆ, ಪ್ರಾಣಿ ಪಕ್ಷಿಗಳಿಗೆ, ಜಲಚರಗಳಿಗೆ, ಅಳಿವಿನಂಚಿನಲ್ಲಿರುವ ಜೀವಿಗಳಿಗೆ, ಮಾನವನಿಗೆ ಮಾರಕ. ಇದನ್ನು ತಿಳಿದು ಬಾಂಗ್ಲಾದೇಶ ಪ್ರಪ್ರಥಮ ಬಾರಿಗೆ 2002ರಲ್ಲಿನ ಪ್ಲಾಸ್ಟಿಕ್‌ ಬ್ಯಾಗುಗಳನ್ನು ನಿಷೇಧಿಸಿತು.

ಅದಾದ ಬಳಿಕ ಹಲವು ಆಫ್ರಿಕನ್‌ ದೇಶಗಳೂ ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸಿದವು. ಅಮೆರಿಕದೆಲ್ಲೆಡೆ ಪ್ಲಾಸ್ಟಿಕ್‌ ಬ್ಯಾಗುಗಳಿಗೆ ನಿಷೇಧವಿಲ್ಲದಿದ್ದರೂ ಕೆಲವು ರಾಜ್ಯಗಳಲ್ಲಿ ನಿಷೇಧ ಹೇರಿದೆ. ಭಾರತದಲ್ಲೂ ಕೆಲವು ರಾಜ್ಯಗಳು ಏಕ ಬಳಕೆಯ ಪ್ಲಾಸ್ಟಿಕ್‌ ಬಳಕೆಗೆ ನಿಷೇಧ ಹೇರಿವೆ. ಜಗತ್ತಿನ 127 ದೇಶಗಳು ಪ್ಲಾಸ್ಟಿಕ್‌ ಬಳಕೆಗೆ ನಿರ್ಬಂಧ ವಿಧಿಸಿವೆ. ಇನ್ನು 27 ದೇಶಗಳು ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ನಿಷೇಧಿಸಿವೆ.

ಅ.2 ರಿಂದ ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ?

80% ಪ್ಲಾಸ್ಟಿಕ್‌ ಪರಿಸರದಲ್ಲೇ ಇದೆ!

ಸದ್ಯ ಬಳಕೆ ಮಾಡುತ್ತಿರುವ ಪ್ಲಾಸ್ಟಿಕ್‌ಗಳಲ್ಲಿ 40% ಪ್ಲಾಸ್ಟಿಕ್‌ ಒಂದು ಬಾರಿ ಬಳಕೆಯಾಗಿ ತ್ಯಾಜ್ಯವಾಗಿ ಪರಿವರ್ತನೆಯಾಗುತ್ತಿದೆ. ವರದಿ ಪ್ರಕಾರ 1950ರಿಂದ ಇಲ್ಲಿಯವರೆಗೆ ಉತ್ಪಾದನೆಯಾದ ಒಟ್ಟು ಪ್ಲಾಸ್ಟಿಕ್‌ನಲ್ಲಿ 79% ಪ್ಲಾಸ್ಟಿಕ್‌ ಪರಿಸರವನ್ನು ಸೇರಿದೆ.

ಜಾಗತಿಕ ಪ್ಲಾಸ್ಟಿಕ್‌ ಉತ್ಪಾದನೆ(1950-2015)

8300 ಮಿಲಿಯನ್‌ (83 ಕೋಟಿ ಟನ್‌) ಟನ್‌-ಒಟ್ಟು ಪ್ಲಾಸ್ಟಿಕ್‌ ಉತ್ಪಾದನೆ

5800 ಮಿ. ಟನ್‌ (58 ಕೋಟಿ ಟನ್‌)-ಒಮ್ಮೆ ಮಾತ್ರ ಬಳಕೆಯಾಗುವ ಪ್ಲಾಸ್ಟಿಕ್‌

4600 ಮಿ.ಟನ್‌ (46 ಕೋಟಿ ಟನ್‌)- ನೇರವಾಗಿ ಭೂಮಿ ಸೇರುತ್ತಿರುವ ಪ್ಲಾಸ್ಟಿಕ್‌

ಪ್ಲಾಸ್ಟಿಕ್‌ ಜಗತ್ತಿನ ನಂ.1 ಶತ್ರುವಾಗಿ ಬೆಳೆದಿದ್ದು ಹೇಗೆ ಗೊತ್ತಾ?

19ನೇ ಶತಮಾನ: ಗ್ರಾಹಕ ಬಳಕೆಯ ವಸ್ತುಗಳನ್ನು ತರಲು ಸೆಲ್ಯುಲಾಯ್ಡ್‌ ಪ್ಲಾಸ್ಟಿಕ್‌ಗಳನ್ನು ಬಳಕೆ ಮಾಡಲಾಗುತ್ತಿತ್ತು.

1907: ಅಮೆರಿಕ ಆವಿಷ್ಕರಿಸಿದ ಪುನಃ ಬಳಕೆ ಮಾಡಬಹುದಾದ ಮಾಡರ್ನ್‌ ಪ್ಲಾಸ್ಟಿಕ್‌ಗಳು ಎಲ್ಲೆಡೆ ಲಗ್ಗೆ ಇಟ್ಟವು. ಮೊದಮೊದಲಿಗೆ ವಿದ್ಯುತ್‌ ವೈರ್‌ಗಳಲ್ಲಿ ಮಾತ್ರ ಬಳಕೆಯಾಗುತ್ತಿತ್ತು. ಆದರೆ ಕೆಲ ದಶಕಗಳು ಕಳೆದ ಬಳಿಕ ವಿಧವಿಧ ಪ್ಲಾಸ್ಟಿಕ್‌ಗಳ ಆವಿಷ್ಕಾರವಾಯಿತು.

1939-1945: 2ನೇ ವಿಶ್ವ ಯುದ್ಧ ಸಂದರ್ಭದಲ್ಲಿ ಪ್ಲಾಸ್ಟಿಕ್‌ ಅನಿವಾರ್ಯವಾಯಿತು. ಈ ಅವಧಿಯಲ್ಲಿ ಅಮೆರಿಕದ ಪ್ಲಾಸ್ಟಿಕ್‌ ಉತ್ಪಾದನೆ ಮೂರು ಪಟ್ಟು ಹೆಚ್ಚಾಯಿತು.

1950-1970: 2ನೇ ವಿಶ್ವಯುದ್ಧದ ಬಳಿ ಪ್ಲಾಸ್ಟಿಕ್‌ ಬಳಕೆ ಇನ್ನೂ ಹೆಚ್ಚಾಯಿತು. ಕಾಟನ್‌, ಗ್ಲಾಸ್‌, ಕಾರ್ಡ್‌ಬೋರ್ಡ್‌ಗಳ ಜಾಗಗಳಲ್ಲಿ ಪ್ಲಾಸ್ಟಿಕ್‌ ಆವರಿಸಿತು.

1954: ಪ್ಲಾಸ್ಟಿಕ್‌ ಬಳಕೆಯಿಂದಾಗುವ ಅಪಾಯಗಳ ಬಗ್ಗೆ ಎಚ್ಚರಿಕೆಗಳು ಕೇಳಿಬರತೊಡಗಿದವು.

1965: ದಾಖಲೆ ಮಟ್ಟದಲ್ಲಿ ಪ್ಲಾಸ್ಟಿಕ್‌ ಉತ್ಪಾದನೆಯಾಗತೊಡಗಿತು. ಕಂಟೈನರ್‌ ಮಾರ್ಕೆಟ್‌ಗಳಲ್ಲಿ ಮರುಬಳಕೆಯ ಕಂಟೈನರ್‌ ಬಳಕೆಯನ್ನು ನಿಲ್ಲಿಸಲಾಯಿತು.

1970: ಜಾಗತಿಕ ಸಾಫ್ಟ್‌ಡ್ರಿಂಕ್‌ ಕಂಪನಿಗಳು ಬಾಟಲಿಯ ಬದಲಿಗೆ ಪ್ಲಾಸ್ಟಿಕ್‌ ಬಳಕೆ ಆರಂಭಿಸಿದವು. ಇದರ ಬೆನ್ನಲ್ಲೇ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ಹೇಗೆಂಬ ಪ್ರಶ್ನೆ ಹುಟ್ಟಿಕೊಂಡಿತು. ಅಮೆರಿಕ ಕಾಂಗ್ರೆಸ್‌ ಮರುಬಳಕೆಯಾಗದ ಕಂಟೈನರ್‌ಗಳು ಮತ್ತು ಪ್ಲಾಸ್ಟಿಕ್‌ ಬಾಟೆಲ್‌ಗಳ ನಿಷೇಧಕ್ಕೆ ಚಿಂತಿಸಿತು. ಆದರೆ ಇದರಿಂದ ಉದ್ಯೋಗ ಕಡಿತಗೊಳ್ಳುತ್ತದೆಂದು ತನ್ನ ನಿರ್ಧಾರದಿಂದ ಹಿಂದೆ ಸರಿಯಿತು.

1970-1980: ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಜವಾಬ್ದಾರಿಹೀನ ಗ್ರಾಹಕರೇ ಕಾರಣ ಎಂದು ಇಂಧನ ಮತ್ತು ಕೆಮಿಕಲ್‌ ಕಂಪನಿಗಳು ವಾದಿಸಲು ಆರಂಭಿಸಿದವು.

1990: ಸಮುದ್ರದಲ್ಲಿ ದೊರೆತಿರುವ 60-80% ತ್ಯಾಜ್ಯವು ಅಜೈವಿಕವಾದುದು ಎನ್ನುವುದು ಸಂಶೋಧನೆ ಮೂಲಕ ಬಯಲಾಯಿತು.

2004: ‘ಮೈಕ್ರೋ ಪ್ಲಾಸ್ಟಿಕ್‌’ ಪರಿಕಲ್ಪನೆ ಬಳೆಯಿತು. ಈ ಪ್ಲಾಸ್ಟಿಕ್‌ ಜಲಚರಗಳಿಗೆ ಕಂಟಕವಾಗಲಿದೆ ಎಂದು ಸಂಶೋಧನಾಕಾರರು ಕಳವಳ ವ್ಯಕ್ತಪಡಿಸಲು ಆರಂಭಿಸಿದರು.

2010: ಮೈಕ್ರೋ ಪ್ಲಾಸ್ಟಿಕ್‌ ಮತ್ತು ಏಕ ಬಳಕೆಯ ಪ್ಲಾಸ್ಟಿಕ್‌ ಬಗ್ಗೆ ವ್ಯಾಪಕ ಪ್ರತಿಭಟನೆಗಳು ನಡೆದವು.

2015: ಜಾರ್ಜಿಯಾ ವಿಶ್ವವಿದ್ಯಾಲಯದ ಸಂಶೋಧಕರ ಗುಂಪೊಂದು ಪ್ರತಿ ವರ್ಷ ಸಮುದ್ರಕ್ಕೆ 48 ಲಕ್ಷದಿದ 1 ಕೋಟಿ ಟನ್‌ ಪ್ಲಾಸ್ಟಿಕ್‌ ಬಂದು ಬೀಳುತ್ತಿದೆ. ಇದು 2015ರ ವೇಳೆಗೆ ದುಪ್ಪಟ್ಟಾಗಬಹುದು ಎಂದು ಎಚ್ಚರಿಸಿತು.

click me!