ಅಪಘಾತ ನಿಯಂತ್ರಿಸಲು ಸರ್ಕಾರದಿಂದ ಮತ್ತೊಂದು ಪ್ಲಾನ್

By Web DeskFirst Published Oct 10, 2018, 9:55 AM IST
Highlights

ಅರಣ್ಯ ಪ್ರದೇಶದ ರಸ್ತೆಗಳಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಇದೀಗ ಹೊಸ ಪ್ಲಾನ್ ಒಂದನ್ನು ರೂಪಿಸಿದೆ. ಎಲ್ಲಾ ಅರಣ್ಯ ರಸ್ತೆಗಳಲ್ಲಿ ರಸ್ತೆ ಹಂಪ್ಗಳನ್ನು ನಿರ್ಮಾಣ ಮಾಡಲು ನಿರ್ಧಾರ ಮಾಡಿದೆ. 

 ಬೆಂಗಳೂರು :  ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ಎಂಬಲ್ಲಿ ಖಾಸಗಿ ಬಸ್‌ ಡಿಕ್ಕಿಯಾಗಿ ‘ರೌಡಿ ರಂಗ’ ಎಂಬ ಆನೆ ಮೃತಪಟ್ಟಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರ ಅರಣ್ಯ ಭಾಗದಲ್ಲಿ ಹಾದು ಹೋಗುವ ಎಲ್ಲ ರಸ್ತೆಗಳಲ್ಲಿ ‘ವೇಗ ನಿಯಂತ್ರಣ ಉಬ್ಬು’ಗಳನ್ನು ಅಳವಡಿಸಲು ನಿರ್ಧರಿಸಿದೆ.

ಅರಣ್ಯ ಇಲಾಖೆಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ 64ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಆರ್‌.ಶಂಕರ್‌, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಸ್ತೆ ಉಬ್ಬುಗಳನ್ನು ಅಳವಡಿಸುವ ಕುರಿತು ಲೋಕೋಪಯೋಗಿ ಇಲಾಖೆಯೊಂದಿಗೆ ಚರ್ಚೆ ನಡೆಸಿ ಶೀಘ್ರದಲ್ಲಿ ಅನುಷ್ಠಾನ ಮಾಡಲಾಗುವುದು ಎಂದರು.

ನಾಗರಹೊಳೆಯ ಅರಣ್ಯದಲ್ಲಿ ರಾತ್ರಿ ಬಸ್‌ ಸಂಚಾರಕ್ಕೆ ಕೇರಳ ಸರ್ಕಾರದ ಒತ್ತಡ ಇದೆ. ಆದರೆ, ಕರ್ನಾಟಕ ಇದಕ್ಕೆ ವಿರುದ್ಧವಾಗಿದೆ. ಈ ವಿಚಾರವನ್ನೇ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ, ಈ ವಿಚಾರ ನ್ಯಾಯಾಲಯದಲ್ಲಿದ್ದು, ಚರ್ಚೆ ಅಗತ್ಯವಿಲ್ಲ ಎಂದರು.

ಅರಣ್ಯದ ರಸ್ತೆಗಳಲ್ಲಿ ರಾತ್ರಿ ಸಂಚಾರ ಸ್ಥಗಿತ?:  ಹೆಚ್ಚು ವಾಹನಗಳು ಹಾದು ಹೋಗುವ ಅರಣ್ಯ ಪ್ರದೇಶದ ರಸ್ತೆಗಳನ್ನು ಅರಣ್ಯ ಇಲಾಖೆ ವತಿಯಿಂದ ಗುರುತಿಸಲಾಗುವುದು. ಅಂತಹ ಭಾಗಗಳಲ್ಲಿನ ಪ್ರಾಣಿಗಳ ಪ್ರಮಾಣ ಪತ್ತೆ ಹಚ್ಚಿದ ಬಳಿಕ ರಾತ್ರಿ ಸಂಚಾರ ರದ್ದು ಮಾಡಬೇಕೇ ಎಂಬುದರ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕರ ಒತ್ತಡ ಬಂದಲ್ಲಿ ವರ್ಗಾವಣೆ ರದ್ದು:  ಬೆಂಗಳೂರು ನಗರದಲ್ಲಿ ಒತ್ತುವರಿಯಾಗಿದ್ದ ಸುಮಾರು 130 ಎಕರೆ ಅರಣ್ಯ ಜಮೀನನ್ನು ತೆರವುಗೊಳಿಸಿದ್ದ ಬೆಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್‌ ವರ್ಗಾವಣೆ ಕುರಿತು ಮಾತನಾಡಿದ ಸಚಿವರು, ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳ ಒತ್ತಡ ಬಂದಲ್ಲಿ ಅದೇ ಹುದ್ದೆಯಲ್ಲಿ ಮುಂದುವರೆಸಲಾಗುವುದು ಎಂದು ಹೇಳಿದರು.

ರವೀಂದ್ರಕುಮಾರ್‌ ಅವರು ಬೆಂಗಳೂರು ಅರಣ್ಯ ಸಂರಕ್ಷಣಾಧಿಕಾರಿಯಾಗಿ ಎರಡು ವರ್ಷ ಸೇವೆ ಮಾಡಿದ್ದು, ವರ್ಗಾವಣೆ ಮಾಡುವುದಕ್ಕೆ ಅವಕಾಶವಿದೆ. ಅಲ್ಲದೆ, ಅವರನ್ನು ವರ್ಗಾವಣೆ ಮಾಡುವಂತೆ ಕೆಲವರಿಂದ ಒತ್ತಡಗಳು ಬಂದಿದ್ದವು. ಇದೇ ಕಾರಣದಿಂದ ವರ್ಗಾವಣೆ ಮಾಡಲಾಗಿದೆ. ಆದರೆ, ಸಾರ್ವಜನಿಕರ ಒತ್ತಡ ಬಂದಲ್ಲಿ ಅವರನ್ನು ಅದೇ ಹುದ್ದೆಯಲ್ಲಿಯೇ ಮುಂದುವರೆಸಲಾಗುವುದು ಎಂದು ಹೇಳಿದರು.

click me!