ಬುಲೆಟ್‌ ರೈಲಿನಲ್ಲಿ ತಿರುಗುವ ಕುರ್ಚಿ, ಫಾಸ್ಟ್‌ ಫುಡ್‌

By Suvarna Web DeskFirst Published Mar 27, 2018, 10:27 AM IST
Highlights

ದೇಶದ ಮಹತ್ವಾಕಾಂಕ್ಷಿ ಬುಲೆಟ್‌ ರೈಲ್ವೆ ಯೋಜನೆಯ ಜಾರಿಗೆ ಸಿದ್ಧತೆಗಳು ಶರವೇಗದಿಂದ ಸಾಗಿದ್ದು, ಸುರಂಗಗಳು ಹಾಗೂ ಸೇತುವೆಗಳ ವಿನ್ಯಾಸವನ್ನು ಶೇ.80ರಷ್ಟುಪೂರ್ಣಗೊಳಿಸಲಾಗಿದೆ. ಮುಂಬೈ-ಅಹಮದಾಬಾದ್‌ ನಡುವಿನ 508 ಕಿ.ಮೀ. ಅಂತರವನ್ನು 3 ತಾಸುಗಳಲ್ಲಿ ಕ್ರಮಿಸುವ ಈ ರೈಲಿನ ವಿಶೇಷತೆಗಳನ್ನು ರಾಷ್ಟ್ರೀಯ ಹೈಸ್ಪೀಡ್‌ ರೇಲ್‌ ಕಾರ್ಪೊರೇಷನ್‌ ಲಿಮಿಟೆಡ್‌ ಇದೇ ಮೊದಲ ಬಾರಿ ಬಹಿರಂಗಪಡಿಸಿದೆ.

ಮುಂಬೈ : ದೇಶದ ಮಹತ್ವಾಕಾಂಕ್ಷಿ ಬುಲೆಟ್‌ ರೈಲ್ವೆ ಯೋಜನೆಯ ಜಾರಿಗೆ ಸಿದ್ಧತೆಗಳು ಶರವೇಗದಿಂದ ಸಾಗಿದ್ದು, ಸುರಂಗಗಳು ಹಾಗೂ ಸೇತುವೆಗಳ ವಿನ್ಯಾಸವನ್ನು ಶೇ.80ರಷ್ಟುಪೂರ್ಣಗೊಳಿಸಲಾಗಿದೆ. ಮುಂಬೈ-ಅಹಮದಾಬಾದ್‌ ನಡುವಿನ 508 ಕಿ.ಮೀ. ಅಂತರವನ್ನು 3 ತಾಸುಗಳಲ್ಲಿ ಕ್ರಮಿಸುವ ಈ ರೈಲಿನ ವಿಶೇಷತೆಗಳನ್ನು ರಾಷ್ಟ್ರೀಯ ಹೈಸ್ಪೀಡ್‌ ರೇಲ್‌ ಕಾರ್ಪೊರೇಷನ್‌ ಲಿಮಿಟೆಡ್‌ ಇದೇ ಮೊದಲ ಬಾರಿ ಬಹಿರಂಗಪಡಿಸಿದೆ.

ಬುಲೆಟ್‌ ರೈಲಿನಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ತಿರುಗುವ ಕುರ್ಚಿ, ಕಾಫಿ ಮೇಕರ್‌ಗಳು, ಬಿಸಿನೆಸ್‌ ಕ್ಲಾಸ್‌ ಕೋಚ್‌ಗಳು, ಫಾಸ್ಟ್‌ ಫುಡ್‌, ಅಂಗವಿಕಲಸ್ನೇಹಿ ಶೌಚಾಲಯಗಳು, ಸ್ಟಾಫ್‌ ರೂಂ, ಫ್ರಿಜ್‌ ಇತ್ಯಾದಿ ಸಕಲ ಸೌಲಭ್ಯಗಳೂ ಇರಲಿವೆ. ಜಪಾನ್‌ನ ಸಹಭಾಗಿತ್ವದಲ್ಲಿ 1 ಲಕ್ಷ ಕೋಟಿ ರು. ವೆಚ್ಚದಲ್ಲಿ ಕೈಗೊಂಡಿರುವ ಬುಲೆಟ್‌ ರೈಲ್ವೆ ಯೋಜನೆಯನ್ನು 2022ಕ್ಕೆ ಪೂರ್ಣಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ದೇಶದ ಪ್ರಥಮ ಬುಲೆಟ್‌ ರೈಲಿನ ವಿಶೇಷತೆಗಳು ಇಂತಿವೆ: 

- ಮುಂಬೈ-ಅಹಮದಾಬಾದ್‌ ಮಧ್ಯೆ ಪ್ರತಿದಿನ 35 ಬುಲೆಟ್‌ ರೈಲುಗಳು ಒಟ್ಟಾರೆ 70 ಬಾರಿ ಸಂಚರಿಸಲಿವೆ. ಪ್ರತಿ ರೈಲಿನಲ್ಲಿ 10 ಬೋಗಿಗಳಿರುತ್ತವೆ. ಒಂದು ದಿನಕ್ಕೆ 40000 ಪ್ರಯಾಣಿಕರು ಇದರಲ್ಲಿ ಸಂಚರಿಸಬಹುದು. - ಪ್ರತಿ ರೈಲಿನಲ್ಲಿ ಒಂದು ಬಿಸಿನೆಸ್‌ ಕ್ಲಾಸ್‌ ಬೋಗಿ ಹಾಗೂ ಒಂಭತ್ತು ಸಾಮಾನ್ಯ ಬೋಗಿಗಳಿರುತ್ತವೆ. ಎಲ್ಲ ಬೋಗಿಗಳಲ್ಲೂ ಉನ್ನತ ದರ್ಜೆಯ ಪ್ರಯಾಣಿಕಸ್ನೇಹಿ ಸೌಕರ್ಯಗಳಿರುತ್ತವೆ.

- ಮಹಿಳೆಯರು, ಪುರುಷರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯಗಳಿರುತ್ತವೆ. ಹಾಲುಣಿಸುವ ತಾಯಂದಿರಿಗೆ ಹಾಗೂ ರೋಗಿಗಳಿಗೆ ಪ್ರತ್ಯೇಕ ಬೋಗಿ. ಅಲ್ಲಿ ಫೋಲ್ಡಿಂಗ್‌ ಬೆಡ್‌, ಬ್ಯಾಗೇಜ್‌ ರಾರ‍ಯಕ್‌ ಹಾಗೂ ಕನ್ನಡಿಗಳಿರುತ್ತವೆ. - ರೈಲಿನ ಸೀಟುಗಳು ತನ್ನಿಂತಾನೇ ಎಲ್ಲಾ ದಿಕ್ಕಿನಲ್ಲೂ ತಿರುಗುವಂತಿರುತ್ತವೆ. ಪ್ರಯಾಣಿಕರು ತಮಗೆ ಯಾವ ಕಡೆ ಬೇಕೋ ಆ ಕಡೆ ತಿರುಗಿಸಿಕೊಳ್ಳಬಹುದು. ಇನ್ನು, ರೈಲಿನಲ್ಲಿ ಫಾಸ್ಟ್‌ ಫುಡ್‌ ಮಾರಾಟಗಾರರೂ ಇರುತ್ತಾರೆ.

- ಪ್ರತಿ 10 ದಿನಕ್ಕೊಮ್ಮೆ ಈ ಹಳಿಯ ಮೇಲೆ ಇನ್ಸ್‌ಪೆಕ್ಷನ್‌ ರೈಲು ಓಡುತ್ತದೆ. ಅದು ಹಳಿಗಳು ಸರಿಯಾಗಿವೆಯೇ ಎಂದು ಪರಿಶೀಲಿಸುತ್ತದೆ. ಪ್ರತಿದಿನ ಬೆಳಗಿನ ಜಾವ 12 ಗಂಟೆಯಿಂದ 6 ಗಂಟೆಯವರೆಗೆ ಸುರಕ್ಷತಾ ತಪಾಸಣೆ ಮಾಡಲಾಗುತ್ತದೆ. ಬುಲೆಟ್‌ ರೈಲು ಓಡಿಸುವ ಮುನ್ನ 10 ಸಾವಿರ ಕಿ.ಮೀ.ನಷ್ಟುತಪಾಸಣಾ ಸಂಚಾರ ನಡೆಸಲಾಗುತ್ತದೆ.

- ಥಾಣೆ, ಸಾಬರಮತಿ ಹಾಗೂ ಸೂರತ್‌ನಲ್ಲಿ ಬುಲೆಟ್‌ ರೈಲು ಬಿಡಿಭಾಗಗಳನ್ನು ಜೋಡಿಸುವ ಘಟಕ ಸ್ಥಾಪಿಸಲಾಗುತ್ತದೆ. - ಸದ್ಯ ಬುಲೆಟ್‌ ರೈಲ್ವೆಗೆ ಭೂಸ್ವಾಧೀನವೇ ತಲೆನೋವಾಗಿದೆ. ಈ ಮಾರ್ಗದಲ್ಲಿ ಮಹಾರಾಷ್ಟ್ರದ 108 ಹಳ್ಳಿಗಳು ಬರುತ್ತವೆ. ಅಲ್ಲಿನ 10 ಸಾವಿರ ಜನರು ಯೋಜನೆಯಿಂದ ಬಾಧಿತರಾಗುತ್ತಾರೆ. - ಸದ್ಯ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಕೆಲವೆಡೆ ವಿರೋಧವೂ ಕೇಳಿಬಂದಿದೆ. 17 ಹಳ್ಳಿಗಳ ಜನರಿಗೆ ತೆರವಿನ ನೋಟಿಸ್‌ ನೀಡಲಾಗಿದೆ. ಭೂಸ್ವಾಧೀನಕ್ಕಾಗಿಯೇ 10 ಸಾವಿರ ಕೋಟಿ ರು. ಖರ್ಚು ಮಾಡಲಾಗುತ್ತಿದೆ.

- ಭೂಮಿ ನೀಡುವವರಿಗೆ ಸದ್ಯದ ಮಾರುಕಟ್ಟೆದರಕ್ಕಿಂತ ಹೆಚ್ಚಿನ ಪರಿಹಾರ ನೀಡಲಾಗುತ್ತದೆ. ನೀಡದೆ ಇರುವವರನ್ನು ಭೂಸ್ವಾಧೀನ ಕಾಯ್ದೆಯ ಸೆಕ್ಷನ್‌ 19ರ ಪ್ರಕಾರ ತೆರವುಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 - ಬುಲೆಟ್‌ ರೈಲು ಗರಿಷ್ಠ 320 ಕಿ.ಮೀ./ಗಂ. ವೇಗದಲ್ಲಿ ಓಡುತ್ತದೆ. ಸದ್ಯ ಮುಂಬೈ-ಅಹಮದಾಬಾದ್‌ ನಡುವಿನ ರಸ್ತೆ ಸಂಚಾರಕ್ಕೆ 7 ತಾಸು ಬೇಕು. ಬುಲೆಟ್‌ ರೈಲು 3 ತಾಸಿನಲ್ಲಿ ಸಂಚರಿಸುತ್ತದೆ.

- ಈ ರೈಲಿಗೆ ಒಟ್ಟು 12 ನಿಲುಗಡೆಗಳಿವೆ. ಅವುಗಳಲ್ಲಿ ನಾಲ್ಕು ಮಹಾರಾಷ್ಟ್ರದಲ್ಲಿವೆ. 

- ಮಾರ್ಗದಲ್ಲಿ ಬರುವ ಶೇ.80ರಷ್ಟುಸೇತುವೆ, ಸುರಂಗಗಳು, ನೀರಿನೊಳಗಿನ ಸುರಂಗಗಳ ವಿನ್ಯಾಸವನ್ನು ದೆಹಲಿ, ಮುಂಬೈ ಹಾಗೂ ಜಪಾನ್‌ನ ಎಂಜಿನಿಯರ್‌ಗಳು ಪೂರ್ಣಗೊಳಿಸಿದ್ದಾರೆ.

- ಬುಲೆಟ್‌ ರೈಲಿನ ಮೊದಲ ನಿಲ್ದಾಣ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌. ಕೊನೆಯ ನಿಲ್ದಾಣ ಅಹಮದಾಬಾದ್‌ನ ಸಾಬರಮತಿ ರೈಲ್ವೆ ನಿಲ್ದಾಣ. 

- ಬುಲೆಟ್‌ ರೈಲು ಮೊದಲ 320 ಸೆಕೆಂಡ್‌ಗಳಲ್ಲಿ ತನ್ನ ಗರಿಷ್ಠ ವೇಗವಾದ 320 ಕಿ.ಮೀ. ವೇಗವನ್ನು ತಲುಪುತ್ತದೆ. ಇಷ್ಟುವೇಳೆಯಲ್ಲಿ ಅದು 18 ಕಿ.ಮೀ. ಸಂಚರಿಸಿರುತ್ತದೆ.

- ಗಾಳಿಯ ವೇಗ ಸೆಕೆಂಡ್‌ಗೆ 30 ಮೀಟರ್‌ ತಲುಪಿದರೆ ಬುಲೆಟ್‌ ರೈಲು ತನ್ನಿಂತಾನೇ ನಿಲ್ಲುತ್ತದೆ. ಸಂಪೂರ್ಣ ಮಾರ್ಗವು ಭೂಕಂಪ ಹಾಗೂ ಬೆಂಕಿ ನಿರೋಧಕವಾಗಿರುತ್ತದೆ.

click me!