ಸಕ್ಕರೆ ಕಾರ್ಖಾನೆ ಎದುರೇ ರೈತ ಆತ್ಮಹತ್ಯೆ

By Web DeskFirst Published Dec 16, 2018, 7:22 AM IST
Highlights

ಕಬ್ಬನ್ನು ಕಟಾವು ಮಾಡಿ ತಂದರೂ ಖರೀದಿಸಲು ಕಾರ್ಖಾನೆಯವರು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ರೈತನೊಬ್ಬ ಕಾರ್ಖಾನೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಪ್ಪಳ :  ಕಷ್ಟಪಟ್ಟು ಬೆಳೆದ ಕಬ್ಬನ್ನು ಕಟಾವು ಮಾಡಿ ತಂದರೂ ಖರೀದಿಸಲು ಕಾರ್ಖಾನೆಯವರು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ರೈತನೊಬ್ಬ ಕಾರ್ಖಾನೆ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಡರಗಿ ತಾಲೂಕಿನ ಗಂಗಾಪುರದ ವಿಜಯನಗರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಶನಿವಾರ ನಡೆದಿದೆ.

ಕೊಪ್ಪಳ ತಾಲೂಕಿನ ತಿಗರಿ ಗ್ರಾಮದ ಸಣ್ಣ ಹನುಮಪ್ಪ ಕುರಿ (44) ಆತ್ಮಹತ್ಯೆ ಮಾಡಿಕೊಂಡ ರೈತ. ಕಾರ್ಖಾನೆಯ ಎದುರಿಗೆ ವಿಷ ಸೇವಿಸಿದ ರೈತನನ್ನು ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹನುಮಪ್ಪ ಕುರಿ ಐದು ಎಕರೆಯಲ್ಲಿ ಕಬ್ಬು ಬೆಳೆದು 14 ತಿಂಗಳಾಗಿದೆ. ಕಬ್ಬು ಒಣಗುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ಕಟಾವು ಮಾಡುವಂತೆ ಕಳೆದ ನಾಲ್ಕಾರು ದಿನಗಳಿಂದ ಸಕ್ಕರೆ ಕಾರ್ಖಾನೆಗೆ ಅಲೆಯುತ್ತಿದ್ದ. ಆದರೂ ಕಾರ್ಖಾನೆಯವರು ಈತನ ಕಬ್ಬು ಕಟಾವಿಗೆ ಬಾರದಿರುವ ಹಿನ್ನೆಲೆಯಲ್ಲಿ ತಾನೇ ಕಟಾವು ಮಾಡಿಕೊಂಡು ಶನಿವಾರ ಟ್ರ್ಯಾಕ್ಟರ್‌ನಲ್ಲಿ ತಂದು ಕಾರ್ಖಾನೆಯವರಲ್ಲಿ ಬೇಡಿಕೊಂಡ. ಆದರೂ ಅವರು ನುರಿಸಲು ಕಬ್ಬು ತೆಗೆದುಕೊಳ್ಳದಿದ್ದಾಗ ಮನನೊಂದು ಕಾರ್ಖಾನೆ ಎದುರೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಗ್ರಾಮಸ್ಥರು, ರೈತರು ಹೇಳಿದ್ದಾರೆ.

ಮೂರು ಎಕರೆ ಸ್ವಂತ ಭೂಮಿ ಹೊಂದಿರುವ ಸಣ್ಣ ಹನುಮಪ್ಪ, ಎರಡು ಎಕರೆ ಲಾವಣಿ ಹೊಲ ಸೇರಿ ಐದು ಎಕರೆಯಲ್ಲಿ ಕಬ್ಬು ಹಾಕಿದ್ದ. ಇದಕ್ಕಾಗಿ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ . 2.5ಲಕ್ಷ ಸಾಲ ಮಾಡಿದ್ದ. ಕಬ್ಬು ಉತ್ತಮವಾಗಿಯೇ ಬೆಳೆದಿದೆ. ಇತ್ತೀಚೆಗೆ ಒಂದು ಎಕರೆ ಕಬ್ಬು ವಿದ್ಯುತ್‌ ಶಾರ್ಟ್‌ ಸಕ್ರ್ಯೂಟ್‌ನಿಂದ ಸುಟ್ಟು ಹೋಗಿದೆ. ಉಳಿದ ನಾಲ್ಕು ಎಕರೆ ಕಬ್ಬು ಈಗ ಕಟಾವಿಗೆ ಬಂದಿತ್ತು. ಸಕಾಲಕ್ಕೆ ಕಬ್ಬು ಕಟಾವು ಆಗಿದ್ದರೆ ರೈತ ಹನುಮಪ್ಪನಿಗೆ ಲಕ್ಷಾಂತರ ರು. ಆದಾಯ ಬರುತ್ತಿತ್ತು. ಇತ್ತ ಹೊಲದಲ್ಲಿ ಒಣಗುತ್ತಿದ್ದ ಕಬ್ಬನ್ನು ನೋಡಲಾರದೇ ಆತ ಹಲವು ಬಾರಿ ಕಾರ್ಖಾನೆಗೆ ಅಲೆದು ಕಬ್ಬು ನುರಿಸುವಂತೆ ಮನವಿ ಮಾಡಿಕೊಂಡಿದ್ದ ಎನ್ನಲಾಗಿದೆ. ಆದರೆ, ಕಾರ್ಖಾನೆಯವರು ಸಕಾಲಕ್ಕೆ ಬಂದು ಕಬ್ಬು ಕಟಾವು ಮಾಡದೇ ಇರುವುದರಿಂದ ತೀವ್ರ ಚಿಂತೆಗೀಡಾಗಿದ್ದ ಎನ್ನಲಾಗಿದೆ.

click me!