
ಬೆಂಗಳೂರು (ಆ. 19): ಕಾವೇರಿ ನೀರಿಗಾಗಿ ಪ್ರತಿ ವರ್ಷ ಕರ್ನಾಟಕದ ಜತೆ ಕಾಲು ಕೆರೆದು ಜಗಳಕ್ಕೆ ನಿಲ್ಲುವ ತಮಿಳುನಾಡು, ಈ ಬಾರಿ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದರೂ ಅದನ್ನು ವ್ಯರ್ಥವಾಗಿ ಸಮುದ್ರಕ್ಕೆ ಬಿಡುತ್ತಿದೆ. ಈವರೆಗೆ ಸರಿಸುಮಾರು 25 ಟಿಎಂಸಿ ನೀರು ಸಮುದ್ರ ಪಾಲಾಗಿದೆ ಎಂದು ಸ್ವತಃ ಆ ರಾಜ್ಯದ ರೈತರೇ ಆಪಾದಿಸಿದ್ದಾರೆ.
ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕಾವೇರಿ ಉಕ್ಕಿ ಹರಿಯುತ್ತಿದೆ. ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯಗಳಿಂದ 1.70 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ತಮಿಳುನಾಡಿಗೆ ಹರಿದುಬರುತ್ತಿದೆ. ಆದರೆ ತಮಿಳುನಾಡಿನ ಕಾವೇರಿ ನದಿಯ ಕೊನೆಯ ಭಾಗದಲ್ಲಿರುವ ಕಡಲೂರು ಹಾಗೂ ನಾಗಪಟ್ಟಿಣಂ ಜಿಲ್ಲೆಗಳ ಜನರಿಗೆ ಕಾವೇರಿ ನದಿ ನೀರು ಬಳಕೆಗೆ ಲಭಿಸುತ್ತಿಲ್ಲ. ಜಮೀನಿಗೆ ಹರಿಯದೇ ನೇರವಾಗಿ ಬಂಗಾಳ ಕೊಲ್ಲಿ ಸೇರುತ್ತಿದೆ ಎಂದು ಕಾವೇರಿ ಅಚ್ಚುಕಟ್ಟು ರೈತ ಸಂಘದ ಕಾರ್ಯದರ್ಶಿ ಎಲಂಕೀರನ್ ವೀರಮಣಿ ಅವರು ದೂರಿದ್ದಾರೆ.
ಕರ್ನಾಟಕದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ 2005 ರ ನಂತರ ಇದೇ ಮೊದಲ ಬಾರಿಗೆ ಕಾವೇರಿಯಲ್ಲಿ ಪ್ರವಾಹವೇನೋ ಬಂದಿದೆ. ಆದರೆ ನಾಗಪಟ್ಟಿಣಂ ಜಿಲ್ಲೆಯಲ್ಲಿ ಚೆಕ್ ಡ್ಯಾಂ ಇಲ್ಲದಿರುವುದು ಹಾಗೂ ನಾಲೆಗಳಲ್ಲಿ ಹೂಳು ತುಂಬಿರುವುದರಿಂದ ಈ ನೀರು ರೈತರ ಜಮೀನಿಗೆ ಹರಿಯುವ ಬದಲು ಸಮುದ್ರ ಸೇರುತ್ತಿದೆ. ಕಳೆದ ಜುಲೈನಿಂದ ಈವರೆಗೆ ಸುಮಾರು 25 ಟಿಎಂಸಿ ನೀರು ವ್ಯರ್ಥವಾಗಿ ಬಂಗಾಳ ಕೊಲ್ಲಿ ಪಾಲಾಗಿದೆ ಎಂದು ಅವರು ಹೇಳಿದ್ದಾರೆ.
ತಿರುಚ್ಚಿಯ ಮುಕ್ಕೊಂಬು ಎಂಬ ಸ್ಥಳವನ್ನು ತಲುಪಿದ ಬಳಿಕ ಕಾವೇರಿ ಮೂರು ಭಾಗಗಳಾಗಿ ಕವಲೊಡೆಯುತ್ತದೆ. ಕೊಲ್ಲಿಧಾಮ, ಕಾವೇರಿ, ವೆನ್ನಾರ್ ನದಿಯಾಗಿ ಹರಿಯುತ್ತದೆ. ಈ ಮೂರು ನದಿಗಳ ಪೈಕಿ ಕೊಲ್ಲಿಧಾಮ ಅತ್ಯಂತ ವಿಶಾಲವಾಗಿದ್ದು, 4 ಲಕ್ಷ ಕ್ಯುಸೆಕ್‌ನಷ್ಟು ನೀರು ಒಯ್ಯಬಲ್ಲದು. ಸದ್ಯ ಅಲ್ಲಿ 1.50 ಲಕ್ಷ ಕ್ಯುಸೆಕ್ ನೀರು ಹರಿಯುತ್ತಿದೆ.
ಆದಾಗ್ಯೂ ಕಡಲೂರು ಹಾಗೂ ನಾಗಪಟ್ಟಿಣಂ ಜಿಲ್ಲೆಗಳ 60 ಸಾವಿರ ಎಕರೆ ಪ್ರದೇಶಕ್ಕೆ ನೀರು ಸಿಗುತ್ತಿಲ್ಲ ಎಂದು ದೂರಿದ್ದಾರೆ. ಈ ರೀತಿ ನೀರನ್ನು ವ್ಯರ್ಥವಾಗಿ ಸಮುದ್ರಕ್ಕೆ ಹರಿಸುವ ಬದಲು ಚೆಕ್‌ಡ್ಯಾಂ ನಿರ್ಮಾಣ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಆದರೆ ತಮಿಳುನಾಡಿನಲ್ಲಿ ಚೆಕ್‌ಡ್ಯಾಂ ನಿರ್ಮಾಣ ಮಾಡುವಂತಹ ಭೌಗೋಳಿಕ ಪರಿಸ್ಥಿತಿ ಪೂರಕವಾಗಿಲ್ಲ. ಎಲ್ಲ ನಾಲೆಗಳ ಹೂಳು ತೆಗೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.