ಮುಂಬೈನ ಈ ಸ್ಲಂ ಪ್ರವಾಸೀ ಕೇಂದ್ರ!: ವರ್ಷಕ್ಕೆ 3 ಸಾವಿರ ಕೋಟಿ ವಹಿವಾಟು!

By Web DeskFirst Published Dec 1, 2018, 1:03 PM IST
Highlights

ನಿಮಗೆ ಗೊತ್ತಿಲ್ಲದ ಧಾರಾವಿ: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿರುವ ಧಾರಾವಿ ಕೊಳಗೇರಿ ನಾನಾ ಕಾರಣಗಳಿಂದ ಜಗತ್ಪ್ರಸಿದ್ಧಿ ಪಡೆದಿದೆ. ಇದು ಏಷ್ಯಾದ 2ನೇ ಅತಿದೊಡ್ಡ ಸ್ಲಂ ಎಂದೂ ಹೇಳಲಾಗುತ್ತದೆ.  ಕೇವಲ 500 ಎಕರೆ ಪ್ರದೇಶದಲ್ಲಿ ಲಕ್ಷಾಂತರ ಜೋಪಡಿ/ ಮನೆಗಳು ಇಲ್ಲಿವೆ. ಅಚ್ಚರಿಯೆಂದರೆ ವೇಶ್ಯಾವಾಟಿಕೆಯೂ ಸೇರಿದಂತೆ 500ಕ್ಕೂ ಹೆಚ್ಚು ಉದ್ದಿಮೆಗಳು ಇಲ್ಲಿ ನಡೆಯುತ್ತವೆ. ಶತಮಾನಗಳಿಂದ ಅಸ್ತಿತ್ವದಲ್ಲಿರುವ ಈ ಕೊಳಗೇರಿಯನ್ನು ಇದೀಗ ಮಹಾರಾಷ್ಟ್ರ ಸರ್ಕಾರ ಅತ್ಯಾಧುನಿಕ ಟೌನ್‌ಶಿಪ್‌ ಮಾಡಲು ಯೋಜನೆ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಧಾರಾವಿಯ ಆಸಕ್ತಿಕರ ವಿವರಗಳ ಬಗ್ಗೆ ಇಲ್ಲೊಂದು ಇಣುಕುನೋಟ.

ಇಲ್ಲಿನ ಜನಸಾಂದ್ರತೆ ಜಗತ್ತಿನಲ್ಲೇ ಅತಿಹೆಚ್ಚು

ಮುಂಬೈಯ ಹೃದಯ ಭಾಗದಲ್ಲಿಯೇ ಧಾರಾವಿ ಸ್ಲಂ ಇದೆ. ಇದು ಏಷ್ಯಾದ 2ನೇ ಅತ್ಯಂತ ದೊಡ್ಡ ಸ್ಲಂ ಎಂಬ ಹಣೆಪಟ್ಟಿಅಂಟಿಸಿಕೊಂಡಿದೆ. ಬರೊಬ್ಬರಿ 520 ಎಕರೆ ಪ್ರದೇಶದಲ್ಲಿ ಈ ಸ್ಲಂ ಹರಡಿಕೊಂಡಿದೆ. ಇಷ್ಟುವ್ಯಾಪ್ತಿಯಲ್ಲಿ ಅಂದಾಜು 10 ಲಕ್ಷ ಜನ ವಾಸವಿದ್ದಾರೆ. ಜನಸಾಂದ್ರತೆ ಪ್ರತಿ ಚದರ ಕಿಲೋಮೀಟರ್‌ಗೆ 2,77,136. ಇದು ಪ್ರಪಂಚದಲ್ಲಿಯೇ ಅತೀ ಹೆಚ್ಚು. ಇಲ್ಲಿ ಭಾರತದ ಎಲ್ಲ ಭಾಷೆ, ಸಂಸ್ಕೃತಿಯ ಜನರು ವಾಸವಿದ್ದಾರೆ.

ಧಾರಾವಿ ಸ್ಲಂ ರೂಪುಗೊಂಡಿದ್ದು ಹೇಗೆ?

ಮುಂಬೈ ಭಾರತದ ವಾಣಿಜ್ಯ ರಾಜಧಾನಿ. ಇದು ಸಮುದ್ರ ತೀರದಲ್ಲಿರುವ ನಗರವಾದ್ದರಿಂದ ಬ್ರಿಟಿಷ್‌ ಆಳ್ವಿಕೆಯ ಕಾಲದಿಂದಲೂ ಇಲ್ಲಿ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಹೆಚ್ಚಿದ್ದವು. ನಂತರ ಕೈಗಾರಿಕಾ ಕ್ರಾಂತಿಯ ಅವಧಿಯಲ್ಲಿ ಭಾರತದಲ್ಲೇ ಅತಿಹೆಚ್ಚು ಕೈಗಾರಿಕೆಗಳು ಕೊಲ್ಕತ್ತಾ ಹಾಗೂ ಬಾಂಬೆಯಲ್ಲಿ ಸ್ಥಾಪನೆಗೊಂಡವು. ಆಗ ದೇಶದ ನಾನಾ ಮೂಲೆಗಳಿಂದ ಬಡವರು ಕೆಲಸ ಅರಸಿಕೊಂಡು ಈ ನಗರಗಳಿಗೆ ಬಂದರು. ಆದರೆ, ಅವರಿಗೆ ಸಿಗುವ ದುಡಿಮೆಯಲ್ಲಿ ಜಾಗ ಖರೀದಿಸುವುದು ಅಥವಾ ಒಳ್ಳೆಯ ಬಾಡಿಗೆ ಮನೆಗಳನ್ನು ಹೊಂದುವುದು ಅಸಾಧ್ಯವಾಗಿತ್ತು. ಹಾಗೆ 1883ರಲ್ಲಿ ರೂಪುಗೊಂಡ ಕೊಳಗೇರಿ ಧಾರಾವಿ. ಇದರ ಜೊತೆಗೆ ಇನ್ನೂ ಹಲವಾರು ಸಣ್ಣಪುಟ್ಟಕೊಳಗೇರಿಗಳು ನಿರ್ಮಾಣವಾದರೂ ಕ್ರಮೇಣ ಅವೆಲ್ಲ ನಿರ್ನಾಮವಾಗಿ ಧಾರಾವಿಯಲ್ಲಿ ಎಲ್ಲ ಕೊಳಗೇರಿಗಳು ಒಂದಾದವು.

ಇಲ್ಲಿವೆ 35 ಸಾವಿರ ಗುಡಿ ಕೈಗಾರಿಕೆ!

ಮಿಥಿ ನದಿಯ ದಡದಲ್ಲಿರುವ ಧಾರಾವಿ ಸ್ಲಂನಲ್ಲಿ ಚರ್ಮೋದ್ಯಮ, ಚರ್ಮ ಸಂಸ್ಕರಣೆ, ಬಟ್ಟೆತಯಾರಿಕೆ, ಕುಂಬಾರಿಕೆ ಪ್ರಮುಖ ವೃತ್ತಿಗಳು. ಚಿನ್ನಾಭರಣ, ರೀಟೆಲ್‌ ವ್ಯಾಪಾರ ಇನ್ನಿತರ ವೃತ್ತಿಗಳು. ಇಲ್ಲಿ ಹೆಚ್ಚಾಗಿ ಗುಡಿ ಕೈಗಾರಿಕೆಗಳೇ ಇವೆ. ಒಟ್ಟಾರೆ ಧಾರಾವಿಯಲ್ಲಿ 35 ಸಾವಿರ ಗುಡಿ ಕೈಗಾರಿಕೆಗಳಿವೆ ಎಂದು ಅಂದಾಜಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್‌, ಪೇಪರ್‌, ಕಬ್ಬಿಣ, ಇ-ತ್ಯಾಜ್ಯ ಇತ್ಯಾದಿಗಳ ಮರುಬಳಕೆ (ರಿಸೈಕ್ಲಿಂಗ್‌) ವ್ಯವಹಾರ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಇಲ್ಲಿ ತಯಾರಾಗುವ ಹಲವು ವಸ್ತುಗಳು, ದೇಶ ವಿದೇಶದಲ್ಲಿ ಪ್ರಖ್ಯಾತಿ ಪಡೆದಿವೆ. ಅಮೆರಿಕ, ಯೂರೋಪ್‌ ಸೇರಿದಂತೆ ಹಲವು ದೇಶಗಳಿಗೆ ಇಲ್ಲಿ ಉತ್ಪಾದಿಸಲಾದ ವಸ್ತುಗಳು ರಫ್ತಾಗುತ್ತವೆ.

ಧಾರಾವಿಗೆ ಕುಖ್ಯಾತಿ ಬಂದಿದ್ದು ಏಕೆ?

1. ಇಲ್ಲಿನ ಸಣ್ಣ ಸಣ್ಣ ಕಾರ್ಖಾನೆಗಳಿಂದ ಬಿಡುಗಡೆ ಆಗುವ ಹೊಗೆಯಿಂದ ವಾತಾವರಣ ಕಲುಷಿತವಾಗುತ್ತಿದೆ.

2. ಇಲ್ಲಿಗೆ ಬೃಹತ್‌ ಮುಂಬೈ ಮಹಾನಗರ ಪಾಲಿಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಪೈಪ್‌ಲೈನ್‌ ಅಳವಡಿಸಿದೆ. ಅದರೆ ಆ ಪೈಪ್‌ನಲ್ಲಿ ನೀರು ಪ್ರಮುಖ ತಾಣಕ್ಕೆ ತಲುಪುವುದೇ ಇಲ್ಲ. ಏಕೆಂದರೆ ಅರ್ಧದಲ್ಲೇ ನೀರನ್ನು ಕಳ್ಳತನ ಮಾಡಲಾಗುತ್ತದೆ.

3. ಇಲ್ಲಿನ ಕಾರ್ಖಾನೆಗಳಿಗೆ ವಿದ್ಯುತ್‌ ಕಲ್ಪಿಸಲಾಗಿದ್ದರೂ ಆ ವಿದ್ಯುತ್ತನ್ನೂ ಕೊಳಗೇರಿ ನಿವಾಸಿಗಳು ಕಳ್ಳತನ ಮಾಡುವುದು ವಿದ್ಯುತ್‌ಚ್ಛಕ್ತಿ ಕಂಪನಿಗೆ ದೊಡ್ಡ ತಲೆನೋವು.

4. ಇಲ್ಲಿನ ಅತ್ಯಂತ ದೊಡ್ಡ ಸಮಸ್ಯೆ ಸ್ವಚ್ಛತೆ. ನೈರ್ಮಲ್ಯ ಕಾಪಾಡುವುದು ಅಸಾಧ್ಯ ಎನ್ನುವ ಸ್ಥಿತಿ ಇದೆ.

5. ಇಲ್ಲಿನ ರಸ್ತೆಗಳು, ಮನೆಗಳು, ಬೀದಿಗಳಿಗೆ ನಿರ್ದಿಷ್ಟಆಕಾರವೇ ಇಲ್ಲ.

6. ಒಬ್ಬರು ವಾಸಿಸಬಹುದಾದ ಕೋಣೆಯಲ್ಲಿ ಕನಿಷ್ಠ 7-8 ಮಂದಿ ವಾಸಿಸುತ್ತಾರೆ.

7. ಗಾಂಜಾ, ಅಫೀಮು, ಡ್ರಗ್ಸ್‌ ಮಾರಾಟ ಇಲ್ಲಿ ಅವ್ಯಾಹತ.

8. ವೇಶ್ಯಾವಾಟಿಕೆ ಮತ್ತು ಭೂಗತ ಚಟುವಟಿಕೆಗಳು ಇಲ್ಲಿ ಎಗ್ಗಿಲ್ಲದೆ ನಡೆಯುತ್ತವೆ.

ವರ್ಷಕ್ಕೆ 750 ಕೋಟಿ ರು. ವಹಿವಾಟು!

ಧಾರಾವಿ ಸ್ಲಂ ಪ್ರದೇಶವೇ ಇರಬಹುದು. ಆದರೆ ಇಲ್ಲಿ ವರ್ಷವೊಂದಕ್ಕೆ ನಡೆಯುವ ವ್ಯವಹಾರ ಬರೊಬ್ಬರಿ 750 ಕೋಟಿ ರುಪಾಯಿ.

ಸಿನಿಮಾ, ಡಾಕ್ಯುಮೆಂಟರಿಗಳಿಂದ ಫೇಮಸ್‌

2008ರಲ್ಲಿ ಭಾರೀ ಯಶಸ್ಸು ಕಂಡ ‘ಸ್ಲಂ ಡಾಗ್‌ ಮಿಲಿಯನೇರ್‌’ ಹಾಲಿವುಡ್‌ ಸಿನಿಮಾವನ್ನು ಧಾರಾವಿ ಸ್ಲಂನಲ್ಲಿಯೇ ಶೂಟಿಂಗ್‌ ಮಾಡಲಾಗಿತ್ತು. ದೀವಾರ್‌, ನಾಯಕನ್‌, ಸಲಾಂ ಬಾಂಬೇ ಸೇರಿದಂತೆ ಹಲವು ಚಿತ್ರಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಬಿಬಿಸಿ ಸೇರಿದಂತೆ ಹಲವು ವಿದೇಶಿ ಮಾಧ್ಯಮ ಸಂಸ್ಥೆಗಳು ಇಲ್ಲಿನ ಬದುಕು, ಜೀವನ ಶೈಲಿಯ ಬಗ್ಗೆ ಡಾಕ್ಯುಮೆಂಟರಿಗಳನ್ನು ಮಾಡಿವೆ.

ಸ್ಲಂ ಪ್ರವಾಸ ನಿಮಗೆ ಗೊತ್ತಾ?

ಹೌದು, ಇಂತಹದ್ದೊಂದು ಪ್ರವಾಸ ಧಾರಾವಿಯಲ್ಲಿ ಚಾಲ್ತಿಯಲ್ಲಿದೆ. ಸ್ಲಂ ಹೇಗಿರುತ್ತದೆ, ಅದರಲ್ಲೂ ಧಾರಾವಿ ಸ್ಲಂ ಹೇಗಿದೆ ಎಂಬ ಕುತೂಹಲ ಜನರಿಗಿರುವುದರಿಂದ ಅವರನ್ನು ಧಾರಾವಿಗೆ ಕರೆದುಕೊಂಡು ಹೋಗಿ ಅಲ್ಲಿನ ಜನಜೀವನ ಹಾಗೂ ಉದ್ಯಮಗಳ ಸ್ಥಿತಿಗತಿಗಳನ್ನು ತೋರಿಸಲು ಹಲವಾರು ಟೂ​ರ್‍ಸ್ ಅಂಡ್‌ ಟ್ರ್ಯಾವೆಲ್ಸ್‌ ಕಂಪನಿಗಳು ಧಾರಾವಿ ಸ್ಲಂ ಪ್ರವಾಸ ಆಯೋಜಿಸುತ್ತವೆ.

* 1896ರಲ್ಲಿ ಬಂದ ಪ್ಲೇಗ್‌ ಇಲ್ಲಿನ ಅರ್ಧದಷ್ಟುಜನರನ್ನು ಬಲಿ ಪಡೆದಿತ್ತು.

* 185 ರು.ನಷ್ಟುಕಡಿಮೆ ಮಾಸಿಕ ಬಾಡಿಗೆಗೆ ಧಾರಾವಿಯಲ್ಲಿ ಮನೆಗಳು ಸಿಗುತ್ತವೆ!

* 10 ಲಕ್ಷ ಇಲ್ಲಿನ ಜನಸಂಖ್ಯೆ ಎಂದು ಹೇಳಲಾಗುತ್ತದೆ. ನಿಖರ ಸರ್ವೆ ಇಲ್ಲಿಯವರೆಗೂ ನಡೆದಿಲ್ಲ.

* 1440 ಜನರಿಗೆ ಇಲ್ಲಿ ಸರಾಸರಿ ಒಂದು ಶೌಚಾಲಯ ಇದೆ.

ಪ್ರಪಂಚದ ಪ್ರಮುಖ ಸ್ಲಂಗಳು

ನಂ.1 - ಪಾಕಿಸ್ತಾನದ ಕರಾಚಿಯಲ್ಲಿರುವ ಒರಾಂಗಿ ಟೌನ್‌ (24 ಲಕ್ಷ ಜನಸಂಖ್ಯೆ) ಪ್ರಪಂಚದ ಅತ್ಯಂತ ದೊಡ್ಡ ಸ್ಲಂ

ನಂ.2 - ಮುಂಬೈನ ಧಾರಾವಿ ಕೊಳಗೇರಿ

ನಂ.3 - ಮೆಕ್ಸಿಕೋದ ನೆಝ ಕೊಳಗೇರಿ

ಮಹಾರಾಷ್ಟ್ರ ಸರ್ಕಾರ ಏನು ಮಾಡಲಿದೆ?

ಅಂದುಕೊಂಡಂತೆ ಆದರೆ ಧಾರಾವಿಯನ್ನು ಇನ್ನುಮುಂದೆ ಸ್ಲಂ ಅನ್ನುವಂತಿಲ್ಲ. ಏಕೆಂದರೆ ಧಾರಾವಿ ಪ್ರದೇಶವನ್ನು ಅಭಿವೃದ್ಧಿಪಡಿಸಲು ಮಹಾರಾಷ್ಟ್ರ ಸರ್ಕಾರ ಜಾಗತಿಕ ಟೆಂಡರ್‌ ಕರೆದಿದೆ. .22 ಸಾವಿರ ಕೋಟಿ ವೆಚ್ಚದಲ್ಲಿ ಧಾರಾವಿಯನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಟೆಂಡರ್‌ ಪಡೆದ ಸಂಸ್ಥೆಯು ಇಲ್ಲಿ ಅತ್ಯಾಧುನಿಕ ಟೌನ್‌ಶಿಪ್‌ ಸ್ಥಾಪಿಸಬೇಕು. ಇಲ್ಲಿರುವ ಜನರಿಗೆ ವಸತಿ ಸೇರಿದಂತೆ ಎಲ್ಲ ಮೂಲಸೌಕರ್ಯ ಕಲ್ಪಿಸಬೇಕು. ನಂತರ ಉಳಿದ ಜಾಗವನ್ನು ಕಂಪನಿ ಬಳಸಿಕೊಳ್ಳಬಹುದು. ಆದರೆ, ಈ ಯೋಜನೆಗೆ ಅತಿ ಮುಖ್ಯ ತೊಡಕು ಭಾರೀ ಪ್ರಮಾಣದಲ್ಲಿ ಖಾಸಗಿ ಜಾಗವನ್ನು ವಶಕ್ಕೆ ಪಡೆಯುವುದು. ಇನ್ನು, 6 ಲಕ್ಷ ಜನರಿಗೆ ಪರಾರ‍ಯಯ ವ್ಯವಸ್ಥೆ ಕಲ್ಪಿಸುವುದು ಕಷ್ಟಎಂದು ಹೇಳಲಾಗುತ್ತಿದೆ. 1997ರಲ್ಲೂ ಧಾರಾವಿಯನ್ನು ಅಭಿವೃದ್ಧಿಪಡಿಸುವ ಕಾರ‍್ಯಯೋಜನೆಯೊಂದು ಸಿದ್ಧವಾಗಿತ್ತು. 2004, 2010ರಲ್ಲೂ ಅಭಿವೃದ್ಧಿಯ ನೀಲನಕ್ಷೆ ತಯಾರಾಗಿ ಹಳ್ಳ ಹಿಡಿದಿದ್ದವು.

-ಪ್ರಶಾಂತ್‌ ಕೆ ಪಿ

click me!