ದಿಲ್ಲೀಲಿ ಮತ್ತೆ ಹೊಗೆ ಮಾಲಿನ್ಯ; ಇಂದಿನಿಂದಲೇ ರಕ್ಷಣಾ ಕ್ರಮ ಆರಂಭ

By Web DeskFirst Published Oct 15, 2018, 11:07 AM IST
Highlights

ಬೆಳೆ ತ್ಯಾಜ್ಯದ ಸಂಸ್ಕರಿಸಿ ಗೊಬ್ಬರವಾಗಿ ಪರಿವರ್ತಿಸಲು ಸರ್ಕಾರ ಸೂಕ್ತ ಹಣಕಾಸು ಬೆಂಬಲ ನೀಡುತ್ತಿಲ್ಲ. ಅನಿವಾರ್ಯವಾಗಿ ಬೆಳೆ ಸುಡುವಿಕೆಗೆ ಮುಂದಾಗಿದ್ದೇವೆ ಎಂದು ರೈತರು ಹೇಳಿದ್ದಾರೆ. ಇನ್ನು 10 ದಿನದಲ್ಲಿ ಗೋಧಿಯನ್ನು ರೈತರು ಬಿತ್ತಬೇಕಿದ್ದು, ಅಷ್ಟರೊಳಗೆ ಭತ್ತದ ತ್ಯಾಜ್ಯ ಸುಡಬೇಕಿದೆ. 

ನವದೆಹಲಿ[ಅ.15]: ರಾಷ್ಟ್ರ ರಾಜಧಾನಿ ವಲಯವನ್ನು ಚಳಿಗಾಲದ ಆರಂಭದ ಸಮಯದಲ್ಲಿ ಆವರಿಸುತ್ತಿದ್ದ ‘ಹೊಗೆ ಮಾಲಿನ್ಯ’ ಈ ಬಾರಿ ಮತ್ತೆ ತನ್ನ ‘ಆಕ್ರಮಣ’ ಆರಂಭಿಸಿದೆ. ವಾಯು ಗುಣಮಟ್ಟವು ದಿಲ್ಲಿಯಲ್ಲಿ ಮಧ್ಯಮದಿಂದ ಕಳಪೆ ಗುಣಮಟ್ಟಕ್ಕೆ ಕುಸಿದಿದ್ದು, ಜನರನ್ನು ಚಿಂತೆಗೀಡು ಮಾಡಿದೆ. ಈ ಕಾರಣ, ಸೋಮವಾರದಿಂದಲೇ ದಿಲ್ಲಿಯಲ್ಲಿ ರಕ್ಷಣಾ ಕ್ರಮಗಳನ್ನು ಜಾರಿಗೆ ಸರ್ಕಾರ ನಿರ್ಧರಿದೆ.

ಪಂಜಾಬ್ ಮತ್ತು ಹರ್ಯಾಣದಲ್ಲಿ ಬೆಳೆಯ ತ್ಯಾಜ್ಯ ಸುಡುವಿಕೆ ನಿಷೇಧವಿದ್ದರೂ, ಭತ್ತದ ಬೆಳೆಗಾರರು ಈ ನಿಷೇಧವನ್ನು ಉಲ್ಲಂಘಿಸಿ ಬೆಳೆಯ ತ್ಯಾಜ್ಯವನ್ನು ಸುಡಲು ಆರಂಭಿಸಿದ್ದಾರೆ. ಇದರಿಂದಾಗಿ ದೆಹಲಿ ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಹೊಗೆ ಮಾಲಿನ್ಯ ತೀವ್ರಗೊಳ್ಳುತ್ತಿದ್ದು, ಗೋಚರತೆ ಕುಸಿಯುತ್ತಿದೆ. ವಾಯು ಗುಣಮಟ್ಟ ‘ಅತಿ ಕಳೆಪೆ’ ದರ್ಜೆಗೆ ಕುಸಿದು ಉಸಿರಾಡುವಿಕೆಗೂ ಸಮಸ್ಯೆ ಎದುರಾಗುವ ಭೀತಿ ಉಂಟಾಗಿದೆ. 

ಬೆಳೆ ತ್ಯಾಜ್ಯದ ಸಂಸ್ಕರಿಸಿ ಗೊಬ್ಬರವಾಗಿ ಪರಿವರ್ತಿಸಲು ಸರ್ಕಾರ ಸೂಕ್ತ ಹಣಕಾಸು ಬೆಂಬಲ ನೀಡುತ್ತಿಲ್ಲ. ಅನಿವಾರ್ಯವಾಗಿ ಬೆಳೆ ಸುಡುವಿಕೆಗೆ ಮುಂದಾಗಿದ್ದೇವೆ ಎಂದು ರೈತರು ಹೇಳಿದ್ದಾರೆ. ಇನ್ನು 10 ದಿನದಲ್ಲಿ ಗೋಧಿಯನ್ನು ರೈತರು ಬಿತ್ತಬೇಕಿದ್ದು, ಅಷ್ಟರೊಳಗೆ ಭತ್ತದ ತ್ಯಾಜ್ಯ ಸುಡಬೇಕಿದೆ. 

ಪಟಾಕಿ ಕಂಪನಿ, ವರ್ತಕರಿಗೆ ಆತಂಕ:

ದೆಹಲಿಯಲ್ಲಿ ವಾಯುಮಾಲಿನ್ಯ ಕಳಪೆ ಮಟ್ಟಕ್ಕೆ ತಲುಪಿರುವುದು ಪಟಾಕಿ ತಯಾರಿಸುವ ಕಂಪನಿಗಳಿಗೆ ಹೊಸ ಆತಂಕ ಹುಟ್ಟಿಸಿದೆ. ಕಳೆದ ವರ್ಷ ದೆಹಲಿಯಲ್ಲಿ ವಾಯುಮಾಲಿನ್ಯ ಗಂಭೀರ ಮಟ್ಟ ಮುಟ್ಟಿದ ಕಾರಣ, ರಾಜಧಾನಿ ಪ್ರದೇಶದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆಗೆ ಸುಪ್ರೀಂಕೋರ್ಟ್ ನಿಷೇಧ ಹೇರಿತ್ತು. ಹೀಗಿರುವಾಗ ಇದೀಗ ದೀಪಾವಳಿಗೆ ಕ್ಷಣಗಣನೆ ಆರಂಭವಾಗಿರುವಾಗಲೇ ದೆಹಲಿಯಲ್ಲಿ ಮತ್ತೆ ವಾಯುಮಾಲಿನ್ಯ ಕಳಪೆ ಮಟ್ಟ ತಲುಪಿದೆ. ಒಂದು ವೇಳೆ ಕಳೆದ ವರ್ಷದಂತೆ ಮತ್ತೆ ಈ ವರ್ಷವೂ ನಿಷೇಧ ಹೇರಿದರೆ, ತಮಗೆ ಭಾರೀ ನಷ್ಟವಾಗಲಿದೆ ಎಂಬ ಆತಂಕದಲ್ಲಿ ತಮಿಳುನಾಡಿನ ಶಿವಕಾಶಿಯ ಪಟಾಕಿ ತಯಾರಕರು ಮತ್ತು ವರ್ತಕರು ಇದ್ದಾರೆ. ಕಳೆದ ವರ್ಷದ ನಿಷೇಧದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ಪಟಾಕಿ ಮಾರಾಟ ಮಾಡಲಾಗದೇ ಹಾಗೆಯೇ ಉಳಿದುಕೊಂಡಿದೆ. ಈ ವರ್ಷವೂ ನಿಷೇಧ ಮುಂದುವರೆದರೆ ವರ್ತಕರು ತೀವ್ರ ಸಂಕಷ್ಟ ಅನುಭವಿಸುವುದು ಖಚಿತ ಎಂದು ದೆಹಲಿಯ ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳಪೆ ಮಟ್ಟಕ್ಕೆ  ಮಾಲಿನ್ಯ

ಭಾನುವಾರ ಬೆಳಗ್ಗೆ ದೆಹಲಿಯಲ್ಲಿ ಒಟ್ಟಾರೆ ಮಾಲಿನ್ಯ ಸೂಚ್ಯಂಕ 201 ಪಿಎಂ (ಪಿಎಂ- ಪ್ರತಿ 10 ಮೈಕ್ರೋಮೀಟರ್ ಸುತ್ತಳತೆಯ ಪ್ರದೇಶದಲ್ಲಿನ ಗಾಳಿಯ ಗುಣಮಟ್ಟ) ಮಟ್ಟದಲ್ಲಿತ್ತು. ಇದನ್ನು ಕಳಪೆ ಗುಣಮಟ್ಟ ಎಂದು ಪರಿಗಣಿಸಲಾಗುತ್ತದೆ 51-100ರ ಮಟ್ಟವನ್ನು ತೃಪ್ತಿದಾಯಕ, 101-200 ರ ಮಟ್ಟವನ್ನು ಸಾಮಾನ್ಯ, 201-300 ಕಳಪೆ ಎಂದೂ, 301-400 ಅತ್ಯಂತ ಕಳಪೆ ಹಾಗೂ 401-500ರ ಮಟ್ಟವನ್ನು ಅತ್ಯಂತ ಗಂಭೀರ ಸ್ವರೂಪದ ವಾಯುಗುಣಮಟ್ಟ ಎಂದು ಅಳೆಯಲಾಗುತ್ತದೆ.

ಮಾಲಿನ್ಯ ತಡೆಗೆ ಕ್ರಮ

ಬೆಳೆ ತ್ಯಾಜ್ಯ ಸುಡುವಿಕೆಯಿಂದ ದಿಲ್ಲಿಯಲ್ಲಿ ಸೃಷ್ಟಿಯಾಗುತ್ತಿರುವ ಹೊಗೆ ಮಾಲಿನ್ಯ ತಡೆಗಟ್ಟಲು ಸೋಮವಾರದಿಂದಲೇ ಜಾರಿಯಾಗುವಂತೆ, ದಿಲ್ಲಿ ಆಡಳಿತ ಹಲವು ಕಾರ್ಯತಂತ್ರಗಳನ್ನು ರೂಪಿಸಿದೆ. ಕಸ ಸುಡುವಿಕೆ, ಭಟ್ಟಿಗಳ ಕಾರ್ಯ ಸ್ಥಗಿತಗೊಳಿಸುವಿಕೆ, ಡೀಸೆಲ್ ಜನರೇಟರ್ ಬಳಕೆ ನಿಷೇಧ, ಖಾಸಗಿ ವಾಹನ ಬಳಕೆ ತಡೆಗೆ ಪಾರ್ಕಿಂಗ್ ಫೀ 3-4 ಪಟ್ಟು ಹೆಚ್ಚಳ, ಮೆಟ್ರೋ ರೈಲು-ಬಸ್‌ಗಳ ಸಂಖ್ಯೆ ಹೆಚ್ಚಳ- ಇತ್ಯಾದಿ ಯೋಜನೆ ರೂಪಿಸತೊಡಗಿದೆ.

click me!