ನಮ್ದಲ್ಲಾ ರಫೆಲ್, ಹೆಚ್‌ಎಎಲ್ ಕೈಬಿಟ್ಟ ಯುಪಿಎನೇ ಫೇಲ್: ನಿರ್ಮಲಾ ಸೀತಾರಾಮನ್!

By Web DeskFirst Published Oct 12, 2018, 12:29 PM IST
Highlights

ರಫೇಲ್‌ ಯುದ್ಧ ವಿಮಾನ ಖರೀದಿ ದೊಡ್ಡ ಹಗರಣ ಎಂದು ರಾಹುಲ್‌ ಗಾಂಧಿ ಪ್ರತಿದಿನ ಆರೋಪಿಸುತ್ತಿದ್ದಾರೆ. ರಾಜಕೀಯ ವಲಯದಲ್ಲಿ ಗದ್ದಲವೆಬ್ಬಿಸಿದೆ. ಈ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ದಾರೆ. ಅವರ ಸಂದರ್ಶನದ ಪರಿಪಾಠ ಇಲ್ಲಿದೆ ನೋಡಿ. 

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ ಪ್ರಕ್ರಿಯೆಯ ವಿವರಗಳನ್ನು ಸುಪ್ರೀಂಕೋರ್ಟ್‌ ಕೇಳಿದೆ. ರಾಜಕೀಯವಾಗಿ ಈ ವಿವಾದ ಸಾಕಷ್ಟುಸದ್ದೆಬ್ಬಿಸಿದೆ. ಇದೊಂದು ದೊಡ್ಡ ಹಗರಣ ಎಂದು ರಾಹುಲ್‌ ಗಾಂಧಿ ಪ್ರತಿದಿನ ಆರೋಪಿಸುತ್ತಿದ್ದಾರೆ. ಈ ಬಗ್ಗೆ ರಕ್ಷಣಾ ಸಚಿವರು ನ್ಯೂಸ್‌ 18 ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.  

ಭಾರತ ಸರ್ಕಾರದಲ್ಲಿ ಪೂರ್ಣಾವಧಿಗೆ ರಕ್ಷಣಾ ಮಂತ್ರಿಯಾದ ಮೊದಲ ಮಹಿಳೆ ನೀವು. ಆ ಹಾದಿ ಹೇಗಿದೆ?

ನಿಜಕ್ಕೂ ಇದು ಆಸಕ್ತಿದಾಯಕ ಮತ್ತು ಚಾಲೆಂಜಿಂಗ್‌ ಟಾಸ್ಕ್‌. ನಾನು ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ, ನಿಭಾಯಿಸುತ್ತೇನೆ ಕೂಡ. ನಮ್ಮ ಸರ್ಕಾರದ ಹಿರಿಯ ಸಹೋದ್ಯೋಗಿಗಳು, ಅನುಭವಿಗಳು ನನಗೆ ಮಾರ್ಗದರ್ಶಕರಾಗಿದ್ದಾರೆ. ಅವರ ಬೆಂಬಲದೊಂದಿಗೆ ನಾನು ಇನ್ನಷ್ಟುಸಮರ್ಥವಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ.

ರಫೇಲ್‌ ವ್ಯವಹಾರ ಒಪ್ಪಂದ ನಿಮ್ಮ ಅಧಿಕಾರಾವಧಿಯಲ್ಲಿ ನಿಮಗೆ ಸವಾಲಾಗಿದೆ ಎಂದು ಅನಿಸುತ್ತಾ?

ಇಲ್ಲ, ಹಾಗೇನಿಲ್ಲ. ನಾನು ಪಕ್ಷದ ವಕ್ತಾರೆ ಕೂಡ. ಇದು ಸರ್ಕಾರವನ್ನು ಹಿಮ್ಮೆಟ್ಟಿಸುವ ಪ್ರಯತ್ನ ಎಂಬುದು ಗೊತ್ತು. ಹಾಗಾಗಿ ಸಮಸ್ಯೆ ಏನಿದೆ ಎಂಬುದು ನನಗೆ ಸ್ಪಷ್ಟವಾಗಿ ತಿಳಿದಿದೆ. ಸರ್ಕಾರದ ಪಾತ್ರ ಏನು, ಈ ವಿಷಯದಲ್ಲಿ ಸರ್ಕಾರದ ನಿಲುವೇನು ಎಂಬುದನ್ನು ತಿಳಿಸಲು ನಾನು ಸಮರ್ಥಳಿದ್ದೇನೆ.

ನಮ್ಮ ಸರ್ಕಾರ ಭ್ರಷ್ಟಾಚಾರದ ವಿಷಯದಲ್ಲಿ ವಿರೋಧಪಕ್ಷಗಳಿಗೆ ಆಹಾರವಾಗಲು ಎಲ್ಲೂ ಅವಕಾಶ ನೀಡಿಲ್ಲ. ಹಾಗಾಗಿ ನಾನು ಬಲವಾಗಿ ನಮ್ಮ ಸರ್ಕಾರವನ್ನು ಸಮರ್ಥಿಸುತ್ತೇನೆ.

ಕಳೆದ 6 ತಿಂಗಳಿನಿಂದ ಕೊನೆಯಿಲ್ಲದಂತೆ ಪ್ರತಿದಿನ ರಫೇಲ್‌ ಕುರಿತಾದ ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿವೆ.

ಕೊನೆಯಿಲ್ಲದ ಆರೋಪಗಳು ಕೇಳಿಬರುತ್ತಿರುವುದು ಸತ್ಯ. ಆದರೆ ಅರ್ಧಸತ್ಯ ಅಥವಾ ಆಧಾರವಿಲ್ಲದ ಆರೋಪ ಮಾಡುವಾಗ ಅದರ ಬಗ್ಗೆ ಸ್ಪಷ್ಟನೆ ನೀಡಬೇಕಾದ್ದು ನಮ್ಮ ಕರ್ತವ್ಯ. ಆದರೆ ಸತ್ಯ ನಮ್ಮ ಕಡೆಯಿದೆ. ಹಾಗಾಗಿ ಯಾವುದೇ ಸಮಯದಲ್ಲಿ ನಾವು ನಮ್ಮ ನಿರ್ಣಯವನ್ನು ಸಮರ್ಥಿಸಿಕೊಳ್ಳುತ್ತೇವೆ.

ಕಾಂಗ್ರೆಸ್‌ ಪದೇ ಪದೇ ಆರೋಪ ಮಾಡುತ್ತದೆಯಲ್ಲಾ?

ಯಾವುದೇ ಒಂದು ವಿಷಯವನ್ನು ಪದೇ ಪದೇ ಚರ್ಚಿಸುವುದರಿಂದ ಒಂದಷ್ಟುಕಾಲ ಅದು ಮುಖ್ಯ ವಿಷಯವಾಗಿರುತ್ತದೆ. ಆದರೆ ಅನಂತರದಲ್ಲಿ ಅದು ತನ್ನ ಪ್ರಾಮುಖ್ಯತೆಯನ್ನೇ ಕಳೆದುಕೊಳ್ಳುತ್ತದೆ. ಕಾಂಗ್ರೆಸ್‌ ಪದೇ ಪದೇ ಆರೋಪ ಮಾಡಿದಾಗಲೂ ನಾವು ವಿಶ್ವಾಸದಿಂದ ಸ್ಪಷ್ಟನೆ ನೀಡುತ್ತಿದ್ದೇವೆ. ಜನ ಅದನ್ನು ನೋಡುತ್ತಿದ್ದಾರೆ. ಆ ಮಾತುಗಳು ಹೃದಯದಿಂದ ಬಂದಿದೆಯೋ ಇಲ್ಲ, ಬಾಯ್ಮಾತಿಗೆ ಹೇಳುತ್ತಿದ್ದಾರೋ ಎಂಬುದನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ.

ಪದೇ ಪದೇ ರಫೇಲ್‌ ಡೀಲ್‌ ಬಗ್ಗೆ ಮಾತನಾಡಿ ನಮ್ಮ ಮೇಲೆ ಆರೋಪ ಮಾಡುವುದರಿಂದ ಜನರನ್ನು ಸೆಳೆಯಬಹುದು, ಲಾಭ ಪಡೆಯಬಹುದು ಎಂದು ಕಾಂಗ್ರೆಸ್‌ ಭಾವಿಸಿದಂತಿದೆ. ಆದರೆ, ಅದು ಸಾಧ್ಯವಿಲ್ಲ. ಜನರು ಆಧಾರರಹಿತ ಆರೋಪವನ್ನು ನಂಬುವುದಿಲ್ಲ. ಈ ಆರೋಪಗಳೆಲ್ಲ ತಾತ್ಕಾಲಿಕ. ನಮ್ಮ ಸರ್ಕಾರ ಪಾರದರ್ಶಕವಾಗಿದೆ, ಸ್ವಚ್ಛವಾಗಿದೆ. ಉತ್ತಮ ಆಡಳಿತ ನೀಡುತ್ತಿದೆ. ಅವರು ಎಷ್ಟುಬಾರಿ ನಮ್ಮ ಮೇಲೆ ಆರೋಪ ಮಾಡುತ್ತಿರುತ್ತಾರೋ ನಾವೂ ನಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳುತ್ತಲೇ ಇರುತ್ತೇವೆ. ಏಕೆಂದರೆ ನಮ್ಮ ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ.

ಸುಪ್ರೀಂಕೋರ್ಟ್‌ ರಫೇಲ್‌ ಒಪ್ಪಂದ ಕುರಿತಾದ ವಿವರ ಕೇಳಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?

ಸುಪ್ರೀಂಕೋರ್ಟ್‌ ತೀರ್ಪು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಯನ್ನು ಆಧರಿಸಿರುತ್ತದೆ. ವಾಸ್ತವವಾಗಿ ಸುಪ್ರೀಂಕೋರ್ಟ್‌ ನೀಡಿದ್ದು ತೀರ್ಪು ಅಲ್ಲ. ಈ ಬಗ್ಗೆ ನನಗೆ ಸಂಪೂರ್ಣ ತಿಳಿದಿಲ್ಲ. ಹಾಗಾಗಿ ಈಗಲೇ ಹೇಳಿಕೆ ನೀಡುವುದಿಲ್ಲ.

ರಫೇಲ್‌ ಒಪ್ಪಂದಕ್ಕೆ ಭದ್ರತೆಯ ಕುರಿತಾದ ಸಂಪುಟ ಸಮಿತಿ (ಸಿಸಿಎಸ್‌) ಅನುಮೋದನೆ ನೀಡುವ 16 ತಿಂಗಳು ಮೊದಲೇ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ಗೆ ತೆರಳಿ ಆ ಬಗ್ಗೆ ಘೋಷಣೆ ಮಾಡಿದ್ದರಲ್ಲವೇ?

ಏಪ್ರಿಲ್‌ 2015ರಂದು ನರೇಂದ್ರ ಮೋದಿ ಈ ಬಗ್ಗೆ ಘೋಷಿಸಿದ್ದಾರೆಂದು ಹೇಳುತ್ತಿದ್ದೀರಿ. ಅದು ಕೇವಲ ಒಂದು ಹೇಳಿಕೆಯಷ್ಟೆ. ರಫೇಲ್‌ ಖರೀದಿ ಮಾತುಕತೆಗೆ ಸಿದ್ಧ ಎಂಬ ಹೇಳಿಕೆ ನೀಡಿದ್ದಾರೆ. ಅದಕ್ಕೆ ಸಿಸಿಎಸ್‌ ಕ್ಲಿಯರೆನ್ಸ್‌ ಅಗತ್ಯ ಇಲ್ಲ. ಒಪ್ಪಂದಕ್ಕೆ ಸಹಿ ಮಾಡುವಾಗ ಸಿಸಿಎಸ್‌ ಅನುಮೋದನೆ ಬೇಕು.

ವಾಸ್ತವಾಗಿ ಮಾತುಕತೆ ನಡೆದ 16 ತಿಂಗಳ ಬಳಿಕ ಒಪ್ಪಂದದ ಕರಡನ್ನು ಕ್ಯಾಬಿನೆಟ್‌ ಅನುಮೋದಿಸಿತು. ನಂತರ ಸಿಸಿಎಸ್‌ ಅನುಮೋದನೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅದು ನಡೆದಿದ್ದು 2016ರ ಸೆಪ್ಟೆಂಬರ್‌ನಲ್ಲಿ.

ಖಂಡಿತವಾಗಿಯೂ ಎಲ್ಲ ಪ್ರಕ್ರಿಯೆಗಳನ್ನೂ ಅನುಸರಿಸಿಯೇ ಒಪ್ಪಂದಕ್ಕೆ ಬರಲಾಗಿದೆ. ಆದರೆ ಭಾರತದಲ್ಲಿ ಮೊದಲ 30 ವರ್ಷ ಆಳಿದ ಕಾಂಗ್ರೆಸ್‌ ಪಕ್ಷ ಯಾವ ಒಪ್ಪಂದಕ್ಕೆ ಯಾವ ಪ್ರಕ್ರಿಯೆಯನ್ನು ಅನುಸರಿಸಿದೆ ಎಂಬ ಬಗ್ಗೆ ಯಾವತ್ತೂ ಸ್ಪಷ್ಟನೆ ನೀಡಿಲ್ಲ.

ಮೊದಲಿಗೆ 126 ಯುದ್ಧ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಬಳಿಕ ಅದನ್ನು 36 ಯುದ್ಧ ವಿಮಾನಗಳಿಗೆ ತಗ್ಗಿಸಲಾಯಿತು. ಇದರಿಂದ ಭಾರತೀಯ ವಾಯುಸೇನೆಯ ಸಾಮರ್ಥ್ಯ ಕುಗ್ಗಿದಂತಾಗುವುದಿಲ್ಲವೇ?

ಕಾಂಗ್ರೆಸ್‌ ಸರ್ಕಾರದ ಒಪ್ಪಂದದಲ್ಲಿ 18 ಹಾರಲು ಸಿದ್ಧವಾಗಿರುವ ಯುದ್ಧವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿಸುವುದು, ಉಳಿದ ವಿಮಾನಗಳ ತಯಾರಿಕೆಗೆ ಎಚ್‌ಎಎಲ್‌ಗೆ ತಾಂತ್ರಿಕ ನೆರವು ನೀಡುವುದು ಎಂದು ನಿರ್ಧರಿಸಲಾಗಿತ್ತು. ಆದರೆ 2014ರಲ್ಲಿ ಕಾಂಗ್ರೆಸ್‌ ಬದಲಾಗಿ ಬಿಜೆಪಿ ಅಧಿಕಾರಕ್ಕೆ ಬಂತು. 126 ಯುದ್ಧ ವಿಮಾನಗಳ ಸಂಖ್ಯೆಯನ್ನು ಇಳಿಸಿ 36 ಹಾರಲು ಸಿದ್ಧವಿರುವ ವಿಮಾನಗಳನ್ನು ಫ್ರಾನ್ಸ್‌ನಿಂದ ಕೊಂಡುಕೊಳ್ಳಲು ನಿರ್ಧರಿಸಲಾಯಿತು.

ಆಗ 18 ಇದ್ದ ಸಂಖ್ಯೆ 36ಕ್ಕೆ ಏರಿತು. ಎಚ್‌ಎಎಲ್‌ ಈ ವಿಮಾನಗಳನ್ನು ನಿರ್ಮಾಣ ಮಾಡಲು ಮತ್ತಷ್ಟುಸಮಯ ಹಿಡಿಯುತ್ತಿತ್ತು. ಆದರೆ ಇದು ಸ್ಪರ್ಧಾತ್ಮಕ ಯುಗ. ಎಲ್ಲಾ ಕ್ಷೇತ್ರದಲ್ಲೂ ವೇಗವಾದ ಅಭಿವೃದ್ಧಿ ಅಗತ್ಯವಿದೆ. ಹಾಗಾಗಿ ಈ ನಿರ್ಣಯ ಪ್ರಮುಖವಾಯಿತು. ಇದರಿಂದ ಏರ್‌ಫೋರ್ಸ್‌ ಸಾಮರ್ಥ್ಯ ಕುಗ್ಗುವ ಪ್ರಶ್ನೆಯೇ ಇಲ್ಲ.

ಎಚ್‌ಎಎಲ್‌ ಅನ್ನು ಕೈಬಿಟ್ಟು ಅನುಭವವೇ ಇಲ್ಲದ ಖಾಸಗಿ ಕಂಪನಿ ಇದರಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ ಎಂಬ ಆರೋಪವಿದೆಯಲ್ಲಾ?

ಇದು ಭಾರತ ಸರ್ಕಾರ ಮತ್ತು ಪ್ರಾನ್ಸ್‌ ಸರ್ಕಾರದ ನಡುವೆ ನಡೆದ ಒಪ್ಪಂದ. ಇಲ್ಲಿ ಯಾವುದೇ ಕಂಪನಿಗಳ ಮಧ್ಯಸ್ಥಿಕೆಯೂ ಇಲ್ಲ.

ಎಚ್‌ಎಎಲ್‌ಗೆ ರಫೇಲ್‌ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯವಿಲ್ಲವೇ?

ತಪ್ಪಾಗಿ ಅರ್ಥೈಸಲಾದ ಹೇಳಿಕೆಗಳು ನನ್ನ ಹೆಸರಿನಲ್ಲಿ ಹರಿದಾಡಿವೆ. ಅದಕ್ಕೆ ನಾನು ಜವಾಬ್ದಾರಳಲ್ಲ. ದಸ್ಸಾಲ್ಟ್‌ ಮತ್ತು ಎಚ್‌ಎಎಲ್‌ ನಡುವೆ ಏಕೆ ಒಪ್ಪಂದ ಏರ್ಪಟ್ಟಿಲ್ಲ ಎಂಬುದು ನಿಮ್ಮ ಪ್ರಶ್ನೆ. ನಾವು ಕೇವಲ 36 ಹಾರಲು ಸಿದ್ಧವಿರುವ ವಿಮಾನಗಳ ಖರೀದಿಗೆ ದಸ್ಸಾಲ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಯುಪಿಎ ಸರ್ಕಾರದಲ್ಲಿ 18 ಯುದ್ಧ ವಿಮಾನ ಖರೀದಿ ಮತ್ತು ಉಳಿದ ಯುದ್ಧ ವಿಮಾನ ತಯಾರಿಕೆಗೆ ತಾಂತ್ರಿಕ ನೆರವು ನೀಡುವ ಡೀಲ್‌ ನಡೆದಿದೆ.

ಆಗ ದಸ್ಸಾಲ್ಟ್‌ ಸಿಇಒ ಮತ್ತು ಎಚ್‌ಎಎಲ್‌ ನಡುವೆ ಮಾತುಕತೆ ನಡೆದಿದೆ. ಆದಾಗ್ಯೂ ಸ್ಪಷ್ಟಒಪ್ಪಂದಕ್ಕೆ ಬರಲು ಸಾಧ್ಯವಾಗಿಲಿಲ್ಲ. ನೀವ್ಯಾಕೆ ಇದನ್ನು ಪ್ರಶ್ನಿಸುವುದಿಲ್ಲ? ನಮಗೆ ತುರ್ತಾಗಿ ಯುದ್ಧ ವಿಮಾನಗಳ ಅಗತ್ಯವಿದೆ, ಹಾಗಾಗಿ 36 ಹಾರಲು ಸಿದ್ಧವಿರುವ ವಿಮಾನಗಳ ಖರೀದಿಗೆ ನಿರ್ಣಯಿಸಬೇಕಾಯಿತು. ಎಚ್‌ಎಎಲ್‌ ಅನ್ನು ಕೈಬಿಟ್ಟಿದ್ದು ಯುಪಿಎ ಅವಧಿಯಲ್ಲಿಯೇ ಹೊರತು ನಮ್ಮ ಅಧಿಕಾರಾವಧಿಯಲ್ಲಿ ಅಲ್ಲ. ಇಂತಹ ಪ್ರಶ್ನೆಗೆ ನಾನು ಉತ್ತರ ನೀಡಲು ಪ್ರಯತ್ನಿಸುತ್ತೇನೆ. ಆದರೆ ನೀವು ಕೇಳಬೇಕಾಗಿರುವುದು ಕಾಂಗ್ರೆಸ್ಸನ್ನು.

ಸತತ 10 ವರ್ಷಗಳ ಕಾಲ ಒಪ್ಪಂದದ ಮಾತುಕತೆ ನಡೆದಿದೆ. ಆದಾಗ್ಯೂ ಸ್ಪಷ್ಟತೀರ್ಮಾನಕ್ಕೆ ಬಂದಿಲ್ಲ. ಎಚ್‌ಎಎಲ್‌ನ ಕುಂದುಕೊರತೆಗಳೇನು, ಸಾಮರ್ಥ್ಯ ಏನು ಎಂಬ ಬಗ್ಗೆ ಚರ್ಚಿಸಿಲ್ಲ. ಇದನ್ನು ನೀವು ಪ್ರಶ್ನಿಸಬೇಕಲ್ಲವೇ?

ದೇಶದಲ್ಲಿ ಮೀಟೂ ಆಂದೋಲನ ನಡೆಯುತ್ತಿದೆ. ಹಲವಾರು ಮಹಿಳೆಯರು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗವಾಗಿ ಧ್ವನಿ ಎತ್ತುತ್ತಿದ್ದಾರೆ. ನಿಮ್ಮ ಕ್ಯಾಬಿನೆಟ್‌ನ ಸಚಿವ ಎಂ ಜೆ ಅಕ್ಬರ್‌ ಅವರ ಬಗ್ಗೆ 6-7 ಪತ್ರಕರ್ತೆಯರು ಆರೋಪಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಅಕ್ಬರ್‌ ಅವರ ಮೇಲಿನ ಆರೋಪದ ಬಗ್ಗೆ ನಾನೇನೂ ಹೇಳುವುದಿಲ್ಲ. ಆ ಬಗ್ಗೆ ಮಾತನಾಡಲು ನಾನು ಸರಿಯಾದ ವ್ಯಕ್ತಿ ಅಲ್ಲ. ಇನ್ನು ಮೀಟೂ ಆಂದೋಲನದ ಬಗ್ಗೆ ಮಾತನಾಡುವುದಾದರೆ ಮಹಿಳೆಯರು ಪ್ರಚಾರಕ್ಕಾಗಿ ಹೀಗೆ ಆಂದೋಲನ ಪ್ರಾರಂಭಿಸುತ್ತಿದ್ದಾರೆ ಎಂಬಂತಹ ಹೇಳಿಕೆಗಳನ್ನೂ ನಾನು ನೀಡುವುದಿಲ್ಲ. ಬಹಿಂಗವಾಗಿ, ಧೈರ್ಯವಾಗಿ ತಮ್ಮ ಮೇಲಾದ ಕಿರುಕುಳ, ದೌರ್ಜನ್ಯದ ಬಗ್ಗೆ ಧ್ವನಿ ಎತ್ತುತ್ತಿರುವ ಮಹಿಳೆಯರಿಗೆ ನನ್ನ ಬೆಂಬಲವಿದೆ.

-ನಿರ್ಮಲಾ ಸೀತಾರಾಮನ್ , ರಕ್ಷಣಾ ಸಚಿವೆ 

click me!