ಪಕ್ಷ ತೊರೆಯಲಿದ್ದಾರಾ ಸಚಿವ ಶಂಕರ್ ..? ಯಾವ ಪಕ್ಷಕ್ಕೆ ಸೇರ್ಪಡೆ?

By Web DeskFirst Published Oct 5, 2018, 10:58 AM IST
Highlights

ಶಾಸಕ ಹಾಗೂ ಸಚಿವ ಆರ್‌. ಶಂಕರ್‌ಗೆ ಶೀಘ್ರದಲ್ಲೇ ಪಕ್ಷ ತೊರೆದು ಮತ್ತೊಂದು ಪಕ್ಷವನ್ನು ಸೇರ್ಪಡೆಯಾಗುವ ಸಾಧ್ಯತೆ ಇದೆ. ಅವರಿಗೆ ಕಾಂಗ್ರೆಸ್‌ನ ಸಹ ಸದಸ್ಯನಾಗುವಂತೆ ಕಾಂಗ್ರೆಸ್‌ ನಾಯಕತ್ವ ತಾಕೀತು ಮಾಡಿದೆ. 

ಬೆಂಗಳೂರು :  ಕರ್ನಾಟಕ ಪ್ರಜ್ಞಾವಂತ ಜನತಾಪಾರ್ಟಿಯ ಶಾಸಕ ಹಾಗೂ ಸಚಿವ ಆರ್‌. ಶಂಕರ್‌ಗೆ ಶೀಘ್ರದಲ್ಲೇ ಕಾಂಗ್ರೆಸ್‌ನ ಸಹ ಸದಸ್ಯನಾಗುವಂತೆ ಕಾಂಗ್ರೆಸ್‌ ನಾಯಕತ್ವ ತಾಕೀತು ಮಾಡಿದೆ. ಆದರೆ, ಇದಕ್ಕೆ ಕ್ಯಾರೆ ಎನ್ನದ ಶಂಕರ್‌ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ ನಾಯಕತ್ವ ಸಂಪುಟ ವಿಸ್ತರಣೆ ನಿರ್ಧಾರ ಹೊರ ಬೀಳುವವರೆಗೂ ಶಂಕರ್‌ಗೆ ಗಡುವು ನೀಡಿದೆ. ಈ ಅವಧಿಯಲ್ಲಿ ಪಕ್ಷದ ಸಹ ಸದಸ್ಯತ್ವ ಪಡೆಯದಿದ್ದರೆ ಸಂಪುಟ ವಿಸ್ತರಣೆ ವೇಳೆ ಶಂಕರ್‌ಗೆ ಕೊಕ್‌ ನೀಡುವುದಾಗಿಯೂ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಕೆಪಿಜೆಪಿಯಿಂದ ಆಯ್ಕೆಯಾದ ಶಂಕರ್‌ ಅವರು ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದರೂ, ತಮ್ಮ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಕಾಂಗ್ರೆಸ್‌ ನಾಯಕತ್ವ ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ಮೈತ್ರಿಕೂಟದಲ್ಲಿ ಸೇರ್ಪಡೆಯಾಗಿ ಸಚಿವ ಸ್ಥಾನವನ್ನು ಗಿಟ್ಟಿಸಿದ ಶಂಕರ್‌ಗೆ ಕಾಂಗ್ರೆಸ್‌ ಸಹ ಸದಸ್ಯರಾಗುವಂತೆ ಹಲವು ಬಾರಿ ನಾಯಕರು ಸಲಹೆ ನೀಡಿದ್ದಾರೆ. ಆದರೆ, ಶಂಕರ್‌ ಈ ಬಗ್ಗೆ ಆಸಕ್ತಿ ತೋರಿಸಿಲ್ಲ.

ಇತ್ತೀಚೆಗೆ ಭಾರಿ ಸುದ್ದಿಯಾಗಿದ್ದ ಆಪರೇಷನ್‌ ಕಮಲ ಗೊಂದಲದ ವೇಳೆ ಶಂಕರ್‌ ಕೂಡ ಬಿಜೆಪಿಯ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿತ್ತು. ಮೈತ್ರಿಕೂಟ ಸರ್ಕಾರವಾಗಿರುವ ಹಿನ್ನೆಲೆಯಲ್ಲಿ ತಮ್ಮ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡು ಭವಿಷ್ಯದಲ್ಲಿ ಏನೇ ಏರುಪೇರಾದರೂ ಅದರ ಲಾಭ ಗಿಟ್ಟಿಸುವುದು ಶಂಕರ್‌ ಉದ್ದೇಶ ಎಂಬ ಗುಮಾನಿ ಕಾಂಗ್ರೆಸ್‌ ನಾಯಕರದ್ದು. ಹೀಗಾಗಿಯೇ ಅವರನ್ನು ಕಾಂಗ್ರೆಸ್‌ ಸಹ ಸದಸ್ಯ ಮಾಡಿಕೊಂಡರೆ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಭಾಗವಾಗುತ್ತಾರೆ. ಆಗ ಅವರಿಗೆ ಕಾಂಗ್ರೆಸ್‌ ವಿಪ್‌ ಅನ್ವಯವಾಗುತ್ತದೆ. ಹೀಗಾಗಿಯೇ ಸಹ ಸದಸ್ಯತ್ವ ಪಡೆಯುವಂತೆ ಕಾಂಗ್ರೆಸ್‌ ಒತ್ತಡ ಹಾಕಿದೆ. ಆದರೆ, ಶಂಕರ್‌ ಕ್ಯಾರೆ ಎನ್ನುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

click me!