ಕರ್ನಾಟಕದಲ್ಲೂ ಬಿಜೆಪಿಯಿಂದ ಉ.ಪ್ರ. ಪ್ರಯೋಗ; ಟಿಕೆಟ್ ನಿರೀಕ್ಷೆಯಲ್ಲಿದ್ದವರಿಗೆ ಶಾಕ್?

Published : Jun 10, 2017, 02:07 PM ISTUpdated : Apr 11, 2018, 12:52 PM IST
ಕರ್ನಾಟಕದಲ್ಲೂ ಬಿಜೆಪಿಯಿಂದ ಉ.ಪ್ರ. ಪ್ರಯೋಗ; ಟಿಕೆಟ್ ನಿರೀಕ್ಷೆಯಲ್ಲಿದ್ದವರಿಗೆ ಶಾಕ್?

ಸಾರಾಂಶ

ದೇಶದ ವಿವಿಧೆಡೆ ಅನುಸರಿಸಿದ ತಂತ್ರಗಾರಿಕೆ ರಾಜ್ಯದಲ್ಲೂ ವಿಸ್ತರಣೆ; ವಿಧಾನಸಭೆ ಚುನಾವಣೆ ಮೂಲಕ ಲೋಕಸಭೆ ಎಲೆಕ್ಷನ್‌ ಗೆಲ್ಲಲೂ ತಂತ್ರ; ಸಿದ್ದು ಅಹಿಂದ ಮತ ಬ್ಯಾಂಕ್‌ ವಿಭಜಿಸುವ ರೀತಿ ಟಿಕೆಟ್‌ ಹಂಚಿಕೆ; ಹಿಂದುಳಿದ, ದಲಿತ ವರ್ಗದವರಿಗೂ ಆದ್ಯತೆ | ಟಿಕೆಟ್‌ ಗ್ಯಾರಂಟಿ ಅಂದುಕೊಂಡವರಿಗೆ ಶಾಕ್‌

ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸದ್ದಿಲ್ಲದೆ ರಣತಂತ್ರ ರೂಪಿಸುತ್ತಿರುವ ಬಿಜೆಪಿಯ ಚಾಣಕ್ಯ ಎಂದೇ ಕರೆಯಲ್ಪಡುವ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಟಿಕೆಟ್‌ ಹಂಚಿಕೆಯಲ್ಲಿ ಲೋಕಸಭಾ ಕ್ಷೇತ್ರವಾರು ಜಾತಿ ಸಮೀಕರಣ ಮಾಡುವ ಬಗ್ಗೆ ಗಂಭೀರ ಚಿಂತನೆ ಆರಂಭಿಸಿದ್ದಾರೆ.

ಈಗಾಗಲೇ ತಮ್ಮ ಆಪ್ತರ ಮೂಲಕ ಒಂದು ಬಾರಿ ವಿಧಾನಸಭಾ ಕ್ಷೇತ್ರವಾರು ಸಮೀಕ್ಷೆ ನಡೆಸಿರುವ ಅಮಿತ್‌ ಶಾ ಅವರು ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ನಡೆಸಿದ ಯಶಸ್ವಿ ಪ್ರಯೋಗಗಳನ್ನು ಕರ್ನಾಟಕದಲ್ಲೂ ಅನುಷ್ಠಾನಗೊಳಿಸುವ ದಿಕ್ಕಿನಲ್ಲಿ ಹೆಜ್ಜೆ ಇರಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಒಂದು ವೇಳೆ ಈ ತಂತ್ರ ಅನುಷ್ಠಾನ ಗೊಂಡಲ್ಲಿ ಹಾಲಿ ಕೆಲವು ಶಾಸಕರೂ ಸೇರಿದಂತೆ ಟಿಕೆಟ್‌ ತಮಗೆ ಸಿಕ್ಕೇ ಸಿಗುತ್ತದೆ ಎಂಬ ಭಾರಿ ನಿರೀಕ್ಷೆಯಲ್ಲಿರುವ ಅನೇಕ ಮಾಜಿ ಸಚಿವರು, ಶಾಸಕರು ಮುಂಬ ರುವ ಚುನಾವಣೆಯಲ್ಲಿ ಕಣಕ್ಕಿಳಿಯುವ ಆಸೆಯನ್ನು ಕೈಬಿಡಬೇಕಾಗುತ್ತದೆ.

ಅಮಿತ್‌ ಶಾ ಅವರ ತಂತ್ರ ಕೇವಲ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಅಲ್ಲ. ವಿಧಾನಸಭಾ ಚುನಾವಣೆಯ ಗೆಲುವಿನ ಮೂಲಕ ಒಂದು ವರ್ಷದ ನಂತರ ಎದುರಾಗುವ ಲೋಕಸಭಾ ಚುನಾವ ಣೆಯ ಗೆಲುವಿಗೆ ಸಹಕಾರಿಯಾಗಬೇಕು ಎಂಬ ದೂರದೃಷ್ಟಿಯನ್ನೂ ಹೊಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಹಾಕುವ ಜಾತಿ ಸಮೀ ಕರಣದ ತಳಹದಿ ನಂತರದ ಲೋಕಸಭಾ ಚುನಾವಣೆಯಲ್ಲೂ ಪಕ್ಷಕ್ಕೆ ಗೆಲುವು ತಂದು ಕೊಡುವಂತಿರಬೇಕು ಎಂಬ ಉದ್ದೇಶದಿಂದ ತಂತ್ರ ರೂಪಿಸಲಾಗುತ್ತಿದೆ ಎನ್ನಲಾಗಿದೆ.

ಇದೆಲ್ಲದರ ಜತೆಗೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅಹಿಂದ ಮಂತ್ರದ ಬಗ್ಗೆಯೂ ಅಮಿತ್‌ ಶಾ ಗಂಭೀರವಾಗಿ ಯೇ ಪರಿಗಣಿಸಿದ್ದಾರೆ. ಅಹಿಂದ ವರ್ಗ ಕ್ಕಾಗಿಯೇ ಸಾಕಷ್ಟುಕಲ್ಯಾಣ ಕಾರ್ಯಕ್ರ ಮಗಳನ್ನು ಜಾರಿಗೆ ತಂದಿರುವ ಕಾಂಗ್ರೆಸ್‌ ಸರ್ಕಾರದ ವೋಟ್‌ ಬ್ಯಾಂಕ್‌ ವಿಭಜಿ ಸುವ ರೀತಿ ತಮ್ಮ ಪಕ್ಷದಿಂದ ಟಿಕೆಟ್‌ ಹಂಚಿಕೆ ಮಾಡಬೇಕು ಎಂಬ ಬಲವಾದ ಪ್ರತಿಪಾದನೆಯೂ ಶಾ ತಂಡದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಕ್ಷೇತ್ರವಾರು ಜಾತಿ ಸಮೀಕರಣ ಹೇಗೆ?: ಒಂದು ಲೋಕ ಸಭಾ ಕ್ಷೇತ್ರ ಸುಮಾರು ಎಂಟರಿಂದ ಒಂಬತ್ತು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುತ್ತದೆ. ಈ ಲೋಕಸಭಾ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಜಾತಿ ಜನಾಂಗಕ್ಕೆ ಸಹಜವಾಗಿಯೇ ಹೆಚ್ಚು ವಿಧಾನಸಭಾ ಕ್ಷೇತ್ರದ ಟಿಕೆಟ್‌ ನೀಡಲಾಗುತ್ತದೆ. ಆದರೆ, ಇಲ್ಲಿ ಇತರ ಹಿಂದುಳಿದ ವರ್ಗ, ಪರಿಶಿಷ್ಟಪಂಗಡ ಮತ್ತು ಪರಿಶಿಷ್ಟಜಾತಿಗೂ ಆದ್ಯತೆ ನೀಡುವಂತೆ ಟಿಕೆಟ್‌ ಹಂಚಿಕೆ ಮಾಡಲಾಗುತ್ತದೆ.

ಆಗ ಒಂದು ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳನ್ನು ಪರಿಗಣಿಸಿ ದಾಗ ಸರಿಸುಮಾರು ಜಾತಿ ಸಮೀಕರಣ ಆದಂತಿರಬೇಕು. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಎಲ್ಲ ವರ್ಗಗಳ ಜನರಿಗೂ ತಮ್ಮ ಕ್ಷೇತ್ರದಲ್ಲಿ ಅಲ್ಲದಿದ್ದರೂ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಸಿಕ್ಕಿದೆ ಎಂಬ ಸಮಾಧಾನ ಉಂಟಾಗಬೇಕು. ನಮ್ಮವನೊಬ್ಬನಿಗೆ ಬಿಜೆಪಿಯ ಟಿಕೆಟ್‌ ಸಿಕ್ಕಿದೆ, ನಮ್ಮನ್ನು ಗುರುತಿಸಿದ್ದಾರೆ ಎಂಬ ಸುದ್ದಿ ಆಯಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲ ವಿಧಾನಸಭಾ ಕ್ಷೇತ್ರಗಳ ಜನರಿಗೂ ತಲುಪಬೇಕು ಎಂಬ ಲೆಕ್ಕಾಚಾರ ಅಡಗಿದೆ.

ಈ ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಕರ್ನಾಟಕ ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆ ವೇಳೆ ಜಾತಿ ಸಮೀಕ ರಣಕ್ಕೆ ಒತ್ತು ನೀಡಿದ ಉದಾಹರಣೆಗಳು ತೀರಾ ಕಡಮೆ. ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಬಲಾಢ್ಯರಾಗಿದ್ದಾರೆ ಎಂಬುದರ ಮೇಲೆ ಅಭ್ಯರ್ಥಿಯನ್ನಾಗಿಸುತ್ತಿತ್ತೇ ಹೊರತು, ಈ ಜಿಲ್ಲೆಯಲ್ಲಿ ಅಥವಾ ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ದಿಷ್ಟಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬುದನ್ನು ಪರಿಗಣಿಸುತ್ತಿದ್ದುದು ಇಲ್ಲವೇ ಇಲ್ಲ ಎನ್ನಬಹುದು. ಆದರೆ, ಅಮಿತ್‌ ಶಾ ಅವರು ಹಿಂದಿನ ಎಲ್ಲ ಚುನಾವಣಾ ತಂತ್ರಗಳನ್ನು, ಸಹಜ ನಿರೀಕ್ಷೆಗಳನ್ನು ಬದಿಗೊತ್ತಿ ತಮ್ಮದೇ ಆದ ರೀತಿಯ ರಣತಂತ್ರ ರೂಪಿಸುತ್ತಿ ರುವುದರಿಂದ ರಾಜ್ಯ ಬಿಜೆಪಿಯ ಅನೇಕ ‘ಸಾಂಪ್ರದಾಯಿಕ ಟಿಕೆಟ್‌ ಆಕಾಂಕ್ಷಿ' ಮುಖಂಡರಿಗೆ ನಿರಾಸೆ ಆಗುವ ಸಾಧ್ಯತೆಯೇ ಹೆಚ್ಚು.

ಕನ್ನಡಪ್ರಭ ವಾರ್ತೆ
epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?