ಸಂಪುಟ ಸರ್ಕಸ್‌ ಮೇಲೆ ಬಿಜೆಪಿ ಹದ್ದಿನ ಕಣ್ಣು

By Web DeskFirst Published Dec 19, 2018, 8:42 AM IST
Highlights

ಸಂಪುಟ ಸರ್ಕಸ್‌ ಮೇಲೆ ಬಿಜೆಪಿ ಹದ್ದಿನ ಕಣ್ಣು  | ಅತೃಪ್ತಿಯ ಲಾಭ ಪಡೆವ ಬಗ್ಗೆ ಲೆಕ್ಕಾಚಾರ  | ಡಿ. 22 ಕ್ಕೆ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ 
 

ಬೆಂಗಳೂರು (ಡಿ. 19):  ಈ ತಿಂಗಳ 22ರಂದು ನಡೆಯಲಿದೆ ಎನ್ನಲಾದ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಯನ್ನು ಪ್ರತಿಪಕ್ಷ ಬಿಜೆಪಿಯೂ ಭಾರೀ ಕುತೂಹಲದಿಂದ ಕಾದು ನೋಡುತ್ತಿದೆ.

ಸಚಿವ ಸಂಪುಟ ವಿಸ್ತರಣೆಯಾಗಲಿ ಅಥವಾ ಪುನರ್‌ರಚನೆಯಾಗಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಅತೃಪ್ತಿಯಂತೂ ಮೂಡುವುದು ಖಚಿತ ಎಂಬ ನಂಬಿಕೆಯಲ್ಲಿರುವ ಬಿಜೆಪಿ, ಇದರ ಲಾಭವನ್ನು ಯಾವ ರೀತಿ ಪಡೆದುಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ನಿರತವಾಗಿದೆ.

ಸಂಪುಟ ವಿಸ್ತರಣೆಯಾದರೆ ಯಾರಿಗೆಲ್ಲ ಸ್ಥಾನ ಸಿಗಬಹುದು? ಯಾರಿಗೆ ನಿರಾಶೆಯಾಗಬಹುದು? ಪುನರ್‌ ರಚನೆಯಾದರೆ ಸಂಪುಟದಿಂದ ಕೈಬಿಡುವ ಸಚಿವರು ಯಾರಾರ‍ಯರು? ಅವರನ್ನು ಯಾವ ರೀತಿ ಸೆಳೆದುಕೊಳ್ಳಬಹುದು ಎಂಬ ಲೆಕ್ಕಾಚಾರ ಬಿಜೆಪಿ ಪಾಳೆಯದಲ್ಲಿ ತೆರೆಮರೆಯಲ್ಲಿ ನಡೆದಿದೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.

ಹಿಂದೆ ಆಪರೇಷನ್‌ ಕಮಲ ಮಾಡುವ ಪ್ರಯತ್ನ ನಡೆಸಿ ಕೈಸುಟ್ಟುಕೊಂಡಿರುವುದರಿಂದ ಈ ಸಲ ಹಾಗಾಗದಂತೆ ಎಚ್ಚರಿಕೆಯಿಂದ ಹೆಜ್ಜೆ ಹಾಕುವುದರ ಜೊತೆಗೆ ಯಾವುದೇ ಕಾರಣಕ್ಕೂ ತಮ್ಮ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಬಾರದು ಮತ್ತು ರಹಸ್ಯ ಕಾಪಾಡಬೇಕು ಎಂಬುದರ ಬಗ್ಗೆಯೂ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಈಗಿರುವ ನಿರೀಕ್ಷೆಯಂತೆ 22ಕ್ಕೆ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಆಗದೇ ಮುಂದೂಡಿಕೆಯಾದಲ್ಲಿ ಆಗಲೂ ಕಾಂಗ್ರೆಸ್ಸಿನಲ್ಲಿ ಅತೃಪ್ತಿ ಭುಗಿಲೇಳಬಹುದು. ಹೀಗಾಗಿ, ಅಂಥ ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜಾಗಿರುವಂತೆ ಪಕ್ಷದ ಕೆಲವು ಮುಖಂಡರಿಗೆ ಸೂಚನೆ ರವಾನೆಯಾಗಿದೆ ಎಂದು ತಿಳಿದು ಬಂದಿದೆ.

click me!