ನಗರ ರಸ್ತೆಗಳ ಡಾಂಬರೀಕರಣದಲ್ಲಿ ಭಾರೀ ಅವ್ಯವಹಾರ ಆರೋಪ

By Suvarna Web DeskFirst Published Sep 14, 2017, 6:58 PM IST
Highlights

ಕಳೆದ 17 ತಿಂಗಳ ಅವಧಿಯಲ್ಲಿ ನಗರದ ಮುಖ್ಯರಸ್ತೆಗಳ ಡಾಂಬರೀಕರಣ ಕಾರ್ಯಗಳಿಗಾಗಿ ರಾಜ್ಯ ಸರ್ಕಾರವು ₹1015 ಕೋಟಿಗಿಂತ ಹೆಚ್ಚು ವೆಚ್ಚ ಮಾಡಿದೆ. ಆದರೆ, ಡಾಂಬರೀಕರಣ ಮಾಡಲಾದ ನಾಲ್ಕೈದು ತಿಂಗಳಲ್ಲಿಯೇ 20 ಸಾವಿರ ರಸ್ತೆ ಗುಂಡಿಗಳು ಸೃಷ್ಟಿಯಾಗಿವೆ.

ಬೆಂಗಳೂರು: ಕಳೆದ 17 ತಿಂಗಳ ಅವಧಿಯಲ್ಲಿ ನಗರದ ಮುಖ್ಯರಸ್ತೆಗಳ ಡಾಂಬರೀಕರಣ ಕಾರ್ಯಗಳಿಗಾಗಿ ರಾಜ್ಯ ಸರ್ಕಾರವು ₹1015 ಕೋಟಿಗಿಂತ ಹೆಚ್ಚು ವೆಚ್ಚ ಮಾಡಿದೆ. ಆದರೆ, ಡಾಂಬರೀಕರಣ ಮಾಡಲಾದ ನಾಲ್ಕೈದು ತಿಂಗಳಲ್ಲಿಯೇ 20 ಸಾವಿರ ರಸ್ತೆ ಗುಂಡಿಗಳು ಸೃಷ್ಟಿಯಾಗಿವೆ.

ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮುಖ್ಯರಸ್ತೆಗಳ ಗುಂಡಿ ಸೃಷ್ಟಿಯಾಗುವ ಮೂಲಕ ಡಾಂಬರೀಕರಣದಲ್ಲಿನ ಅವ್ಯವಹಾರ ಬಯಲಾಗಿದ್ದು, ಹೊಂದಾಣಿಕೆಯ ವಂಚನೆ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ಬೆಂಗಳೂರು ನಗರ ವಕ್ತಾರ ಎನ್.ಆರ್. ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಜೆ. ಜಾರ್ಜ್, ಎಚ್.ಸಿ.ಮಹದೇವಪ್ಪ ಸೇರಿದಂತೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ, ಜಾರಿ ನಿರ್ದೇಶನಾಲಯ ಮತ್ತು ಭ್ರಷ್ಟಚಾರ ನಿಗ್ರಹ ದಳ (ಎಸಿಬಿ), ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಡಾಂಬರೀಕರಣದಲ್ಲಿ ನಡೆದ ಅವ್ಯವಹಾರ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆಗೊಳಿಸಿದ ಮಾತನಾಡಿದ ರಮೇಶ್, ಅತ್ಯಂತ ಕಳಪೆ ಗುಣಮಟ್ಟದ ಡಾಂಬರೀಕರಣದಿಂದಾಗಿ ಹೊಸದಾಗಿ ನಿರ್ಮಿಸಿದ್ದ ಒಟ್ಟು 707 ಕಿ.ಮೀ. ಉದ್ದದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ ಎಂದು ಆರೋಪಿಸಿದರು.

ಬೆಂಗಳೂರು ನಗರದ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ₹7300 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ 2075 ಕೋಟಿ ರು. ರಸ್ತೆ ಸಂಬಂಧಿತ ಕಾಮಗಾರಿಗಾಗಿ ನೀಡಲಾಗಿದೆ. ಈ ಹಣದಲ್ಲಿ ಎಲ್ಲಿಯೂ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ರಸ್ತೆಗಳ ಅಭಿವೃದ್ಧಿ ಹೆಸರಲ್ಲಿ ನೂರಾರು ಕೋಟಿ ಕಮೀಷನ್ ರೂಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್ ಅವರು ಗುತ್ತಿಗೆದಾರರಿಂದ ಪಡೆದಿದ್ದಾರೆ.

ಈ ಅವ್ಯವಹಾರದಲ್ಲಿ ಸಚಿವ ಎಚ್.ಸಿ. ಮಹದೇವಪ್ಪ ಮತ್ತು ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್ ಪಾತ್ರವನ್ನು ಸಹ ಬಯಲು ಮಾಡಿದೆ ಎಂದು ಕಿಡಿಕಾರಿದರು.

ಪೈಥಾನ್ ಯಂತ್ರಗಳ ಮೂಲಕ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ ₹15.20 ಕೋಟಿ ಅಕ್ರಮ ನಡೆದಿರುವ ಬಗ್ಗೆ ಟಿವಿಸಿಸಿ ವರದಿ ತಿಳಿಸಿದೆ. ಪಾಲಿಕೆಯ ಮುಖ್ಯರಸ್ತೆಗಳ ಗುಂಡಿಗಳನ್ನು ಮುಚ್ಚಲು ₹16.88 ಕೋಟಿ ವೆಚ್ಚವಾಗಿದೆ. ಲೋಕೋಪಯೋಗಿ ಇಲಾಖೆಯ ವತಿಯಿಂದ ಪಾಲಿಕೆ ವ್ಯಾಪ್ತಿಯ 217.43 ಕಿ.ಮೀ. ಉದ್ದದ ಮುಖ್ಯರಸ್ತೆಗಳನ್ನು ಅಭಿವೃದ್ಧಿ ಪಡಿಸಲು ₹227.75 ಕೋಟಿ ಮತ್ತು 490 ಕಿ.ಮೀ. ಉದ್ದದ ರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೆ ₹756.11 ಕೋಟಿ ವೆಚ್ಚ ಮಾಡಲಾಗಿದೆ. ಈ ರಸ್ತೆಗಳು ಕಳಪೆ ಕಾಮಗಾರಿಯಿಂದ ಹಾಳಾಗಿದೆ. ಪ್ರಸ್ತುತ ನಗರದಲ್ಲಿ ಪ್ರತಿ ಕಿ.ಮೀ.ಗೆ 29ರಿಂದ 30 ಗುಂಡಿಗಳು ಬಿದ್ದಿವೆ. ರಸ್ತೆ ಕಾಮಗಾರಿ ಗುಣಮಟ್ಟವು ಒಂದೇ ಮಳೆಯಲ್ಲಿ ಬಯಲಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಆಸ್ಟ್ರೇಲಿಯಾದ ಪತ್ರಿಕೆಯೊಂದು ಬೆಂಗಳೂರು ನಗರ ಗುಂಡಿಗಳ ನಗರ ಎಂಬುದಾಗಿ ವರದಿ ಮಾಡಿದೆ. ಅಷ್ಟರ ಮಟ್ಟಿಗೆ ಬೆಂಗಳೂರಿನ ರಸ್ತೆಗಳ ಸ್ಥಿತಿ ಇದೆ. ಐದಾರು ಕೋಟಿ ಖರ್ಚು ಮಾಡಿ ಹೊಸದಾಗಿ ಡಾಂಬರೀಕರಣ ಮಾಡಲಾಗಿದ್ದ ಡಾ.ಬಾಲ ಗಂಗಾಧರನಾಥ ಸ್ವಾಮಿ ಮೇಲ್ಸೇತುವೆ ಕೇವಲ 2 ತಿಂಗಳಲ್ಲಿ ಸಂಪೂರ್ಣವಾಗಿ ಹಾಳಾಗಿದೆ. ಇದಕ್ಕೆ ಕಳಪೆ ಕಾಮಗಾರಿಯೇ ಕಾರಣವೆಂದರು.

ಅಧಿಕಾರ ಮೊಟಕು ಆರೋಪ

ಗುತ್ತಿಗೆದಾರರಿಂದ ತಮ್ಮ ಪಾಲಿನ ಕಮೀಷನ್ ನೇರವಾಗಿ ಪಡೆಯಲು ‘ಅಧಿಕಾರಯುಕ್ತ ಸಮಿತಿ’ಯನ್ನು ರಚಿಸಿ ಪಾಲಿಕೆ ಸಭೆಯ ಎಲ್ಲಾ ಅಧಿಕಾರಗಳನ್ನು ಸರ್ಕಾರ ಕಸಿದುಕೊಂಡಿದೆ.

‘ಅಧಿಕಾರಯುಕ್ತ ಸಮಿತಿ’ ರಚಿಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ ಎಂದು ರಮೇಶ್ ಇದೇ ವೇಳೆ ಕಿಡಿಕಾರಿದರು. ₹10 ಕೋಟಿಗಿಂತಲೂ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಪಾಲಿಕೆಯಿಂದ ಕಸಿದುಕೊಂಡ ರಾಜ್ಯ ಸರ್ಕಾರವು ಎಲ್ಲಾ ಕಾಮಗಾರಿಗಳಿಗೆ ನೇರವಾಗಿ ತಾನೇ ಅನುಮೋದನೆ ನೀಡುವ ಸಲುವಾಗಿ ಅಧಿಕಾರಯುಕ್ತ ಸಮಿತಿ ರಚನೆ ಮಾಡಲಾಗಿದೆ. ಕೆಎಂಸಿ ಕಾಯ್ದೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪಾಲಿಕೆ ಸದಸ್ಯರ, ಪಾಲಿಕೆಯ ಸ್ಥಾಯಿ ಸಮಿತಿಗಳ, ಆಯುಕ್ತರ ಮತ್ತು ಪಾಲಿಕೆ ಸಭೆಯ ಎಲ್ಲಾ ಅಧಿಕಾರಗಳನ್ನು ಕಾನೂನು ಬಾಹಿರವಾಗಿ ಕಿತ್ತುಕೊಳ್ಳಲಾಗಿದೆ.

ಅಧಿಕಾರಯುಕ್ತ ಸಮಿತಿಯಿಂದಾಗಿ ಕಾಮಗಾರಿಗಳ ಅಂದಾಜು ಮೊತ್ತಕ್ಕಿಂತ ಶೇ.30ರಿಂದ ಶೇ.62ರಷ್ಟು ಹೆಚ್ಚಿನ ಮೊತ್ತವನ್ನು ನಮೂದಿಸಲ್ಪಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

click me!