ರಜನೀಕಾಂತ್‌ ಪಕ್ಷದ ಜತೆ ಮೈತ್ರಿಗೆ ಸಿದ್ಧ: ಎಐಎಡಿಎಂಕೆ!

By Kannadaprabha NewsFirst Published Dec 5, 2020, 8:22 AM IST
Highlights

ರಜನೀಕಾಂತ್‌ ಪಕ್ಷದ ಜತೆಮೈತ್ರಿಗೆ ಸಿದ್ಧ: ಎಐಎಡಿಎಂಕೆ| ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು

ಚೆನ್ನೈ(ಡಿ.05):  ಜನವರಿಯಲ್ಲಿ ಹೊಸ ಪಕ್ಷ ಸ್ಥಾಪಿಸಿ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳಲು ಮುಕ್ತವಾಗಿರುವುದಾಗಿ ತಮಿಳುನಾಡಿನ ಉಪಮುಖ್ಯಮಂತ್ರಿ ಹಾಗೂ ಆಡಳಿತಾರೂಢ ಅಣ್ಣಾಡಿಎಂಕೆ ಪಕ್ಷದ ಸಮನ್ವಯಕಾರ ಒ. ಪನ್ನೀರ್‌ ಸೆಲ್ವಂ ಹೇಳಿದ್ದಾರೆ.

ಥೇಣಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕಾರಣ ಪ್ರವೇಶಿಸುವ ರಜನೀಕಾಂತ್‌ ನಿರ್ಧಾರವನ್ನು ಸ್ವಾಗತಿಸುತ್ತೇವೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಅವಕಾಶ ಸಿಕ್ಕರೆ ರಜನೀಕಾಂತ್‌ ಜತೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕೆಲವು ವಾರಗಳ ಹಿಂದೆ ತಮಿಳುನಾಡಿಗೆ ಭೇಟಿ ನೀಡಿದ್ದಾಗ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಬಿಜೆಪಿ ಜತೆ ಮೈತ್ರಿ ಮುಂದುವರಿಸುವುದಾಗಿ ತಿಳಿಸಿದ್ದರು. ಆದರೆ ಇದೀಗ ಪನ್ನೀರ್‌ಸೆಲ್ವಂ ಅವರು ರಜನೀ ಪಕ್ಷದ ಜತೆ ಮೈತ್ರಿ ಮಾತನಾಡಿರುವುದು ಚರ್ಚೆಗೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಐಎಡಿಎಂಕೆ ವಕ್ತಾರ ವೈಗೈಚೆಲವನ್‌ ಅವರು, ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪನ್ನೀರ್‌ಸೆಲ್ವಂ ಅವರು ಸಾಮಾನ್ಯ ಹೇಳಿಕೆ ನೀಡಿದ್ದಾರೆ. ಪ್ರಜಾಸತ್ತಾತ್ಮಕ ದೇಶದಲ್ಲಿ ಯಾರು ಬೇಕಾದರೂ ರಾಜಕೀಯ ಪಕ್ಷ ಸ್ಥಾಪಿಸಬಹುದು ಎಂದು ಎಡಪ್ಪಾಡಿ ಕೂಡ ಈಗಾಗಲೇ ತಿಳಿಸಿದ್ದಾರೆ ಎಂದಿದ್ದಾರೆ.

click me!