ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

By Web DeskFirst Published Dec 8, 2018, 8:13 AM IST
Highlights

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್. ತಾಂತ್ರಿಕ ಶಿಕ್ಷಣ ಪಡೆಯಲು ಹೊರ ರಾಜ್ಯದ ಕಾಲೇಜುಗಳಲ್ಲಿ ಶೇ.5ರಷ್ಟು ಮೀಸಲಾತಿ ನೀಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶನಾಲಯಕ್ಕೆ ಸೂಚನೆ ನೀಡಿದ್ದಾರೆ.

ಬೆಂಗಳೂರು : ಹೊರರಾಜ್ಯದ ತಾಂತ್ರಿಕ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರವೇಶಾತಿಯಲ್ಲಿ ಕಡ್ಡಾಯವಾಗಿ ಶೇ.5ರಷ್ಟುಮೀಸಲಾತಿ ನೀಡಲು ಕ್ರಮ ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶನಾಲಯಕ್ಕೆ ಸೂಚನೆ ನೀಡಿದ್ದಾರೆ.

ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದ ಎಸ್‌.ಜಿ.ಸಿದ್ಧರಾಮಯ್ಯ, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಲ್ಲಿ ಆಡಳಿತ ವ್ಯವಹಾರಗಳು ಕನ್ನಡದಲ್ಲಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ನಿರ್ದೇಶನಾಲಯದ ಅಧೀನದಲ್ಲಿ ಬರುವ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಪ್ರವೇಶಾತಿ ಸಂದರ್ಭದಲ್ಲಿ ಶೇ.5 ರಷ್ಟುಮೀಸಲಾತಿ ನೀಡುತ್ತಿಲ್ಲ. ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಸೂಕ್ತ ಸುತ್ತೋಲೆ ಮೂಲಕ ತಮ್ಮ ಅಧೀನದಲ್ಲಿ ಬರುವ ರಾಜ್ಯದ ಎಲ್ಲ ಎಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳಿಗೆ ಮೀಸಲಾತಿ ನಿಯಮ ಪಾಲನೆ ಮಾಡುವಂತೆ ನಿರ್ದೇಶನ ನೀಡಬೇಕೆಂದು ಸೂಚನೆ ನೀಡಿದರು.

ಕಾಲೇಜುಗಳ ಅಂತರ್ಜಾಲ ತಾಣವನ್ನು ಕಡ್ಡಾಯವಾಗಿ ಕನ್ನಡೀಕರಣಗೊಳಿಸಲು ನಿರ್ದೇಶನ ನೀಡಿ, ಕನ್ನಡ ಆಡಳಿತ, ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಜಾರಿಗೆ ತರದ ಕಾಲೇಜುಗಳ ಪರವಾನಗಿ ರದ್ದುಗೊಳಿಸಿ, ವಿದ್ಯಾರ್ಥಿಗಳಿಗೆ ನೀಡುವ ಯೋಜನಾ ಕಾರ್ಯ (ಪ್ರಾಜೆಕ್ಟ್ ವರ್ಕ್) ಗಳಲ್ಲಿ ಕನ್ನಡ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಯೋಜನೆ ಕಾರ್ಯಗಳನ್ನು ತೆಗೆದುಕೊಳ್ಳಲು ಉತ್ತೇಜನ ನೀಡಬೇಕು. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದರ ಜೊತೆಗೆ ಅಂಕಪಟ್ಟಿಯನ್ನು ಕನ್ನಡದಲ್ಲಿಯೂ ಮುದ್ರಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಎಚ್‌.ಯು.ತಳವಾರ್‌, ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌, ಹಂಪಿ ವಿವಿಯ ನಿವೃತ್ತ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯರಾದ ಪ್ರಭಾಕರ್‌ ಪಟೇಲ್‌, ಗಿರೀಶ್‌ ಪಟೇಲ್‌ ಇದ್ದರು.

(ಸಾಂದರ್ಬಿಕ ಚಿತ್ರ)

click me!