ಜೈಪುರ ಸಾಹಿತ್ಯ ಸಮ್ಮೇಳನದ ವಿಶೇಷತೆಗಳಿವು

By Web Desk  |  First Published Jan 28, 2019, 5:47 PM IST

ಲಿಟರರೀ ಫೆಸ್ಟುಗಳ ಪಿತಾಮಹ ಜೈಪುರ ಲಿಟರರಿ ಫೆಸ್ಟಿವಲ್‌. ಸಾರ್ವಜನಿಕರಿಗೆ ಉಚಿತ ಪ್ರವೇಶ ಎಂಬ ಹೆಗ್ಗಳಿಕೆಯೊಂದಿಗೆ ಆರಂಭವಾದ ಜೈಪುರ ಲಿಟರರಿ ಫೆಸ್ಟಿವಲ್‌, ಜೆಎಲ್‌ಎಫ್‌, ಇದೀಗ ಹನ್ನೆರಡನೆಯ ಆವೃತ್ತಿಗೆ ಬಂದು ನಿಂತಿದೆ. ಈ ವರ್ಷ ಜನವರಿ 24ರಿಂದ 28 ರವರೆಗೆ ಆಯೋಜಿಸಲಾಗಿತ್ತು. 


ಬೆಂಗಳೂರು (ಜ. 28): 78 ರ ಜೆಫ್ರಿ ಆರ್ಚರ್ ಅಸಾಧ್ಯ ಹುಮ್ಮಸ್ಸಿನ ಲೇಖಕ. ಅವರು ಬರೆದ ‘ನಾಟ್ ಎ ಪೆನ್ನಿ ಮೋರ್, ನಾಟ್ ಎ ಪೆನ್ನಿ ಲೆಸ್’, ‘ಕೇನ್ ಅಂಡ್ ಏಬೆಲ್’ ಮಾರಾಟದಲ್ಲಿ ಸ್ಥಾಪಿಸಿದ ದಾಖಲೆಯನ್ನು ಯಾವ ಪುಸ್ತಕಗಳೂ ಮುರಿದಿಲ್ಲ. ಅವರ ಮೊದಲ ಪುಸ್ತಕದ ಮೂವತ್ತೇಳು ಲಕ್ಷ ಪ್ರತಿಗಳು ಮಾರಾಟವಾಗಿವೆ.

- ಜೆಎಲ್‌ಎಫ್ ವೇದಿಕೆಗೆ ಬಂದ ಜೆಫ್ರಿ ಪ್ರತಿ ಪ್ರಶ್ನೆ ಕೇಳಿದಾಗಲೂ ಥಟ್ಟನೆ ಎದ್ದು ನಿಂತು ಉತ್ತರಿಸುತ್ತಿದ್ದರು. ಎತ್ತರದ ದನಿಯಲ್ಲಿಯೇ ಮಾತಾಡುತ್ತಿದ್ದರು. ತನ್ನಲ್ಲಿ ರಹಸ್ಯವೇ ಇಲ್ಲ ಎಂಬಂತೆ ಏನು ಕೇಳಿದರೂ ಉತ್ತರಿಸುತ್ತಿದ್ದರು. ಅವರ ಕೆಲವು ಮಾತುಗಳು ಇಲ್ಲಿ ಹೀಗೆ.  

Latest Videos

undefined

- ಲೇಖಕ ತನಗೆ ಗೊತ್ತಿರುವುದನ್ನೇ ಬರೆಯಬೇಕು. ಭಾರತಕ್ಕೆ ನಾನು ಇಪ್ಪತ್ತು ಸಲ ಬಂದಿದ್ದೇನೆ. ಭಾರತದ ಬಗ್ಗೆ ಬರಿ ಅಂದರೆ ಬರೆಯಲಾರೆ. ತಾನು ಎಲ್ಲಿಗೆ ಹೋಗುತ್ತೇನೆ ಅನ್ನುವುದು ನನಗೆ ಗೊತ್ತಿರಬೇಕು. ನನಗೇ ಗೊತ್ತಿಲ್ಲದೇ ಹೋದರೆ ನಿಮಗಾದರೂ ಹೇಗೆ ಗೊತ್ತಾಗಲು ಸಾಧ್ಯ?- ಮುಂಬಯಿಗೆ ಬಂದಿದ್ದೆ. ವಿಮಾನ ನಿಲ್ದಾಣದಿಂದ ಹೋಟೆಲಿಗೆ ಹೋಗುತ್ತಿದ್ದೆ. ಒಬ್ಬ ಹುಡುಗ ಕಾರಿನ ಗಾಜು ತಟ್ಟಿ, ಲೇಟೆಸ್ಟ್ ಜೆಫ್ರಿ ಆರ್ಚರ್ ಓದಿದ್ದೀರಾ ಕೇಳಿದ. ನಾನೇ ಲೇಟೆಸ್ಟ್ ಜೆಫ್ರಿ ಆರ್ಚರ್ ಅಂತ ಹೇಳಿದೆ.

- ಗುಣಮಟ್ಟ ಮತ್ತು ಅವಕಾಶ ಎಂಬ ಪ್ರಶ್ನೆಗಳು ಎದುರಾದಾಗ ನಾನು ಅವಕಾಶಕ್ಕೇ ಪ್ರಾಧಾನ್ಯ ಕೊಡುತ್ತೇನೆ. ಮೊದಲು ಅವಕಾಶ ಕೊಡಿ, ಆಮೇಲೆ ಗುಣಮಟ್ಟ ಸುಧಾರಿಸಬಹುದು.
- ನಾನು ಇಂಜಿನಿಯರ್ ಆಗಬಹುದಿತ್ತು, ಡಾಕ್ಟರ್ ಆಗಬಹುದಿತ್ತು. ಆದರೆ ಕತೆಗಾರ ಆಗುತ್ತೇನೆ ಅಂದೆ. ಅಪ್ಪ ಸರಿ ಅಂದರು. ಎಂಥಾ ದೊಡ್ಡ ಸ್ವಾತಂತ್ರ್ಯ ಅದು. ಒಂದಾನೊಂದು ಕಾಲದಲ್ಲ  ಅಂತ ನಾನು ಬರೆಯುತ್ತಾ ಸುಖವಾಗಿದ್ದೇನೆ. ಓದುಗರು ಪುಟ ತಿರುಗಿಸುತ್ತಲೇ\ ಇದ್ದಾರೆ.

- ನನಗೆ 20-20 ಕ್ರಿಕೆಟ್ ಇಷ್ಟವಿಲ್ಲ. ಒನ್ ಡೇ ಮ್ಯಾಚ್ ಹೇಗಾದರೂ ಸಹಿಸಿಕೊಂಡೇನು. ಕ್ರಿಕೆಟ್ ಅಂದರೆ ಟೆಸ್ಟ್ ಮ್ಯಾಚು. ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಇಡೀ ದಿನ ಆಸ್ಟ್ರೇಲಿಯಾ ವಿರುದ್ಧ ಆಡಿ ಮಾರನೇ ದಿನವೂ ಆಟ ಮುಂದುವರಿಸುವುದನ್ನು ನೋಡುವುದೇ
ಒಂದು ಸುಖ.

- ನನಗೆ ಆರ್‌ಕೆ ನಾರಾಯಣ್ ತುಂಬ ಇಷ್ಟ. ಅವರು ಹಳ್ಳಿಯ ಚಿತ್ರಗಳನ್ನು ಸೊಗಸಾಗಿ ಬರೆಯುತ್ತಾರೆ. ಅಂಥವರಿಗೆ ನೊಬೆಲ್ ಪ್ರಶಸ್ತಿ ಬರಬೇಕಾಗಿತ್ತು. ಹಳ್ಳಿಯ ಪೋಸ್ಟ್ ಮ್ಯಾನು, ಹಾವು ಹಿಡಿಯುವವನು, ಸ್ವೀಟು ಮಾರುವವರನ್ನಿಟ್ಟುಕೊಂಡು ಕತೆ ಬರೆದ ಧೀಮಂತ ಅವರು.
- ಭಾರತದಲ್ಲಿ ಅತ್ಯಂತ ಕಷ್ಟದ ಸಂಗತಿ ಎಂದರೆ ಟ್ರಾಫಿಕ್ಕು. ಅಮೆರಿಕಾದ ಪ್ರೆಸಿಡೆಂಟ್ ಆಗಿ ಸುಖವಾಗಿರಬಹುದು. ಭಾರತದಲ್ಲಿ ಸಾರಿಗೆ ಸಚಿವನಾಗಿ ಮಾತ್ರ ಹುಟ್ಟಲೇಬಾರದು. ಇಲ್ಲಿಯ ಹೆತ್ತವರು ಮಕ್ಕಳಿಗೆ, ಕಾರು ಓಡಿಸುವ ರಸ್ತೆಯ ಬಿಳಿ ಪಟ್ಟಿ, ಕಾರಿನ ಎರಡೂ ಚಕ್ರದ ನಡುವೆ ಇರಬೇಕು ಅಂತ ಯಾಕಾದರೂ ಕಲಿಸುತ್ತಾರೋ?
- ವಿಮರ್ಶಕರು ಏನು ಹೇಳುತ್ತಾರೆ ಅಂತ ನನಗೆ ಯಾಕೆ ಮುಖ್ಯವಾಗಬೇಕು. ನನ್ನ ಉದ್ಯೋಗ ನಾನು ಮಾಡುತ್ತೇನೆ, ಅವರ ಉದ್ಯೋಗ ಅವರು ಮಾಡಲಿ.
- ಕೆಲವೊಂದು ವಸ್ತುವನ್ನು ಕಾದಂಬರಿ ಮಾಡಲಾಗುವುದಿಲ್ಲ. ಅಂಥದ್ದನ್ನು ಸಣ್ಣ ಕತೆಯಾಗಿಯೇ ಬರೆಯಬೇಕು.
- ಬರೆಯಲು ಕೂತಾಗ ಅವರು ಮೆಚ್ಚುತ್ತಾರೋ ಇವರು ಒಪ್ಪುತ್ತಾರೋ ಅಂತೆಲ್ಲ ಯೋಚನೆ ಮಾಡುವುದಕ್ಕೆ ಹೋಗುವುದಿಲ್ಲ.

- ಹಾಗೆ ಯೋಚನೆ ಮಾಡಿದ ತಕ್ಷಣ ನಮ್ಮತನ ಹೋಗಿ ಯಾರಿಗೋಸ್ಕರವೋ ಬರೆಯಲು ಹೋಗುತ್ತೇವೆ.

ಈಗಿನ ಕ್ರಿಕೆಟರುಗಳಿಗೆ ಪ್ರೀತಿಯಿಲ್ಲ

ನಾನು ಬೆಂಗಳೂರಿಗೆ ಹೋಗಿದ್ದಾಗ ಜಿಆರ್ ವಿಶ್ವನಾಥನ್ ಅವರಿಗೆ ಪೋನ್ ಮಾಡಿ ನಿಮ್ಮನ್ನು ಸಂದರ್ಶಿಸಬೇಕು ಅಂತ ಹೇಳಿದೆ. ಎಲ್ಲಿಗೆ ಬರಬೇಕು ಅಂತ ಕೇಳಿದೆ. ನೀವು ನಮ್ಮೂರಿಗೆ ಬಂದಿದ್ದೀರಿ, ನೀವ್ಯಾಕೆ ಬರೋಕೆ ಹೋಗ್ತೀರಿ, ನಾನೇ ಬರ್ತೀನಿ ಅಂತ ಹೇಳಿದರು. ಕ್ರಿಕೆಟ್ ಕ್ಲಬ್ಬಿಗೆ ಕರೆದುಕೊಂಡು ಹೋದರು. ಪ್ರೀತಿಯಿಂದ ಮಾತಾಡಿದರು. ಈಗಿನ ಕ್ರಿಕೆಟರುಗಳಿಂದ ಅಂಥ ವರ್ತನೆಯನ್ನು ನಿರೀಕ್ಷೆ ಮಾಡುವ ಹಾಗಿಲ್ಲ. ಅವರೆಲ್ಲ ತಮ್ಮ ಅಹಂಕಾರ ಮತ್ತು ಜನಪ್ರಿಯತೆಯ ಪಂಜರದಲ್ಲಿ ಬಂದಿಯಾಗಿದ್ದಾರೆ ಎಂದು ರಾಜ್ ದೀಪ್ ಸರ್ದೇಸಾಯಿ ಹೇಳಿದ್ದು ಅನೇಕರಿಗೆ ಇಷ್ಟವಾಗಲಿಲ್ಲ. ವೇದಿಕೆಯ ಮೇಲಿದ್ದ ಕೆಲವರೇ, ಹಾಗೆಲ್ಲ ಹೇಳಬೇಡಿ, ಈಗ ಕಾಲ ಬದಲಾಗಿದೆ. ಅವರು ತಮ್ಮದೇ ರೀತಿಯಲ್ಲಿ ವಿನಯವಂತರಾಗಿದ್ದಾರೆ ಎಂದು ಸಮರ್ಥಿಸಿಕೊಂಡರು.  

ಶಶಿ ತರೂರ್ ಹವಾ

ಎಲ್ಲಾ ವೇದಿಕೆಗಳಲ್ಲೂ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಶಶಿ ತರೂರ್ ತಮ್ಮ ಮಾತುಗಳಿಂದ ಗಮನ ಸೆಳೆದರು. ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರರಾದರು. ಜೈಪುರ ಸಾಹಿತ್ಯೋತ್ಸವದ ಸೂಪರ್ ಸ್ಟಾರ್ ಎಂದೇ ಕರೆಸಿಕೊಂಡ ಶಶಿ ತರೂರ್, ರಾಜಕಾರಣ, ಕ್ರಿಕೆಟ್, ಮೋದಿ, ಹಿಂದುತ್ವ, ಶಬರಿಮಲೆ- ಹೀಗೆ ಎಲ್ಲದರ ಬಗ್ಗೆಯೂ ಮಾತಾಡಿದರು. ಅಷ್ಟು ಸಾಲದೆಂಬಂತೆ ವೇದಿಕೆಯಲ್ಲೂ ಬಂದು ಕುಳಿತರು. ಅಲ್ಲೂ ಮತ್ತೆ ಅನೇಕರ ಕಾಲೆಳೆದರು. ಕ್ರಿಕೆಟ್ ಮತ್ತು ಸಿನಿಮಾವನ್ನು ಹೋಲಿಸಿ ಮಾತಾಡಿದರು. ಇಡೀ ಸಾಹಿತ್ಯ ಹಬ್ಬ ತರೂರ್ ಮಯ ಆಗಿತ್ತು. ಒಂದು ಸಂವಾದದ ಹೆಸರೇ ತರೂರಿಸಮ್ ಅಂತ ಇದ್ದದ್ದು ಕೂಡ ಸಾಂಕೇತಿಕವಾಗಿತ್ತು.

ಪುಸ್ತಕದ ಅಂಗಡಿ

ಜೈಪುರ ಸಾಹಿತ್ಯ ಸಮ್ಮೇಳನದ ಪುಸ್ತಕ ಅಂಗಡಿ ಅಚ್ಚುಕಟ್ಟು. ಒಳಗೆ ಹೋದರೆ ನೀಟಾಗಿ ಜೋಡಿಸಿದ ಪುಸ್ತಕ. ಮುಟ್ಟಲೂ ಭಯವಾಗುವಷ್ಟು ಸೊಗಸಾಗಿ ಪೇರಿಸಿಟ್ಟ ಪುಸ್ತಕಗಳು. ಹಾಗಂತ ಅಲ್ಲಿ ಎಲ್ಲರ ಪುಸ್ತಕಗಳನ್ನೂ ಇಡುವಂತಿಲ್ಲ. ಯಾರ ಪುಸ್ತಕ ಇರಬೇಕು ಎಂದು ಜೆಎಲ್‌ಎಫ್ ನಿರ್ಧರಿಸುತ್ತದೆ. ಯಾರೆಲ್ಲ ಅಲ್ಲಿ ಭಾಗವಹಿಸುತ್ತಾರೆ, ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ ಅಂತ ನೋಡಿಕೊಂಡು ಅವರ ಪುಸ್ತಕಗಳನ್ನಷ್ಟೇ ಮಾರಲಾಗುತ್ತದೆ. ಅಲ್ಲಿರುವ ಪುಸ್ತಕಗಳ ಕುರಿತೇ ಚರ್ಚೆಗಳೂ ನಡೆಯುತ್ತವೆ. ಗುಲ್ಜಾರ್ ಮತ್ತು ಮೇಘನಾ ಬಂದಿದ್ದಾರೆ ಅಂದರೆ ಮೇಘನಾ ಬರೆದ ಬಿಕಾಸ್ ಹಿ ಈಸ್ ಪುಸ್ತಕದ ಕುರಿತೇ ಚರ್ಚೆಯಾಗುತ್ತದೆ.

ಪವನ್ ಶರ್ಮ ಇದ್ದಾರೆ ಎಂದಾದರೆ ಅವರು ಬರೆದ ಆದಿ ಶಂಕರಾಚಾರ್ಯ ಪುಸ್ತಕದ ಕುರಿತೇ ಮಾತಾಗುತ್ತದೆ. ಜಿಯಾ ಜಲೇ ಎಂಬ ಹಾಡಿನ ಹಿಂದಿನ ಕತೆಗಳ ಕುರಿತು ಚರ್ಚೆಯಾಗುತ್ತಿದ್ದರೆ ಅದೇ ಹೆಸರಿನ ಪುಸ್ತಕ ಮಾರಾಟಕ್ಕಿರುತ್ತದೆ. ಹೀಗಾಗಿ ಜೈಪುರ ಸಾಹಿತ್ಯ ಹಬ್ಬ ಎಚ್ಚರಿಕೆಯಿಂದ ಲೇಖಕರನ್ನೂ ಅವರ ಪುಸ್ತಕಗಳನ್ನೂ ಮಾರಾಟ ಮಾಡುವ ಒಂದು ವೇದಿಕೆಯೂ ಆಗಿ ರೂಪುಗೊಂಡಿದೆ. ಆ ವರ್ಷ ಪುಸ್ತಕ ಪ್ರಕಟವಾಗದೇ ಹೋದವರೂ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ಸಿಗುವುದು ಅಪರೂಪ. ಅದರಲ್ಲೂ ಇಂಗ್ಲಿಷಿನಲ್ಲಿ ಪುಸ್ತಕ ಬರೆದವರಿಗೆ ಮಾತ್ರ ಅಲ್ಲಿ ಪ್ರವೇಶ. ಕನಿಷ್ಠ ಇಂಗ್ಲಿಷಿಗೆ ಅನುವಾದಗೊಳ್ಳದೇ ಹೋದರೆ ಅಂಥವರಿಗೆ ಸ್ಥಳವಿಲ್ಲ.

ಬರೆಯುವವರ ಕಷ್ಟ ಸುಖ

ಟಿಪ್ಪಣಿಗಳೇ ಕಾದಂಬರಿಯ ಜೀವಾಳ

‘ಲೈಫ್ ಆಫ್ ಪೈ’ ಬರೆದ ಯಾನ್ ಮಾರ್ಟೆಲ್ ತಾನು ಬರಹಕ್ಕೆ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತೇನೆ ಅನ್ನುವುದನ್ನು ಹೀಗೆ ವಿವರಿಸಿದರು: ನನ್ನಲ್ಲೊಂದು ಐಡಿಯಾ ಇರುತ್ತದೆ. ಅದನ್ನು ಬೆನ್ನಟ್ಟುತ್ತಾ ಹೋಗುತ್ತೇನೆ. ಅದಕ್ಕೆ ಬೇಕಾದ ಮಾಹಿತಿಗಳನ್ನು ಹುಡುಕುತ್ತೇನೆ. ಸಾಕಷ್ಟು ರೀಸರ್ಚ್ ಮಾಡುತ್ತೇನೆ. ಒಂದು ಕಾದಂಬರಿ ಬರೆಯಲು ನೋಟ್ಸ್ ಮಾಡಿಕೊಳ್ಳುತ್ತೇನೆ. ಆ ನೋಟ್ಸುಗಳು ಪುಟ್ಟ ಪುಟ್ಟ ಹಾಳೆಗಳಲ್ಲಿ ಇರುತ್ತವೆ. ಆ ಹಾಳೆಗಳನ್ನು ಅವರು ನೆಲದ ಉದ್ದಕ್ಕೂ ಹರಡುತ್ತಾರೆ. ಅದನ್ನು ಹರಡಿದ ನಂತರ ಆ ಪೋಸ್ಟ್ ಕಾರ್ಡ್ ಸೈಜಿನ ನೋಟ್ಸುಗಳನ್ನು ಒಂದು ಅನುಕ್ರಮದಲ್ಲಿ ಜೋಡಿಸಿಡುತ್ತಾರೆ. ಕೆಲವೊಮ್ಮೆ ಹತ್ತಾರು ನೋಟ್ಸುಗಳು ಸೇರಿ ಒಂದು ಪದವನ್ನಷ್ಟೇ ಸೃಷ್ಟಿಸಬಹುದು.

ಯಾನ್ ಮಾರ್ಟೆಲ್ ಮೊದಲೇ ಕಾದಂಬರಿಯ ಶುರು ಯಾವುದು ಕೊನೆ ಯಾವುದು ಎಂದು ನಿರ್ಧರಿಸುತ್ತಾರೆ. ಹಾಗೆ ನಿರ್ಧರಿಸಿದ ನಂತರ ಮಧ್ಯದ ಭಾಗವನ್ನು ತುಂಬುತ್ತಾ ಬರುತ್ತಾರಂತೆ. ಅದಕ್ಕೆ ಅವರ ಸಂಶೋಧನೆ ನೆರವಾಗುತ್ತದೆ. ಯಾನ್ ಪ್ರಕಾರ ಓದುಗನಿಗೆ ಇಷ್ಟವಾಗುವುದು ಭಾವನಾತ್ಮಕ ಅಂಶಗಳೇ ಹೊರತು ಮಾಹಿತಿಗಳಾಗಲೀ ವಿವರಗಳಾಗಲೀ ಅಲ್ಲ. ವಿವರಗಳು ತಪ್ಪಿದ್ದರೂ ಆತ ಕ್ಷಮಿಸುತ್ತಾನೆ. ಒಮ್ಮೆ ಭಾವನಾತ್ಮಕವಾಗಿ ಕನೆಕ್ಟ್ ಆಗಿಬಿಟ್ಟರೆ ಸಾಕು, ಮಿಕ್ಕಿದ್ದೆಲ್ಲ ಗೌಣ. ಲೈಫ್ ಆಫ್ ಪೈ
ಕಾದಂಬರಿಯಲ್ಲಿ ಒಂದು ಮುಸ್ಲಿಂ ಪಾತ್ರಕ್ಕೆ ಯಾನ್ ಹಿಂದು ಹೆಸರಿಟ್ಟಿದ್ದರಂತೆ. ಆದರೆ ಯಾರೂ ಅದರ ಬಗ್ಗೆ ಕೇಳಲೇ ಇಲ್ಲವಂತೆ. ಅವರವರೇ ಅದಕ್ಕೆ ಬೇಕಾದ ಸಮರ್ಥನೆ ಕೊಟ್ಟುಕೊಂಡರು ಅನ್ನುತ್ತಾರೆ ಅವರು.

ರಾತ್ರಿ ಕೂತು ಬರೆಯುತ್ತೇನೆ

ಈಜಿಪ್ಟಿನ ಕಾದಂಬರಿಗಾರ್ತಿ ಅಹ್ದಾಫ್ ಸೋಯಿಫ್ ರಾತ್ರಿ ಕೂತು ಬರೆಯುತ್ತಾರೆ. ನನಗಿಬ್ಬರು ಮಕ್ಕಳಿದ್ದಾರೆ. ಹಗಲು ಕೆಲಸಕ್ಕೆ ಹೋಗುತ್ತೇನೆ. ಮಕ್ಕಳ ಆರೈಕೆ, ನನ್ನ ಉದ್ಯೋಗ ಮುಗಿಯುವ ಹೊತ್ತಿಗೆ ರಾತ್ರಿ ಎಂಟೂವರೆ ಆಗಿರುತ್ತದೆ. ಮಕ್ಕಳು ಮಲಗಿದ ನಂತರ ಸುಸ್ತಾಗಿದ್ದರೂ ಬರೆಯಲು ಶುರು ಮಾಡುತ್ತೇನೆ. ರಾತ್ರಿ 12 ರ ತನಕ ಬರೆಯುವ ಟೇಬಲ್ಲಿನ ಮುಂದೆಯೇ ಕೂತಿರಬೇಕು ಅಂತ ನಾನು ನಿರ್ಧಾರ ಮಾಡಿಬಿಟ್ಟಿದ್ದೇನೆ. ಹಾಗೆ ಕೂತಿದ್ದರೆ ಒಮ್ಮೊಮ್ಮೆ ಬರೆಯುವ ಉತ್ಸಾಹ ಬಂದುಬಿಡುತ್ತದೆ. ಬರೆಯಲು ಶುರುಮಾಡಿದರೆ ರಾತ್ರಿ ಮೂರು ಗಂಟೆಯ ತನಕ ಬರೆದೇ ಬರೆಯುತ್ತೇನೆ. ನಂತರ ಆರೂವರೆಗೆ ಏಳುತ್ತೇನೆ. ನನಗೆ ಅಷ್ಟು ನಿದ್ದೆ ಸಾಕಾಗುತ್ತದೆ ಅಂತ ಗೊತ್ತಾಗಿಬಿಟ್ಟಿದೆ. ನನ್ನಂಥವರು ರಾತ್ರಿ ಕೂತು ಬರೆಯದೇ ಬೇರೆ ನಿರ್ವಾಹವೇ ಇಲ್ಲ. ನನ್ನ ಕುಟುಂಬ ಮತ್ತು ಉದ್ಯೋಗ ನನಗೆ ರಾತ್ರಿಯೇ ಬರೆಯುವ ಅನಿವಾರ್ಯತೆ ಕಲ್ಪಿಸಿದೆ.

ಎಲ್ಲವೂ ಗೊತ್ತಿರಬೇಕು

ಸ್ಪ್ಯಾನಿಶ್ ಕಾದಂಬರಿಕಾರ ಆಲ್ವಾರೋ ಎನ್ರಿಗ್ ಪ್ರಕಾರ ಬರಹಗಾರನಿಗೆ ತನ್ನ ಕಾಲದ ಬಗ್ಗೆ ಮಾತ್ರವಲ್ಲ, ಚರಿತ್ರೆಯ ಕುರಿತೂ ಎಲ್ಲವೂ ಗೊತ್ತಿರಬೇಕು. ರೋಮನ್ ಕುರಿತ ಕಾದಂಬರಿ ಬರೆಯುವವರಿಗೆ ರೋಮನ್ನರು ಹೇಗೆ ಶೂ ಲೇಸ್ ಕಟ್ಟುತ್ತಾರೆ ಎಂಬ ಸಣ್ಣ ವಿವರವೂ ತಿಳಿದಿರಬೇಕು. ಅದು ಕಾದಂಬರಿಯಲ್ಲಿ ಬರುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಆ ವಿವರಗಳಂತೂ ಅವರಿಗೆ ತಿಳಿದಿರಲೇಬೇಕು. ಸಣ್ಣ ಸಣ್ಣ ವಿವರಗಳೇ ಕಾದಂಬರಿಯನ್ನು ಕಟ್ಟಿಕೊಡುತ್ತವೆ.

ದೇವರು ಮತ್ತು ಪ್ರಾಣಿಗಳ ಜಗತ್ತಿನ ಆಕರ್ಷಣೆ

ಯಾನ್ ಮಾರ್ಟೆಲ್ ಲೈಫ್ ಆಫ್ ಪೈ ಬರೆಯಲು ಹೊರಟಾಗ ಅವರನ್ನು ಆಕರ್ಷಿಸಿದ್ದು ತನಗೆ ಗೊತ್ತಿಲ್ಲದ ಜಗತ್ತು. ಪ್ರಾಣಿಗಳೂ ದೇವರೂ ಇಲ್ಲದ ಕೆನಡಾದಿಂದ ಬಂದ ನಾನು ಪ್ರಾಣಿಗಳೂ ದೇವರೂ ಸಮಾನವಾಗಿ ಗೌರವಿಸಲ್ಪಡುವ ಭಾರತವನ್ನು ಕಂಡಾಗ ಬೆರಗಾಗಿ ಹೋದೆ. ಇಲ್ಲಿ ಆನೆಯ ಮುಖ ಹೊತ್ತ ಗಣೇಶನನ್ನು ಕಂಡೆ. ಹುಲಿ, ಹಾವು ಎಲ್ಲವೂ ದೇವರಾಗುವುದನ್ನು ಕಂಡೆ. ಅವೆಲ್ಲ ಸೇರಿ ಲೈಫ್ ಆಫ್ ಪೈಯ ಹುಲಿ ನನ್ನೊಳಗೆ ಹುಟ್ಟಿತೆಂದೇ ಹೇಳಬೇಕು. 

-ಜೋಗಿ 
 

 

click me!