ಖ್ಯಾತ ಲೈಂಗಿಕ ಅಲ್ಪಸಂಖ್ಯಾತೆ ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥನ ಈ ವಾರ ಪ್ರಕಟವಾಗುತ್ತಿದೆ. ಬಹುರೂಪಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ದೇಶ ವಿದೇಶಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಅರಿವು ಮೂಡಿಸಿದ ಅಕ್ಕಯ್ ಪದ್ಮಶಾಲಿ ಅವರ ಆತ್ಮಕಥನದ ಆಯ್ದ ಭಾಗ ಇಲ್ಲಿದೆ
ನಮ್ಮ ಮನೆ ಬೆಂಗಳೂರಿನ ಮೈಸೂರು ರಸ್ತೆ ಬದಿಯಲ್ಲಿರುವ ಚಾಮರಾಜ ಪೇಟೆಯ ಟೋಲ್‌ಗೇಟಿನಲ್ಲಿತ್ತು. ಅಲ್ಲಿ ಬ್ರಾಹ್ಮಣರದ್ದೇ ಸಾಮ್ರಾಜ್ಯ. ತಂದೆ ರಕ್ಷಣಾ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದರಾದ್ದರಿಂದ ಒಳ್ಳೆಯ ಸಂಬಳ ಸಿಗುತ್ತಿತ್ತು. ಅವರಂತೂ ಧಾರಾಳ ವ್ಯಕ್ತಿಯಾಗಿದ್ದರು. ಸಾಲ ತೆಗೆದುಕೊಳ್ಳುವ ಅನೇಕರಿಗೆ ಜಾಮೀನು ನೀಡುತ್ತಿದ್ದರು. ಅವರು ಬ್ಯಾಂಕಿಗೆ ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿಸದಿದ್ದಾಗ, ತಂದೆಯ ಹಣ ಕಡಿತಗೊಳಿಸಲಾಗುತ್ತಿತ್ತು. ಮೂವತ್ತು ವರ್ಷಗಳಿಂದ ಗಳಿಸುತ್ತಿದ್ದ ಸಂಬಳ ಏನೇ ಇರಲಿ, ಅದರಲ್ಲಿ ಬಹುಪಾಲು – 65% ರಷ್ಟು ಹಣ ಅತ್ತಲೇ ಹೋಗಿತ್ತು. ಇದೇ ನಮ್ಮ ಕಡುಬಡತನಕ್ಕೂ ಕಾರಣವಾಯಿತೆಂದರೆ ಯಾರು ನಂಬುವುದಿಲ್ಲ! ನಮ್ಮ ಇಡೀ ಕುಟುಂಬವೇ ಚೂರಾಯಿತು. ಪ್ರತಿದಿನ, ಅಪ್ಪ-ಅಮ್ಮ ಜಗಳವಾಡುತ್ತಿದ್ದರು.
ನಾವು ಕಡು ಬಡವರಾದೆವು. ತಿನ್ನಲು ಸಾಕಷ್ಟು ಊಟ, ತೊಡಲು ಬಟ್ಟೆ ಇರುತ್ತಿರಲಿಲ್ಲ. ಕೆಲವೊಮ್ಮೆ ತಿಂಗಳುಗಳೇ ಕಳೆದು ಹೋದರೂ ಶಾಲಾ ಫೀಸು ಕಟ್ಟಲಾಗದೆ ಅನೇಕ ತೊಂದರೆಗಳನ್ನು ಎದುರಿಸಿದ್ದೇನೆ. ಆ ಸನ್ನಿವೇಶದಲ್ಲಿ ಬ್ರಾಹ್ಮಣ ಟೀಚರ್ ಎಂ ಚಂದ್ರಮತಿ ಎನ್ನುವವರು ಒಮ್ಮೆ ನನಗೆ ಬೆಂಬಲಾಗಿ ನಿಂತು, ಫೀಸು ಕಟ್ಟಿದ್ದರು
undefined
ಕೆಲವೊಮ್ಮೆ ಪರಿಸ್ಥಿತಿ ಎಷ್ಟು ಹದೆಗಟ್ಟಿರುತ್ತಿತ್ತೆಂದರೆ, ಸತ್ತ ಹೆಣಕ್ಕೆ ಜನ ಇಡುತ್ತಿದ್ದ ಎಡೆಯನ್ನೂ ತಿಂದಿದ್ದಿದೆ. ಅಂತ್ಯಕ್ರಿಯೆ ನಡೆಯುತ್ತಿದ್ದಲ್ಲಿಗೆ ಹೋಗಿ ಆ ಎಡೆಯನ್ನು ಮನೆಗೆ ತಂದು, ಒಡಹುಟ್ಟಿದವರೊಂದಿಗೆ ಹಂಚಿಕೊಳ್ಳುತ್ತಿದ್ದೆ. ಮೃತದೇಹಗಳ ಮೇಲೆ ಇಡುತ್ತಿದ್ದ ಹಣ ತಂದು ಬಂದು, ಮನೆಯಲ್ಲಿ ಹಾಲು-ಸಕ್ಕರೆ ತರಲು ಕೊಡುತ್ತಿದ್ದೆ.
ಶಾಲೆಯಲ್ಲಿ, ಎಲ್ಲರೂ ತಮ್ಮ ತಮ್ಮ ಸ್ನೇಹಿತರೊಂದಿಗೆ ಕುಳಿತು ಮಾತನಾಡಲು ಹೋದರೆಂದರೆ, ಅಲ್ಲಿ ಹುಡುಗರ ಬೆಂಚ್, ಹುಡುಗಿಯರ ಬೆಂಚ್ ಇದ್ದವು. ನನಗೆ ಹುಡುಗರ ಬೆಂಚಿನಲ್ಲೇ ಕೂರಲು ಒತ್ತಾಯಿಸಲಾಗುತ್ತಿತ್ತು. ತರಗತಿಯಲ್ಲಿ ಟೀಚರ್ ಕೇಳಿದ ಪ್ರಶ್ನೆಗೆ; ನಾವು ನಿಂತು, ಎದೆಗೆ ಅಡ್ಡಲಾಗಿ ನಮ್ಮ ಕೈಗಳನ್ನು ಮಡಚಿಕೊಂಡು ಉತ್ತರಿಸಬೇಕಾಗಿತ್ತು. “ಭಾರತದ ಪ್ರಧಾನಿ ಯಾರು?” ಎಂದು ಶಿಕ್ಷಕರು ಕೇಳಿದರೆ, ನನ್ನ ದನಿಯಲ್ಲೇ ಉತ್ತರ ಹೇಳಿದರೂ ಸಹಪಾಠಿಗಳು ಗೇಲಿ ಮಾಡುತ್ತಿದ್ದರು. ನಿಧಾನವಾಗಿ ನಿರಾಸಕ್ತಿ ಆವರಿಸುತ್ತಿತ್ತು. ಅಂಗಿಯಲ್ಲಿ ಮುಖ ಹುದುಗಿಸಿ ಅಳುತ್ತಿದ್ದೆ. ಪ್ಯಾಂಟ್ ಹರಿದು ಕುಂಡೆ ಕಾಣುತ್ತಿದ್ದಾಗ, ಅದನ್ನು ಕಾಗದದ ಮೂಲಕ ಮುಚ್ಚಿಕೊಳ್ಳುತ್ತಿದ್ದೆ.
ಕೆಲವು ಸತ್ಯ ಸಂಗತಿಗಳನ್ನು ಸ್ನೇಹಿತರಿಂದ ಮುಚ್ಚಿಡುತ್ತಿದ್ದರಿಂದ ಶಾಲೆಯೇ ಬಹು ಕಷ್ಟಕರವೆನಿಸತೊಡಗಿತು. ನನ್ನ ದನಿ, ದೈಹಿಕ ಹಾವಭಾವ, ಉಡುತ್ತಿದ್ದ ಬಟ್ಟೆ, ಮಾಡಿಕೊಂಡಿದ್ದ ಮೇಕಪ್ – ಇವುಗಳಿಂದಾಗಿ ಜನ ನನಗೆ ಕಿರುಕುಳ ನೀಡುತ್ತಿದ್ದರು. ನಾನು ಯಾವ ಲಿಂಗ ಹೊಂದಿದ್ದೇನೆಂದು ನೋಡಲು ಸ್ನೇಹಿತರಿಗೆ ಯಾವಾಗಲೂ ಕುತೂಹಲ. ಈ ಮಧ್ಯೆ ಮರೆಯಲಾಗದ ಒಂದು ಘಟನೆ ನಡೆಯಿತು.
ರೇಖಾಗಣಿತ ಕಲಿಯಲು ನಾವು ಕಂಪಾಸ್ ಬಳಸುತ್ತೇವೆ. ಅದರ ಒಂದು ಬದಿಯಲ್ಲಿ ಸೂಜಿಯಂತೆ ಚೂಪಾದ ತುದಿ ಇರುತ್ತದೆ. ಅಂದು ತರಗತಿಯಲ್ಲಿ ಶಿಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸಲು, ಕೈ ಕಟ್ಟಿ ಎದ್ದು ನಿಂತೆ. ನನಗೆ ಗೊತ್ತಿಲ್ಲದೆ ಸ್ನೇಹಿತರು ಕಂಪಾಸನ್ನು ಕೂರುವಲ್ಲಿ ಇಟ್ಟಿದ್ದರು. ಅದರ ಮೇಲೆಯೇ ಕಳಿತುಕೊಳ್ಳಲು ದೂಡಿದರು. ಕೂತ ರಭಸಕ್ಕೆ ಕಂಪಾಸ್ ಸೂಜಿ ಕುಂಡೆಗೆ ಆಳವಾಗಿ ಚುಚ್ಚಿತು. ರಕ್ತ ಸೋರಿತ್ತಲ್ಲದೆ ನೋವು ನನ್ನನ್ನು ಘಾಸಿಗೊಳಿಸಿತ್ತು. ಕುಳಿತ ಜಾಗ, ಕುಂಡೆಯೆಲ್ಲಾ ರಕ್ತಮಯವಾಗಿತ್ತು.
ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಸಾಮಾಜಿಕ ಹೋರಾಟಗಾರ್ತಿ..!
ಇದಾದ ನಂತರ, ಶಾಲೆಗೆ ಹೋಗಲಾಗಲೀ, ಯಾರೊಂದಿಗಾದರೂ ಮಾತನಾಡಲಾಗಲೀ ಹೆದರುತ್ತಿದ್ದೆ. ಆದರೂ, ಶಾಲೆಯಲ್ಲಿ ಕನ್ನಡ ವಿಷಯದಲ್ಲಿ ಉಳಿದವರಿಗಿಂತ ಹೆಚ್ಚು ಅಂಕ ಪಡೆದು ಬೀಗುತ್ತಿದ್ದೆ. ಇದರಿಂದಾಗಿಯಷ್ಟೇ ತರಗತಿಗೆ ಹೋಗಬೇಕೆನಿಸುತ್ತಿತ್ತು. ಆ ಸಂದರ್ಭದಲ್ಲಿ ಮನೆಯಲ್ಲಿ ವಿದ್ಯುತ್ ದೀಪ ಇರಲಿಲ್ಲ. ಬೀದಿ ದೀಪದ ಕೆಳಗೆ ಕೂತು ಓದುತ್ತಿದ್ದೆ.
ಶಾಲೆಯಲ್ಲಿ, ಹುಡುಗ, ಹುಡುಗಿಯರಿಗೆ ಪ್ರತ್ಯೇಕ ಆಟಗಳಿದ್ದವು. ನಾನು ಆದ್ಯತೆ ನೀಡಿದ ಆಟಗಳನ್ನು ಹುಡುಗಿಯರ ಆಟಗಳು ಎಂದೇ ಪರಿಗಣಿಸಲಾಗಿತ್ತು. ಹುಡುಗಿಯರೊಡನೆ ಇರಲು ಬಯಸುತ್ತಿದ್ದೆ. ಆದರೆ ಹೊರ ದೂಡುತ್ತಿದ್ದರು. ಹೀಗೆ, ಆಟಗಳಿಂದಲೂ ಹೊರಗುಳಿದೆ.
ಅಷ್ಟು ಚಿಕ್ಕ ವಯಸ್ಸಿನಲ್ಲಿ ಈ ಬಿಕ್ಕಟ್ಟಿನಿಂದ ಬಿಡಿಸಿಕೊಳ್ಳುವುದಾದರೂ ಹೇಗೆ?ಶಾಲೆಯಲ್ಲಿಸ್ನೇಹಿತರಿಂದಲೇ ತುಂಬಾ ಕಿರುಕುಳವಿತ್ತು. ಶಿಕ್ಷಕರೂ ಸಹ ನನ್ನನ್ನು ಸ್ವೀಕರಿಸಲಿಲ್ಲ. ಎಲ್ಲರಿಂದಲೂ ಪ್ರತ್ಯೇಕಿಸಿ, ಬೇರೆಯ ಟೇಬಲ್, ಕುರ್ಚಿಯಲ್ಲಿ ಕುಳ್ಳಿರಿಸಿದರು. ಒಮ್ಮೆ ಅವರನ್ನು ಪ್ರಶ್ನಿಸಿದೆ. “ನೀನು ಹೆಚ್ಚಾಗಿ ಹೆಣ್ಣಂತಯೇ ಇದ್ದೀಯ...” ಎಂದರು. ಹಾಗಿರುವುದೆಂದರೆ ಅದೊಂದು ರೀತಿಯ ಸಾಂಕ್ರಾಮಿಕ ಕಾಯಿಲೆಯಾಗಿ ಇತರ ಮಕ್ಕಳಿಗೂ ಹರಡಬಹುದೆಂಬುದು ಅವರ ಕಲ್ಪನೆಯಾಗಿತ್ತು.
ಮನೆಯಲ್ಲಿ ಈ ಕುರಿತಂತೆ ಮಾತನಾಡಿದರೆ, ಖಂಡಿತವಾಗಿಯೂ ಬೈಯುತ್ತಾರೆಂದು ನನಗೆ ಗೊತ್ತಿತ್ತು. ಆದ್ದರಿಂದಲೇ ಗಂಡಸಿನಂತೆ ವರ್ತಿಸಬೇಕೆಂದು ಒತ್ತಾಯಿಸುತ್ತಿದ್ದರು. ನನ್ನೊಳಗೇ ಆಗುತ್ತಿದ್ದ ಬದಲಾವಣೆಗಳಾಗಲೀ, ಗುರುತಿನ ಚಹರೆಯಾಗಲೀ ಯಾರಿಗೂ ಬೇಡವಾಗಿತ್ತು.
ಇದೆಲ್ಲವನ್ನೂ ಗಮನಿಸಿ, ಹನ್ನೊಂದನೇ ವಯಸ್ಸಿನಲ್ಲೇ ಹುಟ್ಟಿ ಬೆಳೆದ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ. ಮೊದಲನೇ ಸಲ ಆ ರೀತಿ ಮಾಡಲು ಪ್ರಯತ್ನಿಸಿದಾಗ, ಭಯದಿಂದ ನಡುಗುತ್ತಿದ್ದೆ. ಅಮ್ಮನ ಸೀರೆಯನ್ನು ಬಳಸಿ ನೇಣು ಬಿಗಿದುಕೊಂಡುನಿಂತ ಕುರ್ಚಿಯನ್ನು ಪಕ್ಕಕ್ಕೆ ತಳ್ಳಿಬಿಟ್ಟೆ. ಉರುಳು ಬಿಗಿಯಾಗಿಬಿಟ್ಟಿತು. ಅಲ್ಲಿಗೆ ಬಂದ ನನ್ನ ತಮ್ಮ ಕೂಡಲೇ ನನ್ನನ್ನು ನೇಣಿನಿಂದ ಬಿಡಿಸಿದ. “ನೀನ್ಯಾಕೆ ಸಾಯಲು ಬಯಸಿದ್ದೀಯಾ? ನೀನಿದನ್ನು ಮಾಡಬಾರದು,” ಎಂದು ಜೋರಾಗಿ ಗದರಿದ.
ನನಗೆ ವಿವರಿಸಲಾಗಲಿಲ್ಲ. ತಮ್ಮನೂ ಕೂಡ ನನ್ನ ವಿರುದ್ಧ ಇದ್ದ. ಆತನೂ ನಾನಿರುವಂತೆ ಒಪ್ಪಿರಲಿಲ್ಲ. ಅಕ್ಕ ಸಹ ನನ್ನ ಗುರುತನ್ನು ಒಪ್ಪಿಕೊಂಡಿರಲಿಲ್ಲ. ಅಮ್ಮ ಅಂತೂ ಪದೇ ಪದೇ ಹುಡುಗಿಯಂತೆ ವರ್ತಿಸಬಾರದೆಂದು ಚೀರಾಡುತ್ತಿದ್ದರು. ಅಪ್ಪನೊಂದಿಗೆ ಮಾತನಾಡಲು ತುಂಬಾ ಹೆದರುತ್ತಿದ್ದೆ.
ತಂದೆಗೆ ಪ್ರತಿಷ್ಠೆಯೇ ಮುಖ್ಯವಾಗಿತ್ತು. ಅದೊಂದು ದಿನ,ಬಟ್ಟೆಗಳನ್ನೆಲ್ಲ ಪ್ಯಾಕ್ ಮಾಡಿ, ಮನೆಯಿಂದ ಹೊರಗಟ್ಟಿದರು. ಇನ್ನೆಂದೂ ನೀನು ಈ ಕುಟುಂಬದ ಭಾಗವಲ್ಲ, ನೀನು ಮನೆ ಬಿಟ್ಟು ತೊಲಗಿ ಹೋಗೆಂದು ಹೇಳಿಬಿಟ್ಟರು.
ಮಾರುಕಟ್ಟೆ ಫ್ಲೈಓವರ್ ಬಳಿಯ ಬೀದಿಗೆ ಹೋದೆ. ಅದು ಅಕ್ಟೋಬರ್ ತಿಂಗಳು, ಚಳಿ. ಕೇವಲ ಎರಡು ಜೊತೆ ಬಟ್ಟೆ ಇದೆ. ಊಟಕ್ಕಾಗಿ ಏನು ಮಾಡಬೇಕು? ಬೆಡ್‌ಶೀಟ್, ದಿಂಬು; ಚಾಪೆಯೂ ಇರಲಿಲ್ಲ. ಅಂದು ಸಂಜೆ ಸುಮಾರು ಆರು ಅಥವಾ ಏಳು ಗಂಟೆಯಾಗಿತ್ತು. ಚಳಿ ತಡೆದುಕೊಳ್ಳಲು ಆಗಲಿಲ್ಲ. ಮೊದಲು ಬಂದ ಆಲೋಚನೆಯೆಂದರೆ ಮನೆಗೆ ಹಿಂತಿರುಗುವುದಾಗಿತ್ತು. ಹಾಗೇನಾದರೂ ಮನೆಗೆ ಹೋದಲ್ಲಿ ತಂದೆಯೇ ನನ್ನನ್ನು ಕೊಲ್ಲುತ್ತಾರೆಂದು ಭಯವಾಗಿತ್ತು.
ಇಡೀ ರಾತ್ರಿಯನ್ನು ಮಾರುಕಟ್ಟೆ ಫ್ಲೈಓವರ್ ಕೆಳಗೆಯೇ ಕಳೆದೆ. ವಿಪರೀತ ಚಳಿಯಾಗಿತ್ತು. ತಿನ್ನಲು ಊಟ ಇರಲಿಲ್ಲ. ಅಲ್ಲೊಂದು ಸಾರ್ವಜನಿಕ ಟಾಯ್ಲೆಟ್ ಇತ್ತು. ಅದನ್ನು ಬಳಸಲು ಬಯಸಿದೆ. ಟಾಯ್ಲೆಟ್‌ಗೆಂದು ಬಂದ ಜನ ನನ್ನ ನಡಾವಳಿ, ಮೇಕಪ್, ತೊಟ್ಟ ಟೀ-ಶರ್ಟ್, ಜೀನ್ಸ್ -ಇವನ್ನೆಲ್ಲಾ ನೋಡಿದರು. ನನ್ನೊಂದಿಗೆ ಸೆಕ್ಸ್ ಮಾಡಲು ಬಯಸಿದರು.
ಕೃತಿ: ಅಕ್ಕಯ್
ನಿರೂಪಣೆ: ಡಾ ಡೊಮಿನಿಕ್ ಡಿ
ಪುಟ: 270
ಬೆಲೆ: ರೂ 300
ಪ್ರಕಾಶನ: ಬಹುರೂಪಿ
ಸಂಪರ್ಕ: 70191 82729