ದೇಶದ ಮೊದಲ ಮಹಿಳಾ ಜೆಟ್ ಸ್ಕೈ ಗೈಡ್ ಸೌಮ್ಯ

By Kannadaprabha NewsFirst Published Jul 26, 2018, 4:31 PM IST
Highlights

ಗದಗದ ಅತಿ ದೊಡ್ಡ ಕೆರೆ ಭೀಷ್ಮ ಕೆರೆ. ನೂರಾ ಮೂರು ಎಕರೆಯಷ್ಟು ದೊಡ್ಡ ಕೆರೆ. ಒನ್ ಫೈನ್ ಡೇ ಆ ಕೆರೆಯಲ್ಲಿ ವಾಟರ್ ಸ್ಪೋರ್ಟ್ಸ್ ಆಡಲು ಬರುವ ಅನೇಕರಂತೆ ಆಕೆ ಬಂದರು. ಅಲ್ಲಿನ ಇನ್‌ಸ್ಟ್ರಕ್ಟರ್ ಆಕೆ ಒಬ್ಬ ಮಾಮೂಲಿ ವಾಟರ್ ಜೆಟ್ ಸ್ಕೈ ರೈಡರ್ ಇರಬೇಕು ಎಂದುಕೊಂಡರಂತೆ. ಆದರೆ ಆಕೆ ಜೆಟ್ ಸ್ಕೈ ರೈಡ್ ಮಾಡಿದ್ದು ನೋಡಿ ತರಬೇತುದಾರರು ದಂಗಾದರು. ನೋಡುತ್ತಿರುವವರು ವಿಸ್ಮಿತರಾದರು. ಅವತ್ತಿನಿಂದ ಆಕೆ ಅಲ್ಲಿ ಜೆಟ್ ಸ್ಕೈ ತರಬೇತುಗಾರ್ತಿ. ಅವರನ್ನು ನೋಡಿಯೇ ನೂರಾರು ಹೆಣ್ಣು ಮಕ್ಕಳು ಜೆಟ್ ಸ್ಕೈ ರೈಡರ್‌ಗಳಾಗಿದ್ದಾರೆ. ಹೀಗೆ ಸಾವಿರಾರು ಮಂದಿಗೆ ಸ್ಪೂರ್ತಿಯಾದ ಈ ಹೆಣ್ಣು ಮಗಳ ಹೆಸರು ಸೌಮ್ಯ ಹೆಚ್‌ಎಸ್

ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದ ಸೌಮ್ಯ ಇಂದು ದೇಶದ ಮೊಟ್ಟ ಮೊದಲ ಮಹಿಳಾ ಜೆಟ್ ಸ್ಕೈ ಗೈಡ್ ಮತ್ತು ಅಡ್ವೆಂಚರ್ ಸ್ಪೋರ್ಟ್ಸ್ ಆರ್ಗನೈಸರ್. ಬಾಲ್ಯದಲ್ಲಿ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇಲ್ಲದೇ ಹೋದರೂ ಮದುವೆಯಾದ ಮೇಲೆ ಗಂಡ ಮಂಜುನಾಥ್ ಪ್ರೋತ್ಸಾಹದಿಂದ ಜಲಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಇಂದು ಹದಿನಾರು ಸಾವಿರಕ್ಕೂ ಅಧಿಕ ಮಕ್ಕಳಿಗೆ ತರಬೇತಿ ನೀಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಡ್ವೆಂಚರ್ ಸ್ಪೋರ್ಟ್ಸ್‌ಗಳ ಬಗ್ಗೆ ಆಸಕ್ತಿ ಹೆಚ್ಚಿಸುತ್ತಾ ಬಂದಿದ್ದಾರೆ. ಅದು ಕಳೆದ ಹನ್ನೊಂದು ವರ್ಷಗಳಿಂದ. ಸವಾಲುಗಳೇ ಶಕ್ತಿ ಹೆಚ್ಚಿಸಿವೆ: ಉತ್ತರ ಭಾರತ, ನೇಪಾಳದ ನದಿಗಳಲ್ಲೆಲ್ಲಾ ಜೆಟ್ ಸ್ಕೈ ಮಾಡಿ ಬಂದಿರುವ ಗದಗಿನ ಸೌಮ್ಯ ರಾಜ್ಯದ ಪ್ರಮುಖ ನದಿಗಳಲ್ಲಿ ಅಡ್ವೆಂಚರ್ ಸ್ಪೋರ್ಟ್ಸ್ ಆಯೋಜನೆ ಮಾಡಿಕೊಂಡು ಬಂದಿದ್ದು, ವಾಟರ್ ಸ್ಪೋರ್ಟ್ಸ್ ಬಗ್ಗೆ ಹೀಗೆ ಹೇಳಿಕೊಳ್ಳುತ್ತಾರೆ. ‘ನಾನು ನಾಲ್ಕು ತಿಂಗಳು ಮನೆಯವರನ್ನೆಲ್ಲಾ ಬಿಟ್ಟು ನೇಪಾಳದಲ್ಲಿ ಒಬ್ಬಳೇ ತರಬೇತಿ ಪಡೆದೆ. ಅಲ್ಲಿ ಎಲ್ಲರೂ ನೇಪಾಳಿ ಭಾಷೆ ಮಾತಾಡುತ್ತಿದ್ದರೆ ನನಗೆ ಏನೂ ಅರ್ಥವಾಗುತ್ತಿರಲಿಲ್ಲ. ಆದರೂ ನನ್ನೊಳಗೆ ಕಲಿಯಬೇಕು ಎನ್ನುವ ತುಡಿತ ಹೆಚ್ಚಾಗಿ ಇದ್ದದ್ದರಿಂದ ಅಲ್ಲಿನ ಕೊರೆಯುವ ಚಳಿ, ಗಾಳಿ, ಮಳೆ ಎಲ್ಲವನ್ನೂ ತಡೆದುಕೊಂಡು ತರಬೇತಿ ಪೂರ್ಣಗೊಳಿಸಿಕೊಂಡೆ. ಟ್ರಕ್ಕಿಂಗ್, ಬಂಡೆ ಹತ್ತುವುದೆಲ್ಲವೂ ಅಲ್ಲಿ ನಡೆಯುತ್ತಿದ್ದರಿಂದ ಜೆಟ್ ಸ್ಕೈ ಜೊತೆಗೆ ಬೇರೆ ಬೇರೆ ವಿಚಾರಗಳನ್ನೂ ಕಲಿಯಲು ಸಹಾಯವಾಯಿತು. ಇದೆಲ್ಲಾ ಸವಾಲುಗಳಿಂದಲೇ ನನ್ನ ಶಕ್ತಿ ಹೆಚ್ಚಾಗಿದ್ದು ಎಂದು ಈಗ ಅನ್ನಿಸುತ್ತದೆ’.

ವರಾಹಿ ನದಿಯಲ್ಲಿ ಮಗುಚಿದ ಬೋಟ್: ‘ಒಮ್ಮೆ ವರಾಹಿ ನದಿಯಲ್ಲಿ ಜೆಟ್ ಸ್ಕೈ ಮಾಡುವಾಗ ಕಯಾಕ್(ದೋಣಿ) ಮಗುಚಿಕೊಂಡು ಹತ್ತು ನಿಮಿಷಗಳ ಕಾಲ ನದಿಯಲ್ಲಿ ಕೊಚ್ಚಿಕೊಂಡು ಹೋದೆ. ಅಲ್ಲಿಯೇ ಹೆಚ್ಚು ಬಂಡೆಗಳಿದ್ದ ಕಾರಣ ಕೈ ಕಾಲುಗಳೆಲ್ಲಾ ತರಚಿಕೊಂಡು ಅಸಾಧ್ಯವಾದ ನೋವು ಆವರಿಸಿತು. ಆಗ ನನಗೆ ನನ್ನ ಗಂಡ ಹೇಳಿದ್ದು, ಇಂತಹ ಸಂದರ್ಭಗಳಿಂದಲೇ ನಮ್ಮ ಕಾನ್ಫಿಡೆನ್ಸ್ ಬಿಲ್ಡ್ ಆಗುವುದು. ಇದಕ್ಕೆಲ್ಲಾ ಹೆದರಬಾರದು. ಧೈರ್ಯವಾಗಿ ಮುಂದೆ ಸಾಗು ಎಂದು. ಅದೂ ಅಲ್ಲದೇ ನಮ್ಮ ಮನೆಯವರೂ ಸಾಕಷ್ಟು ಪ್ರೋತ್ಸಾಹ ನೀಡಿದ ಪರಿಣಾಮವಾಗಿ ತರಬೇತಿ ಮುಂದುವರೆಸಿದೆ. ಇಂದು ಯಾವುದೇ ಅಡೆತಡೆಗಳು ಎದುರಾದರೂ ಎದುರಿಸುವ ಸಾಮರ್ಥ್ಯ ಸಿಕ್ಕಿದ್ದು ಅಂದು ನಾನು ಫೇಸ್ ಮಾಡಿದ ಅಡೆತಡೆಗಳಿಂದಲೇ ಆಗಿದೆ’ ಎಂದು ತಾವು ಎದುರಿಸಿದ ಸವಾಲುಗಳ ಬಗ್ಗೆ ಹೇಳಿಕೊಳ್ಳುತ್ತಾರೆ ಸೌಮ್ಯ.

ಮಗುವನ್ನು ಕಾಪಾಡಿದ ಶಿಷ್ಯೆ: ‘ಗೊರೂರು ಬಳಿ ಹೇಮಾವತಿ ನದಿಯಲ್ಲಿ ಒಬ್ಬ ಸ್ಕೂಲ್ ಹುಡುಗ ಕಾಲು ಜಾರಿ ಬಿದ್ದಾಗ ಕೊಡಗಿನ ಒಂದು ಹುಡುಗಿ ಧೈರ್ಯವಾಗಿ ನದಿಗೆ ಇಳಿದು ಆ ಹುಡುಗನ ಪ್ರಾಣ ಕಾಪಾಡಿದ್ದಳು. ಆಮೇಲೆ ಗೊತ್ತಾಯಿತು ಆ ಹುಡುಗಿ ನಮ್ಮ ಕ್ಯಾಂಪ್‌ನಲ್ಲಿ ತರಬೇತಿ ಪಡೆದಿದ್ದಳು ಎಂದು. ನನಗೆ ತುಂಬಾ ಖುಷಿ ಯಾಯಿತು. ಹೆಣ್ಣು ಮಗಳೊಬ್ಬಳು ಇಂತಹ ಸಾಹಸ ಮಾಡಲು ನಮ್ಮ ಪ್ರಯತ್ನ ಸಹಾಯ ಮಾಡಿತಲ್ಲಾ ಎನ್ನುವ ಹೆಮ್ಮೆ ಇಂದಿಗೂ ಇದೆ’ ಎನ್ನುವ ಸೌಮ್ಯ ಅವರು ಇಂದಿಗೂ ಸರಕಾರ ಮತ್ತು ಖಾಸಗಿ ಸಂಸ್ಥೆಗಳ ಸಹಕಾರದಿಂದ ನಿರಂತರವಾಗಿ ಮಕ್ಕಳಿಗೆ ಈಜು, ಜಲಕ್ರೀಡೆಗಳ ಬಗ್ಗೆ ತರಬೇತಿ ನೀಡುತ್ತಾ ಬಂದಿದ್ದಾರೆ.

ತಿಂಗಳುಗಟ್ಟಲೆ ಪ್ರವಾಸ

‘ಮಹಿಳೆಯರು ಸ್ವಂತಂತ್ರವಾಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ನನ್ನ ಪ್ರಕಾರ ಕ್ರೀಡೆಗಳು ನಮ್ಮ ಶಕ್ತಿ ಹೆಚ್ಚಿಸುವ ಪ್ರಬಲ ಮಾಧ್ಯಮ. ನಾನು ಹನ್ನೊಂದು ವರ್ಷದಲ್ಲಿ ಕಂಡಂತೆ ಸಾಕಷ್ಟು ಬದಲಾವಣೆಯಾಗಿದೆ. ನೇಪಾಳ, ಉತ್ತರ ಭಾರತಕ್ಕೆಲ್ಲಾ ತಿಂಗಳುಗಟ್ಟಲೆ ಪ್ರವಾಸ ಮಾಡುತ್ತೇನೆ. ಕ್ಯಾಂಪ್‌ಗಳಲ್ಲಿ ಟೆಂಟ್ ಹಾಕಿಕೊಂಡು ಮಕ್ಕಳಿಗೆ ತರಬೇತಿ ನೀಡುತ್ತೇನೆ. ಮೊದಲು ಜೆಟ್ ಸ್ಕೈನಲ್ಲಿ ಬರೀ ಗಂಡಸರು ಭಾಗವಹಿಸುತ್ತಿದ್ದರು. ಈಗ ನನ್ನಿಂದ ಕೆಲವರಾದರೂ ಹೆಣ್ಣು ಮಕ್ಕಳು ಜೆಟ್ ಸ್ಕೈ ಅನುಭವ ಪಡೆಯುತ್ತಿರುವುದು ಸಂತಸ ತಂದಿದೆ’ ಎನ್ನುವ ಸೌಮ್ಯ ದೇಶದ ಮೊದಲ ವೈಟ್ ವಾಟರ್ ಜೆಟ್ ಸ್ಕೈ ತರಬೇತಿ ಪಡೆದ ಮಹಿಳೆ ಎನ್ನಿಸಿಕೊಂಡಿದ್ದಾರೆ.

click me!