ಅಮ್ಮನೇ ಒಲ್ಲದ ಅಮ್ಮನ ಗುಣ!

By Web DeskFirst Published May 12, 2019, 9:41 AM IST
Highlights

A mother is she who can take the place of all others but whose place no on else can take! 

ಪ್ರಿಯಾ ಕೆರ್ವಾಶೆ

ಕೆಮ್ಮಣ್ಣುಗುಂಡಿಯ ಗೆಸ್ಟ್‌ಹೌಸ್‌ನಿಂದ ಝಡ್‌ ಪಾಯಿಂಟ್‌ನ ತುದಿಗೆ ಕೆಲವು ಕಿಲೋಮೀಟರ್‌ ನಡೀಬೇಕು. ಪುಟ್ಟಕ್ಕು ಸಂಭ್ರಮದಿಂದ ಹೊರಟು ನಿಂತಿದ್ದಳು. ಅಷ್ಟುದೂರ ಇಷ್ಟುಪುಟ್ಟಪಾದಗಳು ನಡೆಯಬಲ್ಲವೇ ಅಂತ ಅಮ್ಮನಿಗೆ ಅನುಮಾನ. ನಡೆಯುವಷ್ಟುದೂರ ಹೋಗೂದು. ಆಮೇಲೆ ಅಲ್ಲಿಂದಲೇ ವಾಪಾಸ್‌ ಬರೋದು ಅಂತ ನಿರ್ಧರಿಸಿ ಪುಟ್ಟಕ್ಕು, ಅವಳ ಅಜ್ಜಿ, ಅಪ್ಪ, ಅಮ್ಮ ಹೊರಟರು. ಒಂದ್‌ ಹತ್‌್ತ ನಿಮಿಷ ನಡೆದಿದ್ದೇ ಪುಟ್ಟಕ್ಕುವಿಗೆ ಸುಸ್ತಾಗಲಿಕ್ಕೆ ಶುರುವಾಯ್ತು. ಮೊದ ಮೊದಲು ದಾರಿಯಲ್ಲಿ ಬಿದ್ದ ಬಸವನ ಹುಳು, ಅಲ್ಲಲ್ಲಿ ಹಾರುತ್ತಿದ್ದ ಹಕ್ಕಿ, ಎಲೆಯನ್ನು ಮುತ್ತಿ ಕೂತ ಬೆಳ್ಳನೆಯ ಹಾತೆಗಳ ಹಿಂಡನ್ನೆಲ್ಲ ಕಣ್ಣರಳಿಸಿ ನೋಡುತ್ತಿದ್ದವಳು ಆಮೇಲಾಮೇಲೆ,‘ಅಮ್ಮಾ, ಇನ್ನೆಷ್ಟುದೂರ?’ ಅಂತ ಮೂತಿ ಸಪ್ಪೆ ಮಾಡಿ ಕೇಳಲಾರಂಭಿಸಿದಳು. ಪರ್ವತ ಕಂಡಕೂಡಲೇ ಕಿವಿಗೆ ಗಾಳಿ ಹೊಕ್ಕ ಕರುವಿನಂತೆ ಆಡುತ್ತಿದ್ದ ಅಮ್ಮ ಉಗುಳು ನುಂಗುತ್ತಾ,‘ಇನ್ನೊಂಚೂರು ದೂರ..’ ಅನ್ನುತ್ತಿದ್ದಳು. ಬೆಟ್ಟದ ತುದಿ ಬಿಟ್ಟು ಕಾಲು ಭಾಗವನ್ನೂ ಇವಳು ಹತ್ತುತ್ತಾಳಾ ಇಲ್ಲವಾ ಅನ್ನೋ ಅನುಮಾನ ಬರಲು ಶುರುವಾಯ್ತು.

‘ಇನ್ನೊಂಚೂರು ದೂರ ಹೋದ್ರೆ ಚೆಂದದ ಫಾಲ್ಸ್‌ ಇದೆ ಪುಟ್ಟಕ್ಕಾ, ಅದರ ನೀರು ಐಸ್‌ನಷ್ಟುಕೋಲ್ಡು. ನೀನದ್ರಲ್ಲಿ ಆಟ ಆಡಬಹುದು’ ಅಮ್ಮನ ಒಂದು ಅಸ್ತ್ರ ಹೊರಬಂತು.

‘ಹೌದಾ, ಫ್ರೀಜರ್‌ನಲ್ಲಿರುವಷ್ಟುಕೋಲ್ಡಾ, ಆ ನೀರು ಕುಡೀಬೌದಾ, ಅಲ್ಲಿ ಕಪ್ಪೆ ಇದ್ರೆ ನಾ ಬರಲ್ಲ..’ ಅಂತೆಲ್ಲ ಶೇಳೆ ಮಾಡುತ್ತ ನಡಿಗೆ ಮುಂದುವರಿಯಿತು. ಮತ್ತೆ ಒಂಚೂರು ದೂರಕ್ಕೆ ಆ ಫಾಲ್ಸ್‌ಗೆ ಇನ್ನೆಷ್ಟುನಡೀಬೇಕು ಅಂತ ಪ್ರಶ್ನೆ ಶುರು.

ಫಾಲ್ಸ್‌ನ ರೂಪ ಪಡೆದುಕೊಂಡ ಝರಿಗೆ ಇನ್ನೂ ಬಂದಷ್ಟೇ ದೂರ ಕ್ರಮಿಸಬೇಕು. ಅಲ್ಲಿಂದ ವಾಪಾಸಾಗುತ್ತಿದ್ದವರೆಲ್ಲ, ‘ಈ ಪಾಪುನ ಕರ್ಕೊಂಡು ಅಲ್ಲೆಲ್ಲ ಹೋಗಕ್ಕಾಗಲ್ಲ ಮೇಡಮ್‌. ನೀವ್‌ ಹೋಗ್ಬಹುದಷ್ಟೇ..’ ಅಂತ ದೂರದ ಬೆಟ್ಟದ ತುದಿಯಲ್ಲಿ ಚುಕ್ಕೆಯಂತೆ ಕಾಣುತ್ತಿದ್ದ ವ್ಯಕ್ತಿಗಳನ್ನು ತೋರಿಸಿ ಸಿಟ್ಟು ಬರಿಸುತ್ತಿದ್ದರು. ಇಷ್ಟಾಗಿಯೂ ಅವಳ ನಡಿಗೆ ಮುಂದುವರೀಬೇಕು ಅಂದರೆ ನಾನು ನಡೀತಾ ಇದ್ದೀನಿ ಅನ್ನೋದನ್ನು ಅವಳು ಮರೆಯಬೇಕು. ಅಮ್ಮನ ಕಲ್ಪನಾ ಜಗತ್ತು ದೊಡ್ಡದು. ಆ ಝರಿಯ ಬಗ್ಗೆ, ಅಲ್ಲಿ ರಾತ್ರಿ ಮೀಯಲು ಬರುವ ನಕ್ಷತ್ರ ಕನ್ಯೆಯರ ಬಗ್ಗೆ ಒಂದಿಷ್ಟುಕಥೆಗಳನ್ನು ಹರಿಯಬಿಟ್ಟಳು. ಇಷ್ಟೆಲ್ಲ ಮುಗಿಯುವ ಹೊತ್ತಿಗೆ ದೂರದಲ್ಲಿ ಝರಿಯ ನೀರು ಬೀಳುವ ಶಬ್ದ ಕೇಳಿಯೇ ಕೇಳಿತು. ಪುಟ್ಟಕ್ಕು ನಿಂತಲ್ಲೇ ಕುಣಿದಳು.

ಆ ಝರಿಯಲ್ಲಿ ಆಡಿದ್ದಾಯ್ತು. ಅದರ ಪಕ್ಕ ನಿಂತು ಪಟ ತೆಗೆದದ್ದಾಯ್ತು. ಗಾಡಿ ಇನ್ನೂ ಮುಂದೆ ಹೋಗ್ಬೇಕಲ್ಲಾ, ನೀರಾಟ ಆಡಿ ಅವಳೂ ಸುಸ್ತು.

‘ಪುಟ್ಟಕ್ಕೂ, ನಿಂಗೊತ್ತಾ, ಈ ಕಾಡಲ್ಲೇ ಮೋಗ್ಲಿ ಇರೋದು..’ ಅಮ್ಮನ ಬ್ರಹ್ಮಾಸ್ತ್ರ. ಪುಟ್ಟಕ್ಕು ಆಗಷ್ಟೇ ಜಂಗಲ್‌ ಬುಕ್‌ ನೋಡಿದ್ದಳು. ‘ಹೌದಾ, ಎಲ್ಲಿ ಅಮ್ಮ ಮೋಗ್ಲಿ?’

‘ಈ ಕಾಡಲ್ಲೇ.. ಮೋಸ್ಟ್‌ಲೀ ನೀನು ಬಂದಿದ್ದು ಗೊತ್ತಿರಲಿಕ್ಕಿಲ್ಲ. ಒಮ್ಮೆ ಜೋರಾಗಿ ಕೂಗು..’

‘ಮೋ...ಗ್ಲೀ..ವೇರ್‌ ಆರ್‌ ಯೂ..ಐಯ್ಯಾಮ್‌ ಹಿಯರ್‌’

(ಅವಳು ನೋಡಿದ ಜಂಗಲ್‌ ಬುಕ್‌ ಸಿನಿಮಾದಲ್ಲಿ ಮೋಗ್ಲಿ ಮಾತಾಡುವುದು ಇಂಗ್ಲೀಷ್‌ನಲ್ಲಿ, ಹಾಗಾಗಿ ಮೋಗ್ಲಿಯ ಭಾಷೆ ಇಂಗ್ಲೀಷ್‌)

‘ಮುಂದೆ ಹೋಗುವ, ಓಹ್‌ ನೋಡು, ಅದಾಗಲೇ ಆ ತುದಿಯಲ್ಲಿದೆ. ನಾವು ಅಲ್ಲಿಗೇ ಹೋಗುವ..’

ನಾಲ್ಕು ವರ್ಷದ ಪುಟ್ಟಕ್ಕು ಈಗ ಅಕ್ಷರಶಃ ಓಡುತ್ತಿದ್ದಳು. ದಾರಿಯುದ್ದಕ್ಕೂ ‘ಮೋಗ್ಲೀ, ಐಯ್ಯಾಮ್‌ ಕಮಿಂಗ್‌’ ಅನ್ನೋ ಕೂಗು ಬೇರೆ.

ಕೊನೆಗೂ ಅವಳು ಬೆಟ್ಟದ ತುದಿಯೇರಿ, ಅಲ್ಲೆಲ್ಲೋ ಮರೆಯಾಗಿ ನಿಂತು ಅವಳು ಬಂದಿದ್ದನ್ನು ಕಂಡು ಖುಷಿಯಾದ ಮೋಗ್ಲಿಗೆ ಹೆಲೋ ಹೇಳಿದ್ದಾಯ್ತು. ವಾಪಾಸ್‌ ಬರುವಾಗ ಮಾತ್ರ ಅಮ್ಮನ ಪಾಡು ಯಾರಿಗೂ ಬೇಡ. ಅಲ್ಲಲ್ಲಿ ಅಪ್ಪನ ಹೆಗಲೇರಿ, ಅಮ್ಮನ ಸೊಂಟವೇರಿ ಮತ್ತೆ ಗೆಸ್ಟ್‌ಹೌಸ್‌ ತಲುಪಿದ್ದೇ ಸಾಹಸ. ಆಮೇಲೆ ಒಂದು ತಿಂಗಳು ಕೂತರೆ ನಿಂತರೆ ಟಾಯ್ಲೆಟ್‌ನಲ್ಲೂ ಮೋಗ್ಲಿಯದೇ ಮಾತು. ಹೀಗೆ ಮೋಗ್ಲಿಯ ದೆಸೆಯಲ್ಲಿ ಝಡ್‌ ಪಾಯಿಂಟ್‌ಗೆ ಅವಳ ಮೊದಲ ಯಶಸ್ವಿ ಟ್ರೆಕ್ಕಿಂಗ್‌. ಆಮೇಲೆ ಒಂಚೂರು ದೊಡ್ಡವಳಾದ ಮೇಲೆ ದೇವರಾಯನ ದುರ್ಗ, ರಾಮ ದೇವರ ಬೆಟ್ಟ, ನಾರಾಯಣ ಗಿರಿ, ಶಿವಗಂಗೆ, ಕೊನೆಗೆ ಹಿಮಾಲಯಕ್ಕೂ ಪುಟ್ಟಕ್ಕು ಅಮ್ಮನ ಜೊತೆಗೆ ಮಜವಾಗಿ ಟ್ರೆಕ್ಕಿಂಗ್‌ ಮಾಡಿ ಬಂದಿದ್ದಾಳೆ. ಅವಳ ಮೊದಲ ಟ್ರೆಕ್ಕಿಂಗ್‌ ಅವಳೀಗ ನೆನಪಿಲ್ಲ. ಆದರೆ ಅಮ್ಮನಿಗೆ ಅದನ್ನು ಮರೆಯಲು ಸಾಧ್ಯವೇ ಇಲ್ಲ!

**

ಬೆಟ್ಟ, ಗುಡ್ಡ, ಸಮುದ್ರ, ನೀರು ಎಲ್ಲವೂ ಅಮ್ಮನ ಹಾಗೆ ಪುಟ್ಟಕ್ಕುಗೂ ಇಷ್ಟ. ತುಂಬ ಬೇಜಾರು ಬಂದಾಗ ಅಮ್ಮ ಮಗಳಿಬ್ಬರಿಗೂ ಹಿಮಾಲಯಕ್ಕೆ ಹೋಗಿ ಅಲ್ಲೊಂದು ಜೋಪಡಿ ಹಾಕ್ಕೊಂಡು ಕೂತು ಬಿಡಬೇಕು ಅಂತ ತುಂಬ ಅನಿಸುತ್ತೆ. ತನಗನಿಸೋದೇನೋ ಸರಿ, ಆದರೆ ಇಷ್ಟುಚಿಕ್ಕ ಮಗಳಿಗೂ ಹಾಗನಿಸುತ್ತಲ್ಲಾ ಅಂತ ಅಮ್ಮನಿಗೆ ಬೆರಗು. ‘ನೀನು ಅಪ್ಪನಷ್ಟುಹೈಟ್‌ ಆಗ್ಬೇಕು ಮಗಳೂ, ಆಗ ಟ್ರೆಕ್ಕಿಂಗ್‌ ಮಾಡೋದು ಸುಲಭ’ ಅಂದರೆ, ಅವಳದೊಂದೇ ಹಠ. ‘ಇಲ್ಲಾ, ನಾನು ನಿನ್ನಷ್ಟೇ ಹೈಟ್‌ ಆಗೋದು, ನಿನ್ನ ಹಾಗೆ ಆಗ್ಬೇಕಮ್ಮಾ ನಾನು..’

ಸಣ್ಣಪುಟ್ಟದಕ್ಕೂ ಹತಾಶೆ, ಸಿಟ್ಟು, ಬಿಗುಮಾನದ ತನ್ನ ಗುಣ ಅವಳಿಗೂ ಅಂಟದಿರಲಿ ದೇವರೇ..ಅಮ್ಮ ಬೇಡುತ್ತಾಳೆ.

click me!