ಮದುವೆ ಮುರಿದ ನಂತರ ಚಹಾ ಮಾರಿ ಗೆದ್ದ ಹೆಣ್ಮಗಳು

By Kannadaprabha NewsFirst Published Oct 1, 2018, 10:00 AM IST
Highlights

ಜೀವನದಲ್ಲಿ ಒಂದಲ್ಲಾ ಒಂದು ಸವಾಲಿನ ಕ್ಷಣ ಎದುರಾಗುತ್ತದೆ. ಆಗ ಗಟ್ಟಿಯಾಗಬೇಕು. ಆಗ ನಮ್ಮ ಅಸಲಿ ಸಾಮರ್ಥ್ಯ ತೋರಿಸಬೇಕು. ಒಂದೊಮ್ಮೆ ನಾವು ಗಟ್ಟಿಯಾಗಿ ಅಸಲಿ ಸಾಮರ್ಥ್ಯ ತೋರಿದೆವಾದರೆ ಯಶಸ್ವಿ ವ್ಯಕ್ತಿಗಳಾಗುವುದು ಖಂಡಿತ. ಇಲ್ಲಿ ಅಂತಹುದೇ ಒಂದು ಉದಾಹರಣೆ ಇದೆ. ಅದುವೇ ಚೆನ್ನೈನ ಪೆಟ್ರಿಷಿಯಾ ನಾರಾಯಣ್ ಸಕ್ಸಸ್ ಸ್ಟೋರಿ.

ಒಂದು ಕಾಲದಲ್ಲಿ ಜೊತೆಗಿದ್ದದ್ದು ಇಬ್ಬರು ಮಾತ್ರ. ಇಂದು ಅವರ ಸಂಖ್ಯೆ ಇನ್ನೂರಕ್ಕೆ ಏರಿದೆ. ಒಂದು ಕಾಲದಲ್ಲಿ ದಿನದ ಆದಾಯ ರುಪಾಯಿ ಲೆಕ್ಕದಲ್ಲಿ ಇದ್ದದ್ದು ಇಂದು ಲಕ್ಷದ ಲೆಕ್ಕಕ್ಕೆ ತಲುಪಿದೆ. ಅದೂ ಕೂಡ ಟೀ, ಕಾಫಿ, ಚಾಟ್ಸ್ ಮಾರಿಕೊಂಡು. ಇವರ ಹೆಸರು ಪೆಟ್ರಿಷಿಯಾ ನಾರಾಯಣ್. ತಮ್ಮ ಹದಿನೇಳನೇ ವಯಸ್ಸಿನವರೆಗೆ ಮಹಾರಾಣಿಯಂತೆ ಬೆಳದು ಒಂದು ಘಟನೆಯಿಂದ ಎಲ್ಲವನ್ನೂ ಕಳೆದುಕೊಂಡು ಮತ್ತೆ ಬೆಳೆದು ನಿಂತವರು.

ಪ್ರೀತಿಯಿಂದ ಆದ ಮೋಸ: ಪೆಟ್ರಿಷಿಯಾ ತಂದೆ ತಾಯಿ ಇಬ್ಬರೂ ತಮಿಳುನಾಡಿನಲ್ಲಿ ಸರಕಾರಿ ನೌಕರಿಯಲ್ಲಿದ್ದವರು. ಮಗಳನ್ನು ಸುಖದ ಸುಪ್ಪತ್ತಿಗೆಯಲ್ಲಿಟ್ಟು ನೋಡಿಕೊಳ್ಳುತ್ತಿರುವಾಗ ಈಕೆಗಿನ್ನೂ ಹದಿನೇಳರ ಹರಯ. ಆಗಲೇ ಇವರ ಬದುಕಿಗೆ ಎಂಟ್ರಿ ಕೊಟ್ಟದ್ದು ನಾರಾಯಣ್. ಒಂದು ವರ್ಷ ನಾರಾಯಣ್ ಪ್ರೀತಿಯ ಬಲೆಗೆ ಬಿದ್ದು, ಅವರನ್ನೇ ಮದುವೆಯಾಗುತ್ತೇನೆ ಎಂದು ಹಠಕ್ಕೆ ಬಿದ್ದದ್ದರಿಂದ ಪೆಟ್ರಿಷಿಯಾ ಹೆತ್ತವರ ವಿರೋಧ ಅನುಭವಿಸಿ ಮನೆಯಿಂದ ಹೊರ ಬೀಳಬೇಕಾಗುತ್ತದೆ.

ಹೀಗೆ ಮನೆಯಿಂದ ಹೊರಗೆ ಹೋದರೇನಂತೆ ಪ್ರೀತಿಸಿದ ಜೀವ ಜೊತೆ ಇದೆಯಲ್ಲಾ ಎಂದುಕೊಳ್ಳುವಷ್ಟರಲ್ಲೇ ಪ್ರಿಯಕರ ನಾರಾಯಣ್ ಮದ್ಯ, ಡ್ರಗ್ಸ್ ವ್ಯಸನಿ ಎನ್ನುವುದು ಗೊತ್ತಾಗುತ್ತದೆ. ಇನ್ನೇನು ಮೋಸ ಹೋದೆ ಎಂದು ಗೊತ್ತಾಗಿದ್ದು ಹದಿನೆಂಟರ ವಯಸ್ಸಿನಲ್ಲಿ. ಏನು ಮಾಡಬೇಕು ಎಂದು ಗೊತ್ತಾಗದೇ ಇದ್ದಾಗ ಇತ್ತ ಗಂಡನಿಂದ ಪ್ರೀತಿಯೂ ಇಲ್ಲ, ಇತ್ತ ಹೆತ್ತವರು ಹತ್ತಿರ ಸೇರಿಸಿಕೊಳ್ಳದೇ ಹೋದಾಗ ಬೇರೆ ದಾರಿ ಕಾಣದೇ ಬದುಕಿನ ಮತ್ತೊಂದು ಮಗ್ಗುಲಿಗೆ ಜಾರಿದರು. ಅದೇ ಮಗ್ಗುಲು ಇವರನ್ನು ಯಶಸ್ವಿ ವ್ಯಕ್ತಿಯನ್ನಾಗಿ ಮಾಡಿದೆ.

ಮೊದಲು ಕಟ್ಟಿದ್ದು ಟೀ ಅಂಗಡಿ: ತನ್ನವರು ಯಾರೂ ಇಲ್ಲ ಎನ್ನುವಾಗ ಕೈ ಹಿಡಿದ್ದದ್ದು ಮೊದಲು ಕಲಿತಿದ್ದ ಅಡುಗೆ ಮಾಡುವ ಕೆಲಸ. ಚೆನ್ನಾಗಿ ಅಡುಗೆ ಮಾಡುವುದು ಗೊತ್ತಿದ್ದರಿಂದ ಮರೀನಾ ಬೀಚ್ ಬಳಿ ಮಿರ್ಚಿ, ಬಜ್ಜಿ, ಬೊಂಡಾ, ಟೀ ಅಂಗಡಿ ಇಡುತ್ತಾರೆ. ಮೊದಲಿಗೆ ತಾವೇ ಎಲ್ಲವನ್ನೂ ನೋಡಿಕೊಂಡು ರುಪಾಯಿ ಲೆಕ್ಕದಲ್ಲಿ ಲಾಭ ಕಾಣುತ್ತಿರುವಾಗ ಹಂತ ಹಂತವಾಗಿ ಮೇಲೆ ಬಂದು ಇಬ್ಬರು ಹುಡುಗರನ್ನು ಜೊತೆ ಮಾಡಿಕೊಂಡು ಉದ್ಯಮವನ್ನು ಮತ್ತಷ್ಟು ವಿಸ್ತಾರ ಮಾಡಿಕೊಳ್ಳುತ್ತಾರೆ. ಹೀಗೆ ಮಾಡುವಾಗಲೇ ತಮಿಳುನಾಡು ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಕ್ಯಾಂಟೀನ್ ನಡೆಸುವ ಅವಕಾಶ ಒದಗಿ ಬರುತ್ತದೆ. ಇದು ಇವರ ಲೈಫ್‌ಗೆ ಸಿಕ್ಕ ಮತ್ತೊಂದು ಟರ್ನಿಂಗ್ ಪಾಯಿಂಟ್.

ಕ್ಯಾಂಟೀನ್‌ನಿಂದ ರೆಸ್ಟೋರೆಂಟ್‌ವರೆಗೆ: ಮೊದಲು ಚಿಕ್ಕದಾಗಿ ಕ್ಯಾಂಟೀನ್ ಶುರು ಮಾಡಿದ ಪೆಟ್ರಿಷಿಯಾ ನಂತರ ಶುಚಿ ಮತ್ತು ರುಚಿಯಾದ ತಿನಿಸುಗಳನ್ನು ನೀಡುತ್ತಾ ಹಂತ ಹಂತವಾಗಿ ಜನರ ಪ್ರೀತಿ ಗಳಿಸಿದವರು. ನಂತರ ಚೆನ್ನೈನ ಪ್ರತಿಷ್ಠಿತ ಸಂಗೀತ ರೆಸ್ಟೋರೆಂಟ್‌ನೊಂದಿಗೆ ಕೈ ಜೋಡಿಸಿ ರೆಸ್ಟೋರೆಂಟ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೇ ದಿನವೂ ಸುಮಾರು ಸಾವಿರಕ್ಕೂ ಅಧಿಕ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ತಲುಪಿಸುವ ಕೆಲಸವನ್ನೂ ಮಾಡುತ್ತಿದ್ದಾರೆ ಇವರು.

click me!