ಸಾವಿರಾರು ಹೆಣ್ಮಕ್ಕಳಕಣ್ಣೀರೊರೆಸಿದ ಸೀತವ್ವ

By Suvarna Web DeskFirst Published Feb 5, 2018, 6:11 PM IST
Highlights

ಸಣ್ಣ ಹೋರಾಟದಿಂದ ಆರಂಭವಾಗಿ, ಸಾವಿರಾರು ದೇವದಾಸಿಯರ ಕಣ್ಣೀರು ಒರೆಸಿದ ಸೀತವ್ವನ ಕಳಕಳಿ ಎಲ್ಲರಿಗೂ ಮಾದರಿ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಈ ಹೋರಾಟಗಾರ್ತಿಯ ಜೀವನಗಾಥೆಯಿದು.

- ಬ್ರಹ್ಮಾನಂದ ಎನ್. ಹಡಗಲಿ


'ಆಗಿನ್ನೂ ನಾನು ಚಿಕ್ಕ ಹುಡುಗಿ. ಒಂದನೇ ತರಗತಿಯಲ್ಲಿ ಓದುತ್ತಿದ್ದೆ. ಹಸಿರು ಸೀರೆ ಉಟ್ಟು, ಕೈಗೆ ಹಸಿರು ಬಳೆ ತೊಟ್ಟು, ಕಾಲಿಗೆ ಕಾಲುಂಗುರ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದೆ. ನನ್ನ ವೇಷವನ್ನು ನೋಡಿ ಎಲ್ಲರೂ ಚುಡಾಯಿಸುವುದು, ಯಾವ ಊರಿಗೆ ಮದುವೆಯಾಗಿದ್ದೀಯಾ ಎಂದೆಲ್ಲಾ ಕೇಳುತ್ತಿದ್ದರು. ಆಗ ನನಗೆ ನಾನೇಕೆ ಹೀಗಿದ್ದೇನೆ? ನಾನೇಕೆ ಎಲ್ಲರಿಗಿಂತ ಭಿನ್ನವಾಗಿದ್ದೇನೆ? ನನ್ನನ್ಯಾಕೆ ಎಲ್ಲರೂ ಬೇರೆ ರೀತಿ ನೋಡುತ್ತಾರೆ ಎನ್ನುವುದ್ಯಾವುದರ ಪರಿವೆಯೂ ಇರಲಿಲ್ಲ. ಒಂದು ಕಡೆ ತಡೆಯಲಾರದಷ್ಟು ದುಃಖ. ಏನು ಮಾಡಬೇಕು? ಏನು ಮಾತನಾಡಬೇಕು? ಏನು ಉತ್ತರಿಸಬೇಕು ಎಂಬುದು ತೋಚುತ್ತಲೇ ಇರಲಿಲ್ಲ. ಹಿಂಸೆಯನ್ನುತಡೆಯಲು ಆಗದೇ ಕೊನೆಗೆ ತೊಟ್ಟಿದ್ದ ಹಸಿರು ಬಳೆ, ಹಸಿರು ಸೀರೆ, ಕಾಲುಂಗುರ, ತಾಳಿಯನ್ನು ಕಿತ್ತು ಹಾಕಿ ಶಾಲೆ ಕಡೆಗೆ ಹೆಜ್ಜೆ ಹಾಕಿದೆ. ಅದೇ ದೇವದಾಸಿ ಪದ್ಧತಿಯ ವಿರುದ್ಧ ಇಟ್ಟ ಮೊದಲ ಹೆಜ್ಜೆ. 

ಬಹುಶಃ ಅದೇ ನನ್ನ ಹೋರಾಟದ ಮೂಲ ಸೆಲೆ ಅನ್ನಿಸುತ್ತದೆ'. ಬಾಲ್ಯದಲ್ಲಿಯೇ ದೇವದಾಸಿ ಪದ್ಧತಿಯಿಂದ ನಾನಾ ಸಂಕಷ್ಟಗಳನ್ನು ಅನುಭವಿಸಿ, ಆ ಪದ್ಧತಿ ವಿರುದ್ಧವೇ ಸಮರ ಸಾರಿ, ಜಾಗೃತಿ ಮೂಡಿಸುತ್ತಲೇ ಬಂದು ಮಹಿಳಾ ಸಶಕ್ತೀಕರಣ ಮಾಡಿ, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿ, ದೇಶದ ಪ್ರಧಾನಿಯಿಂದ ಮೆಚ್ಚುಗೆ ಪಡೆದಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಕಬ್ಬೂರಿನ ಸೀತವ್ವ ದುಂಡಪ್ಪ ಜೋಡಟ್ಟಿ ಅವರ ಅನುಭವದ ಮಾತು ಇದು. 

ಒಲ್ಲದ ಮನಸ್ಸಿನಿಂದ ದೇವದಾಸಿ ಮಾಡಿದರು

ನಾವು ಆರು ಮಂದಿ ಹೆಣ್ಣು ಮಕ್ಕಳು. ನಾನೇ ಆರನೇಯವಳು. ಅಕ್ಕಂದಿರಿಗೆಲ್ಲಾ ಮದುವೆಯಾದ ಮೇಲೆ ನಾನೊಬ್ಬಳೇ ಉಳಿದುಕೊಂಡಿದ್ದೆ. ಅದೇ ವೇಳೆಯಲ್ಲಿ ಊರಿನ ಕೆಲವರು ನಮ್ಮ ತಂದೆಗೆ 'ನಿಮಗೆ ಆರು ಮಂದಿ ಹೆಣ್ಣು ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆ ಮಾಡಿದರೆ ಮುಪ್ಪಿನ ಕಾಲದಲ್ಲಿ ನಿಮ್ಮನ್ನು ನೋಡಿಕೊಳ್ಳೋರು ಯಾರು? ಕೊನೆಯ ಮಗಳನ್ನು ದೇವದಾಸಿಯಾಗಿ ಮಾಡಿ ಎಂದು ಹೇಳಿದರು. ನನ್ನನ್ನು ದೇವದಾಸಿ ಮಾಡಬೇಕೆಂಬ ಆಸೆ ನನ್ನ ತಂದೆ ತಾಯಿಗಳಿಗೆ ಇಲ್ಲದೇ ಹೋದರೂ ಕೂಡ ಊರಿನವರ ಮಾತಿಗೆ ಕಟ್ಟು ಬಿದ್ದು ನನ್ನನ್ನು ದೇವದಾಸಿ ಮಾಡಿದರು.  ಕಲಿಯುವ ಆಸೆಗೆ ಬಡತನದ ತಣ್ಣೀರು. 'ನಾನು ಕಲಿತದ್ದು 7ನೇ ತರಗತಿವರೆಗೆ ಮಾತ್ರ. ಮುಂದೆ ಕಲಿಯಬೇಕು ಎನ್ನುವ ಆಸೆ ಇದ್ದರೂ ಕೂಡ ಬಡತನ ಅದಕ್ಕೆ ಅವಕಾಶ ಕೊಡಲಿಲ್ಲ. ದಿನವೂ ತಾಯಿಯೊಂದಿಗೆ ಹೊಲಗಳಿಗೆ ಹೋಗಿ ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದೆವು. ನನಗೆ 17 ವಯಸ್ಸಿದ್ದಾಗ ನನ್ನ ತಂದೆ ತೀರಿಕೊಂಡರು. ಅದೇ ವೇಳೆಗೆ ನನಗೆ ಇಬ್ಬರು ಮಕ್ಕಳಿದ್ದರು. ಜೊತೆಯಲ್ಲಿ ತಾಯಿಯನ್ನೂ ಬಾಲ್ಯದಿಂದಲೂ ನೋವನ್ನೇ ನೋಡುತ್ತಾ ಬಂದ ಹೆಣ್ಣು ಮಗಳೊಬ್ಬಳು ಕಡೆಗೆ ಸಾವಿರಾರು ಹೆಣ್ಣು ಮಕ್ಕಳ ಕಣ್ಣೀರನ್ನು ಒರೆಸುವ ತಾಯಿಯಾದಳು. 

ದೇವದಾಸಿ ಪದ್ಧತಿ ವಿರುದ್ಧದ ಹೋರಾಟದಲ್ಲಿ ಬೆದರಿಕೆ ಬಂದರೂ ಜಗ್ಗದೆ ಗಟ್ಟಿಯಾಗಿ ನಿಂತು ಹೋರಾಡಿದ ತಾಯಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಸಾಧ್ಯವಾದರೆ ನೀವೂ ಒಂದು ಫೋನ್ ಮಾಡಿ ಅಭಿನಂದನೆ ಸಲ್ಲಿಸಿ. ನೋಡಿಕೊಳ್ಳುವ ಭಾರ ನನ್ನ ಹೆಗಲಿಗೇ ಬಿತ್ತು. ಎಲ್ಲ ಜವಾಬ್ದಾರಿಯನ್ನು ನಾನೇ ವಹಿಸಿಕೊಂಡೆ. ಕೂಲಿ ಮಾಡಿಕೊಂಡೇ ಮಕ್ಕಳು ಹಾಗೂ ತಾಯಿಯನ್ನು ಸಾಕಿದೆ' ಎನ್ನುವ ಸೀತವ್ವ ಕಷ್ಟದಲ್ಲಿ ಬೇಯುತ್ತಿದ್ದರೂ ದೇವದಾಸಿ ಪದ್ಧತಿಯ ನಿರ್ಮೂಲನೆಗೆ ಹಾತೊರೆಯುತ್ತಲೇ ಇದ್ದರು. ಅದು 1991. ಮೈರಾಡ್ ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ದೇವದಾಸಿ ಪದ್ಧತಿಯ ನಿರ್ಮೂಲನದ ವಿರುದ್ಧ ಬೀದಿನಾಟಕ, ಜಾಥಾಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಪ್ರಾರಂಭಿಸಿದರು. ಇದೇ ವೇಳೆ ದೇವದಾಸಿ ಪದ್ಧತಿಯಿಂದ ನೋವು ಅನುಭವಿಸುತ್ತಿದ್ದ ಸೀತವ್ವ ಜಾಗೃತಗೊಂಡು ಸತತ ಐದು ವರ್ಷಗಳ ಕಾಲ ಸ್ವಯಂಪ್ರೇರಿತರಾಗಿ ಆಯೋಜಕರೊಂದಿಗೆ ಸೇರಿಕೊಂಡು ದೇವದಾಸಿಯರ ಪರವಾಗಿ ಕೆಲಸ ಮಾಡುತ್ತಾರೆ.

ಒಂದು ಕಡೆ ಸಂಸಾರವನ್ನು ಮುನ್ನಡೆಸಬೇಕಾದ ಸವಾಲು. ಮತ್ತೊಂದು ಕಡೆ ದೇವದಾಸಿಯರ ಒಳಿತಿಗಾಗಿ ದುಡಿಯುವ ಹಂಬಲ. ಇವೆರಡರ ನಡುವಲ್ಲಿ ಏನು ಮಾಡಬೇಕು ಎನ್ನುವುದೇ ಗೊಂದಲವಾಗಿದ್ದಾಗ ಧೈರ್ಯ ಮಾಡಿದ ಸೀತವ್ವ ಎರಡನ್ನೂ ಸಮನಾಗಿ ಸರಿದೂಗಿಸಿಕೊಂಡು ಹೋಗುವ ಸಾಹಸಕ್ಕೆ ಇಳಿದೇಬಿಟ್ಟರು. ಅದರಂತೆ ಇಲಾಖೆಯವರು ನೀಡಿದ ಚಿಕ್ಕೋಡಿ ತಾಲೂಕಿನ ಕಬ್ಬೂರು, ನಾಗರಮುನ್ನೋಳಿ, ದೇವರಕೂಡ ಹಾಗೂ ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಿದರು. ಸೀತವ್ವರ ಕಾರ್ಯ ಕ್ಷಮತೆ, ಸೇವಾ ಮನೋಭಾವವನ್ನು ನೋಡಿದ ಮೈರಾಡ್ ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆಯವರು ನೀವೇ ಒಂದು ಸಂಘವನ್ನು ಹುಟ್ಟುಹಾಕಿ. ಆ ಮೂಲಕ ದೇವದಾಸಿ ಪದ್ಧತಿ ನಿರ್ಮೂಲನೆಗೆ ಪಣ ತೊಡಿ ಎಂದು ಪ್ರೇರಣೆ ನೀಡಿದರು. ಆ ಹಿನ್ನೆಲೆಯಲ್ಲಿ ಹುಟ್ಟಿದ್ದೇ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ (ಮಾಸ್). 

ಸಂಕಷ್ಟ, ಸವಾಲುಗಳ ಹಾದಿ ಮಾಸ್ ಸಂಸ್ಥೆ ಹುಟ್ಟುಹಾಕಿ ದೇವದಾಸಿ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ವೇಳೆಯಲ್ಲೇ ಹಲವರು ಸೀತವ್ವ ಮತ್ತವರ ತಂಡದ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ, ಅವಮಾನಿಸಿದ್ದಾರೆ. ಒಂದು ಸಿದ್ಧ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವುದು ಸಾಮಾನ್ಯವಾದ ಸಂಗತಿಯಾಗಿರಲಿಲ್ಲ. ಇದರ ಜೊತೆಗೆ ಜೋಗತಿಯರೂ ಕೂಡ ತಮ್ಮ ಕೂದಲನ್ನು ಕತ್ತರಿಸಿಕೊಳ್ಳುವುದಕ್ಕೆ (ದೇವರ ಮೇಲಿನ ಭಯ, ಭಕ್ತಿಯಿಂದಾಗಿ) ಒಪ್ಪುತ್ತಿರಲಿಲ್ಲ. ಇದರಿಂದ ಸವಾಲು ಇನ್ನಷ್ಟು ಹೆಚ್ಚಾಗುತ್ತಿತ್ತು. ನಂತರ ಕೌನ್ಸೆಲಿಂಗ್ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿಯೇ ಈಗ ಮಾಸ್ ಸಂಸ್ಥೆಯಲ್ಲಿ ಸ್ವಯಂ ಸೇವಕರಾಗಿ ದುಡಿಯುತ್ತಿದ್ದಾರೆ. 

ಥ್ಯಾಂಕ್ಸ್ ಹೇಳಿ

ಒಳ್ಳೆಯ ಕೆಲಸಕ್ಕಾಗಿ ಒಂದು ಸಂಸ್ಥೆ ಕಟ್ಟಿ ಅದನ್ನು ಮುನ್ನಡೆಸುವುದು ಸುಲಭದ ಮಾತಲ್ಲ. ಅಂಥದ್ದರಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಇವರ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ (ಮಾಸ್)ಯಲ್ಲಿ ಸದ್ಯ ನಾಲ್ಕು ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಅವರೆಲ್ಲರೂ ಒಟ್ಟಾಗಿ ಕೇವಲ ದೇವದಾಸಿ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವನ್ನೇ ಮಾಡದೇ ಅದರ ಜೊತೆಯಲ್ಲಿ ತಳ ಸಮುದಾಯ, ಅಸಬಲ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವ ನಿಟ್ಟಿನಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ಮಹಿಳಾ ಹಕ್ಕುಗಳ ಜಾಗೃತಿ, ಸಂತ್ರಸ್ತ ಮಹಿಳೆಯರಿಗೆ ಉಚಿತ ಕಾನೂನು ನೆರವು ಸೇರಿದಂತೆ ಮಹಿಳೆಯರ ಪಾಲಿಗೆ ವರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲಾ ಆಗಬೇಕಾದರೆ ಅದಕ್ಕೆ ಮೂಲಕಾರಣ ಸೀತವ್ವ. 

ಸಮಾಜದಲ್ಲಿ ಮಾನವೀಯತೆಯನ್ನು ಹರಡುತ್ತಿರುವ, ಸಾವಿರಾರು ಜೀವಗಳ ಕಣ್ಣೀರನ್ನು ಒರೆಸಿದ ಜೀವಕ್ಕೆ ಧನ್ಯವಾದ. ಸೀತವ್ವ ಮತ್ತು ಅವರ ತಂಡಕ್ಕೆ ನೀವೊಂದು ಥ್ಯಾಂಕ್ಸ್ ಹೇಳಿ. ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿ. ದೂ: 9448995289 
 

click me!