
ಗಾಂಧಿ ಚೌಕ, ಅಂಬೇಡ್ಕರ್ ಚೌಕ ಎಂದೆಲ್ಲ ನೀವು ಕೇಳಿರಬಹುದು. ಸಾಮಾನ್ಯವಾಗಿ ನಗರದ ಮಧ್ಯ ಭಾಗದಲ್ಲಿ ಇರುವ ಈ ಸಿಟಿ ಸ್ಕ್ವೇರ್‌ಗಳು ಓಪನ್ ಮಾರ್ಕೆಟ್ ಇರಬಹುದು, ಶಾಪಿಂಗ್ ಪ್ಲಾಜಾ ಇರಬಹುದು ಅಥವಾ ಸಾಮಾಜಿಕ ಕಾರ್ಯಕ್ರಮಗಳು ನಡೆವ ಓಪನ್ ಸ್ಪೇಸ್ ಇರಬಹುದು, ಪ್ರತಿಭಟನೆಗೆ ಹೆಸರಾಗಿರಬಹುದು... ಒಟ್ಟಿನಲ್ಲಿ ಜಗತ್ತಿನ ಖ್ಯಾತ ನಗರಗಳಲ್ಲೆಲ್ಲ ಇಂಥ ಒಂದು ಚೌಕ ಇದ್ದೇ ಇರುತ್ತದೆ. ಕೆಲವೊಮ್ಮೆ ಈ ಚೌಕಗಳು ಆ ನಗರಗಳಿಗಿಂತಲೂ ಪ್ರಖ್ಯಾತಿ ಪಡೆದಿರುತ್ತವೆ. ಇಂಥ ವರ್ಲ್ಡ್ ಫೇಮಸ್ ಸಿಟಿ ಸ್ಕ್ವೇರ್‌ಗಳನ್ನೊಂದು ಸುತ್ತು ಹಾಕಿ ಬರೋಣ...
ಟೈಮ್ಸ್ ಸ್ಕ್ವೇರ್, ನ್ಯೂಯಾರ್ಕ್, ಯುಎಸ್
ಟೈಮ್ಸ್ ಸ್ಕ್ವೇರ್ ಹೆಸರು ಕೇಳದವರು ಅಪರೂಪ ಎಂದೇ ಹೇಳಬೇಕು. ಈ ಬಗ್ಗೆ ಹೆಚ್ಚು ತಿಳಿದವರು ಇದನ್ನು ಅಜ್ಞಾನ ಎಂದೂ ಭಾವಿಸಬಹುದು- ಅಷ್ಟರಮಟ್ಟಿಗೆ ಅಮೆರಿಕದ ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್ ಫೇಮಸ್. ಇಲ್ಲಿನ ಬ್ರಾಡ್‌ವೇ ಹಾಗೂ ಸೆವೆಂತ್ ಅವೆನ್ಯೂ ನಡುವೆ ಇರುವ ಈ ಚೌಕದಲ್ಲಿ ಎತ್ತರವಾದ ಪೋಲಲ್ಲಿರುವ ಬಾಲ್ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಪ್ರತಿ ವರ್ಷ ಡಿಸೆಂಬರ್ 31ರ ರಾತ್ರಿ 11.59ಕ್ಕೆ ಈ ಬಾಲ್ 60 ಸೆಕೆಂಡ್‌ನಲ್ಲಿ 141 ಅಡಿ ಕೆಳಗೆ ಬಂದು ಹೊಸ ವರ್ಷಾರಂಭವನ್ನು ಜಗಕ್ಕೆ ಸಾರುತ್ತದೆ. ಈ ಕ್ಷಣಕ್ಕಾಗಿ ಇಡೀ ಅಮೆರಿಕವೇ ಅಂದು ಎದುರು ನೋಡುತ್ತಿರುತ್ತದೆ.
ರಾಜ್ಯದ 20 ಪ್ರವಾಸಿ ತಾಣಗಳು ವಿಶ್ವದರ್ಜೆಗೆ
ರೆಡ್ ಸ್ಕ್ವೇರ್, ಮಾಸ್ಕೋ, ರಷ್ಯಾ
ರೆಡ್ ಸ್ಕ್ವೇರ್ ರಷ್ಯಾದ ರಾಜಕೀಯ ಫೆಡರೇಶನ್‌ನ ಆಡಳಿತ ಕಚೇರಿ ಕ್ರೆಮ್ಲಿನ್ ಕಾಂಪ್ಲೆಕ್ಸ್ ಹೊಂದಿದೆ. ಜೊತೆಗೆ ಸೇಂಟ್ ಬೇಸಿಲ್‌ನ ಕೆಥೆಡ್ರಲ್, ಹಾಗೂ ರಷ್ಯನ್ ಕ್ರಾಂತಿಕಾರಿ ಲೆನಿನ್‌ನ ಮುಸೋಲಿಯಂ(ಸಮಾಧಿ ಕಟ್ಟಡ) ಇಲ್ಲಿವೆ. 20ನೇ ಶತಮಾನದ ಆರಂಭದಲ್ಲಿ ಇದು ಸೋವಿಯತ್ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಇಲ್ಲಿ ಮಿಲಿಟರಿ ಪೆರೇಡ್‌ಗಳು ನಡೆಯುತ್ತಿದ್ದವು. ಹಲವಾರು ಕ್ರಾಂತಿಗಳಿಗೆ, ರಾಜಕೀಯ ಬದಲಾವಣೆಗಳಿಗೆ ಸಾಕ್ಷಿಯಾದ ಈ ರೆಡ್ ಸ್ವ್ಕೇರ್ ಹಾಗೂ ಕ್ರೆಮ್ಲಿನ್‍ನನ್ನು ಯುನೆಸ್ಕೋ 1990ರಲ್ಲಿ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿದೆ.
ಸೇಂಟ್ ಪೀಟರ್ಸ್ ಸ್ಕ್ವೇರ್, ವ್ಯಾಟಿಕನ್ ಸಿಟಿ
ಇಟಾಲಿಯನ್ ರಿನೇಸನ್ಸ್ ಚರ್ಚ್ ಸೇಂಟ್ ಪೀಟರ್ಸ್ ಬ್ಯಾಸಿಲಿಕಾದ ಬುಡದಲ್ಲಿರುವ ಸೇಂಟ್ ಪೀಟರ್ಸ್ ಸ್ಕ್ವೇರ್ 284 ಕಂಬಗಳೂ ಹಾಗೂ 88 ಕಿಟಕಿಯಂಥ ರಚನೆಗಳನ್ನೂ ಚೌಕಾಕಾರದಲ್ಲಿ ಹೊಂದಿದೆ. ಮಧ್ಯದಲ್ಲಿ 1586ರಲ್ಲಿ ಈಜಿಪ್ಟ್‌ನಿಂದ ತಂದ ಎತ್ತರವಾದ ಕಂಬ(ಸ್ಮಾರಕ) ಇದೆ.
ಟ್ರಫಾಲ್ಗರ್ ಸ್ಕ್ವೇರ್, ಇಂಗ್ಲೆಂಡ್
ನಗರದ ಹೃದಯ ಭಾಗದಲ್ಲಿರುವ ಈ ಚೌಕ, ನಗರದ ಪ್ರಮುಖ ಲ್ಯಾಂಂಡ್‌ಮಾರ್ಕ್‌ಗಳಾದ ನೆಲ್ಸನ್ಸ್ ಕಾಲಂ ಹಾಗೂ ನ್ಯಾಷನಲ್ ಗ್ಯಾಲರಿಯನ್ನು ಹೊಂದಿದೆ. ಹಲವಾರು ಮ್ಯೂಸಿಯಂಗಳು, ಸಾಂಸ್ಕೃತಿಕ ಆವರಣಗಳು ಹಾಗೂ ಕೆಫೆ ಇಲ್ಲಿ ಪ್ರಮುಖವಾಗಿವೆ.
ಜೇಮ ಎಲ್ ನ, ಮರಕೆಚ್, ಮೊರೊಕ್ಕೋ
ಈ ಚೌಕದಲ್ಲಿ ಹಲವಾರು ಹಣ್ಣು, ನೀರು ಜ್ಯೂಸ್ ಅಂಗಡಿಗಳಿವೆ. ರಾತ್ರಿ ಹೊತ್ತಿನಲ್ಲಿ ಮ್ಯೂಸಿಶಿಯನ್ಸ್, ಮ್ಯಾಜಿಶಿಯನ್ಸ್ ಹಾಗೂ ಡ್ಯಾನ್ಸರ್‌ಗಳಿಂದ ಜೀವಕಳೆ ಪಡೆದುಕೊಂಡು ಮೆರೆದಾಡುವ ಈ ಚೌಕವನ್ನು ನೋಡಲು ಹಲವಾರು ಜನ ಸೇರುತ್ತಾರೆ.
ಈ ಹಡಗು ಹತ್ತಿ ನೋಡು, ದೇಶ ಸುತ್ತಿ ನೋಡು
ಓಲ್ಡ್ ಟೌನ್ ಸ್ಕ್ವೇರ್, ಪ್ರಾಗ್, ಝೆಕ್ ರಿಪಬ್ಲಿಕ್
ಪ್ರಾಗ್‌ನ ಓಲ್ಡ್ ಟೌನ್ ಸ್ಕೇರ್‌ನಲ್ಲಿ ಜಗತ್ತಿನ ಮೂರನೇ ಅತಿ ಪುರಾತನ ಆಸ್ಟ್ರಾನಮಿಕಲ್ ಗಡಿಯಾರ ದಿ ಓರ್ಲೋಜ್ ಇದೆ. ಇನ್ನುಳಿದಂತೆ ಸೇಂಟ್ ನಿಕೋಲಸ್ ಚರ್ಚ್, ದಿ ಜಾನ್ ಹಸ್ ಮೆಮೋರಿಯಲ್ ಹಾಗೂ ದಿ ಕಿನ್ಸ್ಕಿ ಪ್ಯಾಲೇಸ್ ಇಲ್ಲಿಗೆ ಹೆಸರು ತಂದುಕೊಟ್ಟಿವೆ. ಇಲ್ಲಿನ ಕ್ರಿಸ್ಮಸ್ ಹಾಗೂ ಈಸ್ಟರ್ ಮಾರ್ಕೆಟ್‌ಗಳು ಯೂರೋಪ್‌ನಲ್ಲೇ ಸಿಕ್ಕಾಪಟ್ಟೆ ಫೇಮಸ್.
ಗ್ರ್ಯಾಂಡ್ ಪ್ಲೇಸ್, ಬ್ರುಸೆಲ್ಸ್, ಬೆಲ್ಜಿಯಂ
1998ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಸೇರ್ಪಡೆಯಾಗಿರುವ ಸೆಂಟ್ರಲ್ ಸ್ಕ್ವೇರ್‌ನಲ್ಲಿ ಟೌನ್ ಹಾಲ್, ಗಿಲ್ಡ್ ಹಾಲ್ಸ್ ಹಾಗೂ ಮೈಸನ್ ಡು ರೊಯ್ ಇದೆ. ಒಂದು ಕಾಲದಲ್ಲಿ ವ್ಯಾಪಾರಿಗಳ ಬೃಹತ್ ಮಾರುಕಟ್ಟೆಯಾಗಿದ್ದ ಈ ಚೌಕ 1695ರಲ್ಲಿ ಫ್ರ್ಯಾನ್ಸ್‌ನ ಬಾಂಬ್ ದಾಳಿಗೆ ಮುಜ್ಜುಗುಜ್ಜಾಯಿತು. ಈಗ ಇಲ್ಲಿರುವ ಬಹುತೇಕ ಕಟ್ಟಡಗಳು ಮರುನಿರ್ಮಾಣವಾದವು ಇಲ್ಲವೇ ತೇಪೆ ಹಚ್ಚಿಕೊಂಡಂಥವು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.