
ನಾವು ಪ್ರವಾಸಕ್ಕೆ ಹೋದಾಗ ಸಣ್ಣಪುಟ್ಟ ಟೀ ಸ್ಟಾಲ್‌ಗಳ ಮುಂದೆ ಸುಮ್ಮನೆ ಹೋಗಿ ನಿಲ್ಲುತ್ತೇವೆ. ಒಂದೆರಡು ವರ್ಷಗಳಿಂದ ಈಚೆ ಲೆಮನ್ ಟೀ ಮತ್ತು ಜಿಂಜರ್ (ಶುಂಠಿ) ಟೀಗಳಿಗೆ ಬಹಳ ಬೇಡಿಕೆ ಇರುವುದನ್ನು ಗಮನಿಸಿದ್ದೇನೆ. ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ಶುಂಠಿಗೆ ಮಹತ್ವದ ಸ್ಥಾನ. ಉಪ್ಪಿಲ್ಲದ ಅಡುಗೆ ಮನೆಯಾದರೂ ಸಿಗಬಹುದು, ಶುಂಠಿ ಇಲ್ಲದ ಅಡುಗೆ ಮನೆ ಸಿಗುವುದಿಲ್ಲ. ಅಷ್ಟರಮಟ್ಟಿಗೆ ಶುಂಠಿಗೆ ನಮ್ಮಲ್ಲಿ ಪ್ರಾಮುಖ್ಯವುಂಟು.
ಈಗಿನ ಪೀಳಿಗೆಗೆ ಮತ್ತೆ ಅದರ ಹಿರಿಮೆ ಮತ್ತೆ ಅರ್ಥವಾಗುತ್ತಿದೆ ಎನ್ನುವುದೇ ಸಮಾಧಾನ. ಅಜೀರ್ಣ, ಹೊಟ್ಟೆಯಲ್ಲಿ ತಳಮಳ ಇತ್ಯಾದಿ ಆರೋಗ್ಯ ತೊಂದರೆಗಳ ಜತೆಗೆ ತಲೆನೋವಿಗೂ ಶುಂಠಿ ರಾಮಬಾಣ. ಅದರಲ್ಲೂ ಮೈಗ್ರೇನ್‌ಗೆ ಇದಕ್ಕಿಂತ ಪರಿಣಾಮಕಾರಿ ಮನೆಮದ್ದು ಬೇರೆ ಇಲ್ಲ.
2002ರಲ್ಲಿ ಆರೋಗ್ಯ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ 30,000 ಜನರ ಪೈಕಿ ಶೇಕಡ 24ರಷ್ಟು ಮಂದಿ ತಲೆನೋವಿಗೆ ಶುಂಠಿ ಬಳಸುವುದಾಗಿ ತಿಳಿಸಿದ್ದಾರೆ. ಮೈಗ್ರೇನ್ ಅನ್ನು ಶುಂಠಿ ಹೇಗೆ ತಡೆಯಬಲ್ಲದು ಎನ್ನುವ ಕುತೂಹಲ ಸಹಜ. ಶುಂಠಿಯಲ್ಲಿ 200 ಕ್ಕೂ ಹೆಚ್ಚು ಮೂಲವಸ್ತುಗಳು ಮಿಳಿತವಾಗಿವೆ.
ಇವು ಬಹಳ ಮುಖ್ಯವಾಗಿ ಮಾಡುವ ಕೆಲಸ ಎಂದರೆ ಸ್ನಾಯುಗಳು ಸೆಟೆದುಕೊಂಡಾಗ ಅವನ್ನು ಸಡಿಲಗೊಳಿಸುತ್ತದೆ, ಉರಿಯೂತ ಕಡಿಮೆ ಮಾಡುತ್ತದೆ. ಶುಂಠಿ ಸಿರಪ್, ಪೌಡರ್, ಟ್ಯಾಬ್ಲೆಟ್ಸ್, ಲಾಲಿಪಾಪ್ ಮುಂತಾದ ರೂಪದಲ್ಲಿಯೂ ಈಗ ಶುಂಠಿ ಸಿಗುತ್ತದೆ. ತಲೆನೋವಿಗೆ ಶುಂಠಿಯನ್ನು ಚಹಾದಲ್ಲಿ ಸೇರಿಸಿಕೊಂಡು ಕುಡಿಯಬಹುದು ಅಥವಾ ಅದರ ಸ್ಟೀಮ್ ತೆಗೆದುಕೊಳ್ಳಬಹುದು. ಇಲ್ಲವೇ ಶುಂಠಿಯನ್ನು ತೇಯ್ದು ನೋವಿರುವ ಭಾಗದಲ್ಲಿ ಲೇಪಿಸಿಕೊಳ್ಳಬಹುದು.
ದೈನಂದಿನ ಆಹಾರ ಕ್ರಮದಲ್ಲಿ ಶುಂಠಿಯನ್ನು ನಿಯಮಿತವಾಗಿ ಬಳಸಿದರೆ ಯಾವ ತೊಂದರೆಯೂ ಇಲ್ಲ. ಅದರಲ್ಲೂ ತಲೆನೋವಿನ ಬಾಧೆ ಇರುವವರು ಆಗಾಗ ಬಳಸುವುದು ಸೂಕ್ತ. ಅಷ್ಟಕ್ಕೂ ತಲೆನೋವಿನ ಮೂಲ ಆಹಾರ ಅಲ್ಲವೆ? ಹೊಟ್ಟೆಯ ಭಾಗ ಸುಭಿಕ್ಷವಾಗಿದ್ದರೆ ‘ತಲೆನೋವು’ ಇರುವುದಿಲ್ಲ. ಮೈಗ್ರೇನ್ ಇರುವವರೆಲ್ಲ ಶುಂಠಿ ಸೇವಿಸಬಾರದು.
ಗರ್ಭಿಣಿಯರು, ಗರ್ಭಿಣಿಯಾಗುವ ತಯಾರಿಯಲ್ಲಿ ಇರುವವರು, ಮಗುವಿಗೆ ಹಾಲುಣ್ಣಿಸುತ್ತಿರುವ ಸ್ತ್ರೀಯರು ಬಹುಕಾಲ ಶುಂಠಿ ಬಳಸಬಾರದು. ಅಪರೂಪಕ್ಕೊಮ್ಮೆ ಬಳಸಿದರೆ ತೊಂದರೆ ಇಲ್ಲ. ನಿಯಮಿತವಾಗಿ ಸೇವಿಸುವುದಿದ್ದರೆ ವೈದ್ಯರ ಒಪ್ಪಿಗೆ ಪಡೆದುಕೊಳ್ಳುವುದು ಅಪೇಕ್ಷಣೀಯ. ಹಾಗೆಯೇ ಪಿತ್ತಗಲ್ಲು , ಉರಿಯೂತ, ಕರುಳಿನ ತೊಂದರೆ ಇರುವವರೂ ವೈದ್ಯರ ಒಪ್ಪಿಗೆ ಪಡೆದೇ ಶುಂಠಿ ಬಳಸಬೇಕು. ಅಧಿಕ ರಕ್ತದೊತ್ತಡದ ತೊಂದರೆ ಇರುವವರೂ ಶುಂಠಿ ಬಳಕೆ ಮಿತಗೊಳಿಸುವುದು ಸೂಕ್ತ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.