Self Compassion: ನಮ್ಮನ್ನು ನಾವೇ ಪ್ರೀತಿಸದಿದ್ದರೆ, ಮತ್ತೊಬ್ಬರಿಂದ ಹೇಗೆ ಪ್ರೀತಿ ನಿರೀಕ್ಷಿಸಲು ಸಾಧ್ಯ?

By Suvarna NewsFirst Published Jan 17, 2022, 6:50 PM IST
Highlights

ನಾವೆಲ್ಲರೂ ಮನುಷ್ಯರು, ತಪ್ಪು ಮಾಡುತ್ತೇವೆ. ತಿದ್ದಿಕೊಳ್ಳಬೇಕಾಗುತ್ತದೆ. ಕೇವಲ ಬೇರೆಯವರ ಬಗೆಗಲ್ಲ, ಸ್ವತಃ ನಮ್ಮ ಬಗ್ಗೆಯೂ ನಾವು ಕರುಣೆ, ದಯೆ, ಸಹಾನುಭೂತಿ ಹೊಂದಿರಬೇಕಾಗುತ್ತದೆ. ನಮ್ಮ ಮಾನಸಿಕ ಆರೋಗ್ಯಕ್ಕೆ ಇದು ಅಗತ್ಯ.

ನಾವೆಲ್ಲರೂ ಇನ್ನೊಬ್ಬರ ವಿಚಾರದಲ್ಲಿ ಸಹಾನುಭೂತಿ (Copmassion) ತೋರುತ್ತೇವೆ. ಯಾರಾದರೂ ತಪ್ಪು ಮಾಡಿದರೆ, 'ಇಂಥವೆಲ್ಲ ಸಹಜ’ ಎಂದು ಸಮಾಧಾನ ಮಾಡುತ್ತೇವೆ. ಆದರೆ, ನಾವೇ ಆ ತಪ್ಪು ಮಾಡಿದರೆ, ನಮ್ಮನ್ನು ನಾವು ಕ್ಷಮಿಸಿಕೊಳ್ಳುವುದಿಲ್ಲ. ನಮ್ಮನ್ನು ನಾವೇ ಕಠೋರವಾಗಿ ಬೈದುಕೊಳ್ಳುತ್ತೇವೆ. ನಮ್ಮ ಬಗ್ಗೆ ನಾವೇ ಅಸಹ್ಯ ಪಟ್ಟುಕೊಳ್ಳುತ್ತೇವೆ. ನಿಜ ತಾನೇ? ಆದರೆ, ಮಾನಸಿಕ ಆರೋಗ್ಯ (Mental Health) ಸುಸ್ಥಿತಿಯಲ್ಲಿರಲು ನಮ್ಮ ಬಗ್ಗೆಯೂ ಸ್ವಲ್ಪ ಕರುಣೆ, ಸಹಾನುಭೂತಿ ಹೊಂದಿರಬೇಕಾಗುತ್ತದೆ.

ಅಚ್ಚರಿಯಾಗಬಹುದು. ನಮ್ಮ ಬಗ್ಗೆ ಸ್ವತಃ ನಾವೇ ಕರುಣೆ (Sympathy) ಹೊಂದಿರುವುದು ಹೇಗೆ ಎಂದು. ಒಮ್ಮೆ ಯೋಚಿಸಿ, ಯಾವುದಾದರೂ ಕೆಲಸವನ್ನು ಉತ್ಸಾಹದಿಂದ ಶುರು ಮಾಡಿ ತಪ್ಪಾದರೆ, ಯಾವುದಾದರೂ ಕೆಟ್ಟ (Bad) ಪರಿಸ್ಥಿತಿಗೆ ನಾವು ಕಾರಣವಾದರೆ, ತಪ್ಪು ನಿರ್ಧಾರ ಕೈಗೊಂಡರೆ ನಮ್ಮ ಬಗ್ಗೆ ನಾವು ಯಾವ ಮನಸ್ಥಿತಿ ಹೊಂದಿರುತ್ತೇವೆ? ಅಂಥ ಸಮಯದಲ್ಲಿ ನಮ್ಮ ಬಗ್ಗೆ ನಾವೇ ಸ್ವಲ್ಪ ಸಹಾನುಭೂತಿ, ದಯೆ ತೋರಿಕೊಳ್ಳಬೇಕಾಗುತ್ತದೆ. ವೃತ್ತಿಪರ (Profession) ಬದುಕಿನಲ್ಲಾದರೂ, ಸಂಬಂಧ(relationship)ಗಳ ವಿಚಾರದಲ್ಲಾದರೂ ಸ್ವಯಂ ಸಹಾನುಭೂತಿ ಹೊಂದಿರಬೇಕಾದುದು ಅಗತ್ಯ.

ಕೆಲವರನ್ನು ನೋಡಿ, ಆತ್ಮವಿಶ್ವಾಸ ಹೊಂದಿರುವುದಿಲ್ಲ, ತಮ್ಮ ಬಗ್ಗೆ ಕಾಳಜಿಯನ್ನೂ ಹೊಂದಿರುವುದಿಲ್ಲ. ಸದಾಕಾಲ ಅತಿಯಾಗಿ ತಮ್ಮ ಬಗ್ಗೆ ತಾವೇ ಟೀಕಿಸಿಕೊಳ್ಳುವುದು, ಬೈದುಕೊಳ್ಳುವುದು ಮಾಡುತ್ತಾರೆ. ತಮಾಷೆಗೆ ಯಾವಾಗಲಾದರೂ ಒಮ್ಮೆ ಇದು ಸರಿ. ಆದರೆ, ಅತಿಯಾದರೆ ನಕಾರಾತ್ಮಕ ಭಾವನೆಗಳು ತುಂಬಿಕೊಳ್ಳುತ್ತವೆ.

ನಿಮ್ಮದು ಯಾವ ಮನಸ್ಥಿತಿ (Thought)?

ತಜ್ಞರ ಪ್ರಕಾರ ಸ್ವಯಂ ಪ್ರೀತಿ, ಸಹಾನುಭೂತಿ ಉಳ್ಳವರು ವಿವಿಧ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಕ್ರಿಯಾಶೀಲರಾಗಿರುತ್ತಾರೆ. ಸದಾಕಾಲ ಒಳಿತನ್ನು ಯೋಚಿಸುತ್ತ ಯಾವುದಾದರೊಂದು ಕೆಲಸದಲ್ಲಿ ಭಾಗಿಯಾಗುತ್ತಾರೆ. ಇದೇ ಸ್ವಯಂ ಸಹಾನುಭೂತಿ ಹೊಂದುವುದರ ಮೂಲಮಂತ್ರ.  

ಅತಿಯಾದ ಟೀಕೆ (Criticism) ಬೇಡ

ನಮ್ಮನ್ನು ನಾವು ಅತಿಯಾಗಿ ಟೀಕಿಸಿಕೊಳ್ಳುವುದರಿಂದ ಸ್ವ ಸಹಾನುಭೂತಿ ನಶಿಸುತ್ತದೆ. ನಮ್ಮ ಬಗ್ಗೆ ನಮಗೇ ದಯೆ ಇರುವುದಿಲ್ಲ. ನಾವು ತಪ್ಪು ಮಾಡಿದಾಗ ಅದನ್ನು ಪರಾಮರ್ಶೆ ಮಾಡಿಕೊಳ್ಳದೆ ಹೋದರೆ ತಪ್ಪುಗಳು ಪುನರಾವರ್ತನೆಯಾಗುತ್ತವೆ. ಹಾಗೆಯೇ, ನಮ್ಮ ಸಾಮರ್ಥ್ಯವನ್ನು ಗುರುತಿಸಿಕೊಳ್ಳದೆ ಅತಿಯಾಗಿ ವಿಮರ್ಶೆ ಮಾಡಿಕೊಂಡರೂ ಆತ್ಮಗೌರವಕ್ಕೆ ಚ್ಯುತಿ ಬರುತ್ತದೆ. ಹೀಗಾದಾಗಲೂ ಖಾಸಗಿ ಮತ್ತು ವೃತ್ತಿಪರ ಬದುಕಿನಲ್ಲಿ ಸಂಘರ್ಷಗಳನ್ನು ಎದುರಿಸಬೇಕಾಗುತ್ತದೆ. ವಾಸ್ತವಿಕವಾಗಿ ನಾವು ಯಾವುದರಲ್ಲಿ ಚೆನ್ನಾಗಿದ್ದೇವೆ, ಯಾವುದರಲ್ಲಿ ಇಲ್ಲ ಎನ್ನುವುದನ್ನು ಗುರುತಿಸಿಕೊಳ್ಳುವುದು ಅಗತ್ಯ. ತಪ್ಪು ಮಾಡಿದ್ದೇನೆಂದು ಒಪ್ಪಿಕೊಳ್ಳುವುದು, ಆ ಸಮಯದಲ್ಲಿ ನಮ್ಮೆಡೆಗೆ ಸಹಾನುಭೂತಿ ಹೊಂದಿರುವುದು ಮುಖ್ಯ. 

ಆತ್ಮಗೌರವ (Self Esteem) ಬೇರೆ ಸ್ವ ಸಹಾನುಭೂತಿ ಬೇರೆ

ಸ್ವಯಂ ರಕ್ಷಣೆ ತೆಗೆದುಕೊಳ್ಳುವುದು ಬೇರೆ. ಇದು ಸ್ವ ಕರುಣೆಯ ಒಂದು ಭಾಗ. ಸ್ವಯಂ ಸಹಾನುಭೂತಿ ಎಂದರೆ, ನಮ್ಮ ಎಲ್ಲ ಅಂಶಗಳ ಕುರಿತು ನಮ್ಮ ನಿಲುವು. ನಮ್ಮ ಕುರಿತು ನಾವು ಪ್ರೀತಿ, ಕರುಣೆ ಹೊಂದಿದ್ದರೆ ಮಾತ್ರ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ನಮ್ಮ ಬಗ್ಗೆ ನಾವು ಒಳ್ಳೆಯ ಭಾವನೆ ಹೊಂದಿರುವುದು ಆತ್ಮಗೌರವವಾದರೆ, ನಮ್ಮ ಬಗ್ಗೆ ಕಾಳಜಿ ವಹಿಸುವುದು ಸ್ವಯಂ ಸಹಾನುಭೂತಿ.

ಸ್ವಯಂ ಸಹಾನುಭೂತಿ ಹೊಂದುವುದು ಹೇಗೆ?

ನಿಮ್ಮನ್ನು ಇಷ್ಟಪಡುವ ಪ್ರೀತಿಪಾತ್ರ ಸ್ನೇಹಿತರೊಂದಿಗೆ ಮಾತನಾಡಿದಂತೆ ನಿಮ್ಮೊಂದಿಗೆ ನೀವು ಮಾತಾಡಿಕೊಳ್ಳುವುದು, ದಿನನಿತ್ಯ ಕೃತಜ್ಞತೆ (Gratitude) ಪ್ರಕಟಿಸುವುದು, ನಿಮಗೇ ನೀವು ಪತ್ರ (Letter) ಬರೆದುಕೊಳ್ಳುವುದು, ಹಗುರವಾದ ಮನಸ್ಸಿನಿಂದ ಈ ಕ್ಷಣವನ್ನು ಆಸ್ವಾದಿಸುವುದು, ಉತ್ತಮ ಹವ್ಯಾಸ(Hobby)ಗಳಲ್ಲಿ ತೊಡಗುವುದು. ಇಂತಹ ಕಾರ್ಯಗಳಿಂದ ಸ್ವಯಂ ಸಹಾನುಭೂತಿ ಹೆಚ್ಚಾಗುತ್ತದೆ. 
ಆತ್ಮವಿಶ್ವಾಸ (Self Confidence) ಇಲ್ಲದಿರುವವರಲ್ಲಿ, ಕೋಪದ ಭಾವನೆ, ಹೆಚ್ಚು ವಿಮರ್ಶೆ  ಮಾಡುವವರಲ್ಲಿ, ನಕಾರಾತ್ಮಕ (Nagetive) ಭಾವನೆಗಳನ್ನು ಹೊಂದಿರುವವರಲ್ಲಿ ಸ್ವ ಸಹಾನುಭೂತಿಯೂ ಇರುವುದಿಲ್ಲ. ಉತ್ತಮ ಜೀವನ ಪದ್ಧತಿ(Life Style), ಕ್ರೀಡೆ(Sports), ಕಲೆ(Art), ಕ್ರಿಯಾಶೀಲತೆ(Creativity), ನಿಮ್ಮ ಬಗ್ಗೆ ಕಾಳಜಿ (Care) ವಹಿಸುವುದು, ಧ್ಯಾನ(Meditation), ಸಾಕುಪ್ರಾಣಿ, ತೋಟದಲ್ಲಿನ ಕೆಲಸ ಇತ್ಯಾದಿಗಳಿಂದ ಸ್ವ ಸಹಾನುಭೂತಿ ಹೆಚ್ಚಿಸಿಕೊಳ್ಳಲು ಸಾಧ್ಯ.

click me!