ದಿನಬಳಕೆಯ ಈ ವಸ್ತುಗೆ ಬೈ ಹೇಳಿ, ಬದಲಿ ಏನು ಬಳಸ್ಬೇಕು ಹೇಳ್ತೀವಿ ಇಲ್ ಕೇಳಿ

By Web DeskFirst Published Jun 12, 2019, 5:04 PM IST
Highlights

ಪರಿಸರ ಮಾಲಿನ್ಯ ಕುರಿತ ಒಂದೆರಡು ಡಾಕ್ಯುಮೆಂಟರಿ ನೋಡುತ್ತಿದ್ದರೆ ಮೈ ನಡುಕ ಬರುತ್ತದೆ. ಮುಂದಿನ ತಲೆಮಾರಿಗೆ ನಾವೆಂಥ ನರಕ ಸೃಷ್ಟಿಸುತ್ತಿದ್ದೇವೆ ಎಂಬ ಅರಿವಾಗುತ್ತದೆ. ನಾವು ಬಳಸುವ ವಿಷಕಾರಿ ವಸ್ತುಗಳು ಪರಿಸರದ ಮೇಲೆ ಹೆೇಗೆಲ್ಲ ಅತ್ಯಾಚಾರ ನಡೆಸುತ್ತವೆ ಎಂಬುದು ಅರಿವಾದರೆ, ಅಂಥ ವಸ್ತುಗಳಿಗೆ ಬದಲಿ ಹುಡುಕಿಕೊಳ್ಳುವತ್ತ ಗಮನ ಹರಿಸುವುದು ಸುಲಭವಾಗುತ್ತದೆ. 

ಪ್ರಕೃತಿಯ ಬಗ್ಗೆ ಕಾಳಜಿ ನಮಗೆಲ್ಲರಿಗೂ ಇದ್ದೇ ಇದೆ. ಆದರೆ, ಅದನ್ನು ವ್ಯಕ್ತಪಡಿಸುವ ರೀತಿ ತಿಳಿಯದೆ ಸುಮ್ಮನಿರುವುದೇ ಹೆಚ್ಚು. ಗಿಡ ನೆಡೋಕೆ ಜಾಗ ಇಲ್ಲ, ಪ್ಲ್ಯಾಸ್ಟಿಕ್ ಪೂರ್ತಿ ತ್ಯಜಿಸೋಕೆ ಆಗಲ್ಲ, ಇದು ನಮ್ಮ ತಪ್ಪಲ್ಲ ಎಂದು ಕೊಳ್ಳೋರೇ ಜಾಸ್ತಿ. ಆದರೆ, ಮನಸ್ಸು ಮಾಡಿದರೆ, ದೈನಂದಿನ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ, ದಿನಬಳಕೆಯ ವಸ್ತುಗಳನ್ನು ಆರಿಸುವಾಗ ಸ್ವಲ್ಪ ಜಾಣ್ಮೆ ತೋರಿದರೆ, ಪ್ರಕೃತಿಯನ್ನು ಉಳಿಸಲು ನಮ್ಮಿಂದಾಗುವ ಅಲ್ಪ ಸಹಾಯವನ್ನಂತೂ ಖಂಡಿತಾ ಮಾಡಬಹುದು. ಮತ್ತಷ್ಟು ಮಾಲಿನ್ಯವಾಗುವುದಕ್ಕೆ ತಡೆ ಹಾಕಬಹುದು. ಹಾಗಿದ್ದರೆ ಮನೆಯಿಂದಲೇ ಆರಂಭವಾಗಲಿ ಪ್ರಕೃತಿ ಉಳಿಸುವ ಅಭಿಯಾನ. ಇಲ್ಲಿವೆ ನೀವು ಏನು ಬಳಸಬಾರದು, ಬದಲಿಯಾಗಿ ಏನು ಬಳಸಬೇಕೆಂಬ ಪುಟ್ಟ ಲಿಸ್ಟ್.

ತಪ್ಪಿಸಿ: ಪ್ಲ್ಯಾಸ್ಟಿಕ್ ಕಂಟೇನರ್‌ಗಳಲ್ಲಿ ಬರುವ ಉತ್ಪನ್ನಗಳು
ಬಳಸಿ: ಪರಿಸರ ಸ್ನೇಹಿ ಪ್ಯಾಕೇಜ್ ಹೊಂದಿರುವ ಉತ್ಪನ್ನಗಳು

ನಾವು ಬಳಸಿ ಬಿಸಾಡುವ ಕೇವಲ ಶಾಂಪೂ ಹಾಗೂ  ಕಂಡೀಶನರ್‌ನ ಪ್ಲ್ಯಾಸ್ಟಿಕ್ ಬಾಟಲ್‌ಗಳೇ ವರ್ಷಕ್ಕೆ 80 ಶತಕೋಟಿಯಷ್ಟು ಪ್ರಮಾಣದಲ್ಲಿ ಪ್ರಕೃತಿಯನ್ನು ಸೇರುತ್ತವೆ. ಅಂದ ಮೇಲೆ ನೂರೆಂಟು ರೀತಿಯ ಕ್ರೀಮ್ಸ್, ಲೋಶನ್ಸ್, ವಾಟರ್ ಬಾಟಲ್ಸ್, ಫ್ಲೋರ್ ಕ್ಲೀನರ್ ಅದೂ ಇದೂ ಮಣ್ಣುಮಸಿ ಅಂಥ ಎಲ್ಲ ಪ್ಲ್ಯಾಸ್ಟಿಕ್ ಬಾಟಲನ್ನು ಲೆಕ್ಕ ಹಾಕಿದರೆ, ಮನೆಯೊಂದರಿಂದಲೇ ವರ್ಷಕ್ಕೆ ಸಾವಿರಾರು ಬಾಟಲ್‌ಗಳು ಕಸ ಸೇರುತ್ತವೆ. ಈಗೀಗ ಬ್ಯೂಟಿ ಲೋಕದಲ್ಲೂ ಪರಿಸರ ಪ್ರಜ್ಞೆ ಹೆಚ್ಚುತ್ತಿದ್ದು, ಹಲವಾರು ಕಂಪನಿಗಳು ಜೀರೋ ವೇಸ್ಟ್ ಬ್ಯೂಟಿ ಪ್ರಾಡಕ್ಟ್ಸ್ ತಯಾರಿಸುತ್ತಿವೆ. ಅಂಥ ಉತ್ಪನ್ನಗಳನ್ನೇ ಹುಡುಕಿ ಕೊಳ್ಳಿರಿ. ಉದಾಹರಣೆಗೆ ಭಾರತದಲ್ಲಿ ಝಾವೋ ಆರ್ಗ್ಯಾನಿಕ್ ಮೇಕಪ್ ಬ್ರ್ಯಾಂಡ್ ತನ್ನ ಉತ್ಪನ್ನಗಳನ್ನು ಬಿದಿರಿನ ಕಂಟೇನರ್‌ನಲ್ಲಿ ಹಾಕಿ ಮಾರುಕಟ್ಟೆಗೆ ಬಿಡುತ್ತಿದೆ. ರೂಟ್‌ಬಜಾರ್, ರಿಸೈಕಲ್ ಮಾಡಿದ ಗ್ಲಾಸ್ ಬಾಟಲ್‌ಗಳನ್ನು ಬಳಸುತ್ತಿದೆ. ನಾವು ಪರಿಸರ ಸ್ನೇಹಿ ಕಂಟೇನರ್‌ಗಳಿರುವ ಕ್ರೀಮ್ಸ್, ಶಾಂಪೂ ಇತ್ಯಾದಿಗಳನ್ನು ಕೊಂಡರೆ, ಉಳಿದ ಕಂಪನಿಯವರು ಕೂಡಾ ತಮ್ಮ ಉತ್ಪನ್ನಕ್ಕೆ ಪರಿಸರ ಸ್ನೇಹಿ ಕಂಟೇನರ್ ಮಾಡುವತ್ತ ಗಮನ ಹರಿಸುತ್ತವೆ. 

ತಪ್ಪಿಸಿ: ಡಿಸ್ಪೋಸೇಬಲ್ ಡೈಪರ್ಸ್
ಬಳಸಿ: ಬಟ್ಟೆಯ ಡೈಪರ್ಸ್

ಪ್ರತಿವರ್ಷ ಕೋಟಿಗಟ್ಟಲೆ ಡೈಪರ್‌ಗಳು ಕಸವಾಗಿ ಭೂಮಿಯ ಮಡಿಲಿಗೆ ಬೀಳುತ್ತವೆ. ಇವು ಮಣ್ಣಿನಲ್ಲಿ ಸೇರಿಹೋಗಲು ಏನಿಲ್ಲವೆಂದರೂ 500  ವರ್ಷಗಳಾದರೂ ಬೇಕು ಎನ್ನುತ್ತವೆ ಅಧ್ಯಯನಗಳು. ಜೊತೆಗೆ, ಈ ಡಿಗ್ರೇಡ್ ಆಗುವ ಹಂತದಲ್ಲಿ ಅವು ಮಿಥೇನ್ ಹಾಗೂ ಇತರೆ ವಿಷವಾಯುವನ್ನು ಪರಿಸರಕ್ಕೆ ಸೇರಿಸುತ್ತವೆ. ನಮಗೆ ಗೊತ್ತಿಲ್ಲದೆಯೇ ಪರಿಸರಕ್ಕೆ ನಾವೆಂಥ ಅಪಚಾರವೆಸಗುತ್ತಿದ್ದೀವಲ್ಲವೇ? ಹಾಗಾಗಿ, ಬಟ್ಟೆಯ ಡೈಪರ್‌‌ಗಳನ್ನು ಬಳಸಲು ಅಭ್ಯಾಸ ಮಾಡಿಕೊಳ್ಳಿ. ಇವನ್ನು ಮರುಬಳಕೆ ಮಾಡಬಹುದಲ್ಲದೆ, ಮಗುವಿನ ತ್ವಚೆಗೂ ಹಾನಿಯಿಲ್ಲದ್ದು. ಋತುಸ್ರಾವಕ್ಕೂ ಸ್ಯಾನಿಟರ್ ಪ್ಯಾಡ್ ಬಳಸೋ ಬದಲು ಶೀ ಕಪ್ಸ್ ಅಥವಾ ಕಾಟನ್ ಬಟ್ಟೆಯಿಂದ ರೀ ಯೂಸೇಬಲ್ ಪ್ಯಾಡ್ ಬಳಸಿದರೆ ಪರಿಸರ ಮಾಲಿನ್ಯವನ್ನು ತಡೆಯಬಹುದು.

ತಪ್ಪಿಸಿ: ಪ್ಲ್ಯಾಸ್ಟಿಕ್ ತಟ್ಟೆ ಲೋಟಗಳು
ಬಳಸಿ: ಸ್ಟೀಲ್ ಪಾತ್ರೆಗಳು

ಮನೆಯಲ್ಲಿ ನಡೆಯುವ ಮದುವೆ ಮುಂಜಿ ಮತ್ತಿತರ ಸಮಾರಂಭಗಳಲ್ಲಿ ಊಟಕ್ಕೆ ಬಳಸಿ ಬಿಸಾಡುವ ಪ್ಲ್ಯಾಸ್ಟಿಕ್ ಲೋಟ, ತಟ್ಟೆಗಳನ್ನುಉಪಯೋಗಿಸುವುದು ಈಗೀಗ ಸಾಮಾನ್ಯವಾಗಿದೆ. ಆದರೆ, ಒಂದು ದಿನದ ಖುಷಿಗೆ ಇಷ್ಟೊಂದು ಪ್ರಮಾಣದಲ್ಲಿ ಪ್ಲ್ಯಾಸ್ಟಿಕ್ಕನ್ನು ಪರಿಸರಕ್ಕೆ ಸೇರಿಸುವುದು ತಪ್ಪಲ್ಲವೇ? ಅದರ ಬದಲಿಗೆ ಪೇಪರ್ ಪ್ಲೇಟ್ ಹಾಗೂ ಲೋಟ ಬಳಸಬಹುದು. ಇಲ್ಲವೇ ಈಗ ರಾಷ್ಟ್ರ ರಾಜಧಾನಿಯಿಂದ ರಾಜ್ಯ ರಾಜಧಾನಿವರೆಗೂ ಹಲವು ಸಂಸ್ಥೆಗಳು ಸ್ಟೀಲ್ ಲೋಟ, ತಟ್ಟೆ ಹಾಗೂ ಚಮಚವನ್ನು ಬಾಡಿಗೆಗೆ ಕೊಡುತ್ತವೆ. ಅವನ್ನು ಬಳಸಿ. ಕರ್ನಾಟಕದಲ್ಲಿ ಅದಮ್ಯ ಚೇತನ ಸಂಸ್ಥೆಯು ಪ್ಲೇಟ್ ಬ್ಯಾಂಕ್ ವ್ಯವಸ್ಥೆ ತಂದಿದೆ. 

ಪತಿಯ ನೆನಪು ಹಸಿರಾಗಿಡಲು 73 ಸಾವಿರ ಸಸಿ ನೆಟ್ಟ ಪತ್ನಿ

ತಪ್ಪಿಸಿ: ಪ್ಲ್ಯಾಸ್ಟಿಕ್ ದಿನಸಿ ಬ್ಯಾಗ್
ಬಳಸಿ: ಬಟ್ಟೆ ಅಥವಾ ಜೂಟ್ ಬ್ಯಾಗ್

ಪ್ರತಿ ವರ್ಷ 1 ಟ್ರಿಲಿಯನ್‌ನಷ್ಟು ಕಸವು ನಾವು ಬಳಸಿ ಬಿಸಾಡುವ ಪ್ಲ್ಯಾಸ್ಟಿಕ್ ಬ್ಯಾಗ್‌ಗಳಿಂದ ಆಗುತ್ತದೆ. ಪ್ಲ್ಯಾಸ್ಟಿಕ್ ಬದಲಿಗೆ ಬಟ್ಟೆಯ ಬ್ಯಾಗ್ ಬಳಸುವುದು ಕಷ್ಟವೇನಲ್ಲ. ನಮ್ಮ ಜೀವನಶೈಲಿಯಲ್ಲಿ ಇದು ಚಿಕ್ಕ ಬದಲಾವಣೆಯಾದರೂ, ಪರಿಸರಕ್ಕೆ ದೊಡ್ಡ ಉಪಕಾರವೇ. ಯಾವುದೇ ಅಂಗಡಿಗೆ ಹೋಗುವಾಗ ನೀವೇ ಬಟ್ಟೆ ಬ್ಯಾಗ್ ತೆಗೆದುಕೊಂಡು ಹೋಗುವುದನ್ನು ರೂಢಿಸಿಕೊಳ್ಳಿ.

ಹಾರ್ನ್ ಮಾಡದೇ 42 ಸಾವಿರ ಕ್ರಮಿಸಿದ ಯುವಕ

ತಪ್ಪಿಸಿ: ಪ್ಲ್ಯಾಸ್ಟಿಕ್ ವಾಟರ್ ಬಾಟಲ್
ಬಳಸಿ:  ಗ್ಲಾಸ್, ಸೆರಾಮಿಕ್ ಅಥವಾ ಸ್ಟೇನ್‌ಲೆಸ್ ಸ್ಟೀಲ್ ಬಾಟಲ್

ನೀರು ಅಥಾವಾ ಜ್ಯೂಸನ್ನು ಪ್ಲ್ಯಾಸ್ಟಿಕ್ ಬಾಟಲ್‌ನಲ್ಲಿ ಇಟ್ಟು ಬಳಸುತ್ತಿದ್ದೀರಾದರೆ ಮೊದಲು ಈ ಅಭ್ಯಾಸ ಬಿಡಿ. ಆರೋಗ್ಯದ ದೃಷ್ಟಿಯಿಂದಲೂ ಇದು ಒಳ್ಳೆಯದಲ್ಲ. ಪರಿಸರದ ದೃಷ್ಟಿಯಿಂದಲೂ ಹಿತವಲ್ಲ. ಬದಲಿಗೆ ಗ್ಲಾಸ್, ಸೆರಾಮಿಕ್ ಅಥವಾ ಸ್ಟೇನ್‌ಲೆಸ್ ಸ್ಟೀಲ್ ಬಾಟಲ್ ಬಳಸಿ.

ಚೆನ್ನೈನಲ್ಲಿದೆ ಮರಗಳ ಅಂಬ್ಯುಲೆನ್ಸ್

ತಪ್ಪಿಸಿ: ಡಿಸ್ಪೋಸೇಬಲ್ ಬ್ಯಾಟರಿಗಳು
ಬಳಸಿ: ಗ್ರೀನ್ ಬ್ಯಾಟರಿಗಳು 

ಬ್ಯಾಟರಿಗಳು ಬಹೂಪಯೋಗಿ. ಟಾರ್ಚ್‌, ರಿಮೋಟ್, ಗಡಿಯಾರ ಹಲವಕ್ಕೆ ಬ್ಯಾಟರಿ ಬೇಕು. ಆದರೆ, ಡಿಸ್ಪೋಸೇಬಲ್ ಬ್ಯಾಟರಿಗಳು ಪರಿಸರಕ್ಕೆ ಹಾನಿಕರ. ಇವುಗಳಲ್ಲಿರುವ ವಿಷ ರಾಸಾಯನಿಕಗಳು ನೀರು ಹಾಗೂ ಮಣ್ಣಿಗೆ ಸೇರುವುದರಿಂದ ಮಾಲಿನ್ಯ ಹೆಚ್ಚುತ್ತದೆ. ಇವುಗಳನ್ನು ಹೇಗೆ ರಿಪ್ಲೇಸ್ ಮಾಡುವುದು? ಗೋಡ್ರೆಜ್‌ನಂಥ ಕಂಪನಿಗಳು ಗ್ರೀನ್ ಬ್ಯಾಟರಿ ಹೊರಬಿಟ್ಟಿವೆ. ಅವುಗಳು ರಿಚಾರ್ಜೇಬಲ್ ಆಗಿವೆ.

click me!