ಶಾಲಾಬ್ಯಾಗ್‌ ಭಾರ ಮಕ್ಕಳ ಬೆನ್ನನ್ನು ಜಗ್ಗುತ್ತಿದೆಯೇ?

By Web DeskFirst Published Jul 23, 2019, 3:10 PM IST
Highlights

ನಿಮ್ಮ ಮಗು 10 ವರ್ಷಕ್ಕೇ 80ರ ಅಡಗೂಲಜ್ಜಿಯಂತೆ ಬಾಗಿದ ಬೆನ್ನಿನಿಂದ ಭಾರತ ಬ್ಯಾಕ್‌ಪ್ಯಾಕನ್ನು ಹೊತ್ತೊಯ್ಯುತ್ತದೆಯೇ? ಆಗಾಗ ಕತ್ತು, ಭುಜ, ಬೆನ್ನು ನೋವೆಂದು ಚಡಪಡಿಸುತ್ತದೆಯೇ? ಶಾಲಾಬ್ಯಾಗ್‌ಗಳು ಮಕ್ಕಳಿಗೆ ಅಪಾಯಕಾರಿಯಾಗಿವೆಯೇ? 

ಶಾಲೆಗೆ ಹೋಗುವ ಮಕ್ಕಳನ್ನು ನೋಡುವಾಗ ರಾಜಾ ವಿಕ್ರಮಾದಿತ್ಯ ನೆನಪಾಗುತ್ತಾನೆ. ಆತನ ಬೆನ್ನನ್ನು ಬೇತಾಳ ಏರಿದಂತೆ ಪ್ರತಿ ಬೆಳಗ್ಗೆ ಹಾಗೂ ಸಂಜೆ ಮಕ್ಕಳ ಬೆನ್ನಿನ ಮೇಲೆ ಅವರಿಗಿಂತಲೂ ಭಾರವಾದ ಬ್ಯಾಗ್‌ಗಳು ಕುಳಿತು, ಬಲವಂತವಾಗಿ ನಡೆಸಿಕೊಂಡು ಹೋಗುತ್ತಿರುತ್ತವೆ. ಕೆಲ ಮಕ್ಕಳು ಆಗಾಗ ಬ್ಯಾಗಿನ ಭಾರ ತಾಳಲಾರದೆ ಬ್ಯಾಗ್‌ನ ಸ್ಟ್ರ್ಯಾಪ್‌ನ್ನು ಎತ್ತಿ ಎತ್ತಿ ಬಿಡುತ್ತಿರುತ್ತಾರೆ. ಇನ್ನು ಕೆಲ ಮಕ್ಕಳು ಭುಜ ಬದಲಾಯಿಸುತ್ತಾ, ಕಷ್ಟಪಟ್ಟು ನಿಭಾಯಿಸುತ್ತಿರುತ್ತಾರೆ. ಮತ್ತೊಂದಿಷ್ಟು ಮಕ್ಕಳಂತೂ ಗೂನು ಬೆನ್ನಿನ ಮುದುಕಿಯರಂತೆ ಬಾಗಿ ತಮ್ಮ ಭಾರವಾದ ಹೆಜ್ಜೆಗಳನ್ನೇ ದಿಟ್ಟಿಸುತ್ತಾ ನಡೆಯುತ್ತಿರುತ್ತಾರೆ. ಒಟ್ಟಿನಲ್ಲಿ ಬ್ಯಾಗ್‌ನ ಭಾರ ಮಕ್ಕಳ ನಡಿಗೆಯ ಶೈಲಿಯನ್ನೂ, ಆಂಗಿಕ ಚಲನೆಯನ್ನೂ ಬದಲಿಸಿಬಿಟ್ಟಿರುತ್ತದೆ. 

ಬೆನ್ನು, ಸೊಂಟ ನೋವು ಪರಿಹಾರಕ್ಕೆ ಇಲ್ಲಿದೆ ಸಿಂಪಲ್ ಮದ್ದು

ತಜ್ಞರೇನಂತಾರೆ?

ಬೆನ್ನುಮೂಳೆ ತಜ್ಞರ ಪ್ರಕಾರ, ಶಾಲಾ ಬ್ಯಾಗ್‌ಗಳ ತೂಕವು ಮಕ್ಕಳ ಒಟ್ಟು ತೂಕದ ಶೇ.10ರಷ್ಟಕ್ಕಿಂತ ಕಡಿಮೆ ಇರಬೇಕು. ಅದಕ್ಕಿಂತ ಹೆಚ್ಚಿದ್ದಲ್ಲಿ ಮಗುವಿನ ಮೂಳೆಗಳ ಆರೋಗ್ಯದ ಮೇಲೆ ಅದು ಖಂಡಿತಾ ದುಷ್ಪರಿಣಾಮ ಬೀರುತ್ತದೆ.

ಮುಂಬೈನ ಕೀಲುತಜ್ಞ ಡಾ. ಆನಂದ್ ಪ್ರಕಾರ, ''ಬ್ಯಾಕ್‌ಪ್ಯಾಕ್‌ಗಳು ಮಕ್ಕಳಿಗೆ ದೊಡ್ಡ ಹೊರೆಯಾಗುತ್ತಿವೆ. ಅತಿ ಭಾರವಾದ ಅಥವಾ ಸರಿಯಾಗಿ ಹಾಕಿಕೊಳ್ಳದ ಬ್ಯಾಕ್‌ಪ್ಯಾಕ್ ಬೆನ್ನೆಲುಬಿನ ಮೇಲೆ ಒತ್ತಡ ಹಾಕುತ್ತವೆ. ಈ ಒತ್ತಡ ನಿಭಾಯಿಸಲು ಮಕ್ಕಳು ಅತಿಯಾಗಿ ಮುಂದೆ ಬಾಗಿ ನಡೆಯುತ್ತಾರೆ. ಇದರಿಂದ ಸ್ಪೈನ್‌ನ ನೈಸರ್ಗಿಕ ಭಂಗಿಗೆ ಹೊಡೆತ ಬೀಳುತ್ತದೆ. ನಿರಂತರ ಒತ್ತಡದಿಂದಾಗಿ ಅದು ಆಕಾರ ಬದಲಾಯಿಸಿಕೊಳ್ಳಬಹುದು. ಬೆನ್ನಿನ ಮೇಲ್ಭಾಗ ಹೆಚ್ಚು ರೌಂಡ್ ಆಗಬಹುದು. ಕೆಲ ವಿದ್ಯಾರ್ಥಿಗಳು ಬ್ಯಾಗನ್ನು ಒಂದೇ ಭುಜದ ಮೇಲೆ ಹೊತ್ತುಕೊಳ್ಳುತ್ತಾರೆ. ಇದರಿಂದ ಅವರು ಒಂದು ಬದಿ ಬಾಗಿದಂತೆ ನಡೆಯುತ್ತಾರೆ. ಪರಿಣಾಮ, ಕತ್ತು ನೋವು ಶುರುವಾಗುತ್ತದೆ''.

ಅತಿಯಾದ ಭಾರದ ಬ್ಯಾಗ್‌ಗಳು ಮಕ್ಕಳಲ್ಲಿ ಬೆನ್ನೆಲುಬು, ಭುಜ, ಕತ್ತು ಹಾಗೂ ಇತರೆ ಮೈಕೈ ನೋವಿಗೆ ಕಾರಣವಾಗುತ್ತವೆ. ಕೆಲವೊಮ್ಮೆ ಬೆನ್ನಿನ ಮೂಳೆ ಮುರಿಯಲೂಬಹುದು. ಅಧ್ಯಯನ ಶಾಲಾ ಬ್ಯಾಗ್‌ಗಳು ಸಾಮಾನ್ಯವಾಗಿ 1ರಿಂದ 10 ಕೆಜಿ ತೂಗುತ್ತವೆ. ಇತ್ತೀಚೆಗೆ ಶಾಲಾ ಬ್ಯಾಗ್‌ಗಳ ತೂಕ ಹಾಗೂ ಅದರಿಂದ ಸ್ನಾಯು ಹಾಗೂ ಮೂಳೆಗಳ ಮೇಲಾಗಬಹುದಾದ ದುಷ್ಪರಿಣಾಮಗಳ ಕುರಿತು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಅಧ್ಯಯನವೊಂದನ್ನು ನಡೆಸಲಾಯಿತು. ಪ್ರೈಮರಿ ಶಾಲೆಯ ಮಕ್ಕಳನ್ನು ಈ ಕುರಿತ ಅಧ್ಯಯನಕ್ಕೊಳಪಡಿಸಿದಾಗ ಶೇ.42ರಷ್ಟು ವಿದ್ಯಾರ್ಥಿಗಳು ಭುಜ ಸಂಬಂಧಿ ಸಮಸ್ಯೆಗಳನ್ನು ವ್ಯಕ್ತಪಡಿಸಿದರೆ, ಶೇ.23.9ರಷ್ಟು ವಿದ್ಯಾರ್ಥಿಗಳು ಕತ್ತು ನೋವು ಬರುವುದಾಗಿ ಹೇಳಿದ್ದಾರೆ.

ಮೂಳೆಗೆ ಏಟು ಸಣ್ಣದಾದರೂ ಭವಿಷ್ಯದಲ್ಲಿ ಬೇನೆ ಕಟ್ಟಿಟ್ಟ ಬುತ್ತಿ

ಈ ಲಕ್ಷಣಗಳು ಕಂಡರೆ ಉದಾಸೀನ ಬೇಡ

ನಿಮ್ಮ ಮಗುವು ಶಾಲಾ ಬ್ಯಾಗ್ ಭಾರದಿಂದಾಗಿ ಆರೋಗ್ಯ ಸಮಸ್ಯೆಗಳನ್ನೆದುರಿಸುತ್ತಿದೆ ಎಂದು ಹೇಗೆ ಕಂಡುಕೊಳ್ಳುತ್ತೀರಿ? 

- ಮಗುವು ಆಗಾಗ ಕತ್ತು ನೋವೆಂದು ಹೇಳಿಕೊಳ್ಳುತ್ತಿದೆಯೇ ಗಮನಿಸಿ.

- ಭುಜದ ಸ್ಟ್ರ್ಯಾಪ್ಸ್ ಹಾಕುವಲ್ಲಿ ನೋವು, ಒತ್ತು ಮಾರ್ಕ್‌ಗಳಿವೆಯೇ ವಿಚಾರಿಸಿ.

- ಬೆನ್ನಿನ ಮೇಲ್ಭಾಗ ಹಾಗೂ ಭುಜನೋವೆಂದು ಮಗು ಆಗಾಗ ಹೇಳಿಕೊಳ್ಳುತ್ತದೆಯೇ? 

- ಕುಳಿತಾಗ ಕತ್ತು, ಭುಜ ನೋವಾಗುತ್ತದೆ, ಸುಸ್ತೆನಿಸುತ್ತಿದೆ ಎಂದು ಪದೇ ಪದೆ ದೂರುಗಳು ಬಂದರೆ ಇದು ಬ್ಯಾಗಿನ ತೂಕಕ್ಕೆ ಸಂಬಂಧಿಸಿರುವುದೇ ಎಂದು ಗಮನಿಸಿ.

ಈ ಯಾವುದೇ ಲಕ್ಷಣಗಳು ಕಂಡು ಬಂದಾಗಲೂ ಉದಾಸೀನ ತೋರದೆ ಪರಿಹಾರ ಹುಡುಕುವತ್ತ ಗಮನ ನೀಡಿ. 

ಪೋಷಕರೇನು ಮಾಡಬಹುದು?

1. ಬೆನ್ನಿಗೆ ಹಾಯೆನಿಸುವಂಥ ಬ್ಯಾಕ್‌ಪ್ಯಾಕ್‌ಗಳನ್ನು ಆರಿಸಿ. ಭುಜದ ಸ್ಟ್ರ್ಯಾಪ್ಸ್ ಸಾಕಷ್ಟು ಅಗಲವಾಗಿರಬೇಕು. ಇದರಿಂದ ತೂಕವು ಸಮವಾಗಿ ಹಂಚಿಹೋಗುತ್ತದೆ. ಜೊತೆಗೆ, ಭುಜ ಜಗ್ಗುವುದಿಲ್ಲ. ಹಾಗಂತ ಮಗುವಿನ ಭುಜದಿಂದ ಆಗಾಗ ಜಾರಿ ಹೋಗುವಷ್ಟು ಅಗಲದ ಸ್ಟ್ರ್ಯಾಪ್ಸ್ ಇರುವ ಬ್ಯಾಗ್ ಬೇಡ. 

ಆ್ಯಸಿಡಿಟಿ ಇದ್ದರೆ ಈ ಆಹಾರಕ್ಕೆ ಹೇಳಿ ಗುಡ್ ಬೈ...

2. ಇನ್ನು, ಮಕ್ಕಳು ಆಯಾ ದಿನ ಟೈಂ ಟೇಬಲ್ ಪ್ರಕಾರ ಯಾವ ಪುಸ್ತಕಗಳ ಅಗತ್ಯವಿದೆಯೋ ಅವಿಷ್ಟನ್ನು ಮಾತ್ರ  ಬ್ಯಾಗ್‌ನಲ್ಲಿರಿಸಿಕೊಳ್ಳಲಿ. ಅನಗತ್ಯವಾಗಿ ಇತರೆ ಪುಸ್ತಕಗಳನ್ನು ಹೊತ್ತೊಯ್ಯುವುದು ಬೇಡ.

3. ಸ್ಕೂಲ್‌ಗಳಲ್ಲಿ ಮಕ್ಕಳಿಗೆ ಲಾಕರ್ ವ್ಯವಸ್ಥೆ ಇದ್ದರೆ, ಅಂದಿನ ಓದುಬರಹಕ್ಕೆ ಬೇಕಾಗದ ಪುಸ್ತಕಗಳನ್ನು ಶಾಲೆಯ ಲಾಕರ್‌ನಲ್ಲಿಯೇ ಇರಿಸಿ ಹೋಗುವ ಅಭ್ಯಾಸ ಮಾಡಿಕೊಳ್ಳಬಹುದು. ಇದು ಮಕ್ಕಳಿಗೂ ಪ್ರತಿದಿನ ಏನು ಬೇಕು, ಏನು ಬೇಡ ಎಂದು ಯೋಜಿಸುವ ಟಾಸ್ಕ್ ನೀಡುವುದರಿಂದ ಅವರಲ್ಲಿ ಜವಾಬ್ದಾರಿ ಮೊಳೆಯುತ್ತದೆ. 

4. ಪೋಷಕರು ಮಧ್ಯಾಹ್ನದ ಊಟ ಕಳಿಸುವಾಗ ಅವು ಅತಿಯಾಗಿ ಭಾರವಾಗಿ, ಬ್ಯಾಗಿಗೆ ಮತ್ತಷ್ಟು ಹೊರೆಯಾಗದಂತೆ ನೋಡಿಕೊಳ್ಳಿ. ನೀರಿನ ಬಾಟಲ್‌ಗಳನ್ನು ಶಾಲೆಯಲ್ಲಿಯೇ ತುಂಬಿಕೊಳ್ಳುವುದು ಉತ್ತಮ. 

5. ಇಷ್ಟೆಲ್ಲದರ ಬಳಿಕವೂ ಮಗು ಪದೇ ಪದೇ ಬೆನ್ನು, ಕತ್ತು, ಭುಜ ನೋವೆಂದು 4-5 ವಾರಗಳ ಕಾಲ ನಿರಂತರ ದೂರುತ್ತಿದ್ದರೆ, ತಡ ಮಾಡದೆ ಮೂಳೆ ತಜ್ಞರ ಬಳಿ ಕರೆದುಕೊಂಡು ಹೋಗಿ. 

click me!