ಒತ್ತಡ ಹೆಚ್ಚಿಸೋ ಅಹಂಕಾರವನ್ನು ದೂರವಿಡಿ...

By Web DeskFirst Published Jun 13, 2019, 1:01 PM IST
Highlights

ಸ್ವಾಭಿಮಾನ ಯಾವಾಗಲೂ ಒಳ್ಳೆಯದೇ. ಅದೇ ದುರಭಿಮಾನವಾಗಿ ಬದಲಾದರೆ, ಅಹಂ ಹೆಚ್ಚಿದರೆ ಮಾತ್ರ ಆಗ ವ್ಯಕ್ತಿಯ ಕೇಡುಗಾಲ ಆರಂಭವಾಗಿದೆ ಎಂದೇ ಅರ್ಥ. ಸಂಬಂಧಗಳ ಮಧ್ಯೆ ಈ ಅಹಂ ನುಸುಳಿದರೆ, ಅದು ಬಿರುಕು ಬಿಡುವುದು ಶತಸಿದ್ಧ.

ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದು ಹಾಗೂ ಮತ್ತೊಬ್ಬರನ್ನು ಕೂಡಾ ಅಷ್ಟೇ ಗಾಢವಾಗಿ ಪ್ರೀತಿಸುವುದಕ್ಕೆ ಮುಂಚೆ ಅಹಂನಿಂದ ದೂರ ಇರಬೇಕು. ಒಂದು ಅದ್ಭುತ ಪ್ರೀತಿಯ ಸಾನಿಧ್ಯ ಪಡೆಯಲು ಇದು ಅಗತ್ಯ. ಆ ಸಂಬಂಧವನ್ನು ಕಡೆವರೆಗೂ ಉಳಿಸಿಕೊಂಡು ಹೋಗುವ ಇರಾದೆ ಇರುವವರು, ಸಂತೋಷವಾಗಿರುವ ಪಣ ತೊಟ್ಟವರು ಅಹಂಕಾರವನ್ನು ಹತ್ತಿರ ಸುಳಿಯಗೊಡುವುದಿಲ್ಲ. ಅಹಂನಷ್ಟು ಸುಲಭವಾಗಿ ಇನ್ನಾವುದೂ ಸಂಬಂಧವನ್ನು ಕೊಲ್ಲಲಾರದು. ಈಗೋ ಒಂದು ಸಂಬಂಧವನ್ನು ಹೇಗೆಲ್ಲ ಕೊಲ್ಲುತ್ತದೆ, ಹಾಗೂ ಅದನ್ನು ದೂರವಿಡಲು ಏನು ಮಾಡಬೇಕು ಎಂದು ಇಲ್ಲಿದೆ ನೋಡಿ. 

ವಾದದಲ್ಲಿ ಗೆಲುವು, ಸಂಬಂಧದಲ್ಲಿ ಸೋಲು

ಬ್ಯಾಚುಲರ್‌ ಲೈಫೆಂಬ ತಳ ಹರಿದ ದೋಣಿ

ಎಷ್ಟು ಬಾರಿ ನಿಮ್ಮ ಸಂಗಾತಿಯೊಡನೆ ಜಗಳವಾಡಿದ್ದೀರಿ ಎಂಬುದನ್ನು ಯೋಚಿಸಿ. ಯಾವಾಗ ಮಾತು ಜಗಳದ ರೂಪ ತಾಳುತ್ತದೋ ಆಗೆಲ್ಲ ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವ ಭರದಲ್ಲಿ ವಿಷಯ ಏನು ಎಂದು ಸರಿಯಾಗಿ ಕೇಳಿಸಿಕೊಳ್ಳದೆ, ಆ ಬಗ್ಗೆ ಹೆಚ್ಚೇನೂ ಯೋಚಿಸದೆ ಸೀದಾ ವಾದದಲ್ಲಿ ಗೆಲ್ಲಲು ಹೊರಟುಬಿಡುತ್ತೀರಿ. ಈ ಸಂದರ್ಭದಲ್ಲಿ ನಿಮ್ಮ ದುರಭಿಮಾನ ತನ್ನನ್ನು ಸಮರ್ಥಿಸಿಕೊಳ್ಳುತ್ತದೆ. ಇದರಿಂದ ಸಮಸ್ಯೆ ಇನ್ನಷ್ಟು ಕಗ್ಗಂಟಾಗುತ್ತದೆ. ಮಾತು ಬಿಟ್ಟು ಮುನಿಸಿಕೊಳ್ಳುತ್ತೀರಿ. ಅದರ ಬದಲು ಯಾರಾದರೂ ನಿಮ್ಮ ತಪ್ಪನ್ನು ದೂಷಿಸಿದಾಗ, ನಿಧಾನವಾಗಿ ಅದನ್ನು ಕೇಳಿಸಿಕೊಂಡು ಓಹ್, ಹೀಗೆ ಮಾಡಿದೆನಾ, ತಿಳಿಯಲಿಲ್ಲ ಎಂದೋ ಅಥವಾ ನೀವೇ ಆ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದೋ ಹೇಳಿದರೆ ಸಂಗಾತಿಗೆ ನಿಮ್ಮ ಮೇಲೆ ಪ್ರೀತಿಯೂ ಹೆಚ್ಚುತ್ತದೆ, ನಿಮ್ಮ ವ್ಯಕ್ತಿತ್ವವೂ ಹೊಳಪು ಪಡೆಯುತ್ತದೆ.

ಅಹಂ ಜನರನ್ನು ದೂರವಿರಿಸುತ್ತದೆ

ನಿಮ್ಮನ್ನು ನೀವು ಪ್ರೀತಿಸಿಕೊಳ್ಳಲೇ ಆಗಲಿ, ಇನ್ನೊಬ್ಬರನ್ನು ಪ್ರೀತಿಸಲೇ ಆಗಲಿ, ನಿಮ್ಮ ಅಹಂಕಾರವನ್ನು ಬದಿಗಿಟ್ಟರೆ ಮಾತ್ರ ಪ್ರೀತಿಸಲು ಸಾಧ್ಯ. ಜನರು ಯಾವಾಗಲೂ ತಮ್ಮನ್ನು ಪ್ರೀತಿಸುವವರೊಂದಿಗೆ ಇರಬಯಸುತ್ತಾರೆಯೇ ಹೊರತು, ನಿನಗಿಂತ ನಾನು ಮೇಲೆ ಎಂದು ನಂಬಿರುವವರೊಡನೆ ಅಲ್ಲ. ಅಹಂ ಎನ್ನುವುದು ಎಲ್ಲರಲ್ಲೂ ಅಲ್ಪಸ್ವಲ್ಪ ಇರುತ್ತದೆ. ಆದರೆ, ಅದು ನಮ್ಮಲ್ಲಿದೆ ಎಂದು ಕಂಡುಕೊಳ್ಳುವುದು ಅದನ್ನು ದೂರವಿಡಲು ಮಾಡಬೇಕಾದ ಮೊದಲ ಪ್ರಯತ್ನ. 

ಗಾಸಿಪ್ ಹೊಡೆಯೋದ್ರಲ್ಲಿ ಗಂಡುಹೈಕ್ಳೂ ಎತ್ತಿದ ಕೈ!

ಅಹಂಕಾರವು ಮಾತುಕತೆಯನ್ನು ಹಾಳು ಮಾಡಬಲ್ಲದು

ನೀವು ನಿಮ್ಮ ಸಂಗಾತಿಯೊಡನೆ ಯಾವುದಾದರೂ ವಿಷಯ ಮಾತನಾಡಬೇಕೆಂದು ಯೋಚಿಸಿ ಮುಂಚೆಯಿಂದಲೇ ತಯಾರಿ ನಡೆಸಿಕೊಂಡಿದ್ದರೂ, ಅಹಂಕಾರ ಬಿಡದೆ ಮಾತನಾಡಿದರೆ, ಆ ಮಾತುಕತೆ ಸರಾಗವಾಗಿ ಸಾಗುವುದು ಸಾಧ್ಯವೇ ಇಲ್ಲ. ನಿಮ್ಮ ಸಂಗಾತಿ ನಿಮ್ಮ ಮೇಲೆ ಯಾವುದೋ ಕಾರಣಕ್ಕೆ ಬೇಸರ ಮಾಡಿಕೊಂಡಿದ್ದರೆ, ಅದನ್ನು ನಿಮಗೆ ಹೇಳಿದಾಗ ನಿಮ್ಮ ದುರಭಿಮಾನವೇ ಮೊದಲು ಮಾತನಾಡಿದರೆ ಕೆಲಸ ಕೆಟ್ಟಿತೆಂದೇ ಅರ್ಥ. ಅವರು ನಿಮ್ಮೊಂದಿಗೆ ಮಾತನಾಡಬೇಕೆಂದಾಗಲೇ, ನನ್ನ ಬಗ್ಗೆ ಏನೇ ಬೇಸರವಿದ್ದರೂ ಹೇಳಿಬಿಡಿ, ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ ಎಂದು ನೀವೇ ಹೇಳಿದರೆ, ಅವರೂ ಕಂಫರ್ಟ್ ಅನುಭವಿಸುತ್ತಾರೆ. ಅಷ್ಟೇ ಅಲ್ಲ, ನಿಮ್ಮ ಮೇಲಿನ ದೂರುಗಳೂ ಸಡಿಲಾಗುತ್ತವೆ. 

ಅಹಂ ನಿಮ್ಮನ್ನು ಬೆಳೆಯಗೊಡುವುದಿಲ್ಲ

ಅತಿಯಾದ ಅಹಂಕಾರ ನಿಮ್ಮನ್ನು ಹಟಮಾರಿಯಾಗಿಸುತ್ತದೆ. ಹಟಮಾರಿಯಾದಾಗ ನೀವು ಇನ್ನೊಬ್ಬರ ಮಾತುಗಳನ್ನು ಅಥವಾ ಸಲಹೆಗಳನ್ನು ಕೇಳಿಸಿಕೊಳ್ಳುವುದಿಲ್ಲ. ಈ ಮೂಲಕ ನಿಮ್ಮ ಯಶಸ್ಸಿಗೆ ನೀವೇ ಕಲ್ಲು ಹಾಕಿಕೊಳ್ಳುತ್ತೀರಿ. 

ನಿಮ್ಮ ವೈಚಾರಿಕತೆ ಕುಗ್ಗಿಸುತ್ತದೆ

ವಾದದಲ್ಲಿ ನೀವು ಗೆದ್ದು, ಎದುರಿನವರು ತಪ್ಪು ಎಂದು ಸಾಬೀತುಮಾಡುವುದೇ ನಿಮ್ಮ ಗುರಿಯಾದಾಗ ತರ್ಕಹೀನರಾಗಿ ಮಾತನಾಡಲು ಆರಂಭಿಸುತ್ತೀರಿ. ನಿಮ್ಮ ಮಾತುಗಳು ಇತರರಿಗೆ ಅಸಂಬದ್ಧವೆನಿಸಲಾರಂಭಿಸುತ್ತವೆ. ಕಡೆಗೆ ನೀವಾಡಿದ ಮಾತುಗಳ ಬಗ್ಗೆ ನೀವೇ ಕೊರಗಲಾರಂಭಿಸುತ್ತೀರಿ. 

ಅಹಂಕಾರವು ಅನಾರೋಗ್ಯಕಾರಿ ಸ್ಪರ್ಧೆಗೆ ದೂಡುತ್ತದೆ

ನೀವು ಹೇಳಿದ್ದೇ ಸರಿ, ಮಾಡಿದ್ದೇ ನೀತಿ ಎಂದು ವಾದಿಸಲು, ಸಾಧಿಸಲು ಹೋದಾಗ ಅದು ನಿಮ್ಮನ್ನು ಕೆಟ್ಟ ಕೆಲಸಗಳನ್ನು ಮಾಡಲು ಪ್ರೇರೇಪಿಸಬಹುದು. ಇನ್ನೊಬ್ಬರ ಬಗ್ಗೆ ವೃಥಾ ಸುಳ್ಳು ಆರೋಪಗಳನ್ನು ಹೊರಿಸಲು ಕಲಿಯುತ್ತೀರಿ. ಇನ್ನೊಬ್ಬರು ಹೊಂದಿದ್ದೆಲ್ಲ ಬೇಕು ಎಂದು ಸ್ಪರ್ಧೆಗೆ ಬಿದ್ದವರಂತೆ ಪಡೆಯಲು ಹೊರಡುತ್ತೀರಿ. ಇದರಿಂದ ನಿಮ್ಮ ನೆಮ್ಮದಿ ಹಾಗೂ ತೃಪ್ತಿ ಹಾಳಾಗುತ್ತದೆ. 

ಅಹಂಕಾರ ನಿಮ್ಮ ಸಂತೋಷ ಹಾಳು ಮಾಡುತ್ತದೆ

ಪರೀಕ್ಷೆಯೊಂದನ್ನು ಕಟ್ಟಿರುತ್ತೀರಿ. ನಾನು ಪಾಸಾಗದೆ ಇನ್ಯಾರು ಪಾಸಾಗಬೇಕು, ಯೂನಿವರ್ಸಿಟಿಯಲ್ಲಿ ಟಾಪರ್ ಆಗಿರಲಿಲ್ಲವೇ ಎಂದು ನಿಮ್ಮ ಪ್ರತಿಭೆ ಬಗ್ಗೆ ದುರಭಿಮಾನ ಬಂತೆಂದು ಇಟ್ಟುಕೊಳ್ಳಿ. ಈ ಅತಿಯಾದ ವಿಶ್ವಾಸದಿಂದ ಓದುವುದು ಕಡಿಮೆ ಮಾಡುತ್ತೀರಿ. ಬರೆಯುವ ಬೇರೆ ಬೇರೆ ಟೆಕ್ನಿಕ್ ಕಂಡುಕೊಳ್ಳಲು ಯತ್ನಿಸುವುದಿಲ್ಲ. ಕಡೆಗೆ ಪರೀಕ್ಷೆಯಲ್ಲಿ ಸೋಲುತ್ತೀರಿ. ಅಹಂಕಾರವು ಯಾವಾಗಲೂ ಪೆಟ್ಟು ತಿಂದೇ ತಿನ್ನುತ್ತದೆ. ಅಹಂಕಾರವು ಸದಾ ನಿಮ್ಮನ್ನು ಒತ್ತಡದಲ್ಲಿರಿಸುತ್ತದೆ. ಜನರನ್ನು, ಪ್ರೀತಿಯನ್ನು, ಗೆಲುವನ್ನು, ತೃಪ್ತಿಯನ್ನು ಕಳೆದುಕೊಂಡ ಮೇಲೆ ಸಂತೋಷ, ನೆಮ್ಮದಿ ನಿಮ್ಮೊಂದಿಗೆ ಉಳಿಯುವುದಾದರೂ ಹೇಗೆ ?
 

click me!