ಕಳೆದು ಹೋದ 2022ನೇ ವರ್ಷವು ರೈತರ ಬೆಳೆಗಳ ದರ ಮನಸ್ಸಿಗೆ ಸಮಾಧಾನ ನೀಡಿ ರೈತರಿಗೆ ಉತ್ತಮ ಬದುಕು ನೀಡಿದ್ದರೂ ರೋಗಗಳು ಬಾಧಿಸಿ ಮುಂದಿನ ಬೆಳೆಯ ಮೇಲೂ ಕರಿನೆರಳಿನ ಛಾಯೆ ಮೂಡಿಸಿವೆ.
(2022-ಹಿನ್ನೋಟ)
ಮಂಜುನಾಥ ಸಾಯಿಮನೆ
undefined
ಶಿರಸಿ (ಡಿ.31) : ಕಳೆದು ಹೋದ 2022ನೇ ವರ್ಷವು ರೈತರ ಬೆಳೆಗಳ ದರ ಮನಸ್ಸಿಗೆ ಸಮಾಧಾನ ನೀಡಿ ರೈತರಿಗೆ ಉತ್ತಮ ಬದುಕು ನೀಡಿದ್ದರೂ ರೋಗಗಳು ಬಾಧಿಸಿ ಮುಂದಿನ ಬೆಳೆಯ ಮೇಲೂ ಕರಿನೆರಳಿನ ಛಾಯೆ ಮೂಡಿಸಿವೆ. ಹೌದು, ಜಿಲ್ಲೆಯ ಕೃಷಿಕರಿಗೆ ಈ ಗೊಂದಲದ ಸ್ಥಿತಿಯನ್ನು ಕಳೆದು ಹೋದ ವರ್ಷ ನಿರ್ಮಿಸಿದೆ. ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಅಡಕೆ ಬೆಳೆ ಪ್ರಧಾನ. ಕಳೆದ ಕೆಲ ವರ್ಷಗಳಿಂದ 17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಅಡಕೆ ಬೆಳೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗಿದೆ. 2022 ಅಡಕೆ ಬೆಳೆ ವಿಸ್ತರಣೆಗೆ ಇನ್ನಷ್ಟುದಾಪುಗಾಲು ಹಾಕಿ 23 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಿಕೊಂಡಿದೆ.
ಅಡಕೆ ಬೆಳೆ ವಿಸ್ತರಣೆ:
ಕಾರವಾರ ತಾಲೂಕನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಭತ್ತದ ಬೆಳೆಯನ್ನು ನುಂಗಿ ಅಡಕೆ ಈ ವರ್ಷ ವಿಸ್ತರಿಸಿಕೊಂಡಿತು. ಮುಂಡಗೋಡ, ಹಳಿಯಾಳ ತಾಲೂಕಿನಲ್ಲಿ ಸಹ ತಂಪು ರಹಿತ ಭೂಮಿಯಲ್ಲಿ ಬೋರ್‌ವೆಲ್ ಕೊರೆಯುವ ಸದ್ದು ಕೇಳಿಸಿತು.
ಅಡಕೆ ತೋಟ ವೀಕ್ಷಣೆ ಮಾಡಿದ ಸಚಿವ ಮುನಿರತ್ನ; ಚುನಾವಣಾ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ ರೈತರು!
ಒಂದಿಂಚು, ಎರಡಿಂಚು ನೀರು ಬೋರ್‌ವೆಲ್‌ನಲ್ಲಿ ಬಂದಿದ್ದೇ ಮತ್ತೆ ನೂರಾರು ಎಕರೆ ಪ್ರದೇಶದಲ್ಲಿ ಅಡಕೆ ಗಿಡ ನೆಡುವಿಕೆ ನಡೆದಿದೆ. ಇದಕ್ಕೆಲ್ಲ ಕಾರಣ ಅಡಕೆಯ ಕಣ್ಣು ಕುಕ್ಕುವ ದರ. ಇತ್ತೀಚಿನ ವರ್ಷಗಳಲ್ಲಿಯೇ ಅಡಕೆಗೆ ಉತ್ತಮ ದರ 2022 ರಲ್ಲಿ ಲಭಿಸಿದೆ. ವರ್ಷಾರಂಭದಲ್ಲಿ ಪ್ರತಿ ಕ್ವಿಂಟಲ್ ಕೆಂಪಡಕೆಗೆ .45 ಸಾವಿರ, ಚಾಲಿ ಅಡಕೆಗೆ ಸರಾಸರಿ .43 ಸಾವಿರ ದರ ಲಭಿಸಿದೆ.
ವರ್ಷದ ಅಂತ್ಯದ ವೇಳೆ ಈ ದರ ಕುಸಿತವಾಗುತ್ತಾ ಸರಾಸರಿ ಎರಡೂ ವಿಧದ ಅಡಕೆಗೆ .37-38 ಸಾವಿರ ಲಭಿಸಿದೆ. ದರ ಕುಸಿತ ತಪ್ಪಿಸಲು ಸಹಕಾರಿ ಸಂಘಗಳು ಅಡಕೆಯ ನೇರ ಖರೀದಿಗೂ ಮುಂದಾಗಿವೆ. ಜಿಲ್ಲೆಯ ಸಹಕಾರಿ ರಂಗದ ದಿಗ್ಗಜ ಟಿಎಸ್‌ಎಸ್ ಈ ದರ ಕುಸಿತ ತಾತ್ಕಾಲಿಕ. ರೈತರು ಧೃತಿಗೆಡಬೇಡಿ, ನಾವಿದ್ದೇವೆ ಎಂಬ ಅಭಯಹಸ್ತ ನೀಡಿವೆ.
ಆದರೆ, ರೈತರು ದರ ಕುಸಿತಕ್ಕಿಂತ ಜಾಸ್ತಿ ಕಂಗಾಲಾಗಿದ್ದು ಅಡಕೆ ಮರಗಳಿಗೆ ಆವರಿಸಿದ ಎಲೆ ಚುಕ್ಕಿ ರೋಗದಿಂದಾಗಿ. ಬೇರೆ ಜಿಲ್ಲೆಗಳಲ್ಲಿ ಮಾತ್ರ ಕೇಳಿದ್ದ ಎಲೆ ಚುಕ್ಕಿ ರೋಗ ವರ್ಷದ ಮಧ್ಯಭಾಗದಲ್ಲಿ ಜಿಲ್ಲೆಯ ಹಳ್ಳಿ ಹಳ್ಳಿಗಳಿಗೆ ಆವರಿಸಿಕೊಂಡಿದೆ.
ಹಸಿರಿನ ಮಲೆನಾಡಿನ ತೋಟಗಳೆಲ್ಲ ಹಳದಿ ಬಣ್ಣದ ತೋಟಗಳಾಗಿ ಪರಿವರ್ತನೆ ಆಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರತಿ ಪಂಚಾಯಿತಿ ಮಟ್ಟದಲ್ಲಿ ಓಡಾಟ ಮಾಡುತ್ತ, ರೋಗ ನಿಯಂತ್ರಣಕ್ಕೆ ಅವಿರತ ಪ್ರಯತ್ನ ನಡೆಸಿದ್ದರೂ ಯಥಾ ಸ್ಥಿತಿಯೇ ಮುಂದುವರಿದಿದೆ.
ಕಾಳು ಮೆಣಸು ಕಳೆದ ವರ್ಷ ಕಟ್ಟೆರೋಗ ಬಂದು ಹಾಳಾಗಿದ್ದರೂ 2022ರಲ್ಲಿ ರೈತರು ಈ ಬೆಳೆಯ ಮರುಸ್ಥಾಪನೆಗೆ ಪ್ರಯತ್ನ ನಡೆಸಿದ್ದಾರೆ. ಇದರ ಫಲವಾಗಿ ಫಣಿಯೂರು, ಮಲ್ಲಿಸರ ಜಾತಿಯ ಕಾಳು ಮೆಣಸು ಮತ್ತೆ ಬೆಳೆ ಬಂದಿದೆ. ಆದರೆ, ಕಾಳು ಮೆಣಸಿಗೆ ಹೋದ ಮಾನ ಮಾತ್ರ ಮತ್ತೆ ಬರಲಿಲ್ಲ. ವರ್ಷದ ಮಧ್ಯಭಾಗದಲ್ಲಿ ಒಂದೆರಡು ದಿನ ಪ್ರತಿ ಕ್ವಿಂಟಲ್‌ಗೆ .50 ಸಾವಿರ ದರ ಲಭಿಸಿದ್ದರೂ ಆ ಬಳಿಕ ಮತ್ತೆ ಕುಸಿದಿದೆ.
ಈಗ ಜಿಲ್ಲೆಯಲ್ಲಿ ಅಡಕೆಯ ಕಟಾವು ಕಾರ್ಯ ನಡೆಯುತ್ತಿದೆ. ಆದರೆ, ಈ ವರ್ಷದ ಘೋರ ಮಳೆಗಾಲ ಬಹುತೇಕ ರೈತರ ಅರ್ಧದಷ್ಟುಬೆಳೆಯನ್ನು ನಾಶಪಡಿಸಿದೆ. ಕೊಳೆ ರೋಗ ಜಿಲ್ಲೆಯ ಎಲ್ಲೆಡೆ ತೀವ್ರವಾಗಿದ್ದರೂ, ಬೆಳೆ ವಿಮೆ ತುಂಬಿಸಿಕೊಂಡ ಕಂಪನಿಗಳಿಗೆ ಇದು ಗಮನಕ್ಕೆ ಬಂದೇ ಇಲ್ಲ. ಪ್ರತಿ ಗುಂಟೆಗೆ .100-150 ಬಿಡಿಗಾಸಿನ ಪರಿಹಾರ ಘೋಷಣೆ ಆದಾಗ ಕಂಗಾಲಾದ ರೈತರು ರಸ್ತೆ ತಡೆ ಸಹ ನಡೆಸಿ ಪ್ರತಿಭಟಿಸಿದ್ದಾರೆ. ಆದರೆ, ಪ್ರಯೋಜನ ಮಾತ್ರ ಶೂನ್ಯ.
ಅಡಕೆ ಮರ ಬಳಿಕ ಈಗ ತೆಂಗಿನ ಮರ ಏರುವ ಟ್ರೀ ಬೈಕ್ ಅಭಿವೃದ್ಧಿ
ಹೈನುಗಾರಿಕೆಗೆ ಉತ್ತೇಜನ:
ಜಿಲ್ಲೆಯ ಹೈನುಗಾರಿಕೆಯಲ್ಲಿ ಧಾರವಾಡ ಹಾಲು ಒಕ್ಕೂಟ ಮಹತ್ತರ ಪಾತ್ರ ವಹಿಸಿದ ವರ್ಷ 2022. ಜಿಲ್ಲೆಯಲ್ಲಿಯೇ ಹಾಲು ಪ್ಯಾಕಿಂಗ್ ಘಟಕ ಸ್ಥಾಪನೆ ಮೂಲಕ ರೈತರ ಹೈನುಗಾರಿಕೆ ಉತ್ತೇಜಿಸಿದೆ. ಹಾಲಿನ ಖರೀದಿ ದರ ಏರಿಸಿದ್ದರೂ ಪಶು ಆಹಾರದಲ್ಲಿಯೂ ಈವರ್ಷ ಏರಿಕೆ ಆಗಿ ಕೊಟ್ಟೋನು, ಇಸ್ಕೊಂಡೋನು ಇಬ್ಬರೂ ಧಾರವಾಡ ಒಕ್ಕೂಟವೇ ಎಂಬಂತಾಯಿತು.
ದೇಶದಾದ್ಯಂತ ವ್ಯಾಪಿಸಿರುವ ಆಕಳುಗಳ ಚರ್ಮಗಂಟು ರೋಗ ಜಿಲ್ಲೆಯ ಹೈನುಗಾರಿಕೆಯ ಮೆಲೇ ಪ್ರಭಾವ ಬೀರಿದೆ. ವರ್ಷಾಂತ್ಯದಲ್ಲಿ ಚರ್ಮ ಗಂಟು ರೋಗ ಹಳ್ಳಿ ಹಳ್ಳಿ ವ್ಯಾಪಿಸಿಕೊಂಡು ಆಕಳ ಸಾವಿನ ಸಂಖ್ಯೆ ಜಾಸ್ತಿ ಆಗಿದೆ. ಇನ್ನು ಭತ್ತದ ಬೆಳೆ ಈ ವರ್ಷ ಉತ್ತಮವಾಗಿತ್ತಾದರೂ ಕಟಾವಿನ ವೇಳೆ ಮಳೆ ಕಾಟ ಕೊಟ್ಟಿದೆ. ಕೆಲ ರೈತರು ಹಾನಿ ಅನುಭವಿಸಿದ್ದಾರೆ.