ಹವಾಮಾನ ಇಲಾಖೆಯಿಂದ ಮಳೆ ಮುನ್ಸೂಚನೆ

By Kannadaprabha NewsFirst Published May 5, 2021, 9:42 AM IST
Highlights

ಮೈಸೂರು ಜಿಲ್ಲೆಯಲ್ಲಿ ಮೇ 5 ರಿಂದ 9 ರವರೆಗೆ ಮೋಡಕವಿದ ವಾತಾವರಣ ಇರಲಿದ್ದು ತುಂತುರು ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಮೈಸೂರು (ಮೇ.05):  ಭಾರತೀಯ ಹವಾಮಾನ ಇಲಾಖೆಯ ಈ ವಾರದ ಮುನ್ಸೂಚನೆ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಮೇ 5 ರಿಂದ 9 ರವರೆಗೆ ಮೋಡಕವಿದ ವಾತಾವರಣ ಇರಲಿದ್ದು ತುಂತುರು ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ, ಕೃಷಿ ಹವಾಮಾನ ಕ್ಷೇತ್ರ ವಿಭಾಗ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಸಲಹೆಗಳು- ಈ ವರ್ಷ ಉತ್ತಮ ಮುಂಗಾರು ಮಳೆ ಬರುವ ಮುನ್ಸೂಚನೆಯಿದೆ. ಆದ್ದರಿಂದ ರೈತರು ಆತಂಕಕ್ಕೂಳಗಾಗುವ ಅವಶ್ಯಕತೆ ಇಲ್ಲ. ಮುನ್ಸೂಚನೆಯಂತೆ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಸಾಮಾನ್ಯವಾಗಿರುತ್ತದೆ.

ಮೇ ತಿಂಗಳಲ್ಲಿ ಬಿತ್ತನೆ ಮಾಡಬಹುದಾದ ತಳಿಗಳು:- ರಾಗಿ- ಇಂಡಾಫ್‌-9, ಜಿಪಿಯು-48. ಅಲಸಂದೆ- ಟಿವಿಎಕ್ಸ್‌-944, ಕೆಬಿಸಿ-1, ಕೆಬಿಸಿ-2. ಉದ್ದು- ಕರಗಾಂವ್‌-3, ಟಿ-9, ರಶ್ಮಿ(ಎಲ್‌ಬಿಜೆ -625). ರೈತರು ಪ್ರಮಾಣಿಕರಿಸಿದ ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು.

ಸೈಕ್ಲೋನ್ ಸರ್ಕ್ಯುಲೇಷನ್: ಮುಂದಿನ ಕೆಲವು ದಿನ ಮಳೆ ...

ಮಳೆ ಬಂದಿರುವ ಕಡೆ ರೈತರು ಇಳಿಜಾರಿಗೆ ಅಡ್ಡಲಾಗಿ ಮಾಗಿ ಉಳುಮೆ ಮಾಡಬೇಕು. ಇದರಿಂದ ನೀರು ಇಂಗುವಿಕೆ ಹೆಚ್ಚಾಗುತ್ತದೆ ಮತ್ತು ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ. ರೈತರು ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡಿ ಜಮೀನನ್ನು ಪೂರ್ವ ಮುಂಗಾರು ಬಿತ್ತನೆಗೆ ಸೂಕ್ತ ರೀತಿಯಲ್ಲಿ ತಯಾರಿಸಿಕೊಳ್ಳುವುದು.

ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡುವಾಗ ರೈತರು ಬೀಜಗಳನ್ನು ರೈಜೋಬಿಯಂ ಸೂಕ್ಷ್ಮಾಣು ಜೀವಿಗಳಿಂದ ಉಪಚರಿಸಬೇಕು (20 ಗ್ರಾಂ / ಕೆ.ಜಿ.). ಹಸಿರೆಲೆ ಗೊಬ್ಬರಗಳಾದ ಸೆಣಬು ಅಥವಾ ಡಯಾಂಚ ಮತ್ತು ದ್ವಿದಳ ಧಾನ್ಯಗಳಾದ ಅಲಸಂದೆ, ಹೆಸರು, ಅವರೆ, ಹುರುಳಿ, ಉದ್ದು ಇತ್ಯಾದಿ ಬೆಳೆಗಳನ್ನು ಸೂಕ್ತ ಪ್ರದೇಶಗಳಲ್ಲಿ ಬಿತ್ತನೆ ಮಾಡುವುದು. ನೀರು ಬರಿದಾಗಿರುವ ಕೆರೆಗಳಲ್ಲಿ ಗೋಡು ಮಣ್ಣನ್ನು ತೆಗೆದು ಭೂಮಿಗೆ ಸೇರಿಸುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು.

ಎಲ್ಲ ಜಾನುವಾರುಗಳಿಗೆ ಜಂತುನಾಶಕ ಔಷಧಿ ಹಾಗೂ ಕಾಲು ಮತ್ತು ಬಾಯಿ ಬೇನೆ , ಚೆಪ್ಪೆ ಬೇನೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಚುಚ್ಚುಮದ್ದನ್ನು ಹಾಕಿಸಬೇಕು. ಆಡು ಮತ್ತು ಕುರಿಗಳಿಗೆ ಎಂಟರೊಟಾಕ್ಸೀಮಿಯಾ ರೋಗ ನಿರೋಧಕ ಹಾಕಿಸಬೇಕು ಎಂದು ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪಿ. ಪ್ರಕಾಶ್‌, ಸಹ ಸಂಶೋಧಕ ಎನ್‌. ನರೇಂದ್ರಬಾಬು ಸಲಹೆ ನೀಡಿದ್ದಾರೆ.

click me!