ಮಂಗಳೂರು: ನೆರೆ ಸಂತ್ರಸ್ತರಿಗೆ ಪರಿಹಾರದಲ್ಲಿ ತಾರತಮ್ಯ

By Kannadaprabha NewsFirst Published Aug 22, 2019, 10:37 AM IST
Highlights

ಪ್ರಾಕೃತಿಕ ದುರಂತ ಸಂತ್ರಸ್ತರಾದ ಕೊಡಗಿನವರಿಗೆ 9 ಲಕ್ಷ ರು., ಬೆಳ್ತಂಗಡಿಯವರಿಗೆ 5 ಲಕ್ಷ ರು. ಘೋಷಿಸಿರುವ ರಾಜ್ಯ ಸರ್ಕಾರ, ಸುಳ್ಯದವರಿಗೆ ಮಾತ್ರ ಜುಜುಬಿ ಮೊತ್ತದ ಪರಿಹಾರ ನೀಡಿ ಕೈತೊಳೆದುಕೊಂಡು ತಾರತಮ್ಯ ಮಾಡಿದೆ ಎಂಬ ಆರೋಪ ಹುಟ್ಟಿಕೊಂಡಿದೆ.

ಮಂಗಳೂರು(ಆ.22): ಕಳೆದ ವರ್ಷ ಆ.15ರ ಸ್ವಾತಂತ್ರ್ಯೋತ್ಸವದ ಮರುದಿನ ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪ ರಾಜ್ಯವನ್ನೇ ತಲ್ಲಣ ಗೊಳಿಸಿತ್ತು. ಇಡೀ ಆಡಳಿತ ಕೊಡಗಿನತ್ತ ಗಮನ ಕೇಂದ್ರೀಕರಿಸಿತು. ದೇಶವ್ಯಾಪಿ ಜನತೆ ಸಂತ್ರಸ್ತರ ನೆರವಿಗೆ ನಿಂತಿತು. ಈಗ ಸುಳ್ಯದಲ್ಲಿ ಮಾತ್ರ ಪ್ರವಾಹದಿಂದ ತತ್ತರಿಸಿದ ಜನರಿಗೆ ಪರಿಹಾರದಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ದೂರು ಕೇಳಿ ಬರುತ್ತಿದೆ.

ಈ ವರ್ಷ ಬೆಳ್ತಂಗಡಿಯ ಚಾರ್ಮಾಡಿ ಗ್ರಾಮ, ಕಡಿರುದ್ಯಾವರ ಗ್ರಾಮ, ಮಿತ್ತಬಾಗಿಲು ಗ್ರಾಮಗಳು ಕಳೆದ ವರ್ಷದ ಜೋಡುಪಾಲ ಘಟನೆಯನ್ನು ನೆನಪಿಸುವ ರೀತಿಯಲ್ಲಿ ಪ್ರಾಕೃತಿಕ ದುರಂತಕ್ಕೆ ಒಳಗಾಗಿವೆ. ಮನೆಗಳು, ಸೇತುವೆಗಳು, ರಸ್ತೆಗಳು ಕೊಚ್ಚಿ ಹೋಗಿವೆ. ನೂರಾರು ಎಕರೆ ಕೃಷಿ ಭೂಮಿ ನಾಶವಾಗಿವೆ.

ಅಮ್ಮ ಕರೆಸಿಕೊಂಡರೆ ಕೊಲ್ಲೂರಿಗೆ ಬರುವೆ ಎಂದ್ರು ಮೋದಿ

ಕಳೆದ ವರ್ಷ ದುರಂತದ ವೇಳೆ ಅಧಿಕಾರದಲ್ಲಿದ್ದ ಕುಮಾರಸ್ವಾಮಿ ಸರ್ಕಾರ ಮನೆ ಬಿದ್ದ ಪ್ರಕರಣಕ್ಕೆ 95 ಸಾವಿರ ರು. ಪರಿಹಾರ ಕೊಟ್ಟದ್ದಲ್ಲದೆ 9 ಲಕ್ಷ ರು. ವೆಚ್ಚದಲ್ಲಿ ಹೊಸ ಮನೆ ನಿರ್ಮಿಸಿಕೊಡುತ್ತಿದೆ. ಮನೆ ನಿರ್ಮಾಣವಾಗುವವರೆಗೆ ಒಂದು ಕುಟುಂಬಕ್ಕೆ ತಿಂಗಳಿಗೆ . 10 ಸಾವಿರ ರು.ನಂತೆ ಮನೆ ಬಾಡಿಗೆಯನ್ನು ಸರ್ಕಾರವೇ ನೀಡುತ್ತಿದೆ.

ಉಡುಪಿ: 'ಗಾಂಧಿಯನ್ನು ಅವಮಾನಿಸಿದ್ದಕ್ಕೆ ನಳಿನ್‌ಗೆ ಪ್ರಮೋಷನ್'

ಬೆಳ್ತಂಗಡಿಯ ಪ್ರಕೃತಿ ದುರಂತ ವೀಕ್ಷಿಸಲು ಬಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳ್ತಂಗಡಿಯಲ್ಲಿ ದುರಂತದಿಂದ ಹಾನಿಗೀಡಾದ ಮನೆಗಳ ದುರಸ್ತಿಗೆ ತಲಾ 1 ಲಕ್ಷ ರು., ಸಂಪೂರ್ಣ ಮನೆ ನಾಶವಾದವರಿಗೆ 5 ಲಕ್ಷ ರು, ಹೊಸ ಮನೆ ಆಗುವವರೆಗೆ ತಿಂಗಳಿಗೆ 5 ಸಾವಿರ ರು. ಮನೆ ಬಾಡಿಗೆ ಸರ್ಕಾರದಿಂದ ನೀಡುವುದಾಗಿ ಘೋಷಿಸಿದ್ದಾರೆ.

ಸುಳ್ಯದವರಿಗೆ ಏನು ಇಲ್ಲ!:

ಕೊಡಗಿನ ದುರಂತ ನಡೆದ ದಿನವೇ ಕೊಡಗಿನ ಇನ್ನೊಂದು ಮಗ್ಗುಲಿನ ಬೆಟ್ಟಗಳ ತಪ್ಪಲಲ್ಲಿರುವ ಸುಳ್ಯ ತಾಲೂಕಿನ ಕಲ್ಮಕಾರು, ಮಡಪ್ಪಾಡಿ ಮರ್ಕಂಜ ಮತ್ತು ಅರಂತೋಡಿನ ಅಡ್ತಲೆಯಲ್ಲಿ ಗುಡ್ಡ ಬಾಯ್ತೆರೆದು ಜಾರಿ ಮನೆಗಳು ಒಡೆದು ಹೋಗಿ ಶಾಶ್ವತವಾಗಿ ಅಲ್ಲಿ ನೆಲೆಸಲಾರದ ಪರಿಸ್ಥಿತಿಗೆ ಒಳಗಾಗಿರುವ ಕುಟುಂಬಗಳಿಗೆ 9 ಲಕ್ಷರು.ಗಳ ಮನೆಯೂ ಇಲ್ಲ. ತಿಂಗಳ ಬಾಡಿಗೆಯೂ ಇಲ್ಲ ಎಂಬಂತಾಗಿದೆ.

ಕಲ್ಮಕಾರು ಗ್ರಾಮದ ಗುಳಿಕ್ಕಾನ ಎಂಬಲ್ಲಿ ಬೆಟ್ಟಬೃಹತ್ತಾಗಿ ಬಿರುಕು ಬಿಟ್ಟು ಗುಡ್ಡ ಜಾರಿದ ಪರಿಣಾಮ ಅಂತಿಬೆಟ್ಟು ಉಮೇಶ್‌ಗೌಡ ಹಾಗೂ ಮಾಣಿಬೆಟ್ಟು ಲೋಕಯ್ಯ ಗೌಡ ಎಂಬವರ ಮನೆಗಳು ಬಿರುಕು ಬಿಟ್ಟವು. ಅಲ್ಲೆ ತಪ್ಪಲಲ್ಲಿರುವ ಚೆನ್ನ ಅಜಲ, ಕುಕ್ಕ ಅಜಲ, ಪ್ರಶಾಂತ ಅಜಲ, ದೆಯ್ಯು ಅಜಲ, ಅಂಗಾರ ಅಜಲ, ಬಾಬು ಅಜಲ, ಬಾಳಪ್ಪ ಅಜಲ, ಮತ್ತು ಪುಟ್ಟಣ್ಣ ಅಜಲ ಎಂಬವರ ಮನೆಗಳಿಗೆ ಗುಡ್ಡ ಇನ್ನಷ್ಟುಜಾರಿದರೆ ಅಪಾಯವಾಗುತ್ತದೆ ಎಂದು ಅವರನ್ನು ಕೊಲ್ಲಮೊಗ್ರದ ನಿರಾಶ್ರಿತರ ಕೇಂದ್ರಗಳಲ್ಲಿ ಒಂದು ತಿಂಗಳು ಇರಿಸಲಾಯಿತು. ಮಳೆಗಾಲ ಕಳೆದ ಬಳಿಕ ಅವರು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರೂ, ಈ ಬಾರಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಪುನಃ ಕಲ್ಮಕಾರು ಸಂತೆಡ್ಕಕ್ಕೆ ಕರೆ ತಂದು ಶಾಲೆಯಲ್ಲಿ ಕುಳ್ಳಿರಿಸಲಾಗಿದೆ. ಅವರಿಗೆ ಬೇರೆ ಕಡೆ ನಿವೇಶನ ನೀಡಿ, ಪಂಚಾಯಿತಿನಿಂದ ಇಂದಿರಾ ಆವಾಸ್‌ ಮನೆ ಕೊಡುವ ಪ್ರಯತ್ನದ ಬಗ್ಗೆ ಒಂದು ವರ್ಷದಿಂದ ಹೇಳಲಾಗುತ್ತಿದೆಯೇ ಹೊರತು ಇದುವರೆಗೆ ಪ್ರಗತಿಯಾಗಿಲ್ಲ.

ನಿವೇಶನ ಕೊಡುವುದು ಯಾವಾಗ?:

ಮಡಪ್ಪಾಡಿಯಲ್ಲಿ 2 ಮನೆಗಳು ಗುಡ್ಡ ಜಾರಿ ಬಂದುದರಿಂದ ವಾಸಕ್ಕೆ ಅಯೋಗ್ಯವಾಗಿದೆ. ಒಂದು ಯಶೋದರ ಅಂಬೆಕಲ್ಲು ಎಂಬವರದ್ದು. ಇನ್ನೊಂದು ಚಿದ್ಗಲ್‌ ನಾರಾಯಣಗೌಡರದ್ದು. ಯಶೋಧರ ಗೌಡರ ಮನೆ ಇಳಿಜಾರಿನ ಬರೆಯಲ್ಲಿದ್ದು, ಅವರ ಮನೆಯ ಗೋಡೆವರೆಗಿನ ತೋಟ ಜಾರಿ ಕೆಳಗಡೆ ಹೋಗಿದೆ. ತೋಡು ಮುಚ್ಚಿ ಹೋಗಿ ತೋಟವಿಡೀ ನೀರು ಹರಿಯುತ್ತಿದೆ. ಮನೆ ಇಂದೋ ನಾಳೆಯೋ ಜರಿದು ಬೀಳುವುದು ಖಚಿತವಾದುದರಿಂದ ಅಲ್ಲಿ ವಾಸಿಸಬಾರದು ಎಂದು ಕಂದಾಯ ಇಲಾಖೆ ಸೂಚನೆ ನೀಡಿತ್ತು. ಆದರೆ ಅವರು ರಸ್ತೆಯ ಮೇಲ್ಬದಿಯಲ್ಲಿ ಶೆಡ್‌ ನಿರ್ಮಿಸಿ ಅದರಲ್ಲಿ ವಾಸಿಸುತ್ತಿದ್ದಾರೆ. ಹೊಸದಾಗಿ ಮನೆ ಕಟ್ಟಿಸಲು ಅವರ ಜಾಗ ಸುರಕ್ಷಿತವಲ್ಲದ ಕಾರಣ ಸೂಕ್ತ ಸ್ಥಳ ಸರ್ಕಾರದ ವತಿಯಿಂದ ಸಿಗುವ ನಿರೀಕ್ಷೆಯಲ್ಲಿ ಅವರಿದ್ದಾರೆ.

'ಮೋದಿ ಭೂತಾನ್‌ಗೆ ಹೋಗಿ ಮಕ್ಕಳ ಬೆನ್ನು ತಟ್ಟುವ ಬದಲು ಸಂತ್ರಸ್ತರ ಕಣ್ಣೀರೊರೆಸಲಿ'

ಚಿದ್ಗಲ್‌ ನಾರಾಯಣ ಗೌಡರ ಮನೆ ಗುಡ್ಡ ಜಾರಿದ ಜಖಂ ಆಗಿದ್ದು, ಅಲ್ಲಿ ವಾಸಿಸುವುದು ಅಪಾಯಕಾರಿ ಎಂದು ಅಧಿಕಾರಿಗಳು ಹೇಳಿದ ಮೇರೆಗೆ ಅವರು ಮನೆ ಖಾಲಿ ಮಾಡಿ ಸುಳ್ಯದಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ. ಇವರಿಬ್ಬರಿಗೂ ಮನೆ ನಾಶವಾದುದಕ್ಕಾಗಿ . 95 ಸಾವಿರ ರು. ಸಿಕ್ಕಿದ್ದು ಹೊರತುಪಡಿಸಿದರೆ, ಮಡಿಕೇರಿಯಲ್ಲಿ ಕೊಡುತ್ತಿರುವಂತೆ ಮನೆ ಬಾಡಿಗೆಯಾಗಲೀ, ಹೊಸಮನೆಯಾಗಲೀ ಸಿಕ್ಕಿಲ್ಲ.

ಮರ್ಕಂಜದಲ್ಲಿ 2 ಮನೆ:

ಮರ್ಕಂಜದ ಮಿನುಂಗೂರು ಸಮೀಪ ಮಾವಜಿ ಕೇಶವ ಗೌಡ ಹಾಗೂ ಉಬ್ರಾಳ ಮೇದಪ್ಪ ಗೌಡರ ಮನೆಗಳು ಪಕ್ಕದ ಗುಡ್ಡ ಬಾಯಿಬಿಟ್ಟು ಜಾರಿದ ಪರಿಣಾಮ ಬಿರುಕು ಬಿಟ್ಟು ಅಪಾಯದ ಪರಿಸ್ಥಿತಿಯಲ್ಲಿವೆ. ಅವರಿಬ್ಬರಿಗೂ ತಲಾ 95 ಸಾವಿರ ರು. ಪರಿಹಾರ ಧನ ನೀಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಕೊಡಗು ಮಾದರಿಯ ಪರಿಹಾರ ಇವರಿಗೆ ಕೊಟ್ಟಿಲ್ಲ. ಅರಂತೋಡು ಅಡ್ತಲೆಯ ದಿನೇಶ್‌ ಕಿರ್ಲಾಯ ಅವರಿಗೂ ಇದೇ ಪರಿಸ್ಥಿತಿ.

ತಾರತಮ್ಯ ಏಕೆ?:

ಕೊಡಗು ದುರಂತ ಸಂಭವಿಸಿದ ಸಂದರ್ಭದಲ್ಲೇ, ಅದೇ ಮಾದರಿಯ ದುರಂತದಿಂದ ಸುಳ್ಯ ತಾಲೂಕಿನ ಈ ಮನೆಗಳು ಅಪಾಯಕ್ಕೀಡಾಗಿ ವಾಸಕ್ಕೆ ಅಯೋಗ್ಯ ಎನಿಸಿದ್ದರೂ, ಕೊಡಗಿನಲ್ಲಿ ನೀಡಲಾಗುತ್ತಿರುವ ಪರಿಹಾರವನ್ನು ಇಲ್ಲಿಗೆ ಅನ್ವಯಿಸದೇ ಇರುವುದು ತಾರತಮ್ಯ ಅಲ್ಲವೇ ಎಂಬುವುದು ಇಲ್ಲಿನ ನಾಗರಿಕರ ಪ್ರಶ್ನೆಯಾಗಿದೆ.

click me!