ಮರಳಿ ಕಾಂಗ್ರೆಸ್ ಗೂಡು ಸೇರ್ತಾರಾ ಬಿಜೆಪಿ ನಾಯಕ?

By Kannadaprabha News  |  First Published Apr 28, 2024, 2:33 PM IST

ಲೋಕಸಭೆ ಫಲಿತಾಂಶ ಹೊರ ಬಿದ್ದ ನಂತರ ರಾಜಕೀಯ ಸ್ಥಿತ್ಯಂತರ ಆರಂಭವಾಗಲಿದ್ದು ಮೊದಲ ಫಲಾನುಭವಿಯಾಗಿ ತಿಪ್ಪಾರೆಡ್ಡಿ ಮರಳಿ ತವರು ಪಕ್ಷ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂಬುದು ಕಾಂಗ್ರೆಸ್, ಜೆಡಿಎಸ್ ವಲಯದ ಮಾತು. 


ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ(ಏ.28): ಮಾಜಿ ಶಾಸಕ, ಬಿಜೆಪಿಯ ಧುರೀಣ ಜಿ.ಎಚ್.ತಿಪ್ಪಾರೆಡ್ಡಿ ಕಾಂಗ್ರೆಸ್ ಗೆ ಮರಳುವರೇ? ಲೋಕಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಇಂತಹದ್ದೊಂದು ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳೆಯದಲ್ಲಿ ಇದು ದಟ್ಟವಾಗಿದೆ. ಇದಕ್ಕಾಗಿ ನೀಡಲಾಗುತ್ತಿರುವ ಸನ್ನಿವೇಶ, ಸಂದರ್ಭಗಳು ನಿಜವಿರಬಹುದೆಬ ಗಾಢ ಆಲೋಚನೆಗಳ ಕಟ್ಟಿ ಕೊಡುತ್ತಿವೆ.

Tap to resize

Latest Videos

undefined

ಲೋಕಸಭೆ ಫಲಿತಾಂಶ ಹೊರ ಬಿದ್ದ ನಂತರ ರಾಜಕೀಯ ಸ್ಥಿತ್ಯಂತರ ಆರಂಭವಾಗಲಿದ್ದು ಮೊದಲ ಫಲಾನುಭವಿಯಾಗಿ ತಿಪ್ಪಾರೆಡ್ಡಿ ಮರಳಿ ತವರು ಪಕ್ಷ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂಬುದು ಕಾಂಗ್ರೆಸ್, ಜೆಡಿಎಸ್ ವಲಯದ ಮಾತು. ಮೂಲತಹ ಕಾಂಗ್ರೆಸ್ಸಿಗರಾದ ತಿಪ್ಪಾರೆಡ್ಡಿ ಮೊದಲ ಬಾರಿಗೆ ಬಂಡುಕೋರರಾಗಿ ಸ್ಪರ್ಧಿಸಿ ಜಯ ಸಾಧಿಸಿ ನಂತರ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿ ಮೂರು ಬಾರಿ ಶಾಸಕರಾಗಿದ್ದರು. ಕಳೆದ ಚುನಾವಣೆಯಲ್ಲಿ ವೀರೇಂದ್ರ ಪಪ್ಪಿ ಅವರ ಕೈಯಲ್ಲಿ ಸೋಲನನುಭವಿಸಿದ್ದರು.

ಕರ್ನಾಟಕಕ್ಕೆ ಪ್ರಧಾನಿ ಮೋದಿಯಿಂದ ಪದೇ ಪದೇ ಅನ್ಯಾಯ: ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಜನರ ಕೈಗೆ ಸುಲಭವಾಗಿ ಸಿಗುವುದಿಲ್ಲ. ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕರೆದ ಕೆಡಿಪಿ ಸಭೆಗೂ ಹಾಜರಾಗುವುದಿಲ್ಲ. ಸಿಎಂ ಚಿತ್ರದುರ್ಗಕ್ಕೆ ಬಂದಾಗ ಮಾತ್ರ ಅಟೆಂಡೆನ್ಸ್ ಹಾಕುತ್ತಾರೆ ಎಂಬ ಗಂಭೀರ ಆರೋಪಗಳು ಅವರ ಮೇಲಿವೆ. ಲೋಕಸಭೆ ಚುನಾವಣೆ ವೇಳೆ ಅಷ್ಟಾಗಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳದ ವೀರೇಂದ್ರ ಪಪ್ಪಿ ತುಸು ಅಂತರ ಕಾಯ್ದುಕೊಂಡಿದ್ದರು. ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿಯೇ ವೀರೇಂದ್ರ ಪಪ್ಪಿ ಅವರನ್ನು ಕುಳ್ಳರಿಸಿಕೊಂಡು ಚುನಾವಣೆಯ ಗಂಭೀರವಾಗಿ ತೆಗೆದುಕೊಳ್ಳಬೇಕು. ಇದು ದೇಶದ ರಾಜಕೀಯದ ವಿಷಯ. ಲಘುವಾಗಿ ಸ್ವೀಕರಿಸಬಾರದು ಎಂಬ ಎಚ್ಚರಿಕೆ ರವಾನಿಸಿದ್ದರು. ಈ ವೇಳೆ ಎಲ್ಲ ಶಾಸಕರಿಗೂ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡಿದ್ದರು. ಸಿದ್ದರಾಮಯ್ಯ ಬಂದು ಹೋದ ನಂತರ, ಚುನಾವಣೆ ಇನ್ನೊಂದೆರೆಡು ದಿನ ಬಾಕಿ ಇದೆ ಎನ್ನುವಾಗ ಪಪ್ಪಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದರು. ಪಪ್ಪಿ ಜನರ ಕೈಗೆ ಸಿಗುವುದಿಲ್ಲವೆಂಬ ಜನಾಭಿಪ್ರಾಯ ರೂಪುಗೊಳ್ಳುತ್ತಿರುವುದನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಮುಂದಿನ ಚುನಾವಣೆ ಎದುರಿಸಲು ತಿಪ್ಪಾರೆಡ್ಡಿ ಸಜ್ಜಾಗಿದ್ದಾರೆ ಎಂಬುದು ಕಾಂಗ್ರೆಸ್ ವಲಯದ ಮನೋಭಿಪ್ರಾಯ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ನೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಮತದಾನಕ್ಕೆ ಕಡೇ ಎರಡು ದಿನ ಬಾಕಿ ಇರುವಾಗ ಸಂದರ್ಭಗಳನ್ನು ಸರಿಯಾಗಿ ಬಳಸಲಿಲ್ಲ, ಮತದಾರರ ಮನವೊಲಿಸುವಲ್ಲಿ ತಿಪ್ಪಾರೆಡ್ಡಿ ಹಿಂದೆ ಸರಿದರು. ಇದು ಕಾಂಗ್ರೆಸ್ ಗೆ ಸಹಾಯ ಮಾಡುವ ಉದ್ದೇಶದಂತೆ ಕಂಡು ಬಂತು. ಹಳ್ಳಿಗಳ ಸುತ್ತಾಡಲು ತಾವೂ ಹೋಗಲಿಲ್ಲ, ಹೋಗುವವರ ಬಿಡಲಿಲ್ಲವೆಂದು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಆರೋಪಿಸುತ್ತಾರೆ. ಎಲ್ಲಿಲ್ಲೆ ಏನೇನಾಯಿತು, ತಿಪ್ಪಾರೆಡ್ಡಿಯವರು ಕಡೇ ಎರಡು ದಿನಗಳಲ್ಲಿ ಏನು ಮಾಡಿದರು ಎಂಬ ಬಗ್ಗೆ ಮೈತ್ರಿ ಮುಖಂಡರು ಅವರದ್ದೇ ಆದ ವಿಸ್ತೃತ ವರದಿಯೊಂದನ್ನು ಸಿದ್ಧಪಡಿಸಿಕೊಂಡು ಜೇಬಲ್ಲಿ ಇಟ್ಟುಕೊಂಡಿದ್ದಾರೆ. ಫಲಿತಾಂಶ ಬಂದ ನಂತರ ಎಲ್ಲವೂ ಬಹಿರಂಗವಾಗಲಿರುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಮೋದಿ ಅಲೆಯಿಲ್ಲ, ಕಾಂಗ್ರೆಸ್ ಗ್ಯಾರಂಟಿ ಅಲೆಯಿದೆ: ಸಿಎಂ ಸಿದ್ದರಾಮಯ್ಯ

ಜಿಲ್ಲಾ ಕೇಂದ್ರದಲ್ಲಿ ಶಾಸಕರಾಗುವವರು ಸದಾ ಜನರ ಕೈಗೆ ಸಿಗಬೇಕು. ವೀರೇಂದ್ರ ಪಪ್ಪಿ ಕಟ್ಟಿಕೊಂಡು ಭವಿಷ್ಯದಲ್ಲಿ ರಾಜಕಾರಣ ಮಾಡುವುದು ಕಷ್ಟ. ಪಪ್ಪಿ ಶಾಸಕರಾದ ನಂತರ ಎಷ್ಟು ದಿನ ಚಿತ್ರದುರ್ಗ ಕ್ಷೇತ್ರದಲ್ಲಿ ಇದ್ದಾರೆ ಎಂಬುದಕ್ಕೆ ಅವರ ಮೊಬೈಲ್ ನ ಟವರ್ ರೀಡಿಂಗ್ ಪಡೆದುಕೊಂಡರೆ ಸಾಕು. ಇವರು ಎಂತಹ ಜನನಾಯಕ ಎಂಬುದು ಅರ್ಥವಾಗುತ್ತದೆ ಎಂದು ಹೇಳುತ್ತಾರೆ ಕಾಂಗ್ರೆಸ್ ಮುಖಂಡರು. ಹಾಗಾಗಿಯೇ ತಿಪ್ಪಾರೆಡ್ಡಿ ಅತ್ಯಂತ ಚಾಣಾಕ್ಷ ಹೆಜ್ಜೆ ಇಡುತ್ತಿದ್ದಾರೆ. ಭವಿಷ್ಯದ ರಾಜಕಾರಣಕ್ಕಾಗಿ ಮುಂದಿನ ವಿಧಾನಸಭೆ ಚುನಾವಣೆಗೆ ತಿಪ್ಪಾರೆಡ್ಡಿ ಈಗಿನಿಂದಲೇ ಚಿಂತಿಸಿದ್ದು ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ. ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಟಿಕೆಟ್ ನೀಡುವುದ ಕಷ್ಟ. ಕಾಂಗ್ರೆಸ್ ನಲ್ಲಿ ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ತಿಪ್ಪಾರೆಡ್ಡಿ ಈ ಆಲೋಚನೆ ಮಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿಯೂ ಚರ್ಚೆಯಾಗಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಜೆಡಿಎಸ್ ಮುಖಂಡ.

ತಿಪ್ಪಾರೆಡ್ಡಿ ಕಾಂಗ್ರೆಸ್ ಬಂದರೆ ಸ್ವಾಗತ

ಮಾಜಿ ಶಾಸಕ ತಿಪ್ಪಾರೆಡ್ಡಿ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಬರುವುದಾದರೆ ಸ್ವಾಗತಿಸುವುದಾಗಿ ಮಾಜಿ ಸಂಸದ ಹಾಗೂ ಲೋಕಸಭೆ ಕ್ಷೇತ್ರದ ಹಾಲಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಹೇಳಿದರು. ಬೇರೆ ಪಕ್ಷಗಳಿಂದ ಕಾಂಗ್ರೆಸ್ ಬರುವವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಕ್ತ ಆಹ್ವಾನ ನೀಡಿದ್ದಾರೆ. ಹಾಗಾಗಿ ತಿಪ್ಪಾರೆಡ್ಡಿ ಬಂದರೆ ಅವರಿಗೂ ಆಹ್ವಾನ ವಿರುತ್ತದೆ ಎಂದು ಚಂದ್ರಪ್ಪ ಹೇಳಿದರು. ತಿಪ್ಪಾರೆಡ್ಡಿ ಕಾಂಗ್ರೆಸ್ ಸೇರುವುದರ ಬಗ್ಗೆ ನಮಗೆ ಅಷ್ಟಾಗಿ ಮಾಹಿತಿ ಇಲ್ಲ. ಈ ಬಗ್ಗೆ ಎಲ್ಲಿಯೂ ಚರ್ಚೆ ಆಗಿಲ್ಲ. ಒಂದು ವೇಳೆ ಕಾಂಗ್ರೆಸ್ ಸೇರ್ಪಡೆ ನಿಜವಾದಲ್ಲಿ ಅದನ್ನು ಕೆಪಿಸಿಸಿ ಅಧ್ಯಕ್ಷರು ನಿರ್ವಹಿಸುತ್ತಾರೆ ಎಂದು ಚಂದ್ರಪ್ಪ ಮಾರ್ಮಿಕವಾಗಿ ನುಡಿದರು.

click me!