ಕೇರಳದ ಕಳರಿ ಪಯಟ್ಟು ಕಲೆಗೆ ಉಡುಪಿಯ ಜನರು ಫಿದಾ; ಈ ಕಲೆಯ ಮೂಲ ಕನ್ನಡ ನಾಡು!

By Gowthami KFirst Published Aug 25, 2022, 5:38 PM IST
Highlights

ಕಳರಿ ಪಯಟ್ಟು ಕೇರಳದ ಪ್ರಸಿದ್ದ ಸಮರ ಕಲೆ. ಆದರೆ ನಿಮಗೆ ಗೊತ್ತಾ? ಈ ಜಗತ್ತ್ರಸಿದ್ದ ಯುದ್ದ ಕಲೆ ಹುಟ್ಟಿದ್ದು ನಮ್ಮ ಕನ್ನಡದ ನೆಲದಲ್ಲಿ ಅನ್ನೋ ಬಲವಾದ ನಂಬಿಕೆ ಇದೆ. ಇದಕ್ಕೆ ಕರಾವಳಿಯಲ್ಲಿ ಒಂದು ಗರಡಿಯಿದೆ.

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಆ.25): ಕೇರಳದ ಜನಪ್ರಿಯ ಕಲೆ ಕಳರಿ ಪಯಟ್ಟು. ಈ ಜನಪ್ರಿಯ ಕಲೆ, ಕರ್ನಾಟಕದಲ್ಲಿ ಕಾಣಸಿಗುವುದು ಅಪರೂಪ. ಹೀಗಾಗಿ ಇಂತಹ ಕಲೆಯನ್ನು ಉಡುಪಿ ಜನತೆಗೂ ಪರಿಚಯ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಉಡುಪಿಯ ಮಲ್ಪೆ ಕಡಲ ತೀರದ ಸಮೀಪ ಕಳರಿ ಪಯಟ್ಟು ಪ್ರದರ್ಶನ ಆಯೋಜನೆ ಮಾಡಲಾಯಿತು. ಕೇರಳದಿಂದ ಬಂದ ಕಳಾರಿ ಪಯಟ್ಟು ತಂಡದ ಸುಮಾರು ಮೂವತ್ತಕ್ಕೂ ಹೆಚ್ಚು ಮಂದಿ ಯುವಕ ಯುವತಿಯರು ಅದ್ಭುತ ಪ್ರದರ್ಶನ ನೀಡಿದರು. ಇವರು ಪ್ರದರ್ಶಿಸಿದ ಕತ್ತಿ ಕಾಳಗ, ಈಟಿ ಕಾಳಗ ರೋಮಾಂಛನ ಹುಟ್ಟಿಸುಂತಿತ್ತು. ರಾಜರುಗಳ ಕಾಲದಲ್ಲಿ ಯಾವ ರೀತಿಯಲ್ಲಿ ಅರಸರು  ಕಾದಾಟ ಮಾಡುತ್ತಿದ್ದರು, ಸೈನಿಕರು ತಮ್ಮ ರಾಜ್ಯವನ್ನು ಯಾವ ರೀತಿ ರಕ್ಷಣೆ ಮಾಡುತ್ತಿದ್ದರು ಅನ್ನೋದನ್ನು ಯುವಕ ಯುವತಿಯರು ಆಕರ್ಷಕ ರೀತಿಯಲ್ಲಿ ಪ್ರದರ್ಶನ ನೀಡಿದರು. ಸುರಿವ ಮಳೆಯನ್ನೂ ಲೆಕ್ಕಿಸದೇ ಚಿಕ್ಕ ಮಕ್ಕಳು ಕೂಡ ಕಳರಿ ಪಯಟ್ಟು ಪ್ರದರ್ಶನ ನೀಡಿ ನೆರೆದಿದ್ದವರನ್ನು ರೋಮಾಂಚನಗೊಳಿಸಿದರು. ವಿಶೇಷವೆಂದರೆ ಕಳರಿ ಪಯಟ್ಟು ಗೂ ಕನ್ನಡನಾಡಿಗೂ ಅವಿನಾಭಾವ ಸಂಬಂಧವಿದೆ. ಉಡುಪಿ ಜಿಲ್ಲೆಯ ಪಾಂಗಾಳದಲ್ಲಿರುವ ದೇವರ ಗುಡಿಯೊಂದು ಇದರ ಮೂಲವೆಂದು ಇಂದಿಗೂ ಇಲ್ಲಿ ನಂಬಿಕೆ ಇದೆ.

ಕಳಾರಿ ಪಯಟ್ ಗೆ ಉಡುಪಿಯೇ ಮೂಲ?!
ಕಳರಿ ಪಯಟ್ಟು ಕೇರಳದ ಪ್ರಸಿದ್ದ ಸಮರ ಕಲೆ. ಆದರೆ ನಿಮಗೆ ಗೊತ್ತಾ? ಈ ಜಗತ್ತ್ರಸಿದ್ದ ಯುದ್ದ ಕಲೆ ಹುಟ್ಟಿದ್ದು ನಮ್ಮ ಕನ್ನಡದ ನೆಲದಲ್ಲಿ ಅನ್ನೋ ಬಲವಾದ ನಂಬಿಕೆ ಇದೆ. ಇಂದಿಗೂ ಕೇರಳದ ಸಮರ ವೀರರು ನಮ್ಮ ಕರಾವಳಿಯ ಒಂದು ಗರಡಿಗೆ ಬಂದು ಕೈ ಮುಗಿದು ಹೋಗ್ತಾರೆ.

ಕಳರಿ ಪಯಟ್ಟು ಒಂದು ವಿಶ್ವ ಪ್ರಸಿದ್ದ ಸಮರಕಲೆ, ಕೇರಳದ ನೆಲದಲ್ಲಿ ಈ ಯುದ್ಧಾಭ್ಯಾಸ ಪದ್ಧತಿಯನ್ನು ಇಂದಿಗೂ ಆಕರ್ಷಕವಾಗಿ ಉಳಿಸಿಕೊಳ್ಳಲಾಗಿದೆ. ಆದರೆ ಕಳರಿ ಪಯಟ್ಟು ಗೂ ನಮ್ಮ ಕರ್ನಾಟಕ ಕರಾವಳಿಗೂ ಅವಿನಾಭಾವ ಸಂಬಂಧವಿದೆ. ಉಡುಪಿ ಜಿಲ್ಲೆಯ ಪಾಂಗಾಳದಲ್ಲಿರುವ ದೇವರ ಗುಡಿಯೊಂದು ಈ‌ ಕಲೆಯ ಮೂಲವಂತೆ! 

ಈ ಗರಡಿ ಮನೆಯೇ ಕಳರಿ ಪಯಟ್ಟು ಗೆ ಮೂಲವೆಂದು ತುಳುವರು ನಂಬಿದ್ದಾರೆ. ಸಮರಾಭ್ಯಾಸಲ್ಲಿ ಇಲ್ಲಿನ “ನಾನಯ” ಮನೆತನದವರು ಹೆಸರುವಾಸಿಯಾಗಿದ್ದರು. ಕಳೆದ ಏಳು ಶತಮಾನಗಳ ಇತಿಹಾಸ ಗಮನಿಸಿದಾಗ ಈ ಗರಡಿಮನೆ ನಾಡಿನ ರಕ್ಷಣೆಗೆ ಅಮೂಲ್ಯ ಕೊಡುಗೆಗಳನ್ನು ಕೊಟ್ಟ ಉದಾಹರಣೆಯಿದೆ. ವಿಜಯನಗರ ಅರಸರ ಕಾಲದಲ್ಲೂ ಈ ಗರಡಿಮನೆಯಲ್ಲೇ ಯೋಧರಿಗೆ ತರಬೇತಿ ನೀಡಲಾಗುತ್ತಿತ್ತಂತೆ.

ವಿಶ್ವವಿಖ್ಯಾತ 'ಕಳಾರಿ ಪಯ್ಯಟ್' ಕನ್ನಡ ಮೂಲದ್ದು

ತಿರುವಾಂಕೂರಿನ ಅರಸರಿಗೂ ಇಲ್ಲೇ ಯುದ್ಧಾಭ್ಯಾಸ ನಡೆದದ್ದು. ಅದರ ಫಲವಾಗಿ ಈ ಮನೆತನದವರಿಗೆ ಕೇರಳದಲ್ಲಿ ಎರಡು ಗ್ರಾಮಗಳನ್ನು ಉಂಬಳಿ ನೀಡಲಾಗಿತ್ತಂತೆ. ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯ್ಯರು 12 ವರ್ಷಗಳ ಕಾಲ ಈ ಗರಡಿಯಲ್ಲೇ ಪಳಗಿದ್ದರು. ಆ ಬಳಿಕ ಈ ಕ್ಷೇತ್ರದ ಪ್ರಸಿದ್ದಿ ಹೆಚ್ಚಿತ್ತು.

ಸಾಧನೆಗೆ ವಯಸ್ಸಲ್ಲ ಮುಖ್ಯ ಮನಸ್ಸು, ಮೀನಾಕ್ಷಿ ಅಮ್ಮ ಎಂಬ 79 ರ ಕಲರಿಯಾಪಟ್ಟು ಶಿಕ್ಷಕಿ

ಕೋಟಿ ಚೆನ್ನಯ್ಯರು ತಾವು ಸಂಚರಿಸಿದಲ್ಲೆಲ್ಲಾ ಇದೇ ಮಾದರಿಯ ಗರಡಿಗಳನ್ನು ನಿರ್ಮಿಸಿದರು. ಮತ್ತು ಯುವಕರ ಸಮರಾಭ್ಯಾಸಕ್ಕೆ ಅವಕಾಶ ಮಾಡಿ ಕೊಟ್ಟರು.ಈ ಆಧುನಿಕ ಕಾಲ ಘಟ್ಟದಲ್ಲಿ ಸಮರ ಕಲೆ ದೂರ ಸರಿದು ಗರಡಿಗಳು ಆರಾಧನಾ ಸ್ಥಾನವಾಗಿ ಉಳಿದಿವೆ. ಕೇರಳದಲ್ಲಿ ಕಳರಿ ಪಯಟ್ಟು ಬೆಳೆಯಿತು. ಆದರೆ ಇಲ್ಲಿ ಗರಡಿಮನೆಗಳು ಪೂಜಾಸ್ಥಾನವಾಗಿ ಮಾತ್ರ ಉಳಿದಿವೆ.

click me!