ಟ್ರಿಪಲ್ ರೈಡಿಂಗ್‌ ತಡೆದ ಪೇದೆಗೆ ಇರಿಯಲು ಯತ್ನ!

By Kannadaprabha NewsFirst Published Jul 3, 2019, 8:08 AM IST
Highlights

ಟ್ರಿಪಲ್‌ ರೈಡಿಂಗ್‌ ಹೋಗುತ್ತಿದ್ದ ದ್ವಿಚಕ್ರ ವಾಹನವನ್ನು ಅಡ್ಡ ಹಾಕಿದ್ದಕ್ಕೆ ಪುಂಡರ ಗುಂಪೊಂದು ಪೊಲೀಸ್ ಪೇದೆಗೆ ಚಾಕು ಇರಿಯಲು ಯತ್ನಿಸಿದ ಘಟನೆ ನಡೆದಿದೆ. 

ಬೆಂಗಳೂರು [ಜು.3] :  ಟ್ರಿಪಲ್‌ ರೈಡಿಂಗ್‌ ಹೋಗುತ್ತಿದ್ದ ದ್ವಿಚಕ್ರ ವಾಹನವನ್ನು ಅಡ್ಡ ಹಾಕಿದ್ದಕ್ಕೆ ಪುಂಡರ ಗುಂಪೊಂದು ಹಲಸೂರು ಸಂಚಾರ ಪೊಲೀಸ್‌ ಠಾಣೆಯ ಕಾನ್ಸ್‌ಟೇಬಲ್‌ಗೆ ಹಿಂದಿನಿಂದ ಬಂದು ಚಾಕು ಇರಿಯಲು ಯತ್ನಿಸಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್‌ ಕೂದಲೆಳೆ ಅಂತದಲ್ಲಿ ಕಾನ್ಸ್‌ಟೇಬಲ್‌ ಪಾರಾಗಿದ್ದಾರೆ.

ಡಿಕನ್ಸನ್‌ ರಸ್ತೆಯ ಮಣಿಪಾಲ್‌ ಸಮೀಪದ ಅಡಿಗಾಸ್‌ ಹೋಟೆಲ್‌ ಜಂಕ್ಷನ್‌ನಲ್ಲಿ ಮಂಗಳವಾರ ಸಂಜೆ ಘಟನೆ ನಡೆದಿದೆ. ಘಟನೆಯಲ್ಲಿ ಕಾನ್ಸ್‌ಟೇಬಲ್‌ ಮಹೇಶ್‌ ಕುತ್ತಿಗೆ ಭಾಗದಲ್ಲಿ ತರಚಿದ ಗಾಯವಾಗಿದೆ. ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿದ್ದಾಗ ಪುಂಡರು ದ್ವಿಚಕ್ರ ವಾಹನ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ಹಲಸೂರು (ಕಾನೂನು- ಸುವ್ಯವಸ್ಥೆ) ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಸಂಜೆ 4.30ರ ಸುಮಾರಿಗೆ ಮಣಿಪಾಲ್‌ ಬಳಿಯ ಅಡಿಗಾಸ್‌ ಹೋಟೆಲ್‌ ಸಮೀಪ ಕಾನ್ಸ್‌ಟೇಬಲ್‌ ಮಹೇಶ್‌ ಅಧಿಕಾರಿ ಜತೆ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದರು. ಈ ವೇಳೆ ಮಣಿಪಾಲ್‌ ಸೆಂಟರ್‌ ಮಾರ್ಗವಾಗಿ ಮೂವರು ಪುಂಡರು ಡಿಯೋ ದ್ವಿಚಕ್ರ ವಾಹನದಲ್ಲಿ ಬಂದಿದ್ದಾರೆ. ಟ್ರಿಪಲ್‌ ರೈಡಿಂಗ್‌ ನೋಡಿದ ಕಾನ್ಸ್‌ಟೇಬಲ್‌ ರಮೇಶ್‌ ವಾಹನ ಅಡ್ಡ ಹಾಕಲು ಮುಂದಾಗಿದ್ದು, ಈ ವೇಳೆ ಆರೋಪಿಗಳು ಕಾನ್ಸ್‌ಟೇಬಲ್‌ನನ್ನು ತಳ್ಳಿ ಹೋಗಿದ್ದಾರೆ. ಕಾನ್ಸ್‌ಟೇಬಲ್‌ ದ್ವಿಚಕ್ರ ವಾಹನ ಸಂಖ್ಯೆ ಬರೆದುಕೊಂಡು ಸುಮ್ಮನಾಗಿದ್ದಾರೆ.

ಕೆಲ ನಿಮಿಷದ ಬಳಿಕ ಮೂವರು ಪುಂಡರು ದ್ವಿಚಕ್ರ ವಾಹನವನ್ನು ಅಸ್ಮತ್‌ ಕಾಲೇಜಿನ ಬಳಿ ನಿಲ್ಲಿಸಿ, ಸಂಚಾರ ಪೊಲೀಸರು ದಂಡ ಹಾಕುತ್ತಿದ್ದ ಸ್ಥಳಕ್ಕೆ ಬಂದಿದ್ದಾರೆ. ಈ ಪೈಕಿ ಓರ್ವ ಆರೋಪಿ ಹಿಂದಿನಿಂದ ಕಾನ್ಸ್‌ಟೇಬಲ್‌ ಮಹೇಶ್‌ಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಯುವಕ ಇರಿಯಲು ಯತ್ನಿಸಿರುವುದನ್ನು ನೋಡಿದ ಸಾರ್ವಜನಿಕರೊಬ್ಬರು ಕಿರುಚಿ ಹೇಳಿದ್ದಾರೆ. ಎಚ್ಚೆತ್ತ ಕಾನ್ಸ್‌ಟೇಬಲ್‌ ಕೂದಲೆಳೆ ಅಂತರದಲ್ಲಿ ಇರಿತದಿಂದ ಪಾರಾಗಿದ್ದಾರೆ. ಈ ವೇಳೆ ಪೊಲೀಸರು ಆರೋಪಿಯನ್ನು ಬೆನ್ನಟ್ಟಿದ್ದು, ಚಾಕು ಹಾಗೂ ದ್ವಿಚಕ್ರ ವಾಹನ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಮಾದಕ ದ್ರವ್ಯ ನಶೆಯಲ್ಲಿ ಆರೋಪಿಗಳು ಚಾಕು ಇರಿಯಲು ಮುಂದಾಗಿರುವ ಸಾಧ್ಯತೆ ಇದೆ. ಈ ಸಂಬಂಧ ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹಲಸೂರು ಪೊಲೀಸರು ಮಾಹಿತಿ ನೀಡಿದರು.

click me!