ಗಂಡನ ಮೇಲಿನ ಕೋಪಕ್ಕೆ ಮನೆಯಲ್ಲಿ ಮಲಗಿದ್ದ ಮಗುವನ್ನು ನಾಲೆಗೆ ಎಸೆದು ರಾಕ್ಷಸಿ ತಾಯಿ

By Sathish Kumar KH  |  First Published May 5, 2024, 7:45 PM IST

ಗಂಡ ಕುಡಿದು ಬಂದು ಜಗಳ ಮಾಡುತ್ತಾನೆಂದು ಬೇಸತ್ತು ಮನೆಯಲ್ಲಿ ಮಲಗಿದ್ದ 6 ವರ್ಷದ ಮಗನನ್ನು ನಾಲೆಗೆ ಎಸೆದು ಬಂದ ರಾಕ್ಷಸಿ ತಾಯಿ. ಮಗುವನ್ನು ಎಳದೊಯ್ದು ತಿಂದ ಮೊಸಳೆ..


ಉತ್ತರಕನ್ನಡ (ಮೇ 05): ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಯನ್ನು ನಾವು ಕೇಳಿದ್ದೇವೆ. ಆದರೆ, ಇಲ್ಲಿ ಗಂಡ ಹೆಂಡತಿ ಜಗಳದಲ್ಲಿ ಕೂಸು ಸತ್ತೇ ಹೋಗಿದೆ. ಮದ್ಯವ್ಯಸನಿ ಗಂಡ ಕುರಿದುಬಂದು ಜಗಳ ಮಾಡುತ್ತಿದ್ದಾನೆಂದು ಬೇಸತ್ತ ತಾಯಿ ಮನೆಯಲ್ಲಿ ಬೆಚ್ಚಗೆ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿ ನೀರಿನ ನಾಲೆಗೆ ಬೀಸಾಡಿ ಬಂದಿದ್ದಾಳೆ. ಇದನ್ನು ನೋಡಿದ ಗ್ರಾಮಸ್ಥರು ಎದ್ನೋ ಬಿದ್ನೋ ಅಂತಾ ನಾಲೆ ಬಳಿ ಹೋಗಿ ಮಗು ಹುಡುಕಿದರೆ ಆ ಮಗುವನ್ನು ಮೊಸಳೆ ಕಚ್ಚಿಕೊಂಡು ತಿನ್ನುತ್ತಿರುವ ದೃಶ್ಯ ಕಂಡುಬಂದಿದೆ.

ಹೌದು, ಗಂಡನ ಮೇಲಿನ ಕೋಪದಲ್ಲಿ 6 ವರ್ಷದ ಮಗುವನ್ನು ಹೆತ್ತ ತಾಯಿಯೇ ನಾಲೆಗೆ ಎಸೆದು ಕೊಲೆ ಮಾಡಿದ ದುರ್ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಹಾಲಮಡ್ಡಿಯ ಸಮೀಪದ ನಾಲೆಯಲ್ಲಿ ನಡೆದಿದೆ. ವಿನೋದ್ (6 ವರ್ಷ) ಎಂಬಾತನೇ ನಾಲೆಗೆ ಎಸೆಯಲ್ಪಟ್ಟ ಮಗು ಆಗಿದೆ. ಮೃತ ಬಾಲಕ ವಿನೋದ ದಾಂಡೇಲಿ ನಿವಾಸಿಗಳಾದ ರವಿಕುಮಾರ್ ಹಾಗೂ ಸಾವಿತ್ರಿ ದಂಪತಿಯ ಮಗುವಾಗಿದ್ದೇ ದುರಂತ ಸಾವಿಗೆ ಕಾರಣವಾಗಿದೆ. ರವಿಕುಮಾರ್ ಹಾಗೂ ಸಾವಿತ್ರಿಗೆ ಮದುವೆಯಾದ ಕೆಲವು ವರ್ಷಗಳಲ್ಲಿ ಗಂಡು ಮಗು ವಿನೋದ್ ಜನಿಸಿದ್ದನು. ಆದರೆ, ಈ ಮಗುವಿಗೆ ಮಾತನಾಡಲು ಬರುತ್ತಿರಲಿಲ್ಲ. ಇದರಿಂದ ಕುಪಿತಗೊಂಡಿದ್ದ ತಂದೆ ಕುಡಿದು ಬಂದಾಗಲೆಲ್ಲಾ ಮಾತು ಬಾರದ ಮಗುವಿನ ಜೊತೆಗೆ ಆಟವಾಡದೇ ಇವನು ಸತ್ತು ಹೋಗಬಾರದೇ ಎಂದು ಹೆಂಡತಿಗೆ ಬೈಯುತ್ತಿದ್ದನಂತೆ. ಇದರಿಂದ ತೀವ್ರ ರೋಸಿ ಹೋಗಿದ್ದ ತಾಯಿ ಸಾವಿತ್ರಿ ಗಂಡ ಬೈದನೆಂದು ಮನೆಯಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿ ನಾಲೆಗೆ ಎಸೆದು ಬಂದಿದ್ದಾಳೆ.

Tap to resize

Latest Videos

undefined

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯರಿಗಾಗಿ ಸಹಾಯವಾಣಿ ಆರಂಭಿಸಿದ ಎಸ್‌ಐಟಿ!

ಮನೆಯಲ್ಲಿ ಜಗಳ ಆಡುತ್ತಿದ್ದುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಅವರೇ ಸುಮ್ಮನಾಗುತ್ತಾರೆ ಎಂದು ತಮ್ಮ ಪಾಡಿಗೆ ತಾವಿದ್ದರು. ಆದರೆ, ಹೆಂಡತಿ ಸಾವಿತ್ರಿ ಅಳುತ್ತಲೇ ಮನೆಯಿಂದ ಮಗುವನ್ನು ಎತ್ತಿಕೊಂಡು ಹೋದವಳು, ಅಲ್ಲಿಂದ ವಾಪಸ್ ಮನೆಗೆ ಬರುವಾಗ ಮಗುವನ್ನು ಬಿಟ್ಟು ಬಂದಿದ್ದಳು. ನಂತರ ಮನೆಗೆ ಬಂದು ಗಂಡನಿಗೆ ಮಗುವನ್ನು ನಾಲೆಗೆ ಎಸೆದು ಬಂದಿದ್ದಾಗಿ ಹೇಳಿದ್ದಾಳೆ. ಇನ್ನು ಮಗುವನ್ನು ನಾಲೆಗೆ ಎಸೆದರೂ ಮಗುವಿಗೆ ಮಾತು ಬಾರದ ಹಿನ್ನೆಲೆಯಲ್ಲಿ ಮೂಕ ರೋದನೆಯನ್ನು ಅನುಭವಿಸುತ್ತಲೇ ನೀರಿನಲ್ಲಿ ಮುಳುಗಿದೆ. ನೀರಿಗೆ ಮಗು ಎಸೆದ ನಂತರ ಅಲ್ಲಿಗೆ ಬಂದ ಮೊಸಳೆಯೊಂದು ಮಗುವನ್ನು ಎಳೆದುಕೊಂಡು ಹೋಗಿದೆ. ತಾಯಿ ಸಾವಿತ್ರಿ ಮಗುವನ್ನು ನಾಲೆಗೆ ಎಸೆದ ವಿಚಾರ ಬಾಯಿಬಿಟ್ಟ ಕೂಡಲೇ ನೆರೆಹೊರೆಯವರು ಮಗುವನ್ನು ಹುಡುಕಲು ನಾಲೆ ಬಳಿಗೆ ತೆರಳಿದ್ದಾರೆ.

ನಾಲೆಯಲ್ಲಿ ಮಗು ಇದೆಯೇ ಎಂದು ನೋಡಲು ಕೂಗಿದ್ದಾರೆ. ಆದರೆ, ನಾಲೆಯಲ್ಲಿ ಎಸೆದ ನಂತರವೂ ಮಗು ವಿನೋದ ಬದುಕಿದ್ದರೂ ನಾನು ಇಲ್ಲಿದ್ದೀನಿ ಎಂದು ಹೇಳುವುದಕ್ಕೆ ಬಾಯಿ ಇಲ್ಲ ಮೂಕನಾಗಿದ್ದಾನೆ. ಕೆಲ ಹೊತ್ತು ನಾಲೆಯ ಬಳಿ ಹುಡುಕಿದಾಗ ಮೊಸಳೆಯೊಂದು ಮಗುವನ್ನು ಕಚ್ಚಿಕೊಂಡು ನೀರಿನಲ್ಲಿ ತೇಲುವುದು ಹಾಗೂ ಮುಳುಗುವುದು ಮಾಡುತ್ತಿದ್ದುದನ್ನು ನೋಡಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಬಂದ ದಾಂಡೇಲಿಯ ಗ್ರಾಮೀಣ ಠಾಣಾ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರ ಸಹಕಾರದಲ್ಲಿ ಮಗುವಿನ ಮೃತದೇಹ ಹುಡುಕಿದ್ದಾರೆ. ಮೊಸಳೆ ಕಚ್ಚಿಕೊಂಡು ಹೋದ ದಿಕ್ಕಿನಲ್ಲಿ ಹುಡುಕಿದಾಗ ಕೈ ತುಂಡಾಗಿರುವ ಸ್ಥಿತಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.

ರಾಜಕೀಯ ಷಡ್ಯಂತ್ರ ಮಾಡಿ ಕಿಡ್ನಾಪ್ ಕೇಸ್ ಹಾಕಿಸಿ ಅರೆಸ್ಟ್ ಮಾಡಿದ್ದಾರೆ; ಮಾಜಿ ಸಚಿವ ಹೆಚ್.ಡಿ. ರೇವಣ್ಣ

ಮೊಸಳೆಯ ಬಾಯಿಯಿಂದ ಮಗುವಿನ ಮೃತದೇಹ ಬಿಡಿಸಿಕೊಂಡು ಬಂದು ಮಗುವಿನ ಶವವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ನಂತರ, ಆರೋಪಿಗಳಾದ ಮಗುವಿನ ತಂದೆ ರವಿಕುಮಾರ್ ಹಾಗೂ ತಾಯಿ ಸಾವಿತ್ರಿಯನ್ನು ಬಂಧಿಸಿದ್ದಾರೆ. ಈ ಕುರಿತು ಆರೋಪಿಗಳ ವಿರುದ್ಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆದರೆ, ಯಾವುದೇ ತಪ್ಪು ಮಾಡದ ಮೂಕನಾಗಿದ್ದ ಮಗು ಜಗತ್ತಿನ ಅರಿವು ಬರುವ ಮುನ್ನವೇ ಪ್ರಾಣ ಕಳೆದುಕೊಂಡಿದೆ. ಹೆತ್ತ ತಂದೆ ತಾಯಿಯನ್ನು ನಂಬಿಕೊಂಡು ಮನೆಯಲ್ಲಿ ಮಲಗಿದ್ದ ಮಗುವನ್ನು ಜನ್ಮ ಕೊಟ್ಟವರೇ ಕೊನೆಗೊಳಿಸಿದ್ದಾರೆ.

click me!