ಇಂದಿಗೂ ರಸ್ತೆ, ವಿದ್ಯುತ್ ಇಲ್ಲದೆ ಬದುಕುತ್ತಿದೆ ಆದಿವಾಸಿ ಕುಟುಂಬ

By Kannadaprabha NewsFirst Published Jul 16, 2019, 1:40 PM IST
Highlights

ಸಮಾಜ ಎಷ್ಟೇ ಮುಂದುವರಿದಿದ್ದರೂ, ಇಂದಿಗೂ ಮೂಲ ಸೌಲಭ್ಯಗಳಿಂದ ವಂಚಿತರಾಗಿ ಒಂದಷ್ಟು ಜನ ನಮ್ಮ ನಡುವೆಯೇ ಬದುಕಿದ್ದಾರೆ ಎಂದರೆ ನಂಬಲೇ ಬೇಕಾದ ಕಟು ಸತ್ಯ. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕೈಕಂಬ ಎಂಬಲ್ಲಿ ವಾಸಿಸುವ ಮಲೆಕುಡಿಯ ಕುಟುಂಬಗಳು ಇಂದಿಗೂ ಮೂಲಸೌಲಭ್ಯಗಳಿಂದ ವಂಚಿತಗೊಂಡು ಬದುಕುತ್ತಿದೆ. 

ಮಂಗಳೂರು(ಜು.16): ನಾಗರಿಕ ಸಮಾಜ ಎಷ್ಟೇ ಮುಂದುವರಿದಿದ್ದರೂ ಇಂದಿಗೂ ವಿದ್ಯುತ್, ರಸ್ತೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಅದೆಷ್ಟೋ ಕುಟುಂಬಗಳು ಬದುಕುತ್ತಿವೆ ಅನ್ನೋದು ಕಟು ಸತ್ಯ. ಸಮಾಜ ಇಷ್ಟು ಆಧುನಿಕತೆಯನ್ನು ಅಳವಡಿಸಿಕೊಂಡು ವೇಗವಾಗಿ ಸಾಗಬೇಕಾದರೆ, ನಮ್ಮ ನಡುವೆಯೇ ಒಂದಷ್ಟು ಜನ ಇನ್ನೂ ಚಿಮಿಣಿ ದೀಪದ ಮಂದ ಬೆಳಕಿನಿಂದ ಹೊರ ಬಂದೇ ಇಲ್ಲ ಅನ್ನೋದು ವಿಪರ್ಯಾಸ.

ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕೈಕಂಬ ಎಂಬಲ್ಲಿಂದ ನಾಲ್ಕೈದು ಕಿ.ಮೀ. ದೂರದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಿಗುತ್ತದೆ. ದಟ್ಟ ಅರಣ್ಯದ ನಡುವಿನಲ್ಲಿರುವ ಕಂದಾಯ ಜಮೀನಿನಲ್ಲಿ ಸುಮಾರು 21 ಆದಿವಾಸಿ ಸಮುದಾಯದ ಮಲೆಕುಡಿಯ ಕುಟುಂಬಗಳು ವಾಸಿಸುತ್ತದೆ.

ನಾವೂರು ಗ್ರಾಮದ ಕೈಕಂಬದಿಂದ ನಾಲ್ಕೆ ದು ಕಿ. ಮೀ. ದೂರ ಸಾಗಿದರೆ ಕುದ್ಕೋಳಿ ಎಂಬ ಪ್ರದೇಶ ಸಿಗುತ್ತದೆ. ಅಲ್ಲಿಂದ ಮುಂದೆ ಭಜನಾ ಮಂದಿರ, ಪುಲಿತ್ತಡಿ, ಅಲ್ಯ, ಮಲ್ಲ, ಮುತ್ತಾಜೆ, ಎರ್ಮೆಲೆ, ಮಂಜಳ ಪ್ರದೇಶದಲ್ಲಿ ಸುಮಾರು 25 ಕುಟುಂಬಗಳು ಕಾಡಿನ ನಡುವೆ ವಾಸಿಸುತ್ತಿವೆ. ಸುಮಾರು 250ಕ್ಕೂ ಹೆಚ್ಚು ಜನರಿರುವ ಈ ಕುಟುಂಬಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾದರೂ ಇನ್ನೂ ನಾಗರಿಕ ಸಮಾಜದ ಮೇಲೆ ಭರವಸೆಯಿಟ್ಟು ಮೂಲಭೂತ ಸೌಕರ್ಯಗಳಿಗಾಗಿ ಎದುರು ನೋಡುತ್ತಿದ್ದಾರೆ.

ರಸ್ತೆಗೆ ಡಾಂಬರಿಲ್ಲ, ವಿದ್ಯುತ್ ಸಂಪರ್ಕವಿಲ್ಲ:

ತಾಲೂಕು ಕೇಂದ್ರದಿಂದ ಕೇವಲ 20 ಕಿ.ಮೀ. ದೂರದ ಈ ಪ್ರದೇಶಗಳನ್ನು ಸಂಪರ್ಕಿಸುವ ಸುಮಾರು 12 ಕಿ.ಮೀ. ದೂರದ ರಸ್ತೆ ಇನ್ನೂ ಡಾಮರು ಕಂಡಿಲ್ಲ. ಕಲ್ಲು, ಮರದ ಬೇರು, ಗುಂಡಿಗಳನ್ನು ಹೊಂದಿರುವ ರಸ್ತೆಯೇ ಇವರ ಪಾಲಿಗೆ ರಾಷ್ಟ್ರೀಯ ಹೆದ್ದಾರಿ. ವಿದ್ಯುತ್ ಸಂಪರ್ಕವಂತೂ ಕನಸಿನ ಮಾತು. ಶತಮಾನಗಳಿಂದಲೂ ಚಿಮಿಣಿ ದೀಪವೇ ಇವರಿಗೆ ಬೆಳಕಿನ ಆಸರೆ. ಹಳ್ಳ ತೊರೆಗಳನ್ನು ದಾಟಲು ಅಡಕೆ ಮರ, ಕಾಡು ಮರಗಳಿಂದ ನಿರ್ಮಾಣಗೊಂಡ ಪಾಲವನ್ನೇ ಆಶ್ರಯಿಸಿದ್ದಾರೆ.

ಅರಣ್ಯ ಇಲಾಖೆ ಅಡ್ಡಿ: ಶತಮಾನಗಳಿಂದ ಮೂಲಭೂತ ಸೌಕರ್ಯದಿಂದ ವಂಚಿತರಾದ ಆದಿವಾಸಿಗಳ ಬದುಕು ಹಸನಗೊಳ್ಳಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಕಾನೂನು ದೊಡ್ಡ ಸಮಸ್ಯೆಯಾಗಿತ್ತು. ಆದರೆ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರದ ಯುಪಿಎ 1 ಸರ್ಕಾರ ರೂಪಿಸಿದ ಅತ್ಯಂತ ಮಹತ್ವಾಕಾಂಕ್ಷಿ ಕಾಯ್ದೆ ಅರಣ್ಯ ಹಕ್ಕುಗಳ ಕಾಯ್ದೆ. 2006ರಲ್ಲಿ ಕಾಯ್ದೆ ಜಾರಿಯಾದರೂ ಬೆಳ್ತಂಗಡಿ ತಾಲೂಕಿನಲ್ಲಿ ಅನುಷ್ಠಾನ ಮಾಡುವಲ್ಲಿ ಸಂಬಂಧಿಸಿದ ಇಲಾಖೆಗಳು ಸಂಪೂರ್ಣ ಎಡವಿದೆ. ಕಾಯ್ದೆ ಅಡಿಯಲ್ಲಿ ಕಳೆದ 12 ವರ್ಷಗಳಲ್ಲಿ ಸವಣಾಲು ಗ್ರಾಮದ 6 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಹೊರತುಪಡಿಸಿ ಇಡೀ ಜಿಲ್ಲೆಯಲ್ಲಿ ಒಂದೇ ಒಂದು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿಲ್ಲ.

ಮಳೆಗಾಲದಲ್ಲಿ ಉಕ್ಕಿ ಹರಿಯುವ ಹಳ್ಳತೊರೆಗಳನ್ನು ಜೀವದ ಹಂಗು ತೊರೆದು ದಾಟುತ್ತಿದ್ದಾರೆ. ಇಲ್ಲಿನ ಜನರಿಗೆ ಮಳೆಗಾಲದಲ್ಲಿ ಆರೋಗ್ಯ ಕೈಕೊಟ್ಟರೆ ಮೂರ್ನಾಲ್ಕು ಕಿ.ಮೀ. ಅವರನ್ನು ಹೊತ್ತುಕೊಂಡೇ ಹೋಗಬೇಕಾಗುತ್ತದೆ.

ವಿದ್ಯುತ್‌ಗಾಗಿ ಅರ್ಜಿ ಸಲ್ಲಿಸಿ ವರ್ಷವಾದರೂ ಪ್ರಯೋಜನವಿಲ್ಲ: ಶತಮಾನಗಳಿಂದ ವಿದ್ಯುತ್ ವಂಚಿತರಾದ ಕುಟುಂಬಗಳು ವಿವಿಧ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದರೂ ವನ್ಯಜೀವಿ ಅರಣ್ಯಇಲಾಖೆಯ ನಿರಂತರ ಅಡ್ಡಿಯಿಂದಾಗಿ ಇಂದಿಗೂ ವಿದ್ಯುತ್ ಸಂಪರ್ಕವಾಗಿಲ್ಲ. ಆದರೂ ಇಂದಿಗೂ ಧೃತಿಗೆಡದೆ ಮೂಲಭೂತ ಸೌಕರ್ಯಗಳು ಸಿಗಬಹುದು ಎಂಬ ಭರವಸೆಯನ್ನಿಟ್ಟು ಈ ಕುಟುಂಬಗಳು ಬದುಕುತ್ತಿವೆ.   

click me!