ಸಾಹಿತ್ಯ ಜಾತ್ರೆಗೆ ಮಂಗಳೂರು ಸಾಕ್ಷಿ, ಚಿಂತನ, ಮಂಥನ, ಅನಾವರಣ

By Web DeskFirst Published Nov 4, 2018, 9:41 PM IST
Highlights

ಪಶ್ಚಿಮ ಘಟ್ಟಗಳ ಸೆರಗಿನ ಝರಿಯಲ್ಲಿ ಹರಡಿಕೊಂಡಿರುವ ಬಂದರು ನಗರಿ ಮಂಗಳೂರು ನಯನ ಮನೋಹರ ಕಡಲ ಕಿನಾರೆಗಳ ತವರೂರು. ಕಂಬಳ, ಕೋಲ, ಯಕ್ಷಗಾನ ಮತ್ತು ವಿವಿಧ ಧರ್ಮಗಳ ಜಾತ್ರಾ ಮಹೋತ್ಸವಗಳನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶದಿಂದ ಇಲ್ಲಿ ಜನ ಆಗಮಿಸುತ್ತಾರೆ. ಶಿಕ್ಷಣ ಕಾಶಿ ಮಂಗಳೂರಿನಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಸಹಿತ ವಿವಿಧ ಶಿಕ್ಷಣ ಪಡೆಯಲು ರಾಜ್ಯ, ದೇಶದಿಂದ ವಿದ್ಯಾರ್ಥಿಗಳು ಬರುತ್ತಾರೆ. ಇಂತಹ ಸಮೃದ್ಧ ಸಾಹಿತ್ಯ, ಸಾಮಾಜಿಕ, ಧಾರ್ಮಿಕ, ರಾಜಕೀಯ ಚಟುವಟಿಕೆಗಳ ಬೀಡಾಗಿರುವ ಮಂಗಳೂರು ಎರಡು ದಿನಗಳ ಕಾಲ ವಿಭಿನ್ನ ಸಾಹಿತ್ಯ ಜಾತ್ರೆಯೊಂದಕ್ಕೆ ಸಾಕ್ಷಿಯಾಗಿದೆ.

ಮಂಗಳೂರು[ನ.04]  ಸಿನಿಮಾಗಳನ್ನು ಕಮರ್ಷಿಯಲ್ ಮತ್ತು ಅವಾರ್ಡ್ ಎಂದು ವಿಂಗಡಿಸುವುದು ಸರಿ ಅಲ್ಲ ಎಂದು ನಿರ್ದೇಶಕ ರಿಷಭ್ ಶೆಟ್ಟಿ ವಿಷಾದ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಲಿಟರರಿ ಫೌಂಡೇಶನ್ ವತಿಯಿಂದ ’ದ ಐಡಿಯಾ ಆಫ್ ಭಾರತ್’ ಪರಿಕಲ್ಪನೆಯೊಂದಿಗೆ ನಗರದ ಡಾ.ಟಿ.ಎಂ.ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಮಂಗಳೂರು ಲಿಟ್ ಫೆಸ್ಟ್ ನಲ್ಲಿ ಮಾತನಾಡಿ, ಸಿನಿಮಾ ಅನ್ನೋದು ಯಾವತ್ತಿಗೂ ಸಿನಿಮಾ ಅಷ್ಟೇ, ಕಮರ್ಷಿಯಲ್, ಅವಾರ್ಡ್ ಮತ್ತು ಆರ್ಟ್ ಸಿನಿಮಾ ಎಂದು ಡಿವೈಡ್ ಮಾಡಲಾಗುತ್ತಿದೆ. ನಮ್ಮ ಕನ್ನಡ ಸಿನಿಮಾಗಳಲ್ಲಿ ಇಂದು ಒಂದಷ್ಟು ಮಡಿವಂತಿಕೆ ಇದೆ. ಒಂದಷ್ಟು ಬುದ್ಧಿಜೀವಿಗಳು, ಸಾಹಿತಿಗಳು ಸಿನಿಮಾ ಅಂದ್ರೆ ದೊಡ್ಡ ಸೇತುವೆ ಕಟ್ಟಿದ್ದಾರೆ ಎಂದರು

ಫಿಲ್ಮ್ ಫೆಸ್ಟ್ ಗಳಿಗೆಲ್ಲಾ ಬುದ್ದಿಜೀವಿಗಳೇ ಬರೋದು, ನಮಗೆಲ್ಲ ಅದು ಅರ್ಥವೇ ಆಗಲ್ಲ. ಅವರು ಹೇಳುವ ಮಾತುಗಳೂ ಅರ್ಥ ಆಗಲ್ಲ, ಪ್ರತೀ ಸಿನಿಮಾದಲ್ಲೂ ಅವರು ಅದೇ ಕಥೆ ಹೇಳ್ತಾರೆ. ಆದರೆ ನಾನು ಅವಾರ್ಡ್ ಗಳಿಗಿಂತ ಜನರನ್ನು ಮುಟ್ಟಲು ಸಿನಿಮಾ ಮಾಡುತ್ತೇನೆ ಎಂದರು.

ಐಡಿಯಾ ಆಫ್ ಭಾರತ್ ಅನ್ನೋ ಪರಿಕಲ್ಪನೆಯೊಂದಿಗೆ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆದ ಸಾಹಿತ್ಯ ಜಾತ್ರೆ ಎರಡು ದಿನಗಳ ಕಾಲ ಕಡಲತಡಿಯಲ್ಲಿ ವಿಚಾರ ವಿನಿಮಯದ ಜೊತೆಗೆ ಒಂದೇ ಥೀಮ್ ನಡಿ ನಡೆದ ಹತ್ತು ಹಲವು ಮಂಥನಗಳು ಸಾವಿರಾರು ಸಾಹಿತ್ಯಾಸಕ್ತರಿಗೆ ರಸದೂಟವನ್ನೇ ಉಣಬಡಿಸಿರು. ದೇಶದ ಹಲವು ಚಿಂತಕರು, ಸಾಹಿತಿಗಳ ಜೊತೆಗೆ ವಾಗ್ಮಿಗಳು ಕೂಡ ಅಭಿಪ್ರಾಯ ತೆರೆದಿಟ್ಟಿದ್ದಾರೆ. ಕೊನೆಯ ದಿನವಾದ ಇಂದು ಕೂಡ ಹತ್ತು ಹಲವು ಚರ್ಚೆ, ಮಂಥನಗಳ ಮೂಲಕ ಹಬ್ಬಕ್ಕೆ ತೆರೆ ಬಿತ್ತು.

ತಲಾಖ್ ಮತ್ತು ಶಬರಿಮಲೆ ವಿಚಾರದಲ್ಲಿ ದೇಶದ ಪ್ರಮುಖ ಮಹಿಳಾ ಚಿಂತಕಿಯರು, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಸೇರಿ ಹಲವು ಸಾಹಿತ್ಯಾಸಕ್ತರು ಪಾಲ್ಗೊಂಡು ಸಂವಾದಕ್ಕೆ ಸಾಕ್ಷಿಯಾದ್ರು. ಶಬರಿಮಲೆ ಮತ್ತು ತ್ರಿಬಲ್ ತಲಾಕ್ ವಿಚಾರದಲ್ಲಿ ಅಭಿಪ್ರಾಯ ಮಂಡಿಸೋ ಮೂಲಕ ಒಂದಷ್ಟು ಆರೋಗ್ಯಕರ ಚರ್ಚೆಗೆ ಕಾರ್ಯಕ್ರಮ ವೇದಿಕೆಯಾಯ್ತು. ಇಂದು ಬೆಳಿಗ್ಗೆಯೇ ಭಾರತೀಯ ಸಿನಿಮಾರಂಗದಲ್ಲಿ ಭಾರತದ ಕಲ್ಪನೆ ಹೇಗಿದೆ ಅನ್ನೋ ವಿಚಾರದಲ್ಲಿ ಆರಂಭವಾದ ಸಂವಾದ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ ಪಾಲ್ಗೊಂಡಿದ್ದರು.

ಏಕಪಾತ್ರಾಭಿನಯದ ಶೈಲಿಯಲ್ಲಿ ಸಂವಾದಗಳು, ಪ್ಯಾನಲ್ ಡಿಸ್ಕಷನ್, ಮಾತುಕತೆ, ಪುಸ್ತಕಗಳ ವಿಮರ್ಶೆ, ಸಾಹಿತ್ಯ ಮಾಂತ್ರಿಕರೊಂದಿಗೆ ಒಡನಾಟದ ಅಪೂರ್ವ ಅವಕಾಶಗಳು ಮತ್ತು ಪುಸ್ತಕ ಪ್ರದರ್ಶನಗಳ ಹಾದಿಯಾಗಿ ಹತ್ತು ಹಲವು ವೈವಿಧ್ಯತೆಗಳಿದ್ದವು. ಇನ್ನು ಬಲಪಂಥಿಯ ವಿಚಾರಧಾರೆ ಉಳ್ಳ ಸಾಹಿತಿಗಳು ಒಂದೇ ಕಡೆ ಸೇರುವುದು ಮಂಗಳೂರಿನ ಇತಿಹಾಸದಲ್ಲಿ ಮೊದಲು ಎಂದರೆ ತಪ್ಪಾಗಲಿಕ್ಕಿಲ್ಲ.

ಸಮಾನ ಮನಸ್ಕರನ್ನು ಒಂದೇ ಕಡೆ ಸೇರಿಸುವ ಗುರುತರ ಜವಾಬ್ದಾರಿಯನ್ನು ಮಂಗಳೂರು ಲಿಟರರಿ ಫೌಂಡೇಶನ್ ವಹಿಸಿಕೊಂಡಿತ್ತು. ಅಲ್ಲದೇ ಈ ಕಾರ್ಯಕ್ಕೆ ನಿಟ್ಟೆ ವಿದ್ಯಾಸಂಸ್ಥೆಯ ಛೇರ್ ಮೆನ್ ನಿಟ್ಟೆ ವಿನಯ ಹೆಗ್ಡೆ, ತರಂಗ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಸಂಧ್ಯಾ ಪೈ, ಸಂಸದ ರಾಜೀವ್ ಚಂದ್ರಶೇಖರ್ ಸೇರಿ ಹಲವು ಗಣ್ಯರು ಸಾಥ್ ನೀಡಿದ್ಧಾರೆ.

ಸಾಹಿತ್ಯ ಲೋಕದ ಮೇರು ಪರ್ವತ ಎಂದೇ ಕರೆಯಲ್ಪಡುವ ಸರಸ್ವತಿ ಸಮ್ಮಾನ್ ಪುರಸ್ಕೃತ, ಪದ್ಮಶ್ರೀ ಎಸ್ ಎಲ್ ಭೈರಪ್ಪನವರಿಗೆ ನಿನ್ನೆ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೇ ಎರಡು ದಿನಗಳ ಈ ಸಾಹಿತ್ಯ ಜಾತ್ರೆ ಕೇವಲ ಸಂವಾದ, ಮಂಥನ ಮತ್ತು ವಿಚಾರ-ವಿಮರ್ಶೆಗಷ್ಟೇ ವೇದಿಕೆಯಾಗಿದೇ ಪುಸ್ತಕ ಪ್ರದರ್ಶನ, ಕ್ಲೇ ಮಾಡೆಲ್ ತಯಾರಿ ಸೇರಿ ಹತ್ತು ಹಲವು ಸಾಧ್ಯತೆಗಳಿಗೆ ಸಾಕ್ಷಿಯಾಗಿತ್ತು. ವಿದ್ಯಾರ್ಥಿಗಳು, ದೊಡ್ಡವರು, ಉದ್ಯೋಗಿಗಳು ಸೇರಿದಂತೆ ಕವಿಗೋಷ್ಠಿಗಳ ಆಚೆಗೂ ಅನೇಕರು ಸೇರಿಕೊಂಡು ಸಾಹಿತ್ಯ ಜಾತ್ರೆಯಲ್ಲಿ ಸಂಭ್ರಮಿಸಿದ್ರು. ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿ ಹಲವು ಬಲಪಂಥೀಯ ವಿಚಾರಧಾರೆಯ ಪ್ರಮುಖರು ಕಾರ್ಯಕ್ರಮಕ್ಕೆ ಎರಡು ದಿನಗಳ ಕಾಲವೂ ಸಾಕ್ಷಿಯಾಗೋ ಮೂಲಕ ಮಂಗಳೂರು ಲಿಟ್ ಫೆಸ್ಟ್ ಅಧಿಕೃತ ತೆರೆಕಂಡಿದೆ. 

ಒಟ್ಟಾರೆ ಪ್ರಸಕ್ತ ವಿದ್ಯಮಾನಗಳನ್ನ ಮಾಡೆಲ್ ಆಫ್ ಭಾರತ್ ಅನ್ನೋ ಕಲ್ಪನೆಯಡಿ ತಂದು ಚರ್ಚಿಸೋ ಮೂಲಕ ಲಿಟ್ ಫೆಸ್ಟ್ ಯಶಸ್ಸು ಕಂಡಿದೆ. ಹತ್ತು ಹಲವು ಮಂಥನಗಳು ಕರಾವಳಿಯ ನೆಲದಲ್ಲಿ ಹಲವು ಹೊಸ ಚರ್ಚೆಗಳಿಗೆ ವೇದಿಕೆಯಾಗಿದೆ. ಈ ಮೂಲಕ ಸಾಹಿತ್ಯ ಜಾತ್ರೆ ಅನೇಕರ ಅಭಿಪ್ರಾಯ ಮಂಡನೆಗೂ ಹೊಸ ದಾರಿಯಾಗಿದ್ದಂತೂ ಸತ್ಯ.

click me!