ಅದ್ಧೂರಿಯ ಮೈಲಾಪೂರದ ಶ್ರೀಮೈಲಾರಲಿಂಗೇಶ್ವರನ ಜಾತ್ರೆಗೆ ಲಕ್ಷಾಂತರ ಭಕ್ತರ ಸಾಕ್ಷಿ | ಬಿಗಿಭದ್ರತೆಯ ಕಣ್ತಪ್ಪಿಸಿ ಪಲ್ಲಕ್ಕಿ ಮೇಲೆ ಕುರಿಮರಿಗಳ ಎಸೆತ | ಮೈಲಾಪೂರದ ಜಾತ್ರೆಗಾಗಿ ಹಗಲಿರಳೂ ದುಡಿದ ಜಿಲ್ಲಾಡಳಿತ | ತಂದೆ ತಾಯಿ, ಪಾಲಕರ ಕೈಬಿಟ್ಟಿದ್ದ 28 ಮಕ್ಕಳ ರಕ್ಷಣೆ |
ಯಾದಗಿರಿ(ಜ.15): ಮಂಗಳವಾರ ಜಿಲ್ಲೆಯ ಮೈಲಾಪೂರದಲ್ಲಿ ‘ಏಳು ಕೋಟಿಗೆ, ಏಳು ಕೋಟಿ...’ ಎಂಬ ಭಕ್ತಿಭಾವದ ಪ್ರತಿಧ್ವನಿ ಮುಗಿಲು ಮುಟ್ಟಿತ್ತು. ಪ್ರತಿ ವರ್ಷ ಜ.14 ರ ಸಂಕ್ರಾಂತಿ ದಿನದಂದು, ಯಾದಗಿರಿ ಜಿಲ್ಲಾ ಕೇಂದ್ರದಿಂದ ಸುಮಾರು 27 ಕೀ.ಮೀ. ದೂರದಲ್ಲಿರುವ, ವಿಚಿತ್ರ ಹಾಗೂ ವಿಶಿಷ್ಟ ಸಂಪ್ರದಾಯಗಳಿಗೆ ಹೆಸರುವಾಸಿಯಾದ ಶ್ರೀಕ್ಷೇತ್ರ ಮೈಲಾಪೂರದ ಶ್ರೀಮೈಲಾರಲಿಂಗೇಶ್ವರನ ಜಾತ್ರೆಯ ಸಂಭ್ರಮ.
ಭಂಡಾರದ ಹಳದಿ ಬಣ್ಣ ಇಡೀ ಬಾನಂಗಣದಲ್ಲಿ ಮೆರುಗು ಮೂಡಿಸಿತ್ತು. ರಾಜ್ಯದ ವಿವಿಧೆಡೆಯಿಂದ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮುಂತಾದೆಡೆಯಿಂದ ಬರುವ ಲಕ್ಷಾಂತರ ಭಕ್ತರಿಗೆ ಸಾಕ್ಷಿಯಾಗುವ ಈ ಜಾತ್ರೆ ಈ ಭಾಗದ ಅತ್ಯಂತ ದೊಡ್ಡ ಜಾತ್ರೆಗಳಲ್ಲೊಂದು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಶಿವರಾಜ್ ಪಾಟೀಲ್ ಅವರೂ ಸಹ ಆಗಮಿಸಿದ್ದುದು ವಿಶೇಷ. ನ್ಯಾ. ಪಾಟೀಲರ ಕುಲದೇವರು ಮೈಲಾಪೂರದ ಮಲ್ಲಯ್ಯ ಆಗಿರುವುದರಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ಅವರ ಉಪಸ್ಥಿತಿ ಇಲ್ಲಿ ಗಮನ ಸೆಳೆಯುತ್ತದೆ. ಮೈಲಾಪೂರದ ಜಾತ್ರೆಯಲ್ಲಿ ಭಕ್ತಿ ಭಾವದ ಮಧ್ಯೆ ಮಿಂಚಿ ಮರೆಯಾಗುವ ‘ಹರಕೆಯ ಕುರಿಮರಿಗಳ ಎಸೆತ’ ಮೂಢನಂಬಿಕೆ ಇನ್ನೂ ಮರೆಯಾಗದಿರುವುದು ವಿಪರ್ಯಾಸ.
ಮಲ್ಲಯ್ಯನಿಗೆ ‘ಹರಕೆ’ಗೆಂದು ಕೆಲವು ಭಕ್ತರು ಜೀವಂತ ಕುರಿಮರಿಗಳನ್ನು ಪಲ್ಲಕ್ಕಿ ಮೆರವಣಿಗೆ ಸಂದರ್ಭದಲ್ಲಿ ಎಸೆಯುವ ಮೂಲಕ ಭಕ್ತಿ ಭಾವ ಪ್ರದರ್ಶಿಸುತ್ತಾರೆ. ಆದರೆ, ಇಂತಹ ಅಮಾನವೀಯ ಹಾಗೂ ಪ್ರಾಣಿಹಿಂಸೆ ಪ್ರತಿಬಂಧಕ ಕಾಯ್ದೆಯಡಿ ಇದನ್ನು ತಡೆಯಲು ಜಿಲ್ಲಾಡಳಿತ ಸಾಕಷ್ಟು ಭದ್ರತೆ ನಡೆಸಿತ್ತು. ಕುರಿಮರಿಗಳ ಎಸೆತಕ್ಕೆ ನಿಷೇಧ ಹೇರಿದ್ದ ಜಿಲ್ಲಾಡಳಿತ, ಮೈಲಾಪುರದ ವಿವಿಧ ದಿಕ್ಕುಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಅವುಗಳನ್ನು ವಶಪಡಿಸಿಕೊಂಡು, ಜನರಿಗೆ ತಿಳಿಹೇಳುವ ಪ್ರಯತ್ನ ಮಾಡಿತ್ತು. ಆದರೆ, ಈ ಬಾರಿಯೂ ಸಹ ಸಂಪ್ರದಾಯಕ್ಕೆ ಶರಣಾದಂತಿದ್ದ ಕೆಲವು ಭಕ್ತರು, ಅಡಗಿಸಿಟ್ಟು ತಂದಿದ್ದ ಬೆರಳಣಿಕೆಯಷ್ಟು (ಮೂರು) ಕುರಿಮರಿಗಳನ್ನು ಕೆಲವರು ಎಸೆದು ಹರಕೆ ತೀರಿಸಿಕೊಂಡಿದ್ದು ವಿಚಿತ್ರವಾಗಿತ್ತು.
ಅಂದಹಾಗೆ, ಜಾತ್ರೆಯಲ್ಲಿ ಇಂತಹದ್ದೊಂದು ಅಮಾನವೀಯ ಕೃತ್ಯ ತಡೆಗಟ್ಟಲು ಕಳೆದೊಂದು ತಿಂಗಳಿಂದ ಹಗಲಿರುಳೂ ನಿದ್ರೆಗೆಟ್ಟು ಕೆಲಸ ಮಾಡಿದ್ದ ಜಿಲ್ಲಾಡಳಿತ ಕಾರ್ಯ ಶ್ಲಾಘನೀಯ ಎನ್ನಬಹುದು. ಕಂದಾಯ, ಪಶು ಸಂಗೋಪನೆ, ಪೊಲೀಸ್, ಹೋಂ ಗಾರ್ಡ್ಸ್, ಆರೋಗ್ಯ, ಸೇರಿದಂತೆ ವಿವಿಧ ಇಲಾಖೆಗಳು ಮಂಗಳವಾರ ಸಂಜೆವರೆಗೂ ಸಾವಿರಕ್ಕೂ ಸಮೀಪ (960) ಕುರಿಮರಿಗಳನ್ನು ರಕ್ಷಿಸಿದ್ದುದು ವಿಶೇಷ.
ಹರಕೆಯ ಹೆಸರಿನಲ್ಲಿ ಭಕ್ತರು ಎಸೆಯುವ ಜೀವಂತ ಕುರಿಮರಿಗಳು ಲಕ್ಷಾಂತರ ಭಕ್ತರ ಕಾಲ್ತುಳಿತಕ್ಕೆ ಸಿಕ್ಕಿ ಅಥವಾ ಉಸಿರುಗಟ್ಟಿ ಸಾವನ್ನಪ್ಪುತ್ತಿದ್ದವು. ಈ ಹಿನ್ನೆಲೆಯಲ್ಲಿ, ಮೈಲಾಪೂರದ ಸುತ್ತಮುತ್ತ ಆರು ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿತ್ತು. ಡ್ರೋನ್ ಸಹಿತ 36 ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಹಾಕಲಾಗಿತ್ತು. 71 ಪೊಲೀಸ್ ಇನ್ಸಪೆಕ್ಟರ್‌ಗಳು, 12 ಪಿಎಸೈಗಳು, 47 ಎಎಸೈಗಳು, 250 ಮುಖ್ಯಪೇದೆ ಹಾಗೂ ಪೇದೆಗಳು, 300 ಹೋಂ ಗಾರ್ಡ್ಸ್ ಸಿಬ್ಬಂದಿ, ಎರಡು ಕೆಎಸ್‌ಆರ್‌ಪಿ ಪ್ಲಟೂನ್‌ಗಳು, ಮೂರು ಡಿಎಆರ್ ಪಡೆಗಳನ್ನು ಹಾಗೂ ಎರಡು ಪೊಲೀಸ್ ಔಟ್‌ಪೋಸ್ಟ್‌ಗಳನ್ನು ಜಾತ್ರೆಯ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಹಾಗೆ ನೋಡಿದರೆ, ಇತ್ತೀಚಿನ ಕೆಲವು ವರ್ಷಗಳಿಂದ ಕುರಿಮರಿಗಳ ಹಾರಾಟದ ನಿಷೇಧ ಹಾಗೂ ಜಾಗೃತಿ ಪರಿಣಾಮ ಇಂತಹ ಪ್ರಸಂಗಗಳು ಕ್ಷೀಣಿಸುತ್ತಿರುವುದು ಜಿಲ್ಲಾಡಳಿತದ ಮುತುವರ್ಜಿಯನ್ನು ತೋರಿಸುವಂತಿದೆ. ಈ ಹಿಂದೆ ಸಾವಿರಾರು ಕುರಿಮರಿಗಳ ಹಾರಾಟದ ಪ್ರಕರಣಗಳು ಈಗ ಬೆರಳಣಿಕೆಷ್ಟು ಬಂದಿರುವುದು ಜಾಗೃತಿ ಹಾಗೂ ಜಿಲ್ಲಾಡಳಿತದ ಕಟ್ಟೆಚ್ಚರದ ಪರಿಣಾಮ ಎಂದರೂ ತಪ್ಪಾಗಲಿಕ್ಕಿಲ್ಲ. ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ತಂಡ ಜಾತ್ರೆಯಲ್ಲಿ ಯಾವುದೇ ಲೋಪವಾಗದಂತೆ ಹಾಗೂ ಭಕ್ತರ ರಕ್ಷಣೆಯ ಹೊಣೆಯನ್ನೂ ಹೊತ್ತು, ಬಿಗಿ ಭದ್ರತೆಯ ನಡುವೆ ಸಂಪನ್ನಗೊಂಡಿತು.
* ರಾಜ್ಯ, ಅಂತರ್ ರಾಜ್ಯಗಳ ವಿವಿಧೆಡೆಯಿಂದ ಲಕ್ಷಾಂತರ ಭಕ್ತರ ಜಾತ್ರೆಯಲ್ಲಿ ಸಾಕ್ಷಿ
* ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನಾ. ಶಿವರಾಜ್ ಪಾಟೀಲ್ ಆಗಮನ
* ಪೊಲೀಸರ ಕಟ್ಟೆಚ್ಚರ ನಡೆಯೂ ಜಾತ್ರೆಯಲ್ಲಿ ಕುರಿಮರಿಗಳ ಹಾರಾಟ
* ಆದರೆ ಇದನ್ನು ತಡೆಯಲು ಜಿಲ್ಲಾಡಳಿತ ಸಾಕಷ್ಟು ಭದ್ರತೆ ನಡೆಸಿತ್ತು
* ಸಂಜೆವರೆಗೂ ಸಾವಿರಕ್ಕೂ ಕುರಿಮರಿಗಳನ್ನು ರಕ್ಷಿಸಿದ್ದುದು ವಿಶೇಷ
‘ವಿಶಿಷ್ಟ ಸಂಪ್ರದಾಯದ ಊರೂ ಮೈಲಾಪುರ’
ಯಾದಗಿರಿ ಜಿಲ್ಲಾಕೇಂದ್ರದಿಂದ ಸುಮಾರು 27 ಕಿ.ಮೀ. ದೂರದಲ್ಲಿರುವ ಶ್ರೀಕ್ಷೇತ್ರ ಮೈಲಾಪುರ. ಶ್ರೀಮೈಲಾರಲಿಂಗೇಶ್ವರ ಇಲ್ಲಿನ ಅಧಿದೇವತೆ. ಈ ಗ್ರಾಮದಲ್ಲಿನ ವಿಶಿಷ್ಟ ಸಂಪ್ರದಾಯಗಳು ಹಾಗೂ ಆಚರಣೆಗಳು ವಿಚಿತ್ರ ಎನ್ನಿಸುತ್ತವೆ. 21ನೇ ಶತಮಾನದ ಕೊನೆಯಂಚಿನಲ್ಲೂ ಇಂತಹ ನಂಬಿಕೆಗಳು, ಆಚರಣೆಗಳು, ನಡವಳಿಕೆಗಳು ಅಚ್ಚರಿ ಮೂಡಿಸುತ್ತವೆಯಾದರೂ, ನಿಜ. ಇಲ್ಲಿನವರು ಹೇಳುವಂತೆ, ಮೈಲಾಪೂರದಲ್ಲಿ ಇಂದಿಗೂ ಹೊರಸು (ಮಂಚ) ಬಳಸುವುದಿಲ್ಲವಂತೆ. ಕಾರಣ, ಇದು ಶ್ರೀಮೈಲಾರಲಿಂಗನ ಆಸನ. ಹೀಗಾಗಿ, ಯಾರೂ ಇಲ್ಲಿ ಇದನ್ನು ಬಳಕೆ ಮಾಡೋಲ್ಲ.
ಅಚ್ಚರಿ ಎಂದರೆ, ಗರ್ಭಿಣಿ ಅಥವಾ ಬಾಣಂತಿಯೂ ಈ ನಿಯಮಕ್ಕೆ ಹೊರತಾಗಿಲ್ಲ. ಹೀಗಾಗಿ, ಅವರೂ ಸಹ ಮಂಚದ ಮೇಲೆ ಮಲಗುವಂತಿಲ್ಲ. ಕಲ್ಲಿನ ಅಥವಾ ಮತ್ತೊಂದು ವ್ಯವಸ್ಥೆಯೇ ಅನಿವಾರ್ಯವಂತೆ ! ಇನ್ನು, ಕುದುರೆ ಸವಾರಿ ಇಲ್ಲಿಲ್ಲ, ಯಾಕೆಂದರೆ ಅದು ಮೈಲಾರಲಿಂಗೇಶ್ವರನ ವಾಹನ. ದೇವರ ವಾಹನವನ್ನೇ ಹತ್ತುವುದು. ಅದೆಷ್ಟರ ಮಟ್ಟಿಗೆ ಸರಿ ಅನ್ನೋ ಊರ ಮಂದಿ, ಕುದುರೆ ಸವಾರಿ ಮಾಡೋಲ್ಲ. ಕೋಳಿಗಳು ಸಾಕುವ ಹಾಗಿಲ್ಲ, ಕುಂಬಾರರು ಈ ಗ್ರಾಮದಲ್ಲಿ ಗಡಿಗೆಗಳನ್ನು ಮಾಡೋಲ್ಲ.
ರಾಕ್ಷಸರ ವಧೆ ಸಂದರ್ಭದಲ್ಲಿ ಇವುಗಳಿಂದ ದೇವರಿಗೆ ಅಡಚಣೆಯಾಯ್ತು ಅನ್ನೋ ಪೌರಾಣಿಕ ಕತೆಯೊಂದರ ನಂಬಿಕೆ ಇವರಲ್ಲಿ ಆಳವಾಗಿದೆ. ಇಂತಹ ವಿಚಿತ್ರ, ವಿಶಿಷ್ಟ ಸಂಪ್ರದಾಯಗಳಿಗೆ ಹೆಸರುವಾಸಿಯಾದ ಮೈಲಾ ಪುರದ ಮಲ್ಲಯ್ಯನ ಜಾತ್ರೆ ಜ.14 ರಿಂದ ಆರೇಳು ದಿನಗಳವರೆಗೆ ನಡೆಯುತ್ತದೆ. ಏನಿಲ್ಲವೆಂದರೂ ಸುಮಾರು 20 ಲಕ್ಷ ಭಕ್ತರು ಈ ಅವಧಿಯಲ್ಲಿ ಭೇಟಿ ನೀಡಿರುತ್ತಾರೆ ಎನ್ನಲಾಗಿದೆ.
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಇದರ ಎಲ್ಲ ಹೊಣೆ ಜಿಲ್ಲಾಡಳಿತದ್ದು. ಈ ಹಿಂದೆ, ಎರಡು ಬಾರಿ ಮಲ್ಲಯ್ಯನ ಕಾಣಿಕೆ ಹುಂಡಿ ಒಡೆದು, ಕೋಟ್ಯಂತರ ರುಪಾ ಯಿಗಳ ಬೆಲೆ ಬಾಳುವ ಚಿನ್ನಾಭರಣ ಹಾಗೂ ಹಣ ದೋಚಿದ್ದ ಕಳ್ಳರ ಕೈಚೆಳಕ ಜಿಲ್ಲಾಡಳಿತಕ್ಕೆ ಸವಾಲು ಹಾಕಿದಂತಿತ್ತು. ಸಿಸಿಟಿವಿ ಕ್ಯಾಮರಾಗಳಲ್ಲಿ ಇದು ಸೆರೆಯಾಗಿತ್ತು.