ಜನೌಷಧಿಯಲ್ಲಿ ಸ್ಯಾನಿಟರಿ ಪ್ಯಾಡ್‌ಗೆ ಬರ..!

By Kannadaprabha NewsFirst Published Dec 3, 2022, 10:30 AM IST
Highlights

1 ರಿಂದ 3ಗೆ ಸಿಗುವ ಸ್ಯಾನಿಟರಿ ಪ್ಯಾಡ್‌ಗೆ ಭಾರಿ ಬೇಡಿಕೆ, 2 ತಿಂಗಳಿಂದ ಬೇಡಿಕೆ ಇರುವಷ್ಟು ಪೂರೈಸದ ಬಿಪಿಸಿಐ, ಬಡ ಹೆಣ್ಣುಮಕ್ಕಳಿಗೆ ಸಮಸ್ಯೆ. 

ಬೆಂಗಳೂರು(ಡಿ.03):  ನಗರದ ಜನೌಷಧ ಕೇಂದ್ರಗಳಲ್ಲಿ ಸ್ಯಾನಿಟರಿ ಪ್ಯಾಡ್‌ ದಾಸ್ತಾನು ಕೊರತೆ ಎದುರಾಗಿದೆ. ಹಲವು ಕೇಂದ್ರಗಳಲ್ಲಿ ದಾಸ್ತಾನು ಖಾಲಿಯಾಗಿದ್ದು, ಮತ್ತಷ್ಟುಕಡೆ ಗ್ರಾಹಕರಿಗೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ಪ್ಯಾಡ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.

ಕಡಿಮೆ ದರದಲ್ಲಿ ಗುಣಮಟ್ಟದ ಔಷಧಗಳನ್ನು ನೀಡುವ ಉದ್ದೇಶದಿಂದ ಸ್ಥಾಪನೆಯಾಗಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳಲ್ಲಿ ಮಹಿಳೆಯರು ಮಾಸಿಕ ಮುಟ್ಟಿನ ಸಂದರ್ಭದಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್‌ಗಳು ಅತೀ ಕಡಿಮೆ ದರದಲ್ಲಿ ಲಭ್ಯವಾಗುತ್ತವೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಡ, ಮಧ್ಯಮ ವರ್ಗದ ಮಹಿಳೆಯರು ಪ್ಯಾಡ್‌ಗಳಿಗೆ ಜನೌಷಧ ಕೇಂದ್ರಗಳನ್ನೇ ಅವಲಂಭಿಸಿದ್ದರು. ಸದ್ಯ ದಾಸ್ತಾನು ಕೊರತೆಯಿಂದ ಸಮಸ್ಯೆ ಎದುರಾಗಿದ್ದು, ದಾಸ್ತಾನು ಲಭ್ಯವಿರುವ ಕೇಂದ್ರಗಳನ್ನು ಹುಡುಕುತ್ತಾ ಅಲೆದಾಟ ನಡೆಸಬೇಕಿದೆ.

ಮುಂದಿನ ದಿನಗಳಲ್ಲಿ ಇನ್ನೂ 500 ಜನೌಷಧಿ ಮಳಿಗೆ ಸ್ಥಾಪನೆ: ಸಚಿವ ಸುಧಾಕರ್‌

ದೆಹಲಿಯಲ್ಲಿರುವ ಬ್ಯೂರೋ ಆಫ್‌ ಫಾರ್ಮಾ ಪಬ್ಲಿಕ್‌ ಸೆಕ್ಟರ್‌ ಅಂಡರ್‌ಟೇಕಿಂಗ್‌ ಆಫ್‌ ಇಂಡಿಯಾ (ಬಿಪಿಪಿಐ) ಕಡೆಯಿಂದ ಜನೌಷಧ ಕೇಂದ್ರಗಳಿಗೆ ದಾಸ್ತಾನು ಪೂರೈಕೆಯಾಗುತ್ತದೆ. ಕಳೆದ ಎರಡು ತಿಂಗಳಿಂದ ಸ್ಯಾನಿಟರಿ ಪ್ಯಾಡ್‌ಗಳನ್ನು ಬೇಡಿಕೆ ಸಲ್ಲಿಸಿದ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ದಾಸ್ತಾನು ಕೊರತೆ ಎದುರಾಗಿದ್ದು, ಗ್ರಾಹಕರೊಬ್ಬರಿಗೆ ಸೀಮಿತ ಪ್ರಮಾಣದಲ್ಲಿ ಮಾತ್ರ ಪ್ಯಾಡ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಕೆಲವೆಡೆ ಸಂಪೂರ್ಣ ಖಾಲಿಯಾಗಿದೆ ಎಂದು ಜನೌಷಧ ಕೇಂದ್ರಗಳ ಸಿಬ್ಬಂದಿ ಹೇಳುತ್ತಾರೆ.

ಅಗ್ಗದ ದರವೆಂದು ಹೆಚ್ಚು ಖರೀದಿ

ಜನೌಷಧ ಕೇಂದ್ರಗಳಲ್ಲಿ ಒಂದು ರುಪಾಯಿಗೆ ಒಂದು ಸ್ಯಾನಿಟರಿ ಪ್ಯಾಡ್‌ ಸಿಗುತ್ತದೆ. ಎಕ್ಸ್‌ಎಲ್‌ ಗಾತ್ರದ ಪ್ಯಾಡ್‌ಗೆ .3 ದರವಿದೆ. ಮಾರುಕಟ್ಟೆಯಲ್ಲಿ 10 ಪಟ್ಟು ಹೆಚ್ಚಿನ ದರವಿದೆ. ಹೀಗಾಗಿಯೇ, ಮಹಿಳೆಯರು, ಆಸ್ಪತ್ರೆ ಸಿಬ್ಬಂದಿ, ಡೇ ಕೇರ್‌ ಸಿಬ್ಬಂದಿ ಒಮ್ಮೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾಡ್‌ಗಳನ್ನು ಖರೀದಿಸುತ್ತಾರೆ. ಸದ್ಯ ದಾಸ್ತಾನು ಕೊರತೆಯಿಂದ ಕಡಿಮೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ನೀಡಲಾಗುತ್ತಿದೆ ಎಂದು ಮಲ್ಲೇಶ್ವರ ಬಳಿಯ ಜನೌಷಧ ಕೇಂದ್ರ ಗಿರಿಜಾ ತಿಳಿಸಿದರು.

ಜನೌಷಧಿ ಯೋಜನೆಯಲ್ಲಿ ಕರ್ನಾಟಕ ದೇಶಕ್ಕೇ ನಂ.2: ಸಚಿವ ಸುಧಾಕರ್

ಕವರ್‌ ನೀಡಬೇಕೆಂಬ ಕಾರಣಕ್ಕೆ ಮಾರುತ್ತಿಲ್ಲ?

ಸ್ಯಾನಿಟರಿ ಪ್ಯಾಡ್‌ ಖರೀದಿಸುವ ಹೆಚ್ಚಿನ ಗ್ರಾಹಕರು ಗೌಪ್ಯತೆ ಕಾಪಾಡಿಕೊಳ್ಳಲು ಬಯಸುತ್ತಾರೆ. ಪ್ಯಾಸ್ಟಿಕ್‌ ಕವರ್‌ ಅಥವಾ ಪೇಪರ್‌ ಪೊಟ್ಟಣವನ್ನು ಕೇಳುತ್ತಾರೆ. ಇವುಗಳನ್ನು ಜನೌಷಧ ಕೇಂದ್ರಗಳ ಮಾಲಿಕರೇ ಸ್ವಂತ ಖರ್ಚಿನಲ್ಲಿ ನೀಡಬೇಕಾಗುತ್ತದೆ. ಇದರಿಂದಲೂ ಹಲವರು ಸ್ಯಾನಿಟರಿ ಪ್ಯಾಡ್‌ಗಳನ್ನು ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಇಲ್ಲಿ ಖರೀದಿ, ಅಲ್ಲಿ ಮಾರಾಟ

ನಗರದ ಜನೌಷಧ ಕೇಂದ್ರಗಳಲ್ಲಿ ಅತೀ ಕಡಿಮೆ ಬೆಲೆಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಖರೀಸಿಸುವ ಗ್ರಾಮೀಣ ಭಾಗದ ಔಷಧ ಮಳಿಗೆಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಜತೆಗೆ ಸ್ವಸಹಾಯ ಸಂಘಗಳು, ಮಹಿಳಾ ಸಂಘಟನೆಗಳು, ಸೇವಾ ಸಂಸ್ಥೆಗಳು ಕಡಿಮೆ ದರವೆಂದು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿ ಉಚಿತವಾಗಿ ವಿತರಣೆ ಮಾಡುತ್ತಾರೆ. ಇದರಿಂದಲೂ ದಾಸ್ತಾನು ಕೊರತೆ ಎದುರಾಗುತ್ತದೆ. ಹೀಗಾಗಿ, ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಮೈಸೂರು ರಸ್ತೆ ಬಳಿಯ ಜನೌಷಧ ಕೇಂದ್ರದ ಸುರೇಶ್‌ ತಿಳಿಸಿದರು.
 

click me!