ಕನ್ನಡಪ್ರಭ ಮೈಸೂರು ಆವೃತ್ತಿ-25ನೇ ವಾರ್ಷಿಕೋತ್ಸವ ಸವಿನೆನಪು ಅಂಗವಾಗಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿದರು
ಮೈಸೂರು (ಏ. 14): ದರ ಸಮರದ ನಡುವೆಯೂ ಅತ್ಯುತ್ತಮ ಸುದ್ದಿಗಳು ಹಾಗೂ ಲೇಖನಗಳ ಮೂಲಕ ಉತ್ಕೃಷ್ಟಮಾಧ್ಯಮವಾಗಿ ಬೆಳೆಯುವ ಸವಾಲು ನಮ್ಮ ಮುಂದಿದೆ ಎಂದು ಕನ್ನಡಪ್ರಭ (Kannada Prabha) ಮತ್ತು ಸುವರ್ಣ ನ್ಯೂಸ್ (Asianet Suvarna News) ಪ್ರಧಾನ ಸಂಪಾದಕ ರವಿ ಹೆಗಡೆ (Ravi Hegde) ಹೇಳಿದರು. ಕನ್ನಡಪ್ರಭ ಮೈಸೂರು ಆವೃತ್ತಿ (Mysuru Edition) -25ನೇ ವಾರ್ಷಿಕೋತ್ಸವ ಸವಿನೆನಪು ಅಂಗವಾಗಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಪ್ರಭ ದ ಪ್ರೀಮಿಯಂ ಟ್ರೆಂಡ್ ಸೆಟ್ಟರ್ ಆಗಿ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೆ ಬಂದಿರುವ ಸವಾಲುಗಳನ್ನು ಎದುರಿಸಿ ನಿಂತಿರುವ ಬಗ್ಗೆ ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮುಂದೆ ಹೋಗಬೇಕಾದ ದಾರಿ ಇನ್ನೂ ಇದೆ ಎಂದರು.
ದರ ಸಮರ, ಟ್ಯಾಲೆಂಟ್ ಪೋಚ್ ನಡುವೆಯೂ ‘ಕನ್ನಡಪ್ರಭ’ ತನ್ನ ಸುದ್ದಿಗಳು, ಲೇಖನಗಳ ಹಾಗೂ ಮಾರ್ಗದರ್ಶಿ ಬೆಲೆಯ ಪ್ರಕಾರವೇ ಮುಂದೆ ಹೋಗಬೇಕು ಎಂದರು. ಕನ್ನಡಪ್ರಭ ಮೈಸೂರು ಆವೃತ್ತಿ-25, ರಾಜ್ಯ ಆವೃತ್ತಿಯ 50ನೇ ವರ್ಷಾಚರಣೆಯ ಸಂದರ್ಭದಲ್ಲಿ ನಾವು ಕೂಡ ಭಾಗಿಯಾಗಿದ್ದೇವೆ ಎಂಬುದೇ ಹೆಮ್ಮೆಯ ವಿಷಯ. ಮನಸ್ಸಿದ್ದರೆ ಮಾರ್ಗ ಉಂಟು ಎಂಬುದಕ್ಕೆ ವಿಶೇಷ ಸಂಚಿಕೆಗಳೇ ನಿದರ್ಶನವಾಗಿವೆ ಎಂದರು.
undefined
ಇದನ್ನೂ ಓದಿ: Kannadaprabha Recruitment 2022: ವೃತ್ತಿಪರರಿಗೆ ಕನ್ನಡಪ್ರಭ ದಿನ ಪತ್ರಿಕೆ ಅರ್ಜಿ ಆಹ್ವಾನ
27 ವರ್ಷಗಳ ಹಿಂದೆ ಕನ್ನಡಪ್ರಭ ಪತ್ರಿಕೆಗೆ ಸೇರಿದಾಗ ಸುದ್ದಿ ಜ್ಞಾನದ ಜೊತೆಗೆ ಕಂಪ್ಯೂಟರ್ ಜ್ಞಾನ ಪಡೆಯುವುದು ದೊಡ್ಡ ಸವಾಲಾಗಿತ್ತು. ಆಗ ಬೆಂಗಳೂರಿನಲ್ಲಿಯೇ ಪತ್ರಿಕೆ ಮುದ್ರಣವಾಗಿ ದೂರದ ಬೀದರ್, ಗುಲ್ಬರ್ಗಕ್ಕೆ ಹೋಗಬೇಕಾದ ಪರಿಸ್ಥಿತಿ ಇತ್ತು.
ಕಂಪ್ಯೂಟರ್ ಬಂದ ನಂತರ ಬೆಂಗಳೂರಿನಲ್ಲಿಯೇ ಪೇಜ್ ಮಾಡಿ, ಹೈದ್ರಾಬಾದಿನಲ್ಲಿ ಪ್ರಿಂಟ್ ಮಾಡಲು ಸಾಧ್ಯವಾಯಿತು. ಇದರಿಂದ ಪತ್ರಿಕೆ ಆ ಭಾಗಗಳಿಗೆ ಬೇಗ ತಲುಪಿತು. ನಂತರ ಜಿಲ್ಲಾ ಆವೃತ್ತಿಗಳನ್ನು ಆರಂಭಿಸಿ, ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ಎಲ್ಲಾ ಸರಿಯಾಯಿತು ಎನ್ನುವಷ್ಟರ ಹೊತ್ತಿಗೆ ಹೊಸ ಹೊಸ ಪತ್ರಿಕೆಗಳು ಆರಂಭವಾಗಿ ಕನ್ನಡ ಪತ್ತಿಕೋದ್ಯಮದ ನೂರು ವರ್ಷಗಳಲ್ಲಿ ಕಾಣದ ದರ ಸಮರ ಶುರುವಾಯಿತು. ಪತ್ರಿಕೆಗಳ ದರವನ್ನು ಪೈಪೋಟಿಯ ಮೇಲೆ 2 ರು. 1 ರು.ಗೆ ಇಳಿಸಲಾಯಿತು. ಉ್ಪಸರಣ ಹೆಚ್ಚ ಳಕ್ಕೆ ಬೇರೆ ಬೇರೆ ಸ್ಕೀಮ್‌ಗಳನ್ನು ಮಾಡಲಾಯಿತು ಅವರು ವಿವರಿಸಿದರು.
ಇದನ್ನೆಲ್ಲಾ ಮೀರಿ ಪತ್ರಿಕೆಗಳು ಬೆಳೆಯತೊಡಗಿದಾಗ ದೂರದರ್ಶನ, ಈಗ ಸಾಮಾಜಿಕ ಜಾಲತಾಣಗಳು ಬಂದಿವೆ. ಸಾಮಾಜಿಕ ಜಾಲತಾಣಗಳಳಲ್ಲಿ ಬರುವ ಸುದ್ದಿಗಳಲ್ಲಿ ಬಹುತೇಕ ಸುಳ್ಳು, ಬೋಗಸ್. ಹೀಗಾಗಿ ಜನತೆ ಮರು ದಿನ ಪತ್ರಿಕೆಗಳಲ್ಲಿ ಏನು ಸುದ್ದಿ ಬರುತ್ತದೆ ಎಂದು ಕಾಯುತ್ತಿರುತ್ತಾರೆ ಎಂದರು.ಪತ್ರಿಕೆಗಳು ಎಲ್ಲ ಸಮರಗಳನ್ನು ಎದುರಿಸಿ ಮುಂದೆ ಸಾಗುತ್ತಿರುವಾಗ ಕಳೆದ ಎರಡು ವರ್ಷಗಳಿಂದ ಕೊರೋನಾ ಮಹಾಮಾರಿ ಆರಂಭವಾಯಿತು. ಇದರಿಂದ ಯಾರೂ ಊಹಿಸಿರದ ‘ಮನೆಯಿಂದ ಕೆಲಸ‘ ಆರಂಭವಾಯಿತು.
ವಿಚಾರ ಸಂಕಿರಣ ಆಯೋಜನೆ: ಮೈಸೂರು ಆವೃತ್ತಿಯ ಬೆಳ್ಳಿ ಹಬ್ಬವನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕಿತ್ತು. ಆದರೆ, ಸಾಧ್ಯವಾಗಲಿಲ್ಲ. ಆದರೆ ಮುಂದೆ ಮೈಸೂರಿನಲ್ಲಿ ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮ ಆಯೋಜಿಸುವ ಆಲೋಚನೆ ಇದೆ. ಅದಕ್ಕೆ ಮುಹೂರ್ತ ಕೂಡಿಬರಬೇಕು ಎಂದರು.
ಇದನ್ನೂ ಓದಿ: Raita Ratna Award 2022: ಪರಿಸರ ಸ್ನೇಹಿ ಬದುಕಿನ ಪಾಠ ಹೇಳುವ ಅನ್‌ಮೋಲ್ ಶಾಲೆ
ಸಮನ್ವಯ ಮತ್ತು ವಿಶೇಷ ಯೋಜನೆ ಸಂಪಾದಕ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಗ್ರಾಮಾಂತರ ಪ್ರದೇಶಗಳ ಪ್ರತಿನಿಧಿಗಳ ಸಹಕಾರದಿಂದ ಪತ್ರಿಕೆ ಬೆಳವಣಿಗೆ ಕಂಡಿದೆ. ಎಲ್ಲಾ ಸವಾಲುಗಳನ್ನು ಎದುರಿಸಿ ಕನ್ನಡಪ್ರಭ ಉಳಿದಿದೆ. ಅದರಿಂದಲೇ ನಾವೆಲ್ಲಾ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದರು.
ಬಿಸಿನೆಸ್ ಹೆಡ್ ಎನ್.ಕೆ.ಅಪ್ಪಚ್ಚು ಮಾತನಾಡಿ, 0-25ರ ವಯಸ್ಸು ಬ್ರಹ್ಮಚರ್ಯ, ಈಗ ಮೈಸೂರು ಆವೃತ್ತಿ ಅದನ್ನು ದಾಟಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದೆ. ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಬೇಕಿದೆ ಎಂದು ಆಶಿಸಿದರು. ಉಪಾಧ್ಯಕ್ಷ ಅನಿಲ್ ಸುರೇಂದ್ರಮಾತನಾಡಿ, ಇಂಥದೊಂದು ವಿಶೇಷ ಸಂಚಿಕೆ ರೂಪಿಸಲು ಕಾರಣರಾದ ಸರ್ವರನ್ನು ಅಭಿನಂದಿಸಿದರು.
ಕನ್ನಡಪ್ರಭ ಪ್ರಧಾನ ಪುರವಣಿ ಸಂಪಾದಕ ಜೋಗಿ ಅವರು ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕನ್ನಡಪ್ರಭ ಮೈಸೂರು ಆವೃತ್ತಿ ಬೆಳ್ಳಿ ಹಬ್ಬದ ಸಂಚಿಕೆ ಬಗ್ಗೆ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ಕರ್ನಾಟಕ ವನ್ಯಜೀವಿ ಮಂಡಳಿಯ ಸದಸ್ಯರೂ ಆದ ಹಿರಿಯ ಪತ್ರಕರ್ತ ವಿನೋದ್‌ಕುಮಾರ್ ಬಿ. ನಾಯ್ಕ್ ಮೈಸೂರು ಮತ್ತು ವನ್ಯಜೀವಿಗಳಿಗೆ ಇರುವ ಸಂಬಂಧದ ಬಗ್ಗೆ ಮಾತನಾಡಿದರು. ಡಿಜಿಎಂ ರಾಘವೇಂದ್ರ ವಂದಿಸಿದರು. ಲಾಸ್ಯ ಪ್ರಾರ್ಥಿಸಿದರು. ಮೈಸೂರು, ಚಾಮರಾಜನಗರ ಜಿಲ್ಲೆಯ ಎಲ್ಲಾ ಪ್ರತಿನಿಧಿಗಳು, ಮಂಡ್ಯ, ಕೊಡಗು ಜಿಲ್ಲಾ ವರದಿಗಾರರು, ರಾಜ್ಯದ ಮಾರುಕಟ್ಟೆವಿಭಾಗದ ಎಲ್ಲಾ ಪ್ರತಿನಿಧಿಗಳು ಹಾಜರಿದ್ದರು.