ವರದಿ : ಅಂಶಿ ಪ್ರಸನ್ನಕುಮಾರ್
ಮೈಸೂರು (ನ.07): ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ವರ್ಷಾಂತ್ಯದಲ್ಲಿ ಚುನಾವಣೆ (Election) ನಡೆಯಬೇಕಿದ್ದು, ಪ್ರಮುಖ ರಾಜಕೀಯ ಪಕ್ಷಗಳಲ್ಲಿ (Political Parties) ಈಗಾಗಲೇ ತಯಾರಿ ಆರಂಭವಾಗಿದೆ.
undefined
ಅವಿಭಜಿತ (Mysuru) ಜಿಲ್ಲೆ ದ್ವಿಸದಸ್ಯ ಕ್ಷೇತ್ರವಾಗಿತ್ತು. 1997 ರಲ್ಲಿ ಮೈಸೂರಿನಿಂದ ಬೇರ್ಪಡಿಸಿ ಚಾಮರಾಜನಗರ(chamarajanagar) ಜಿಲ್ಲೆಯನ್ನು ರಚಿಸಲಾಗಿದೆ. ಆದರೂ ಇವರೆಡೂ ಜಿಲ್ಲೆಗಳು ಸೇರಿ ದ್ವಿಸದಸ್ಯ ಕ್ಷೇತ್ರವಾಗಿದೆ. ಉಭಯ ಜಿಲ್ಲೆಗಳ ಸಂಸದರು, ಶಾಸಕರು, ನಗರಪಾಲಿಕೆ, ನಗರಸಭೆ, ಪುರಸಭೆ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಸೇರಿ ಇಬ್ಬರನ್ನು ಆಯ್ಕೆ ಮಾಡಬೇಕಾಗಿದೆ. ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆ (Election) ಮುಂದಕ್ಕೆ ಹೋಗಿದೆ. ಹೀಗಾಗಿ ಚುನಾವಣೆ ನಡೆಯುತ್ತದೆಯೋ ಇಲ್ಲವೋ ಎಂಬುದು ಖಚಿತವಾಗಿಲ್ಲ. ಆದರೆ ಈ ಚುನಾವಣೆಯಲ್ಲಿ ಬಹುಸಂಖ್ಯಾತ ಮತದಾರರು ಗ್ರಾಪಂ ಸದಸ್ಯರು. ಜಿಲ್ಲಾ ಹಾಗೂ ತಾಪಂ ಹೊರತುಪಡಿಸಿ, ಉಳಿದೆಲ್ಲಾ ಸ್ಥಳೀಯ ಸಂಸ್ಥೆಗಳು ಅಸ್ತಿತ್ವದಲ್ಲಿ ಇರುವುದರಿಂದ ಚುನಾವಣೆ ನಡೆಸಬಹುದಾಗಿದೆ ಎಂಬ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ.
ಈವರೆಗೆ ನಡೆದಿರುವ ಐದು ಚುನಾವಣೆಗಳಲ್ಲಿ ಒಮ್ಮೆ ಹೊರತುಪಡಿಸಿದರೆ ಕಾಂಗ್ರೆಸ್ (Congress) ಹಾಗೂ ಜನತಾ ಪರಿವಾರ ತಲಾ ಒಂದು ಸ್ತಾನದಲ್ಲಿ ಗೆಲ್ಲುತ್ತಾ ಬಂದಿವೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈ ಬಾರಿ ಮತ್ತೆ ಬಿಜೆಪಿ (BJP) ಗೆಲ್ಲಲು ಯತ್ನಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್- ಎಂಟು ಅರ್ಜಿ ಸಲ್ಲಿಕೆ
ಕಾಂಗ್ರೆಸ್ ಆರಂಭದಿಂದಲೂ ಒಂದೇ ಕುಟುಂಬಕ್ಕೆ ಅದರಲ್ಲೂ ಪ.ಜಾತಿಯ ಎಡಗೈ ಜನಾಂಗದವರಿಗೆ ಟಿಕೆಟ್ (Ticket) ನೀಡುತ್ತಾ ಬಂದಿದೆ. ಆ ಪಕ್ಷದಿಂದ ಆಯ್ಕೆಯಾಗಿರುವ ಟಿ.ಎನ್. ನರಸಿಂಹಮೂರ್ತಿ, ಸಿ. ರಮೇಶ್, ಎನ್. ಮಂಜುನಾಥ್ (ತಲಾ ಒಂದು ಬಾರಿ), ಆರ್. ಧರ್ಮಸೇನ (ಒಂದು ಉಪ ಚುನಾವಣೆ ಸೇರಿದಂತೆ ಎರಡು ಬಾರಿ) ಒಂದೇ ಕುಟುಂಬಕ್ಕೆ ಸೇರಿದವರು. ಈ ಬಾರಿಯೂ ಧರ್ಮಸೇನ ಮತ್ತೆ ಆಕಾಂಕ್ಷಿಯಾಗಿದ್ದು, ಬೇರೆಯವರೂ ಟಿಕೆಟ್ ಕೇಳುತ್ತಿದ್ದಾರೆ. ಇವರಲ್ಲಿ ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ, ತಾಪಂ ಮಾಜಿ ಅಧ್ಯಕ್ಷ ಸಿ.ಎನ್. ಮಂಜೇಗೌಡ, ಆರೋಗ್ಯ ಇಲಾಖೆಯ ನಿವೃತ್ತ ಯೋಜನಾ ನಿರ್ದೇಶಕ ಡಾ.ಡಿ. ತಿಮ್ಮಯ್ಯ, ಟಿ. ನರಸೀಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಹದೇವ್, ಬನ್ನೂರು ಪುರಸಭೆ ಮಾಜಿ ಅಧ್ಯಕ್ಷ ಮುನಾವರ್ ಪಾಷ, ಮೈಮುಲ್ ನಿರ್ದೇಶಕ ಚಲುವರಾಜು, ಪ್ರದ್ಯಮ್ನ ಆಲನಹಳ್ಳಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಟಿ. ನರಸೀಪುರ ಕ್ಷೇತ್ರದಿಂದ ಎಂಟು ಬಾರಿ ಸ್ಪರ್ಧಿಸಿ, ಐದು ಬಾರಿ ಆಯ್ಕೆಯಾಗಿ, ಎಚ್.ಡಿ. ದೇವೇಗೌಡ (HD Devegowda), ಜೆ.ಎಚ್. ಪಟೇಲ್, ಧರ್ಮಸಿಂಗ್ ಹಾಗೂ ಸಿದ್ದರಾಮಯ್ಯ (Siddaramaiah) ಸಂಪುಟಗಳಲ್ಲಿ ಮಹತ್ವದ ಖಾತೆಗಳನ್ನು ನಿರ್ವಹಿಸಿರುವ ಹಿರಿಯ ರಾಜಕಾರಣಿ ಡಾ.ಎಚ್.ಸಿ. ಮಹದೇವಪ್ಪ(HC Mahadevappa) ಅವರ ಹೆಸರನ್ನು ಯಾರೋ ತೇಲಿ ಬಿಟ್ಟಿದ್ದರು.ಆದರೆ ಅವರು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ.
ಕಳೆದ ಏಳು ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಡಾ.ಬಿ.ಜೆ. ವಿಜಯಕುಮಾರ್ ಅವರ ಅರ್ಜಿ ಸಲ್ಲಿಸಿಲ್ಲವಾದರೂ ಹೈಕಮಾಂಡ್ ಪರಿಗಣಿಸಬಹುದು.
ಚಾಮರಾಜನಗರ (Chamarajanagar) ಜಿಲ್ಲೆಯಿಂದ ‘ಕಾಡಾ’ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ ಅವರು ಕೂಡ ಟಿಕೆಟ್ ಕೇಳಬಹುದು.
ವಿಧಾನಸಭಾ ಚುನಾವಣೆಯಲ್ಲಿ (Assembly Election) ಅವಕಾಶ ಸಿಗದವರಿಗೆ ಇಲ್ಲಿ ಟಿಕೆಟ್ ನೀಡಬೇಕು. ಯಾರೋ ಅನಾವಶ್ಯಕವಾಗಿ ನನ್ನ ಹೆಸರು ಎಳೆದು ತಂದಿರುವುದು ಸರಿಯಲ್ಲ.
- ಡಾ.ಎಚ್.ಸಿ. ಮಹದೇವಪ್ಪ, ಮಾಜಿ ಸಚಿವರು
ಬಿಜೆಪಿಯಲ್ಲಿ ಎರಡು ಮತ್ತೊಂದು
ಬಿಜೆಪಿಯಲ್ಲಿ (BJP) ಎಂಡಿಎ (MDA), ಮೈಮುಲ್ ಹಾಗೂ ಡಿಸಿಸಿ ಬ್ಯಾಂಕ್ (DCC Bank) ಮಾಜಿ ಅಧ್ಯಕ್ಷರೂ ಚಾಮರಾಜನಗರ (Chamarajanagar) ಸಂಸದ ವಿ. ಶ್ರೀನಿವಾಸಪ್ರಸಾದ್ ಅವರ ಪರಮಾಪ್ತರಾದ ಸಿ. ಬಸವೇಗೌಡರ ಹೆಸರು ಕೇಳಿ ಬಂದಿದೆ. ಅಲ್ಲದೇ ಕಳೆದ ಬಾರಿ ಸ್ಪರ್ಧಿಸಿ, ಸೋತಿರುವ ಹಾಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ರಘು ಕೌಟಿಲ್ಯ ಅವರ ಹೆಸರಿದೆ. ಇದಲ್ಲದೇ ಇನ್ನೂ ತಾಂತ್ರಿಕವಾಗಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯರಾಗಿರುವ ಸಂದೇಶ್ ನಾಗರಾಜ್ ಅವರು ಕೂಡ ಮುಖಂಡರನ್ನು ಭೇಟಿ ಮಾಡಿ, ಟಿಕೆಟ್ ಕೇಳುತ್ತಿದ್ದಾರೆ. ಸಂದೇಶ್ ಈ ಕ್ಷೇತ್ರದಿಂದ ಕಳೆದೆರಡು ಚುನಾವಣೆಗಳಲ್ಲಿ ಜೆಡಿಎಸ್ ಟಿಕೆಟ್ ಮೇಲೆ ಗೆದ್ದವರು.
ಜೆಡಿಎಸ್‌ನಲ್ಲಿ ಗೊಂದಲ
ಈವರೆಗೆ ನಡೆದಿರುವ ಎಲ್ಲಾ ಚುನಾವಣೆಗಳಲ್ಲಿ ತಲಾ ಒಂದು ಸ್ಥಾನ ಗೆಲ್ಲುತ್ತಾ ಬಂದಿರುವ ಜೆಡಿಎಸ್‌ನಲ್ಲಿ (JDS) ಸ್ವಲ್ಪ ಗೊಂದಲ ಇದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರು (GT Devegowda) ಪಕ್ಷದಲ್ಲಿಯೇ ಉಳಿದರೆ ಒಂದು ರೀತಿ, ಕಾಂಗ್ರೆಸ್ ಸೇರಿದರೆ ಮತ್ತೊಂದು ರೀತಿ ಪರಿಣಾಮ ಆಗುವುದು ಇದಕ್ಕೆ ಕಾರಣ.
ಈಗ ಜಿ.ಟಿ. ದೇವೇಗೌಡರ ಜೊತೆ ಗುರುತಿಸಿಕೊಂಡಿರುವ ಎಂಡಿಎ ಮಾಜಿ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಎಚ್.ಎನ್. ವಿಜಯ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಜೆಡಿಎಸ್‌ನಲ್ಲಿಯೇ ಇರುವವರ ಪೈಕಿ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ, ಕಳೆದ ಬಾರಿ ವರುಣದಿಂದ ಸ್ಪರ್ಧಿಸಿದ್ದ ಅಭಿಷೇಕ್, ಅಲ್ಪಕಾಲ ಅರಣ್ಯವಿಹಾರಧಾಮ ಅಧ್ಯಕ್ಷರಾಗಿದ್ದ ವಿವೇಕಾನಂದ, ಜಿಪಂ ಸದಸ್ಯ ಬೀರಿಹುಂಡಿ ಬಸವಣ್ಣ ಮೊದಲಾದವರು ಆಕಾಂಕ್ಷಿಗಳು. ಜಿ,ಟಿ. ದೇವೇಗೌಡರು ಕಾಂಗ್ರೆಸ್‌ಗೆ ಹೋದರೆ ಬೀರಿಹುಂಡಿ ಬಸವಣ್ಣ , ಬೆಳವಾಡಿ ಶಿವಮೂರ್ತಿ, ಎಸ್. ಮಾದೇಗೌಡ ಮೊದಲಾದವರು ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು.
ಎರಡೂ ಸ್ಥಾನಗಳಿಗೆ ಸ್ಪರ್ಧಿಸಲು ಕಾಂಗ್ರೆಸ್ ಚಿಂತನೆ
ಒಂದು ವೇಳೆ ಜಿ.ಟಿ. ದೇವೇಗೌಡ‚ರು ಕಾಂಗ್ರೆಸ್ (Congress) ಸೇರುವುದು ಖಚಿತವಾದಲ್ಲಿ ಆ ಪಕ್ಷ ಎರಡು ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಹಾಕುವ ಆಲೋಚನೆಯಲ್ಲಿದೆ. ಆದರೆ ಈವರೆಗೆ ಯಾವ ಪಕ್ಷವೂ ಆ ರೀತಿಯ ಸಾಹಸಕ್ಕೆ ಕೈಹಾಕಿಲ್ಲ. ಇದು ದ್ವಿಸದಸ್ಯ ಕ್ಷೇತ್ರವಾಗಿರುವುದರಿಂದ ಮೊದಲ ಸುತ್ತಿನಲ್ಲಿ ಗೆಲ್ಲಲು ಸ್ವೀಕೃತ ಮತಗಳ ಪೈಕಿ ಮೂರನೇ ಒಂದು ಭಾಗ ಪ್ಲಸ್ ಒಂದು ಮತ ಪಡೆಯಬೇಕಾಗುತ್ತದೆ. ಇಲ್ಲದಿದ್ದರೆ ಎಲಿಮಿನೇಷನ್ ಪ್ರಕ್ರಿಯೆ ನಡೆಸಿ, ಕಡಿಮೆ ಮತಗಳಿರುವವರನ್ನು ಹೊರಹಾಕಬೇಕಾಗುತ್ತದೆ. ಆಗ ವ್ಯತ್ಯಾಸವಾಗಿ ಯಾರು ಬೇಕಾದರೂ ಗೆಲ್ಲಬಹುದು.
ವಾಟಾಳ್ ಮತ್ತಿತರರ ಸ್ಪರ್ಧೆ
ಮೈಸೂರು- ಚಾಮರಾಜನಗರ ಸ್ಥಳೀಯ ಕ್ಷೇತ್ರದಿಂದ ಮೇಲ್ಮನೆಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಾಜಿ ಶಾಸಕ ವಾಟಾಳ್ ನಾಗರಾಜ್ ಈಗಾಗಲೇ ಘೋಷಿಸಿದ್ದಾರೆ. ಚುನಾವಣೆ ನಡೆಯುವುದಾದಲ್ಲಿ ಇನ್ನೊಂದಷ್ಟು ಮಂದಿ ಪಕ್ಷೇತರರಾಗಿ ಕಣಕ್ಕಿಳಿಯಬಹುದು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
ಆರ್. ಧರ್ಮಸೇನ, ಕೆ. ಮರೀಗೌಡ, ಸಿ.ಎನ್. ಮಂಜೇಗೌಡ, ಡಾ.ಡಿ. ತಿಮ್ಮಯ್ಯ, ಮಹದೇವ್, ಮುನಾವರ್ ಪಾಷ, ಪ್ರದ್ಯುಮ್ನ ಆಲನಹಳ್ಳಿ, ಚಲುವರಾಜು
ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು
ಎನ್. ನರಸಿಂಹಸ್ವಾಮಿ, ವಿವೇಕಾನಂದ, ಅಭಿಷೇಕ್, ಬೀರಿಹುಂಡಿ ಬಸವಣ್ಣ
ಸಿ. ಬಸವೇಗೌಡ, ಆರ್. ರಘು ಕೌಟಿಲ್ಯ, ಸಂದೇಶ್ ನಾಗರಾಜ್
ಕ್ಷೇತ್ರದ ಇತಿಹಾಸ
1988 ರಿಂದ ಇಲ್ಲಿಯವರೆಗೆ ನಡುವೆ ಮೂರು ವರ್ಷ ಹೊರತುಪಡಿಸಿದರೆ ಐದು ಬಾರಿ ಚುನಾವಣೆ ನಡೆದಿದೆ. ಒಮ್ಮೆ ಒಂದು ಸ್ಥಾನಕ್ಕೆ ಉಪ ಚುನಾವಣೆಯೂ ನಡೆದಿದೆ.
ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಎನ್. ನರಸಿಂಹಮೂರ್ತಿ- ಜನತಾಪಕ್ಷದ ವಿ.ಎಚ್. ಗೌಡ, ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್ ಸಿ. ರಮೇಶ್- ಜನತಾದಳದ ವೈ. ಮಹೇಶ್, ಮೂರನೇ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್. ಮಂಜುನಾಥ್- ಜೆಡಿಎಸ್‌ನ ಬಿ. ಚಿದಾನಂದ, ನಾಲ್ಕನೇ ಚುನಾವಣೆಯಲ್ಲಿ ಜೆಡಿಎಸ್‌ನ ಸಂದೇಶ್ ನಾಗರಾಜ್- ಬಿಜೆಪಿಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಗೆದ್ದಿದ್ದರು. ಮಲ್ಲಿಕಾರ್ಜನಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ 2013 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್. ಧರ್ಮಸೇನ ಗೆದ್ದಿದ್ದರು.
2010 ರಲ್ಲಿ ನಡೆದ ಚುನಾವಣೆಯಲ್ಲಿ ಮಂಜುನಾಥ್ ಅವರಿಗೆ ಎರಡನೇ ಬಾರಿ ಟಿಕೆಟ್ ನೀಡಲಾಗಿತ್ತು. ಅಲ್ಲಿಯವರೆಗೆ ಯಾವುದೇ ಪಕ್ಷ ಸತತ ಎರಡನೇ ಬಾರಿಗೆ ಟಿಕೆಟ್ ನೀಡಿರಲಿಲ್ಲ. ಆ ಚುನಾವಣೆಯಲ್ಲಿ ಮಂಜುನಾಥ್ ಸೋತರು. 2016 ರಲ್ಲಿ ನಡೆದ ಚುನಾವಣೆಯಲ್ಲಿ
ಕಾಂಗ್ರೆಸ್ ಹಾಗೂ ಜೆಡಿಎಸ್- ಎರಡೂ ಹಾಲಿ ಸದಸ್ಯರಿಗೆ ನೀಡಿದ್ದವು. ಆರ್. ಧರ್ಮಸೇನ ಹಾಗೂ ಸಂದೇಶ್ ನಾಗರಾಜ್ ಪುನಾರಾಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದರು. ಏಕೆಂದರೆ ಆವರೆಗೆ ಸತತ ಎರಡನೇ ಬಾರಿಗೆ ಯಾರೂ ಆಯ್ಕೆಯಾಗಿರಲಿಲ್ಲ.
ಈವರೆಗೆ ಪ್ರತಿನಿಧಿಸಿದವರು
1988 ರಿಂದ 1994- ಟಿ.ಎನ್. ನರಸಿಂಹಮೂರ್ತಿ (ಕಾಂಗ್ರೆಸ್), ವಿ.ಎಚ್. ಗೌಡ (ಜನತಾಪಕ್ಷ)
1997 ರಿಂದ 2003- ಸಿ. ರಮೇಶ್ (ಕಾಂಗ್ರೆಸ್), ವೈ.ಮಹೇಶ್ (ಜನತಾದಳ)
2004 ರಿಂದ 2010- ಎನ್. ಮಂಜುನಾಥ್ (ಕಾಂಗ್ರೆಸ್), ಬಿ. ಚಿದಾನಂದ (ಜೆಡಿಎಸ್)
2011 ರಿಂದ 2016- ಸಂದೇಶ್ ನಾಗರಾಜ್ (ಜೆಡಿಎಸ್), ಪ್ರೊ.ಕೆ.ಆರ್. ಮಲ್ಲಿಕಾರ್ಜನಪ್ಪ (ಬಿಜೆಪಿ),
2013ರ ಉಪ ಚುನಾವಣೆ- ಪ್ರೊ.ಕೆ.ಆರ್. ಮಲ್ಲಿಕಾರ್ಜನಪ್ಪ ಅವರ ರಾಜೀನಾಮೆಯಿಂದಾಗಿ ಉಪ ಚುನಾವಣೆಯಲ್ಲಿ ಆರ್. ಧರ್ಮಸೇನ (ಕಾಂಗ್ರೆಸ್)
2017 ರಿಂದ- ಆರ್. ಧರ್ಮಸೇನ (ಕಾಂಗ್ರೆಸ್), ಸಂದೇಶ್ ನಾಗರಾಜ್ (ಜೆಡಿಎಸ್)
1994- 1997ರ ಅವಧಿಯಲ್ಲಿ ಚುನಾವಣೆ ನಡೆದಿರಲಿಲ್ಲ.
ಪದವೀಧರ ಕ್ಷೇತ್ರ- ಬಿಜೆಪಿ ಟಿಕೆಟ್‌ಗೆ ಎನ್.ವಿ. ಫಣೀಶ್ ಕೂಡ ಆಕಾಂಕ್ಷಿ
ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದಿಂದ ಮೇಲ್ಮನೆಗೆ ನಡೆಯುವ ಚುನಾವಣೆಗೆ ಮೈಲ್ಯಾಕ್ ಅಧ್ಯಕ್ಷ ಎನ್.ವಿ. ಫಣೀಶ್ ಅವರು ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ನೇತೃತ್ವದ ತಂಡ ಅಭಿಪ್ರಾಯ ಸಂಗ್ರಹಕ್ಕೆ ಬಂದಾಗ ಪ್ರಸ್ತಾಪವಾಗಿರುವ ಏಳು ಆಕಾಂಕ್ಷಿಗಳ ಹೆಸರುಗಳ ಪೈಕಿ ಎನ್.ವಿ. ಫಣೀಶ್ ಅವರ ಹೆಸರು ಕೂಡ ಒಂದು.
ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ಫಣೀಶ್ Pಳೆದ ಮೂರು ದಶಕಗಳಿಗೂ ಮಿಗಿಲಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೇಳಿದ್ದರು. ಆದರೆ ಎಸ್.ಎ. ರಾಮದಾಸ್ ಅವರಿಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಫಣೀಶ್ ಅವರನ್ನು ಮೈಲ್ಯಾಕ್ ಅಧ್ಯಕ್ಷರಾಗಿ ನೇಮಿಸಿ, ಸಮಾಧಾನಪಡಿಸಲಾಗಿದೆ.