Assembly election: ಚುನಾವಣೆ: ರಾಜಕೀಯ ದಾಳವಾದ ಮೈಷುಗರ್‌!

By Kannadaprabha NewsFirst Published Feb 4, 2023, 5:50 AM IST
Highlights

ಹದಿನೈದು ವರ್ಷಗಳಿಂದ ರೋಗಗ್ರಸ್ಥ ಕಾರ್ಖಾನೆ ಎನಿಸಿಕೊಂಡಿರುವ ಮೈಸೂರು ಸಕ್ಕರೆ ಕಾರ್ಖಾನೆ ಪುನಶ್ಚೇತನ ರಾಜಕೀಯ ಪಕ್ಷಗಳಿಗೆ ಬೇಡವಾದರೂ ಅದರ ಹೆಸರನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಜಿಲ್ಲೆಯ ಜನರ ಮನಸ್ಸನ್ನು ಗೆಲ್ಲಲು ಮೂರೂ ಪಕ್ಷಗಳು ಮುಗಿಬಿದ್ದಿವೆ.

ಮಂಡ್ಯ ಮಂಜುನಾಥ

ಮಂಡ್ಯ (ಫೆ.4) : ಹದಿನೈದು ವರ್ಷಗಳಿಂದ ರೋಗಗ್ರಸ್ಥ ಕಾರ್ಖಾನೆ ಎನಿಸಿಕೊಂಡಿರುವ ಮೈಸೂರು ಸಕ್ಕರೆ ಕಾರ್ಖಾನೆ ಪುನಶ್ಚೇತನ ರಾಜಕೀಯ ಪಕ್ಷಗಳಿಗೆ ಬೇಡವಾದರೂ ಅದರ ಹೆಸರನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಜಿಲ್ಲೆಯ ಜನರ ಮನಸ್ಸನ್ನು ಗೆಲ್ಲಲು ಮೂರೂ ಪಕ್ಷಗಳು ಮುಗಿಬಿದ್ದಿವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಪುನಶ್ಚೇತನಗೊಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕರು ಘಂಟಾಘೋಷವಾಗಿ ಹೇಳುತ್ತಿದ್ದರೆ, ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕಾರ್ಖಾನೆಯೊಳಗೆ ಎಥನಾಲ್‌ ಘಟಕ, ಮದ್ಯಸಾರ, ಕೋ-ಜನ್‌ ಘಟಕ ಆರಂಭಿಸಿ ಲಾಭದಾಯಕವಾಗಿ ಮುನ್ನಡೆಸುವುದಾಗಿ ಕೇಸರಿ ಪಡೆ ಕೂಗಿ ಹೇಳುತ್ತಿದೆ. ಜೆಡಿಎಸ್‌ ನಾಯಕ ಹೆಚ್‌.ಡಿ.ಕುಮಾರಸ್ವಾಮಿ ಅವರು ನಾನು ಹೊಸ ಕಾರ್ಖಾನೆ ನಿರ್ಮಾಣಕ್ಕೆ ಮೀಸಲಿಟ್ಟಿದ್ದ 100 ಕೋಟಿ ರು. ಹಣವನ್ನು ಸರ್ಕಾರ ಬಿಡುಗಡೆ ಮಾಡದೆ ಜಿಲ್ಲೆಯ ಜನರಿಗೆ ಮೋಸ ಮಾಡಿತು ಎಂದು ಜನರ ಮುಂದೆ ನಿವೇದಿಸಿಕೊಳ್ಳುತ್ತಿದ್ದಾರೆ.

ಹೀಗೆ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಮೂರು ಪಕ್ಷಗಳು ಮೈಷುಗರ್‌ ಕಾರ್ಖಾನೆ ವಿಷಯವನ್ನು ಚುನಾವಣಾ ಸಮಯದಲ್ಲಿ ರಾಜಕೀಯ ದಾಳವಾಗಿ ಉರುಳಿಸುತ್ತಿದ್ದಾರೆಯೇ ವಿನಃ ಕಾರ್ಖಾನೆಯ ಸರ್ವಾಂಗೀಣ ಅಭಿವೃದ್ಧಿಪಡಿಸುವ ಇಚ್ಛಾಶಕ್ತಿ ಯಾರಲ್ಲೂ ಇಲ್ಲವಾಗಿದೆ.

Mandya : 5 ತಿಂಗಳಿಂದ ನಡೆಯದ ಪ್ರಗತಿ ಪರಿಶೀಲನೆ..!

ಎರಡು ವರ್ಷ ಸ್ಥಗಿತ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಕಾರ್ಖಾನೆ ಪುನಶ್ಚೇತನಕ್ಕೆ ಸಣ್ಣ ಪ್ರಯತ್ನವನ್ನೂ ನಡೆಸಲಿಲ್ಲ. ರೋಗಗ್ರಸ್ಥ ಸ್ಥಿತಿಯಲ್ಲಿದ್ದ ಕಾರ್ಖಾನೆಗೆ ಭರಪೂರ ಹಣವನ್ನು ಕೊಟ್ಟು ಪ್ರಗತಿಯತ್ತ ಮುನ್ನಡೆಸಲು ಆಸಕ್ತಿಯನ್ನೇ ತೋರಿಸಲಿಲ್ಲ. ಬಿಡುಗಾಸು ಕೊಟ್ಟು ಕೈತೊಳೆದುಕೊಂಡರು. ಅವರ ಅವಧಿಯ 2016 ಮತ್ತು 2017ರಲ್ಲಿ ಕಾರ್ಖಾನೆ ಸ್ಥಗಿತಗೊಂಡಿದ್ದರೂ ಕಾರ್ಖಾನೆ ಆರಂಭಕ್ಕೆ ಕ್ರಮವಹಿಸಲಿಲ್ಲ. ಆಗಲೂ ಚುನಾವಣೆ ಸಮೀಪಿಸಿದಾಗ ಒಂದಷ್ಟುಹಣ ಕೊಟ್ಟು ಕಾರ್ಖಾನೆ ಆರಂಭದ ಕ್ರೆಡಿಟ್‌ ಪಡೆದುಕೊಳ್ಳುವುದಕ್ಕೆ ಮುಂದಾಗಿದ್ದರು.

ಘೋಷಣೆಯಲ್ಲೇ ಉಳಿಯಿತು

2018ರ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಏಳೂ ಸ್ಥಾನಗಳಲ್ಲೂ ಜೆಡಿಎಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್‌.ಡಿ.ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿದ್ದರು. ಆಗ ಸ್ಥಗಿತಗೊಂಡಿದ್ದ ಮೈಷುಗರ್‌ ಕಾರ್ಖಾನೆ ಅಭಿವೃದ್ಧಿಯಾಗಬಹುದೆಂಬ ನಿರೀಕ್ಷೆಗಳು ಗರಿಗೆದರಿದ್ದವು. ಆರಂಭದ ಒಂದೂವರೆ ವರ್ಷ ಕಾರ್ಖಾನೆಯನ್ನೇ ಸಂಪೂರ್ಣವಾಗಿ ಮರೆತರು. ಸರ್ಕಾರ ಬೀಳುವ ಹಂತದಲ್ಲಿದ್ದಾಗ, ಘೋಷಣೆಯಾದ 400 ಕೋಟಿ ರು. ವೆಚ್ಚದಲ್ಲಿ ಹೊಸ ಕಾರ್ಖಾನೆ ನಿರ್ಮಾಣದ ಮೊದಲ ಹಂತದಲ್ಲಿ 100 ಕೋಟಿ ರು. ಮೀಸಲಿಟ್ಟಿದ್ದು ಘೋಷಣೆಯಲ್ಲೇ ಉಳಿಯಿತು....

ಪುನಶ್ಚೇತನ ಮರೀಚಿಕೆ

ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಮೊಟ್ಟಮೊದಲ ಬಾರಿಗೆ ಜಿಲ್ಲೆಯೊಳಗೆ ಖಾತೆ ತೆರೆಯಿತು. ಜಿಲ್ಲೆಯವರೇ ಆದ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದರು. ಆದರೂ, ಮೈಷುಗರ್‌ಗೆ ನಯಾಪೈಸೆ ಹಣ ಸಿಗಲಿಲ್ಲ.ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ನಾಲ್ಕು ವರ್ಷದಿಂದ ಸ್ಥಗಿತಗೊಂಡಿದ್ದ ಕಾರ್ಖಾನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ 50 ಕೋಟಿ ರು. ಘೋಷಣೆ ಮಾಡಿದರು. ಅದರಲ್ಲಿ ಬಿಡುಗಡೆ ಮಾಡಿದ್ದು 32.50 ಕೋಟಿ ರು. ಉಳಿದ 17.50 ಕೋಟಿ ರು. ಹಣವನ್ನು ಈವರೆಗೆ ಬಿಡುಗಡೆ ಮಾಡಿಲ್ಲ. ಇದರಿಂದ ಕಾರ್ಖಾನೆ ಪುನಶ್ಚೇತನಗೊಳ್ಳಲೂ ಇಲ್ಲ, ನಿರೀಕ್ಷೆಯಂತೆ ಕಬ್ಬನ್ನೂ ಅರೆಯಲಿಲ್ಲ. ಆದರೂ ಪ್ರತಿ ಸಭೆ-ಸಮಾರಂಭಗಳಲ್ಲೂ ಮೈಷುಗರ್‌ ಕಾರ್ಖಾನೆ ಆರಂಭಿಸಿದ ಕೀರ್ತಿ ನಮ್ಮದೇ ಎಂದು ಬಿಜೆಪಿಯವರು ಬೆನ್ನುತಟ್ಟಿಕೊಳ್ಳುತ್ತಿದ್ದಾರೆ.

ಮೈಷುಗರ್‌ ಕಾರ್ಯಾಚರಣೆ ಸ್ಥಗಿತ

ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಕಳೆದ ಐದು ತಿಂಗಳಲ್ಲಿ ಕಾರ್ಖಾನೆ 1 ಲಕ್ಷ ಟನ್‌ ಕಬ್ಬು ಅರೆಯುವುದಕ್ಕಷ್ಟೇ ಶಕ್ತವಾಗಿದೆ. ನಿತ್ಯ 2 ಸಾವಿರದಿಂದ 2500 ಟನ್‌ ಕಬ್ಬು ಅರೆಯುವ ಸಾಮರ್ಥ್ಯವನ್ನು ಹೊಂದಿದ್ದರೂ ಹಲವಾರು ತಾಂತ್ರಿಕ ಕಾರಣಗಳಿಂದ ಸಮರ್ಪಕವಾಗಿ ಕಬ್ಬು ಅರೆಯಲು ಸಾಧ್ಯವಾಗಿಲ್ಲ. ಈ ವಿಷಯವಾಗಿ ಸರ್ಕಾರಕ್ಕೆ ಪತ್ರ ಬರೆದಿರುವ ವ್ಯವಸ್ಥಾಪಕ ನಿರ್ದೇಶಕರು ಸದ್ಯ ಕಾರ್ಖಾನೆ ಸಷ್ಟದಲ್ಲಿರುವುದರಿಂದ ಕಬ್ಬು ಅರೆಯುವಿಕೆ ಕಾರ್ಯವನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

2022ರ ಸೆಪ್ಟೆಂಬರ್‌ 1ರಂದು ಕಾರ್ಖಾನೆಗೆ ಚಾಲನೆ ನೀಡಲಾಯಿತು. ಇದುವರೆಗೆ 1ಲಕ್ಷ ಟನ್‌ ಕಬ್ಬು ಅರೆಯುವುದಕ್ಕಷ್ಟೇ ಕಾರ್ಖಾನೆ ಶಕ್ತವಾಗಿದೆ. ಐದು ತಿಂಗಳು ಪ್ರಾಯೋಗಿಕವಾಗಿ ಕಬ್ಬು ಅರೆದಂತಾಗಿದ್ದು, ಸರ್ಕಾರ ಕೂಡ ಕಾರ್ಖಾನೆಯನ್ನು ಸಮರ್ಪಕವಾಗಿ ಮುನ್ನಡೆಸಲು ಆಸಕ್ತಿಯನ್ನೇ ತೋರಲಿಲ್ಲ. ತಾಂತ್ರಿಕ ದೋಷ, ಸಮರ್ಪಕ ನಿರ್ವಹಣೆ ಇಲ್ಲದೆ ಸಮಸ್ಯೆಗಳೊಳಗೆ ಐದು ತಿಂಗಳು ಪೂರ್ಣಗೊಳಿಸಿತು.

ರೈತರಲ್ಲಿ ಮೂಡದ ವಿಶ್ವಾಸ

ಮೈಷುಗರ್‌ ಕಾರ್ಖಾನೆ ಯಾವುದೇ ತೊಂದರೆಯಿಲ್ಲದೆ ಕಬ್ಬನ್ನು ಅರೆದಿದ್ದರೆ ಕಂಪನಿ ವ್ಯಾಪ್ತಿಯ ರೈತರಲ್ಲಿ ವಿಶ್ವಾಸ ಮೂಡುತ್ತಿತ್ತು. ಸಕಾಲದಲ್ಲಿ ಕಬ್ಬು ಕಟಾವಿಗೆ ತಂಡವನ್ನು ಕರೆಸಲಿಲ್ಲ. ಬಾಯ್ಲರ್‌ ಸಮಸ್ಯೆ, ಬೆಲ್ಟ್‌ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣಗಳಿಂದ ಕಾರ್ಖಾನೆ ಆಗಾಗ ಸ್ಥಗಿತಗೊಳ್ಳುತ್ತಲೇ ಇತ್ತು. ಬೇಸತ್ತ ರೈತರು ಬೇರೆ ಬೇರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಿದರು. ನಿತ್ಯ ಒಂದು ಸಾವಿರದಿಂದ ಒಂದೂವರೆ ಸಾವಿರ ಟನ್‌ ಕಬ್ಬು ಬರಬೇಕಾದ ಕಡೆ 300 ಟನ್‌ ಮಾತ್ರ ಪೂರೈಕೆಯಾಗುತ್ತಿದೆ. ಈ ಕಾರಣದಿಂದ ಕಬ್ಬು ಅರೆಯಲು ಸಾಧ್ಯವಿಲ್ಲವೆಂದು ಹೇಳಿ ಫೆ.2ರ ಮಧ್ಯರಾತ್ರಿಯಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಕಾರ್ಖಾನೆ ಆರಂಭಿಸುವ ಸಮಯದಲ್ಲಿ ಈ ಸಾಲಿನಲ್ಲಿ 3 ಲಕ್ಷ ಟನ್‌ ಕಬ್ಬು ಅರೆಯುವ ಗುರಿ ಹೊಂದಲಾಗಿತ್ತು. ಆದರೆ, ಅರೆದದ್ದು 1 ಲಕ್ಷ ಟನ್‌ ಕಬ್ಬು ಮಾತ್ರ. ನಷ್ಟದ ನಡುವೆಯೇ ಕಬ್ಬನ್ನು ಅರೆದು ಕಬ್ಬಿನ ಬಟವಾಡೆಯನ್ನು ಪೂರ್ಣವಾಗಿ ಪಾವತಿಸಿರುವುದು ರೈತರ ಅದೃಷ್ಟಎನ್ನಬಹುದು.

Mandya : ನಿಂತು ನಿಂತು ಓಡುವ ಮೈಷುಗರ್‌...!

ಈ ಸಾಲಿನಲ್ಲಿ ಸಕಾಲಕ್ಕೆ ಕಾರ್ಖಾನೆ ಆರಂಭವಾಗಲಿಲ್ಲ. ಕಬ್ಬು ಕಟಾವು ಮಾಡುವವರು ಬೇರೆ ಕಡೆ ಹೊರಟುಹೋದರು. ಪೂರ್ಣ ಸಿದ್ಧತೆಯೊಂದಿಗೆ ಕಾರ್ಖಾನೆಗೆ ಚಾಲನೆ ದೊರಕಿಸಲಿಲ್ಲ. ಈಗಿನ ಎಲ್ಲಾ ತಪ್ಪುಗಳು ಮುಂದೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ರೋಗಗ್ರಸ್ಥ ಹಣೆಪಟ್ಟಿಯನ್ನು ಕಳಚಿ ಕಾರ್ಖಾನೆ ಪುನಶ್ಚೇತನಕ್ಕೆ ಮೂರು ಪಕ್ಷಗಳು ಸಂಕಲ್ಪ ಮಾಡಬೇಕು.

- ಎಸ್‌.ಸಿ.ಮಧುಚಂದನ್‌, ರಾಜ್ಯ ಸಂಘಟನಾ ಕಾರ್ಯದರ್ಶಿ, ರೈತಸಂಘ

ಈ ಬಾರಿಯಂತೆಯೇ ಕಾರ್ಖಾನೆಯನ್ನು ಮುನ್ನಡೆಸಿದರೆ ಪ್ರಗತಿ ಸಾಧ್ಯವಿಲ್ಲ. ಮುಂದೆ ಯಾವ ಪಕ್ಷವೇ ಅಧಿಕಾರಕ್ಕೆ ಬರಲಿ ಪೂರ್ಣ ಪ್ರಮಾಣದಲ್ಲಿ ಕಾರ್ಖಾನೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲೇಬೇಕು. ರಾಜಕೀಯ ದಾಳವಾಗಿ ಬಳಸಿಕೊಂಡು ಬಿಸಾಡಿದರೆ ಮೂರು ಪಕ್ಷಗಳು ಖಾಸಗೀಕರಣಕ್ಕೆ ಬದ್ಧವಾಗಿವೆ ಎಂದರ್ಥ.

- ಎ.ಎಲ್‌.ಕೆಂಪೂಗೌಡ, ಅಧ್ಯಕ್ಷರು, ಜಿಲ್ಲಾ ರೈತಸಂಘ

click me!