
ಗದಗ (ಏ.29): ಬರಪೀಡಿತರಾಗಿ ಬಳಲುತ್ತಿರುವ ರೈತರಿಗೆ ಹೆಚ್ಚಿನ ಪರಿಹಾರ ಬೇಕು. ಕೇಂದ್ರ ಸರ್ಕಾರ ಕೊಟ್ಟಿರುವ ಪರಿಹಾರ ಸಾಲುವುದಿಲ್ಲ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್ ನುಡಿದರು.
ಇಂದು ಗದಗನಲ್ಲಿ ಮಾತನಾಡಿದ ಸಚಿವರು, ಬರಪರಿಹಾರ ಇಷ್ಟು ಕೊಟ್ಟಿದ್ದೇ ಹೆಚ್ಚು ಎಂಬಂತೆ ಹೇಳಿಕೆ ನೀಡಿರುವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು. ಕುಮಾರಸ್ವಾಮಿಯವರಿಗೆ ಇಷ್ಟೇ ಸಾಕಾಗಿರಬಹುದು. ಬರದ ನೋವು ಅನುಭವಿಸುತ್ತಿರುವ ರೈತರಿಗೆ ಪರಿಹಾರ ಇನ್ನೂ ಹೆಚ್ಚು ಬೇಕು. ಕೇಂದ್ರದಿಂದ ಇನ್ನೂ 15 ಸಾವಿರ ಕೋಟಿ ರೂ. ಬರಪರಿಹಾರ ಬರಬೇಕಿದೆ ಎಂದರು.
ಕೇಂದ್ರ ಸರ್ಕಾರದಿಂದ ಮೂರು ಸಾವಿರ ಕೋಟಿ ಬಿಡುಗಡೆಯಾಗಿದೆ. ನಾಳೆ ನಾಡಿದ್ದು ಬರಬಹುದು. ಆದರೆ ಇಷ್ಟು ಸಾಕಾಗೊಲ್ಲ. ಪರಿಹಾರ ಮನವಿ ಯಾಕೆ ಕೊಟ್ಟಿದ್ವಿ? ನಮ್ಮಲ್ಲಿ ಅಗಿರುವ ನಷ್ಟ ಎಷ್ಟು? ಹೇಳಿದಷ್ಟು ಕೊಡಲ್ಲ, ಅವ್ರು ಕೊಟ್ಟಷ್ಟೇ ಸಾಕು ಅನ್ನಲಾಗಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರ ಕೊಟ್ಟಷ್ಟೇ ಸಾಕಾಯ್ತು ಅಂತಾ ಹೇಳಿದ್ರ? ಎಂದು ಕಿಡಿಕಾರಿದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ, ಎಲ್ಲ ಕೈ ನಾಯಕರು ಚೊಂಬು ಹಿಡ್ಕೊಂಡು ಹೋಗ್ತಾರೆ: ಯತ್ನಾಳ್ ವಾಗ್ದಾಳಿ
ಇನ್ನು ಪ್ರಜ್ವಲ್ ರೇವಣ್ಣ(Prajwal Revanna) ವೀಡಿಯೋ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಸಂತ್ರಸ್ತ ಮಹಿಳೆ ಮುಂದೆ ಬಂದು ದೂರು ನೀಡಿದ್ದಾರೆ. ಸರ್ಕಾರ ಪ್ರಕರಣವನ್ನು ಎಸ್‌ಐಟಿಗೆ ವಹಿಸಿದೆ. ಎಸ್‌ಐಟಿ ತಂಡ ರಚನೆ ಮಾಡಿ ತನಿಖೆಗೆ ನಿರ್ದೇಶನ ನೀಡಲಾಗಿದೆ. ಈ ಪ್ರಕರಣ ಬಯಲಾದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದೆ ಆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಮೋದಿ ವಿರುದ್ಧ ವಾಗ್ದಾಳಿ:
ಕಾಂಗ್ರೆಸ್‌ನಿಂದಾಗಿ ರಾಜ್ಯದಲ್ಲಿ ಗಲಭೆ ಅಶಾಂತಿ ಎಂದು ಮೋದಿಯವರು ಹೇಳಿದ್ದಾರೆ. ಕೇಂದ್ರದ ಕೈಕೆಳಗೆ ಕೆಲಸ ಮಾಡುವ ಸಿಬಿಐ ಎಷ್ಟು ಸಮರ್ಥವಾಗಿ ಕೆಲಸ ಮಾಡಿದೆ. ಎಷ್ಟು ಜನ ಅಪರಾಧಿಗಳನ್ನ ನೀವು ಹಿಡಿದಿದ್ದೀರಿ? ಕೆಫೆ ಸ್ಫೋಟ ಪ್ರಕರಣದ ಆರೋಪಿಗಳನ್ನ ರಾಜ್ಯ ಪೊಲೀಸರು ಹಿಡಿದಿದ್ದಾರೆ. ಗದಗನಲ್ಲಿ ನಡೆದ ನಾಲ್ವರ ಹತ್ಯೆ ಪ್ರಕರಣದ ಆರೋಪಿಗಳನ್ನ ಐದು ದಿನದಲ್ಲಿ ಬಂಧಿಸಿದ್ರು. ರಾಜ್ಯ ಸರ್ಕಾರದ ಆಧೀನದಲ್ಲಿರುವ ಪೊಲೀಸ್ ಇಲಾಖೆ ಅಪರಾಧವನ್ನ ಪತ್ತೆ ಹಚ್ಚುವಲ್ಲಿ ಸಮರ್ಥರಿದ್ದಾರೆ. ಲಕ್ಷ ಟನ್ ಉಕ್ಕು ಲೂಟಿ ಮಾಡಿರುವ ಪ್ರಕರಣದ ಕೇಸನ್ನ ಸಿಬಿಐಗೆ ವಹಿಸಿದ್ವಿ. ಆದರೆ ಎಷ್ಟು ಪ್ರಕರಣದಲ್ಲಿ ಸಮರ್ಥವಾಗಿ ನಿಭಾಯಿಸಿದ್ದೀರಿ ವರದಿ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡವರು, ದಲಿತರ ಪರ ಅಂತಾ ಇದ್ರೆ ಅದು ಮೋದಿ ಸರ್ಕಾರ: ಸುಮಲತಾ ಅಂಬರೀಶ್
ಸಿಬಿಐಗಿಂತ ವಿಶೇಷ ಸಾಮರ್ಥ್ಯ ತೋರಿಸಿರುವ ರಾಜ್ಯ ಪೊಲೀಸರನ್ನ ಅಭಿನಂದಿಸಲೇಬೇಕು. ರಾಜಕೀಯ ಭಾಷಣ ಮಾಡಿ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಬಾರದು. ಸಿಬಿಐಗೆ ರೆಫರ್ ಮಾಡಿದ ಎಷ್ಟು ಕೇಸ್ ಇತ್ಯರ್ಥವಾಗಿದೆ? ಪ್ರಧಾನಿ ಮೋದಿಯವರೇ ಈ ಬಗ್ಗೆ ಮಾಹಿತಿ ನೀಡಿ ಅಂತಾ ಸವಾಲು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.