ಉತ್ತರ ಕನ್ನಡ: ಗುಡ್ಡಗಳ ಮೇಲಿನ ಬದುಕಿಗೆ ಬೇಕು ಭದ್ರತೆ

By Kannadaprabha NewsFirst Published Jul 31, 2021, 10:55 AM IST
Highlights

* ಕಳಚೆ ಎನ್ನುವ ಊರು ಧ್ವಂಸ, ಅಡಕೆ, ತೆಂಗಿನ ತೋಟಗಳು ನೆಲಸಮ
* ಗಡಗಡ ನಡುಗುತ್ತಿರುವ ಗುಡ್ಡದ ಬುಡದ ಜನರು
* ಪರಿಣಾಮಕಾರಿ ಕ್ರಮಗಳಿಂದ ಭೂ ಕುಸಿತ ಉಂಟಾಗದಂತೆ ತಡೆಯಬಹುದು 

ಕಾರವಾರ(ಜು.31): ಪ್ರವಾಹದ ಜತೆಯಲ್ಲಿ ಭೂಕುಸಿತ ಅಪಾರ ಪ್ರಮಾಣದ ಹಾನಿಗೆ ಕಾರಣವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಒಂದಲ್ಲ ಒಂದು ಕಡೆ ಭೂಕುಸಿತ ಉಂಟಾಗುತ್ತಿದೆ.

ಈಚೆಗೆ ಭಾರಿ ಮಳೆ ಸುರಿಯುತ್ತಿದ್ದಂತೆ ಇತರೆಡೆ ಪ್ರವಾಹ ಬಂದರೆ ಯಲ್ಲಾಪುರ ತಾಲೂಕಿನ ಕಳಚೆಯಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ, ಮಹಿಳೆ ಮೃತಪಟ್ಟರೆ, ಕೆಲವು ಮನೆಗಳಿಗೆ ಹಾನಿ ಉಂಟಾಯಿತು. ಅಡಕೆ, ತೆಂಗಿನ ತೋಟಗಳು ನೆಲಸಮವಾಗಿವೆ. ಕಳಚೆ ಎನ್ನುವ ಊರು ಧ್ವಂಸವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಕಳಚೆ ಗ್ರಾಮದ ಜನತೆಯನ್ನು ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಇಂತಹ ಹಲವು ಗ್ರಾಮಗಳು, ಹಳ್ಳಿಗಳು, ಮಜರೆಗಳು ಜಿಲ್ಲೆಯಲ್ಲಿವೆ. ಅಲ್ಲೆಲ್ಲ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಬೆಲೆ ತೆರಬೇಕಾದ ಸಾಧ್ಯತೆ ಇದೆ.

ಪ್ರತಿ ವರ್ಷ ಮಳೆಗಾಲ ಬಂತೆಂದರೆ ಗುಡ್ಡದ ಬುಡದ ಜನರು ಗಡಗಡ ನಡುಗುತ್ತಲೇ ಇರಬೇಕು ಎಂಬಂತಾಗಿದೆ. ಬೃಹತ್‌ ಗುಡ್ಡಗಳು ಅಲ್ಲಲ್ಲಿ ಕುಸಿದರೆ, ರೈಲು ಮಾರ್ಗ ಹಾಗೂ ಹೆದ್ದಾರಿ ಅಂಚಿನಲ್ಲಿ ಗುಡ್ಡ ಕುಸಿತ ಮಾಮೂಲಿ ಎಂಬಂತಾಗಿದೆ. 2009ರಲ್ಲಿ ಕಡವಾಡದಲ್ಲಿ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿತ್ತು. ನಾಲ್ಕು ವರ್ಷಗಳ ಹಿಂದೆ ಕುಮಟಾ ಬಳಿ ತಂಡ್ರಕುಳಿ ಬಳಿಯ ಗುಡ್ಡ ಕುಸಿತವೂ ಸಾವು ನೋವು ಉಂಟುಮಾಡಿತು. ಈಚೆಗೆ ಕಳಚೆಯಲ್ಲಿ ಉಂಟಾದ ಗುಡ್ಡ ಕುಸಿತದಲ್ಲೂ ಅಪಾರ ಹಾನಿ ಉಂಟಾಗಿದೆ. ಈ ಮೂರೇ ಗುಡ್ಡ ಕುಸಿತದಲ್ಲಿ 20ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಭಾರಿ ಮಳೆ, ಗುಡ್ಡದಲ್ಲಿ ಮಣ್ಣಿನ ಪದರಗಳ ರಚನೆ ಗುಡ್ಡ ಕುಸಿತಕ್ಕೆ ಇರುವ ಕಾರಣಗಳ ಜತೆಗೆ ಇಳಿಜಾರು ಪ್ರದೇಶದಲ್ಲಿ ಮಾನವನ ಹಸ್ತಕ್ಷೇಪದಿಂದಲೂ ಗುಡ್ಡ ಕುಸಿತದ ಉದಾಹರಣೆಗಳು ನಮ್ಮ ಮುಂದಿವೆ. ಭೂಕುಸಿತದ ಬಗ್ಗೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ನೇತೃತ್ವದಲ್ಲಿ ಅಧ್ಯಯನ ಸಮಿತಿ ಮಾಚ್‌ರ್‍ 2021ರಲ್ಲಿ ಸರ್ಕಾರಕ್ಕೆ ವರದಿ ನೀಡಿದ್ದು, ಆ ವರದಿಯಲ್ಲಿ ಗುಡ್ಡ ಕುಸಿತಕ್ಕೆ ಕಾರಣಗಳೇನು, ಪರಿಹಾರ ಏನು, ಇಳಿಜಾರು ಪ್ರದೇಶದ ನಿರ್ವಹಣೆ ಹೇಗೆ ಎಂಬೆಲ್ಲವುಗಳ ಕುರಿತು ಸುದೀರ್ಘವಾದ ವರದಿ ನೀಡಿದೆ.

ಮಳೆ-ಪ್ರವಾಹಕ್ಕೆ ಉತ್ತರ ಕನ್ನಡದಲ್ಲಿ 737.54 ಕೋಟಿ ನಷ್ಟ

ಕಲ್ಲು ಮಿಶ್ರಿತ ಸಡಿಲವಾದ ಮಣ್ಣಿನ ರಚನೆ, ಕಡಿದಾದ ಗುಡ್ಡಗಳು, ತೆಳುವಾದ ಮೇಲ್ಮಣ್ಣಿನ ಹೊದಿಕೆ ಇವೆಲ್ಲ ಕ್ಕೆ ಪೂರಕವಾದ ಅಂಶಗಳು ಎಂದು ಸಮಿತಿ ವರದಿಯಲ್ಲಿ ತಿಳಿಸಿದೆ.

ಇಳಿಜಾರು ಪ್ರದೇಶದ ಭೂಸ್ವರೂಪ ಬದಲಾವಣೆ, ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣಕ್ಕಾಗಿ ಇಳಿಜಾರನ್ನು ಅತಿಯಾಗಿ ಕತ್ತರಿಸುವುದು ಭೂಕುಸಿತಕ್ಕೆ ಪ್ರಮುಖ ಕಾರಣಗಳು ಎಂದು ಸಮಿತಿ ಅಧ್ಯಯನ ವರದಿಯಲ್ಲಿ ಹೇಳಿದೆ. ಅನಧಿಕೃತ ಗಣಿಗಾರಿಕೆ ಹಾಗೂ ಕಲ್ಲುಕ್ವಾರಿಗಳ ನಿಯಂತ್ರಣ, ಅರಣ್ಯವನ್ನು ಸೀಳುವ ಹೆದ್ದಾರಿ, ರೈಲು ಮಾರ್ಗಗಳ ನಿರ್ವಹಣೆ, ಎಲ್ಲ ಬಗೆಯ ಮೇಲ್ಮೈ ನೆಲ ಬಳಕೆಗೆ ಮಾರ್ಗದರ್ಶಿ ಸೂತ್ರ, ಕಾಡು ಹಾಗೂ ರಸ್ತೆಯಂಚಿನ ಅತಿಕ್ರಮಣ ನಿಯಂತ್ರಣ ಮತ್ತಿತರ ಕ್ರಮಗಳಿಂದ ಭೂಕುಸಿತವನ್ನು ತಡೆಯಬಹುದು ಎಂದೂ ವರದಿಯಲ್ಲಿ ಹೇಳಲಾಗಿದೆ.

ಗುಡ್ಡ ಪ್ರದೇಶದ ನಿರ್ವಹಣೆ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಜನತೆಗೆ ಮಾಹಿತಿ ನೀಡಬೇಕಾಗಿದೆ. ಈಗ ಜನವಸತಿ ಇರುವ ಪ್ರದೇಶದಲ್ಲಿ ಗುಡ್ಡದ ಪರಿಸ್ಥಿತಿ ಹೇಗಿದೆ. ಮಣ್ಣಿನ ಮೇಲ್ಪದರ ಹೇಗಿದೆ. ಇಂತಹ ಸಂಗತಿಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಯಬೇಕಿದೆ. ಆ ವರದಿಯ ಆಧಾರದಲ್ಲಿ ಕ್ರಮವನ್ನೂ ಕೈಗೊಳ್ಳುವ ಅಗತ್ಯವಿದೆ.

ಇಳಿಜಾರು ಪ್ರದೇಶದ ನಿರ್ವಹಣೆ, ಪರಿಣಾಮಕಾರಿ ಕ್ರಮಗಳಿಂದ ಭೂ ಕುಸಿತ ಉಂಟಾಗದಂತೆ ತಡೆಯಬಹುದು. ಅರಣ್ಯ, ಇಳಿಜಾರು ಪ್ರದೇಶದಲ್ಲಿ ಮಾನವನ ಹಸ್ತಕ್ಷೇಪವನ್ನೂ ನಿಯಂತ್ರಿಸುವ ಅಗತ್ಯವಿದೆ ಎಂದು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ.  
 

click me!