
ಡಾ.ಸಿ.ಎಂ.ಜೋಶಿ
ಗುಳೇದಗುಡ್ಡ(ಮಾ.20): ಗುಳೇದಗುಡ್ಡ ತಾಲೂಕಿನ ನದಿ ಪಾತ್ರದ ಹಲವಾರು ಗ್ರಾಮಗಳಿಗೆ ಮಲಪ್ರಭಾ ನದಿಯೇ ಜೀವಾಳ. ನದಿಯಲ್ಲಿ ನೀರಿದ್ದರೆ ಈ ಭಾಗದ ರೈತರ ಖುಷಿಗೆ ಪಾರವೇ ಇಲ್ಲ. ನದಿ ಬತ್ತಿದಂತೆ ರೈತರ ಬದುಕು ಸಂಕಷ್ಟದಂತೆ ಬತ್ತಿ ಹೋಗುತ್ತದೆ. ಸದ್ಯ ನದಿಯಲ್ಲಿ ನೀರಿಲ್ಲದೆ ತಾಲೂಕಿನ ಹಲವಾರು ಗ್ರಾಮಗಳ ಜನಜೀವನ ಚಿಂತಾಜನಕವಾಗಿದೆ.
ಮಲಪ್ರಭಾ ನದಿ ಒಡಲು ಖಾಲಿ:
ಕಾಟಾಪುರ, ಪಟ್ಟದಕಲ್ಲ, ನಾಗರಾಳ ಎಸ್.ಪಿ., ಸಬ್ಬಲಹುಣಸಿ, ಲಾಯದಗುಂದಿ, ಅಲ್ಲೂರ, ಹಳದೂರ, ಇಂಜಿನವಾರಿ ಗ್ರಾಮಗಳ ಮೂಲಕ ಕಮತಗಿ ತಲುಪುವ ಮಲಪ್ರಭಾ ನದಿ ಸದ್ಯ ನೀರಿಲ್ಲದೆ ಬರಿದಾಗಿರುವುದರಿಂದ ಜನ ಜಾನುವಾರಗಳ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ. ಒಂದು ತಿಂಗಳ ಹಿಂದೆ ನವಿಲುತೀರ್ಥ ಜಲಾಶಯದಿಂದ ಬಿಟ್ಟ ನೀರನ್ನು ಕುಡಿಯಲು ಮಾತ್ರ ಬಳಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದರೂ ಬಾಡುತ್ತಿರುವ ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಅನಿವಾರ್ಯವಾಗಿ ರೈತರು ಕೃಷಿಗೂ ಬಳಸಿದರು. ಹೀಗಾಗಿ ನದಿಯಲ್ಲಿಯ ನೀರು ಬಹುಬೇಗ ಖಾಲಿಯಾಗಿ ನೀರಿಲ್ಲದೆ ಬರಿದಾಗಿದೆ. ಇದರಿಂದ ಜನರು ಮತ್ತು ಜಾನುವಾರುಗಳಿಗೆ ಕುಡಿರುವ ನೀರಿನ ತೀವ್ರ ಅಭಾವ ಉಂಟಾಗಿದ್ದು, ನೀರಿಗಾಗಿ ಜನರು ಪರದಾಡುವಂತಾಗಿದೆ.
ನಮ್ಮ ಗ್ಯಾರಂಟಿ ಯೋಜನೆಗಳಿಗೆ ಬೊಮ್ಮಾಯಿ ಅಷ್ಟೇ ಅಲ್ಲ, ಮೋದಿಯೇ ನಡುಗಿದ್ದಾರೆ: ಸಚಿವ ಎಚ್. ಕೆ.ಪಾಟೀಲ
ಧೀರ್ಘ ಕಾಲದ ಹೂಳಿನ ಸಮಸ್ಯೆ
ಹಿಡಿದಿಡಲು ಮಲಪ್ರಭಾ ನದಿಗೆ ಅಡ್ಡಲಾಗಿ ಹಲವು ಕಡೆಗಳಲ್ಲಿ ಬ್ಯಾರೇಜುಗಳನ್ನು ನಿರ್ಮಿಸಲಾಗಿದೆ. ತಾಲೂಕಿನ ನಾಗರಾಳ ಎಸ್.ಪಿ, ಸಬ್ಬಲಹುಣಸಿ, ಲಾಯದಗುಂದಿ ಹಾಗೂ ಆಸಂಗಿ ಹತ್ತಿರ ಬ್ಯಾರೇಜ್ ಗಳನ್ನಿ ನಿರ್ಮಿಸಲಾಗಿದೆ. ಬ್ಯಾರೇಜ್‌ಗಳಲ್ಲಿ ಹೂಳು ತುಂಬಿಕೊಂಡಿದ್ದು, ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ. ಹಲವು ವರ್ಷಗಳಿಂದ ಹೂಳು ತೆಗೆಯದ ಪರಿಣಾಮ ನದಿಯಲ್ಲಿ ನೀರಿನ ಪ್ರಮಾಣಕ್ಕಿಂದ ಹೂಳಿನ ಪ್ರಮಾಣವೇ ಹೆಚ್ಚಾಗಿ ಕಂಡು ಬರುತ್ತದೆ. ಹೀಗಾಗಿ ಬ್ಯಾರೇಜಿನಲ್ಲಿ ದೀರ್ಘಕಾಲ ನೀರು ನಿಲ್ಲದಂತಾಗಿದೆ.
ನದಿ ತಟದಲ್ಲಿವೆ 600 ಕೃಷಿ ಪಂಪಸೆಟ್ ಗಳು:
ಈ ಭಾಗದ ರೈತರು ಕೃಷಿಗೆ ಮಲಪ್ರಭಾ ನದಿಯ ನೀರನ್ನೇ ಅವಲಂಬಿತರಾಗಿದ್ದಾರೆ. ನದಿಯಲ್ಲಿ ನೀರಿದ್ದರೆ ಸಾಕು ಪಂಪ್ ಸೆಟ್ ಅಳವಡಿಸಿ ಕಿಮೀವರೆಗೆ ಜಮೀನುಗಳಿಗೆ ನದಿಯ ನೀರನ್ನು ಹಾಯಿಸುತ್ತಾರೆ. ಪಂಪ್ ಸೆಟ್ ಗಳ ಮೂಲಕ ನೀರನ್ನು ಕೃಷಿಗೆ ಬಳಸುವುದರಿಂದ ನದಿಯ ನೀರು ಬೇಗನೆ ಖಾಲಿಯಾಗುತ್ತದೆ. ಗುಳೇದಗುಡ್ಡ ಮತ್ತು ಹುನಗುಂದ ತಾಲೂಕಿನಲ್ಲಿ ನದಿ ದಂಡೆಯಲ್ಲಿ ಸುಮಾರು 600ಕ್ಕೂ ಅಧಿಕ ಪಂಪಸೆಟ್ ಗಳಿದ್ದು, ಇವುಗಳಿಂದ ಸಾವಿರಾರು ಎಕರೆ ಭೂಮಿಗೆ ನೀರು ಬಳಕೆ ಆಗುತ್ತಿರುವುದರಿಂದ ಈ ಭಾಗದಲ್ಲಿ ಮಲಪ್ರಭಾ ನದಿಯಲ್ಲಿ ನೀರಿನ ಅಭಾವ ಆಗಾಗ ಎದುರಾಗುತ್ತಿದೆ. ಇದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಈ ಹಿಂದೆ ಬಾದಾಮಿ ಶಾಸಕರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಾವಿಯ ಪ್ರಾದೇಶಿಕ ಆಯುಕ್ತರೊಂದಿಗೆ ಮಾತನಾಡಿ ತಿಂಗಳಿಗೊಮ್ಮೆ ನವಿಲುತೀರ್ಥ ಜಲಾಶಯದಿಂದ ನೀರು ಬಿಡುವ ವ್ಯವಸ್ಥೆ ಮಾಡುತ್ತಿದ್ದರು. ಆದರೆ, ಈಗ ಅದು ಈಗ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ನಾಗರಾಳ ಗ್ರಾಮದ ರೈತ ಲೆಂಕೆಪ್ಪ ಹಿರೇಕುರುಬರ.
ನೀರು ಬಿಡಲು ರೈತರ ಆಗ್ರಹ :
ಇತ್ತೀಚೆಗೆ ಮಲಪ್ರಭಾ ನದಿ ಬತ್ತಿದ್ದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿತ್ತು. ತಿಂಗಳು ಹಿಂದೆಯಷ್ಟೆ ನವಿಲುತೀರ್ಥ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ನೀರಿನ ಸಮಸ್ಯೆ ಬಗೆಹರಿದಿತ್ತು. ಆದರೆ ಈಗ ಮತ್ತೆ ನದಿ ಬರಿದಾಗಿದ್ದು, ನೀರಿನ ಸಂಕಷ್ಟ ಎದುರಾಗಿದೆ. ಮತಕ್ಷೇತ್ರದ ಜನಪ್ರತಿನಿಧಿಗಳು ಆದಷ್ಟು ಬೇಗ ನವಿಲುತೀರ್ಥ ಜಲಾಶಯದಿಂದ ನೀರು ಬಿಡಿಸಬೇಕು. ಬ್ಯಾರೇಜುಗಳಲ್ಲಿ ತುಂಬಿರುವ ಹೂಳನ್ನು ಮೇಲಿಂದ ಮೇಲೆ ತೆಗೆಯುವ ಕಾರ್ಯವನ್ನೂ ಮಾಡಬೇಕಿದೆ ಎಂದು ನದಿ ಪಾತ್ರದ ಗ್ರಾಮಸ್ಥರ ಆಗ್ರಹಿಸಿದ್ದಾರೆ.
ಬಾಗಲಕೋಟೆ: ದಂತ ವೈದ್ಯ ಮಹಾವಿದ್ಯಾಲಯದಲ್ಲಿ ಡಿಜಿಟಲ್ ಚಿಕಿತ್ಸಾ ಸೌಲಭ್ಯ
ಮಲಪ್ರಭಾ ನದಿಗೆ ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆ ಮಾಡಿದರೆ ನದಿ ಪಾತ್ರದ ಜನರಿಗೆ ಜನ, ಜಾನುವಾರು, ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ನೀರಿಗಾಗಿ ಹಾಹಾಕಾರ ಉಂಟಾಗಲಿದೆ ಎಂದು ಲಾಯದಗುಂದಿ ಪಿಕೆಪಿಎಸ್ ಅಧ್ಯಕ್ಷ ಪ್ರಕಾಶ ಗೌಡರ ತಿಳಿಸಿದ್ದಾರೆ.
ಮಲಪ್ರಭಾ ನದಿಗೆ ನೀರು ಬಿಡುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಬೇಸಿಗೆಯಲ್ಲಿ ನೀರು ಬಿಡುವ ಸಂಭವವಿದೆ ಎಂದು ಗುಳೇದಗುಡ್ಡ ಕಾರ್ಯನಿರ್ವಾಹಕ ಎಂಜಿನಿಯರ್ (ಪ್ರಭಾರ) ರಾಜು ಬಿಸನಾಳ ಹೇಳಿದ್ದಾರೆ.