* ಕಳೆದ 6 ತಿಂಗಳಿಂದ ಫೋನ್‌ಗಳಿಗೆ ಇಲ್ಲ ರಿಚಾರ್ಜ್
* ರಿಚಾರ್ಜ್ ಇಲ್ಲದಕ್ಕೆ ಎಲ್ಲಾ ಪೋನ್ ಗಳು ನಾಟ್ ರೀಚಬಲ್
* ನಮ್ಮ ಸಂಕಲ್ಪ ಪೌಷ್ಟಿಕ ಕರ್ನಾಟಕ ಪ್ಲಾನ್ ಏನಾಯ್ತು?
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು(ಜೂ.09): ಅಪೌಷ್ಟಿಕತೆ, ಕಡಿಮೆ ತೂಕ ಹಾಗೂ ರಕ್ತಹೀನತೆಯಿಂದ ಬಳಲು ಮಹಿಳೆಯರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಾರಂಭಿಸಿದ್ದ ಸ್ಮಾರ್ಟ್ ಫೋನ್ (ಟ್ಯಾಬ್) ಯೋಜನೆ ಸಂಪೂರ್ಣವಾಗಿ ಹಳ್ಳಹಿಡಿದಿದೆ. ರಾಯಚೂರು ಜಿಲ್ಲಾದ್ಯಂತ ಅಂಗನವಾಡಿ ಕಾರ್ಯಕರ್ತರಿಗೆ ಸರ್ಕಾರದಿಂದ ವಿತರಿಸಿದ್ದ ಫೋನ್‌ಗಳು ರಿಂಗ್ ಆಗದೇ ಈಗ ಮೂಲೆ ಸೇರಿವೆ.
undefined
ಅಂಗನವಾಡಿ ಕೇಂದ್ರಗಳ ಸಮಗ್ರ ಮಾಹಿತಿ ತುರ್ತಾಗಿ ಸಂಗ್ರಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2020ರ ಡಿಸೆಂಬರ್‌ನಲ್ಲಿ ಸರ್ಕಾರದಿಂದ ಅಂಗಡಿ ಕಾರ್ಯಕರ್ತೆಯರಿಗೆ ಸ್ಲಾರ್ಟ್‌ಫೋನ್ ವಿತರಿಸಲಾಗಿತ್ತು. ಪ್ರಾರಂಭದಲ್ಲಿ ಈ ಯೋಜನೆ ತುಂಬ ವರ್ಕೌಟ್ ಆಗಿತ್ತು. ಕ್ಷಣಾರ್ಧದಲ್ಲಿಯೇ ಪ್ರತಿಯೊಂದು ಕೇಂದ್ರದ ಸಮಗ್ರ ಮಾಹಿತಿ ಸಿಗುತ್ತಿತ್ತು. ಆದರೆ ಇಲಾಖೆಯಲ್ಲಿ ಬಜೆಟ್ ಕೊರತೆಯಿಂದ ಕಳೆದ 6 ತಿಂಗಳಿನಿಂದ ಫೋನ್‌ಗಳನ್ನು ರಿಚಾರ್ಜ್ ಮಾಡದ ಪರಿಣಾಮ ಕಾರ್ಯಕರ್ತೆಯರು ಸ್ಮಾರ್ಟ್ ಫೋನ್‌ಗಳು ಬಂದ್ ಆಗಿವೆ.
ರಾಯಚೂರು ಜಿಲ್ಲೆ 2600 ಫೋನ್ ಗಳು ಬಂದ್ :
ರಾಯಚೂರು ಜಿಲ್ಲೆ ಮೊದಲ್ಲೇ ಅಪೌಷ್ಟಿಕತೆ ಸಮಸ್ಯೆಯಿಂದ ನರಳಾಟ ನಡೆಸಿದೆ. ಜಿಲ್ಲೆಯಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹತ್ತಾರು ಯೋಜನೆಗಳು ಜಾರಿಗೆ ತಂದಿದೆ. ಆದ್ರೂ ಜಿಲ್ಲೆಯಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಆಗುತ್ತಿಲ್ಲ. ಕಳೆದ 2020ರ ಸೆಪ್ಟೆಂಬರ್ ತಿಂಗಳಲ್ಲಿ ಪೋಷಣ್ ಮಾಸಾಚರಣೆ ಮಾಡಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪೌಷ್ಟಿಕ ಸಮತೋಲನ ಆಹಾರ ನೀಡುವ ಕುರಿತು ಮಾಹಿತಿ ನೀಡಿ ಆ ಮಾಹಿತಿ ದಾಖಲು ಮಾಡಲು ಮೊಬೈಲ್ ಸಹಕಾರಿ ಆಗಿತ್ತು.
ರಿಚಾರ್ಜ್ ಇಲ್ಲದೆ ಮಾಹಿತಿ ರವಾನೆಗೆ ವಿಳಂಬ:
ರಾಯಚೂರು ಜಿಲ್ಲೆಯಲ್ಲಿ 2668 ಅಂಗನವಾಡಿ ಕೇಂದ್ರಗಳಿದ್ದು ಅಂದಾಜು 2600 ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಲಾಗಿದೆ. ಟ್ಯಾಪ್ ವಿತರಿಸಿದ್ದ ಆರಂಭದಲ್ಲಿ ಕರೆನ್ಸಿ ಹಾಕಿದ್ದು, ಬಿಟ್ಟರೆ ಮತ್ತೆ ರಿಚಾರ್ಜ್ ಮಾಡಿಲ್ಲ. ಹೀಗಾಗಿ ಕಾರ್ಯಕರ್ತೆಯರು ಫೋನ್ ಬಳಸದ ಪರಿಣಾಮ ಮೂಲೆ ಸೇರಿವೆ. ಮಕ್ಕಳ ಪಾಲಕರು, ಗರ್ಭಿಣಿಯರು, ಬಾಣಂತಿಯರು, ಕಾರ್ಯಕರ್ತೆಯರಿಗೆ ಸಂಪರ್ಕಿಸಲು ಸಮಸ್ಯೆಯಾಗಿದೆ. ಅಲ್ಲದೇ ಇಲಾಖೆ ಪ್ರತಿದಿನ ಮಾಹಿತಿ ನೀಡಲು ಸಮಸ್ಯೆ ಉಂಟಾಗಿದೆ. ಬೇರೆಯವರ ಫೋನ್‌ನಲ್ಲಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವ ಸ್ಥಿತಿ ನಿರ್ಮಾಣವಾಗಿದೆ. ಅಂಗನವಾಡಿ ಹಾಗೂ ಸ್ಮಾರ್ಟ್‌ಫೋನ್ ಮೂಲಕ ಕಾರ್ಯಕರ್ತೆಯರು ಇಲಾಖೆಗೆ ಮಕ್ಕಳ ಹಾಜರಾತಿ, ಮಕ್ಕಳ ತೂಕ, ಆರೋಗ್ಯ ಮಾಹಿತಿ, ಗರ್ಭಿಣಿ ಬಾಣಂತಿಯರು ಅಂಕಿಸಂಖ್ಯೆ, ಜೊತೆಗೆ ಮಕ್ಕಳಿಗೆ ನೀಡುವ ಆಹಾರದ ಮಾಹಿತಿ, ಪೌಷ್ಟಿಕ ಆಹಾರ ವಿತರಣೆ, ಕೇಂದ್ರದಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆದ್ರೆ ಈಗ ಆ ಮಾಹಿತಿ ನೀಡಲು ವಿಳಂಬವಾಗುತ್ತಿದೆ.
ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರ ಫೋನ್ ಬಂದ್:
ನಮ್ಮ ಸಂಕಲ್ಪ ಪೌಷ್ಟಿಕ ಕರ್ನಾಟಕ ನಿರ್ಮಾಣ ಮಾಡುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಭಿಯಾನ ಆರಂಭಿಸಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್ ವಿತರಣೆ ಮಾಡಿತ್ತು.ಈಗ ಅನುದಾನದ ಕೊರತೆ ನೆಪನೀಡಿ 6 ತಿಂಗಳಿನಿಂದ ಫೋನ್‌ಗೆ ರಿಚಾರ್ಜ್ ಮಾಡಿಲ್ಲ ರಾಜ್ಯದಲ್ಲಿ ಅಂದಾಜು 62 ಸಾವಿರ ಸ್ಟಾರ್ಟ್ ಫೋನ್ ನೀಡಲಾಗಿತ್ತು. ರಾಯಚೂರು ಜಿಲ್ಲೆಯಲ್ಲಿ ಸುಮಾರು 2600 ಕಾರ್ಯಕರ್ತೆಯರಿಗೆ ಫೋನ್ ನೀಡಿದ್ರು. ದೇವದುರ್ಗ ತಾಲೂಕಿನಲ್ಲಿ 476 ಕಾರ್ಯಕರ್ತೆಯರು, ರಾಯಚೂರು ತಾಲೂಕು 286, ಗ್ರಾಮೀಣದಲ್ಲಿ 289, ಮಾನ್ವಿ 247, ಸಿರವಾರ 240, ಲಿಂಗಸುಗೂರು 533 (ಮಸ್ಕಿ, ಮುದಗಲ್ ಒಳಗೊಂಡು), ಸಿಂಧನೂರು 351 ಹಾಗೂ ತುರುವಿಹಾಳ ವಲಯದಲ್ಲಿ 239 ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ನೀಡಲಾಗಿದೆ. ಆರಂಭದಲ್ಲಿ ರಿಚಾರ್ಜ್ ಮಾಡಿದ್ದು ಬಿಟ್ಟರೆ ಇಲಾಖೆ ಒಮ್ಮೆಯೂ ರಿಚಾರ್ಜ್ ಮಾಡಿಲ್ಲ. ಹೀಗಾಗಿ ಬಹುತೇಕ ಫೋನ್‌ಗಳು ನಾಟ್ ರೀಚಬಲ್ ಆಗಿವೆ.
ಫೋನ್ ರಿಚಾರ್ಜ್ ಮಾಡಲು ಅನುದಾನದ ಕೊರತೆ:
ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅನುದಾನ ಕೊರತೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಿದ ಫೋನ್‌ಗಳಿಗೆ ರಿಚಾರ್ಜ್ ಮಾಡಿಲ್ಲ. ಹೀಗಾಗಿ ಫೋನ್ ಬಂದ್ ಆಗಿವೆ. ಒಂದು ವರ್ಷ ಫೋನ್ ಚೆನ್ನಾಗಿತ್ತು. ಈಗ ಬಂದ್ ಆಗಿದೆ. ಐದಾರು ತಿಂಗಳಿನಿಂದ ಫೋನ್‌ಗೆ ರಿಚಾರ್ಜ್ ಮಾಡಿಲ್ಲ. ಇಲಾಖೆಗೆ ಜತೆ ಸಂಪರ್ಕ ಸಾಧಿಸಿ ಕೇಂದ್ರದ ಪ್ರತಿಯೊಂದು ಮಾಹಿತಿ ನೀಡುತ್ತಿದ್ದೆವು. ಫೋನ್ ಬಂದ್ ಆದ ಕಾರಣ ಮಾಹಿತಿ ಕೊಡಲು ಸಮಸ್ಯೆಯಾಗಿದೆ.
ಆ್ಯಪ್ ಗ್ರೂಪ್ ರಚಿಸಿಕೊಂಡು, ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದರು. ಮೊಬೈಲ್‌ನಲ್ಲಿ ಅಳವಡಿಸಿದ್ದರಿಂದ ಸಿಸ್ಟಮ್ ಕಾರ್ಯಕರ್ತೆಯರು ಎಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಜಿಪಿಎಸ್ ಎಂಬ ಬಗ್ಗೆ ಇಲಾಖೆಗೆ ಮಾಹಿತಿ ರವಾನೆಯಾಗುತ್ತಿತ್ತು. ಆದರೆ ಈಗ ಮೊಬೈಲ್ ಬಂದ್ ಆದ ಕಾರಣ ಇಲಾಖೆ ಹಾಗೂ ಕಾರ್ಯಕರ್ತೆಯರಿಗೆ ಸಂವಹನಕ್ಕೆ ದೊಡ್ಡ ಸಮಸ್ಯೆಯಾಗಿದೆ.
ನಮ್ಮ ಸಂಕಲ್ಪ ಪೌಷ್ಟಿಕ ಕರ್ನಾಟಕ ಪ್ಲಾನ್ ಏನಾಯ್ತು?:
ಇಡೀ ರಾಜ್ಯ ಪೌಷ್ಟಿಕತೆಯಿಂದ ಇರಬೇಕು. ಎಲ್ಲರಿಗೂ ಸಮತೋಲನ ಆಹಾರ ಸಿಗಬೇಕು. ಯಾರು ಅಪೌಷ್ಟಿಕತೆಯಿಂದ ಬಳಲುಬಾರದು ಎಂಬ ಗುರಿ ಇಟ್ಟುಕೊಂಡು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಮ್ಮ ಸಂಕಲ್ಪ ಪೌಷ್ಟಿಕ ಕರ್ನಾಟಕ ಎಂಬ ಯೋಜನೆ ಪರಿಚಯಿಸಿತು. ಯೋಜನೆಯಂತೆ ಮಕ್ಕಳಲ್ಲಿನ ತೀವ್ರ ಅಪೌಷ್ಟಿಕತೆ ಗುರುತಿಸುವುದು.ಅಪೌಷ್ಟಿಕತೆ ಕಂಡು ಬಂದ ಮಕ್ಕಳಿಗೆ ಚಿಕಿತ್ಸೆ ಕೊಡಿಸುವುದು. ಮನೆ ಬಳಿ ಮತ್ತು ಜಮೀನಿನಲ್ಲಿ ಪೌಷ್ಟಿಕ ಆಹಾರದ ತೋಟಗಳನ್ನು ಬೆಳೆಸುವುದು. ಪೌಷ್ಟಿಕ ಆಹಾರ ಸೇವಿಸಲು ಉತ್ತೇಜಿಸುವುದು ಆಗಿತ್ತು. ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಪೌಷ್ಟಿಕ ಆಹಾರ ಮಹತ್ವ ತಿಳಿಸಲು ವಿಶೇಷ ಸಭೆ ಆಯೋಜನೆ ಮಾಡುವ ಗುರಿ ನೀಡಲಾಗಿತ್ತು. ಆದ್ರೆ ಮೊಬೈಲ್ ಫೋನ್‌ಗಳು ನಾಟ್ ರೀಚಬಲ್ ಆಗಿದ್ದರಿಂದ ಸಮತೋಲನ ಆಹಾರದ ಪಿರಮಿಡ್ ವ್ಯವಸ್ಥೆದ ಮಾಹಿತಿ ನೀಡಲು ಆಗುತ್ತಿಲ್ಲ.
ಒಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ ಸ್ಮಾರ್ಟ್ ಫೋನ್ ಗಳು ರಿಚಾರ್ಜ್ ಇಲ್ಲದೆ ಮೊಬೈಲ್ ಗಳು ನಾಟ್ ರೀಚಬಲ್ ಆಗಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಮಾರ್ಟ್ ಫೋನ್ ಗೂ ಪೌಷ್ಟಿಕ ಆಹಾರ ನೀಡಬೇಕಾಗಿದೆ.